ADD

< Back To Free Articles

November-2026

ಎಲ್ಲರಂತಲ್ಲ ಈ ಯೂಟ್ಯೂಬರ್!

ಈ ಗೃಹಿಣಿ ತಾನೇ ಹೋಗಿ ವಿಡಿಯೋ ಚಿತ್ರೀಕರಿಸುವುದಲ್ಲದೆ, ಸಂಬಂಧಪಟ್ಟವರಿಂದ ವಿಡಿಯೋ ತುಣುಕು, ಚಿತ್ರ ಪಡೆದು, ಲೋಕಕ್ಕೆ  ಸಾಮಾಜಿಕ ಬದ್ಧತೆಯ ವಿಡಿಯೋಗಳನ್ನು ಝಟ್‍ಪಟ್ ಆಗಿ ಹಂಚುತ್ತಾರೆ.

- ನಾ. ಕಾರಂತ ಪೆರಾಜೆ

 

‘ಲಕ್ಷ್ಮೀ ಝಾನ್ಸಿ ಭಟ್ ಬುರ್ಡೆ’ ಇವರ ಫೇಸ್‍ಬುಕ್ ಪುಟ ಪ್ರವೇಶ ಮಾಡಿ. ಸಾಲುಸಾಲು ವೀಡಿಯೊಗಳು ತೆರೆದುಕೊಳ್ಳುತ್ತವೆ. ಕೃಷಿ, ಜನಪದ, ಮದುವೆ, ಅಡುಗೆ.. ಹೀಗೆ ವೈವಿಧ್ಯ ವಿಚಾರಗಳು ಗಮನ ಸೆಳೆಯುತ್ತವೆ.

ಝಾನ್ಸಿ ಲಕ್ಷ್ಮೀ ಭಟ್ ಬುರ್ಡೆ(63) ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕರ್ಕಿಯವರು. ಹಳ್ಳಿ ಬದುಕಿನ ಜ್ಞಾನವಂತೆ. ಪತಿ ಜಗದೀಶ ಬುರ್ಡೆ. ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಅಧಿಕಾರಿಯಾಗಿದ್ದು ಈಗ ನಿವೃತ್ತರು. ಬೆಂಗಳೂರಿನಲ್ಲಿ ವಾಸ. ಜಗದೀಶ್ ವರ್ಗಾವಣೆಗೊಂಡಾಗ ಹೊಸ ಊರು, ಜನರ ಪರಿಚಯ.

ಲಕ್ಷ್ಮೀ ಭಟ್ಟರು ಅಲ್ಲಿಯವರೊಂದಿಗೆ ಪರಿಚಯ ಮಾಡಿಕೊಳ್ಳುತ್ತಿದ್ದರು. ನಿಧಾನಕ್ಕೆ ಸ್ನೇಹ ಗಟ್ಟಿ ಯಾಗುತ್ತದೆ. ತನಗೆ ಗೊತ್ತಿದ್ದ ಮಾಹಿತಿಗಳನ್ನು ವಾಟ್ಸಪ್, ಫೇಸ್‍ಬುಕ್ ಮೂಲಕ ಹಂಚಿ ಕೊಳ್ಳುತ್ತಿದ್ದರು. ಇದರಿಂದಾಗಿ ನಿತ್ಯ ಸಂವಹನ, ಮುಖಾಮುಖಿಗಳೂ ಆಗುತ್ತಿದ್ದುವು. ಕಸೂತಿ, ಪಾಕ ಸ್ಪರ್ಧೆಗಳು, ಅಡುಗೆ ಪ್ರಾತ್ಯಕ್ಷಿಕೆಗಳಿಂದ ಲಕ್ಷ್ಮೀ ಬಿಝಿ ಇರುತ್ತಿದ್ದರು. ಸ್ಥಳೀಯ ವಾಹಿನಿಯಲ್ಲೂ ಇವರ ಕೈರುಚಿಯ ಪರಿಮಳ ಪಸರಿಸಿತ್ತು.

ಕೋವಿಡ್ ಬಂತು. ಸಾಮಾಜಿಕ ಜಾಲತಾಣಗಳ ಪರಿಚಯ ಇತ್ತು. ಆ ಮಾಧ್ಯಮವನ್ನು  ಬಳಸಿ ಕೊಳ್ಳಲು ಆಪ್ತರು ಪ್ರೇರೇಪಿಸಿದರು. ಮೊದಲಿಗೆ ಮಹಿಳೆಯರ ಬದುಕಿನ ವಿಚಾರದ ಒಂದು ವಿಡಿಯೋ ಮಾಡಿದರು. ಅದು ಯೂಟ್ಯೂಬಿನಲ್ಲಿ ವೈರಲ್ ಆಗಿತ್ತು. ಲಕ್ಷ್ಮೀಯವರ ಸ್ಫೂರ್ತಿ ಹೆಚ್ಚಿತು.

ಇವರು ಬಗೆಬಗೆಯ ತಂಬುಳಿ ತಯಾರಿಯಲ್ಲಿ ನಿಷ್ಣಾತೆ.  ದಿನಕ್ಕೊಂದು ತಂಬುಳಿಗಳ ವಿಡಿಯೋ ಮಾಡಿ, ಯೂಟ್ಯೂಬಿಗೆ ಏರಿಸಿದರು. ಮೆಚ್ಚುವವರ, ಸೋಶಿಯಲ್ ಮೀಡಿಯಾದ ಸ್ನೇಹಿತರ ಸಂಖ್ಯೆ ಹೆಚ್ಚಾಯಿತು.

“ಇದು ನನ್ನೊಬ್ಬಳ ಕೆಲಸವಲ್ಲ. ಸ್ನೇಹಿತೆಯರು ಒಟ್ಟಾಗಿ ಮಾಡಿದ ವಿಡಿಯೋ. ನನ್ನದು ಸಂಕಲನ ಮಾತ್ರ. ನಾನು ತಾಂತ್ರಿಕ ತಜ್ಞೆಯಲ್ಲ. ಸ್ನೇಹಿತರು ಶೂಟ್ ಮಾಡಿ ಕೊಟ್ಟ ವಿಡಿಯೋಗಳನ್ನು, ಚಿತ್ರ ಗಳನ್ನು ಎಡಿಟ್ ಮಾಡಿ ಧ್ವನಿ ನೀಡುತ್ತೇನೆ. ವಿಷಯ ಹಂಚುವುದರಲ್ಲಿ ನನಗೆ ಆಸಕ್ತಿ. ನನ್ನನ್ನು ವೃತ್ತಿಪರ ಯೂಟ್ಯೂಬರ್‍ಗಳಿಗೆ ಹೋಲಿಸಬೇಡಿ” ಎನ್ನುತ್ತಾರೆ.

ಲಕ್ಷ್ಮೀಯವರ ಆಸಕ್ತಿಯ ಒಂದೆರಡು ಮಾದರಿಗಳು ಗಮನಿಸಿ : ಅವರ ಊರಿನ ಒಬ್ಬರು ಹಾಡುಗಾರರು ತೀರಿಕೊಂಡಿದ್ದರು. ಅವರ ಹಾಡಿನ ಆಡಿಯೋ ಲಭ್ಯವಿತ್ತು. ಇವರು ಆ ಆಡಿಯೋಗೆ ಹಿನ್ನೆಲೆ ಧ್ವನಿ, ಚಿತ್ರಗಳನ್ನು ಸೇರಿಸಿ ಅಪ್‍ಲೋಡ್ ಮಾಡಿದರು. ಅದು ಜನಮೆಚ್ಚುಗೆ ಪಡೆಯಿತು. ಇನ್ನೊಂದು - ಪರಿಚಿತರೊಬ್ಬರ ಕತೆಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿತ್ತು. ಅವರ ಒಂದೊಂದೇ ಕತೆಗಳನ್ನು ಕಂತುಗಳನ್ನಾಗಿ ಮಾಡಿ, ಹಿನ್ನೆಲೆ ಧ್ವನಿ ಸೇರಿಸಿ ಯೂಟ್ಯೂಬ್‍ಗೆ ಏರಿಸಿದರು. “ಅದನ್ನು ನೋಡುವವರ, ಕೇಳುವವರ ಸಂಖ್ಯೆ ಕಡಿಮೆಯಿರಬಹುದು. ಆದರೆ ಜಾಲತಾಣದಲ್ಲಿ ಕಥಾಗುಚ್ಛವಾಗಿ ದಾಖಲಾಯಿತಲ್ಲಾ.”

ಸದುದ್ದೇಶದ ವಿಚಾರಗಳನ್ನು ಹತ್ತಾರು ಮಂದಿಗೆ ತಿಳಿಸುತ್ತಾರೆ. ಹೊಸ ವಿಚಾರಗಳ ಸುಳಿವು ಸಿಕ್ಕರೆ ಸಾಕು, ಅದರ ಬೆನ್ನೇರುತ್ತಾರೆ. ಪರಿಚಿತರನ್ನು ವಿಡಿಯೋ ಮಾಡಲು, ಚಿತ್ರ ಕ್ಲಿಕ್ಕಿಸಲು ವಿನಂತಿಸುತ್ತಾರೆ. ಸಂಗ್ರಹವಾದ ಒಳಸುರಿಗಳನ್ನು ತನ್ನ ಸ್ಮಾರ್ಟ್‍ಫೋನಿನಲ್ಲೇ ಅಂದಗೊಳಿಸಿ ಏರಿಸುತ್ತಾರೆ.

ಕೋವಿಡ್ ಕಾಲದಲ್ಲಿ ಅಡಿಕೆ ಪತ್ರಿಕೆಯು ಹಬ್ಬಿಸಿದ ಬಾಕಾಹು (ಬಾಳೆ ಕಾಯಿ ಹುಡಿ) ಆಂದೋಳನವು ಕನ್ನಾಡಿನಲ್ಲಿ ಪಸರಿಸಿತ್ತು. ಗ್ರಾಮೀಣ ಅಮ್ಮಂದಿರ ಕಿವಿಯರಳಿದ ದಿನಗಳವು. “ಸಂಪಾದಕ ಶ್ರೀಪಡ್ರೆ ಯವರು ಚಿತ್ರ, ಮಾಹಿತಿಗಳನ್ನು ಹಂಚಿಕೊಂಡಿದ್ದರು. ಆ ಮಾಹಿತಿ ಅನುಸರಿಸಿ ನಾನೂ ಬಾಕಾಹು ಪಾಕ ವೈವಿಧ್ಯ ಮಾಡಿದೆ. ಅದನ್ನು ಚಿತ್ರೀಕರಿಸಿ ಯೂಟ್ಯೂಬಿಗೆ ಹಾಕಿದ್ದೆ. ತುಂಬು ಪ್ರಶಂಸೆ ಬಂದಿತ್ತು” ನೆನಪಿಸಿ ಕೊಳ್ಳುತ್ತಾರೆ ಲಕ್ಷ್ಮೀ. 

ಮೊನ್ನೆಮೊನ್ನೆ ಅಡಿಕೆ ಪತ್ರಿಕೆಯು ಉತ್ತರ ಕನ್ನಡದ ‘ಡೇರೆ ಹೂ’ ಕುರಿತು ಮುಖಪುಟ ಲೇಖನ ಪ್ರಕಟಿಸಿತ್ತು ತಾನೇ? ಶಿರಸಿ, ಸಾಗರದಲ್ಲಿ ಡೇರೆ ಹೂ ಬೆಳೆಗಾರರ ಕಾರ್ಯಾಗಾರ ನಡೆದಿತ್ತು. ಲಕ್ಷೀ ಅಲ್ಲಿನ ಚಿತ್ರ, ವಿಡಿಯೋ ಸಂಗ್ರಹಿಸಿದರು. ಅಂದವಾಗಿ ಅದರ ಮಾಲೆ ಮಾಡಿ ಧ್ವನಿ ನೀಡಿ ಯೂಟ್ಯೂಬಿಗೆ ಸೇರಿಸಿದರು. “ಹೊಸ ವಿಷಯವೊಂದನ್ನು ಹತ್ತಾರು ಮಂದಿಗೆ ಹಂಚುವುದು ಸಂತೋಷದ ವಿಚಾರ ತಾನೇ?” ಎಂದು ಕೇಳುತ್ತಾರೆ.

ಈ ವಯಸ್ಸಲ್ಲೂ ಒಬ್ಬರು ಗೃಹಿಣಿ ಹೊಚ್ಚಹೊಸ ವಿಚಾರವನ್ನು ಪಸರಿಸುವ ವೇಗ ಶ್ಲಾಘನೀಯ. ಅಪದಲ್ಲಿ ಬೆಳಕು ಕಂಡ ನೇರಳೆ ಗೆಣಸನ್ನೂ ಇವರು ಬಿಟ್ಟಿಲ್ಲ. ಮಾಹಿತಿ ಸಿಕ್ಕಿದ ದಿನವೇ ಸಂಬಂಧಿಸಿದವರ ಸಂಪರ್ಕ. ವಿಡಿಯೋ ಪ್ರಸ್ತುತಿ.

ಲಕ್ಷ್ಮೀ ವಾಹಿನಿಗಳ ಹೊಸ ಸವಿ, ಖಾದ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ. ಈಚೆಗಷ್ಟೇ ನಡೆದ ಪ್ರಜಾವಾಣಿ ಆಯೋಜಿಸಿದ  ಕರುನಾಡ ಸವಿಯೂಟ ಸ್ಪರ್ಧೆಯಲ್ಲೂ ಸಾಧನೆ ಮಾಡಿದ್ದರು.  

ಅಡುಗೆ, ಮದುವೆ, ಹೊಸ ಸವಿಗಳು, ಭಜನೆ, ಹಾಡು, ಯಕ್ಷಗಾನ, ಗಾರ್ಡನಿಂಗ್, ಹಬ್ಬಗಳು, ಧಾರ್ಮಿಕ ವಿಚಾರ.. ಹೀಗೆ ವಿವಿಧ ಕ್ಷೇತ್ರಗಳ ಆಗುಹೋಗುಗಳಿಗೆ ಲಕ್ಷ್ಮೀಯವರ ಚಿತ್ತ ಸದಾ ಜಾಗೃತ. “ಹಿಂದೆ ನನ್ನ ಕೈಯಲ್ಲಿ ಸ್ಮಾರ್ಟ್‍ಫೋನ್ ಅಂಟಿರುವ ಬಗ್ಗೆ ಗೊಣಗುತ್ತಿದ್ದ ಪತಿ ಈಗ ಪ್ರೋತ್ಸಾಹಿಸುತ್ತಾರೆ” ಎಂದು ನಗುತ್ತಾರೆ.

“ನನ್ನನ್ನು ಯೂಟ್ಯೂಬರ್ ಎಂದು ಕರೆಯಬೇಡಿ. ನನ್ನ ಖುಷಿಗಾಗಿ ಮಾಡ್ತಾ ಇದ್ದೇನಷ್ಟೇ. ಕೃಷಿ ಒಂದೇ ಅಲ್ಲ, ನನಗೆ ತೃಪ್ತಿ ನೀಡಿದ ಕಾರ್ಯಕ್ರಮ, ಸೆಮಿನಾರುಗಳ, ಸಾಧಕರ ಯಶೋಗಾಥೆಗಳನ್ನು ದಾಖಲಿಸುತ್ತೇನೆ. ಜ್ಞಾನ ಪ್ರಸಾರ ಪುಣ್ಯದ ಕೆಲಸ. ನನ್ನೆಲ್ಲಾ ಚಟುವಟಿಕೆಗಳಿಗೆ ಮಮತಾ ಯಾಜಿ, ಪ್ರತಿಭಾ ಭಟ್ಟ, ಕುಟುಂಬಸ್ಥರು, ಸ್ನೇಹಿತೆಯರ ಬೆಂಬಲವಿದೆ” ಎನ್ನುತ್ತಾರೆ.

ಅವರಿಗೆ “ಇವೆಲ್ಲಾ ನನ್ನ ಅಜ್ಜಿಯ ದಾಖಲೆಗಳು ಎಂದು ನನ್ನ ಮೊಮ್ಮಕ್ಕಳಿಗೆ ಖುಷಿ ಕೊಟ್ಟರೆ ಸಾಕು. ಇದಕ್ಕಿಂತ ಹೆಚ್ಚಿನ ನಿರೀಕ್ಷೆಗಳಿಲ್ಲ.” “ನನಗೀಗ ಅರುವತ್ತಮೂರು ವರುಷ ಆಯಿತು ಅಂತ ಬೇಜಾರು ಮಾಡಲು ಪುರುಸೊತ್ತಿಲ್ಲ! ಮನೆವಾರ್ತೆಯೊಂದಿಗೆ ಯೂಟ್ಯೂಬ್ ಚಟುವಟಿಕೆ ನನ್ನನ್ನು ಬಿಝಿಯಾಗಿಟ್ಟಿದೆ.”

ಲಕ್ಷ್ಮೀ ಭಟ್ - 94804 62167