ADD

< Back To Free Articles

October-2026

‘ಅಪ್ಪೆಮಿಡಿ ಬೇಕೆಂದರೆ ಕಾಯಲೇಬೇಕು’

‘ಪ್ರತಿ ವರ್ಷ ಮಿಡಿ ಅಥವಾ ಆದಾಯ ಬೇಕು ಎಂದಾದರೆ, ಅಪ್ಪೆ ಮಿಡಿ ಗಿಡ ನೆಡಲೇಬೇಡಿ. ಕಾಯುವ ತಾಳ್ಮೆ ಇದ್ದರೆ ಮಾತ್ರ ಅದನ್ನು ನೆಡಿ’ ಎನ್ನುತ್ತಾರೆ ಈ ಅಪ್ಪೆ ಮಿಡಿ ಕಸಿ ಗಿಡ ತಯಾರಕರು.

- ನಟೇಶ್ ಕೋಣನಕಟ್ಟೆ

 

‘ಅಪ್ಪೆ ಮಿಡಿ ಮರ ಪ್ರತಿ ವರ್ಷ ಬೆಳೆ ಕೊಡುವುದಿಲ್ಲ’ ಎಂಬ ಚಿಂತೆ ಒಬ್ಬಿಬ್ಬರನ್ನಲ್ಲ, ಸಾವಿರಾರು ಅಪ್ಪೆಪ್ರಿಯರನ್ನು  ಕಾಡುತ್ತಲೇ ಇದೆ. ಕಸಿ ಗಿಡಗಳ ತೋಟ ಎಬ್ಬಿಸಿ ಫಸಲು ಬಾರದೆ ನಿರಾಶರಾದವರೂ ಇದ್ದಾರೆ. ಬೆಂಗಳೂರಿನಂತಹ ಒಣವಲಯದಿಂದ ಮಾತ್ರ ಸ್ವಲ್ಪ ಧನಾತ್ಮಕ ಸುದ್ದಿ ಬರುತ್ತಿದೆ.

ಸಾಗರದ ಬಳಿಯ ಕೋಣನಕಟ್ಟೆಯ ನಟೇಶ್ ಉತ್ಸಾಹಿ ಕಸಿನಿಪುಣ. ಅಧ್ಯಯನ ಮಾಡಮಾಡುತ್ತಲೇ ಡಜನುಗಟ್ಟಲೆ ತಳಿ ಸಂಗ್ರಹ ಮಾಡಿದ್ದಾರೆ. ಆದರೆ ಅವುಗಳ ಫಲಿತಾಂಶ ನೋಡಿ ಈಗ ತುಂಬ ಶಾರ್ಟ್‍ಲಿಸ್ಟ್ ಮಾಡಿ ಕೆಲವೇ ತಳಿಗಳದ್ದನ್ನು ಕೊಡುತ್ತಿದ್ದಾರೆ.

ಮೇಲೆ ಪ್ರಸ್ತಾಪಿಸಿದ ಸಮಸ್ಯೆಯ ಬಗ್ಗೆ ನಟೇಶ್ ಕೋಣನಕಟ್ಟೆ ಏನು ಹೇಳುತ್ತಾರೆ ಕೇಳಿ.

“ಅಪ್ಪೆಮಿಡಿ ಗಿಡ ಪ್ರತಿವರ್ಷ ಬೆಳೆ ಕೊಟ್ಟ ದಾಖಲೇನೇ ಇಲ್ಲ. ಪ್ರತಿವರ್ಷ ಬರುತ್ತದೆ ಅಂತ ಕಾಯ್ತಾ ಕೂತ್ಕೊಳ್ಳೋದು ತಪ್ಪು. ಎರಡು ವರ್ಷಕ್ಕೊಮ್ಮೆ ಬರಲಿ, ಮೂರು ಅಥವಾ ನಾಲ್ಕು ವರ್ಷಕ್ಕೆ ಒಂದು ಸಲ ಬರಲಿ, ಬಂದ ವರ್ಷ ಚೆನ್ನಾಗಿ ಬರಬೇಕು.

ಕೆಲವು ಜಾತಿಯವು ಚೆನ್ನಾಗಿ  ಹೂ ಬಿಡುತ್ತವೆ. ಆದರೆ ಹೂ, ಮಿಡಿ ನಿಲ್ಲೋದಿಲ್ಲ. ಮಿಡಿ ನಿಲ್ಲುವಂತಹ ವೆರೈಟಿ ನೋಡಿ ನಾವು ಡೆವಲಪ್ ಮಾಡಬೇಕು. ನಾನು ಮುಂಚೆ ಅವರು ಹೇಳಿದರು, ಇವರು ಹೇಳಿದರು, ನಾವು ಹುಡುಕಿದ್ದು ಅಂತೆಲ್ಲಾ ಒಂದಿಷ್ಟು ಸೇರಿಕೊಂಡು, 25 - 30 ವೆರೈಟಿಯ ಎಲ್ಲದರ ಕಸಿ ಗಿಡ ಮಾಡ್ತಿದ್ದೆ.”

ಒಳ್ಳೆ ತಳಿಯ ಮಿಡಿಯಾದರೆ ಇಡೀ ಮರ ಹೂ ಬಿಡುತ್ತದೆ. ಆದರೆ ಹೂ ಬಂದ ವರ್ಷ ಮಿಡಿ ನಿಲ್ಲಲೇಬೇಕೆಂದಿಲ್ಲ. ಮಿಡಿ ನಿಲ್ಲುವಂತಹ ವೆರೈಟಿ ನಾವು ಹುಡುಕಿ ಡೆವಲಪ್ ಮಾಡಬೇಕು. ಅದೇ ತರ ನಾಲ್ಕು ವೆರೈಟಿ ಮಾಡಿದ್ದೀನಿ ನಾನು. ಮಿಡಿ ನಿಲ್ಲುವಂತಹ ವೆರೈಟಿ ಡೆವಲಪ್ ಮಾಡಿಕೊಂಡರೆ ನಮಗೆ ಅಪ್ಪೆಮಿಡಿ ಒಳ್ಳೆ ಲಾಭ.

ಅಪ್ಪೆ ಮಿಡಿ ನಾನು ಗಿಡ ನೆಡುವವರಿಗೆ ಹೇಳುತ್ತಿರುತ್ತೇನೆ, ನಿಮಗೆ ಪ್ರತಿ ವರ್ಷ ಆದಾಯ ಬೇಕು ಅಂದರೆ ನೀವು ಅಪ್ಪೆ ಮಿಡಿ ಗಿಡ ನೆಡಲೇಬೇಡಿ. ಕಾಯುವ ತಾಳ್ಮೆ ಇದ್ದರೆ ಮಾತ್ರ ಅದನ್ನು ನೆಡಿ ಅಂತ.

ಈ ವರ್ಷ 2000, ಮುಂದಿನ ವರ್ಷ 2000, ಅದಕ್ಕೂ ಮುಂದಿನ ವರ್ಷ 2000, ಮಿಡಿ ಬಂತು ಅಂತ ಇಟ್ಟುಕೊಳ್ಳಿ. ಅದಕ್ಕೆ ಬದಲು ಮೂರು ವರ್ಷಕ್ಕೊಮ್ಮೆ  ಒಂದೇ ಸಲ 7000 ಮಿಡಿ ಬಂದುಬಿಟ್ಟರೆ ಅನುಕೂಲವಲ್ಲವೇ?

ಕಡಿಮೆ ವೆಚ್ಚ ಮತ್ತು ನಿರ್ವಹಣೆ: ನೀರು, ಗೊಬ್ಬರ, ಕ್ರಿಮಿನಾಶಕಗಳ ಅಗತ್ಯವಿಲ್ಲ.  ಮಂಗಗಳ ಕಾಟವೂ ಇಲ್ಲ. ವೇಸ್ಟ್ ಅಥವಾ ಕಲ್ಲುಗುಡ್ಡದಂತಹ ಜಾಗಗಳಲ್ಲೂ ಅಪ್ಪೆ ಮಿಡಿಯನ್ನು ಕನಿಷ್ಠ ನಿರ್ವಹಣೆಯಲ್ಲಿ ಉತ್ತಮ ಇಳುವರಿ ಪಡೆಯಬಹುದು.

ಕೈಗೆಟುಕುವ ಲಾಭದ ತಂತ್ರ: ಕಾರ್ಮಿಕ ವೆಚ್ಚ ಹೆಚ್ಚು ತಾನೇ. ಈಗಿನ ಪರಿಸ್ಥಿತಿಯಲ್ಲಿ ಪ್ರತಿ ವರ್ಷ ಕೊಯ್ಯುವುದರಿಂದ 2 - 3 ವರ್ಷಕ್ಕೊಮ್ಮೆ ಕೊಯ್ಯುವುದರಿಂದ ಕೂಲಿ ವೆಚ್ಚದಲ್ಲಿ ಉಳಿತಾಯವಿದೆ.

ಸರಿಯಾದ ತಳಿ ಆಯ್ಕೆ: ಹೆಚ್ಚು ಕಾಯಿ ಬಿಡುವ ತಳಿಗಳನ್ನೇ ವಾಣಿಜ್ಯಿಕವಾಗಿ ನೆಡಬೇಕು. ಪ್ರಸಿದ್ಧ ಅಥವಾ ಹೊಸ ತಳಿಗಳ ಮಾಹಿತಿ ಕೇಳಿ ಆಸಕ್ತಿ ಮೂಡಿದರೂ ಪ್ರಯೋಗ ಅಥವಾ ಖುಷಿಗಾಗಿ ಅವುಗಳ ಒಂದೆರಡು ಗಿಡಗಳನ್ನು, ಅದೂ ಉತ್ತಮ ಕಾಯಿ ಬಿಡುವ ಗಿಡಗಳ ಮಧ್ಯೆಯೇ ನೆಟ್ಟು ಪರೀಕ್ಷಿಸುವುದು ಸೂಕ್ತ.

ನಟೇಶ್ ಕೋಣನಕಟ್ಟೆ ಅವರ ಸಂಪರ್ಕ - 94805 44950