ಶಿಬಿರಾರ್ಥಿಗಳಿಗೆ ‘ಹೊಲಬೇಲಿ ಸೊಪ್ಪು’ಗಳನ್ನು ಕಣ್ಣಾರೆ ಕಂಡು, ಸ್ಪರ್ಶಿಸಿ ನೋಡಿ ಕಲಿಯುವ ಅವಕಾಶ. ಅಡುಗೆಯಲ್ಲಿ, ಔಷಧವಾಗಿ ಹೇಗೆ ಬಳಕೆ ಎಂಬ ಬಗ್ಗೆ ಮಾರ್ಗದರ್ಶನ. ಶಿಬಿರದ ಮೂಲೋದ್ದೇಶ ಒಂದಷ್ಟು ಹೊಲಬೇಲಿ ಸೊಪ್ಪುಗಳನ್ನು ನಿಸ್ಸಂದಿಗ್ಧವಾಗಿ ಗುರುತಿಸಲು ಕಲಿಸಿಕೊಡುವುದು.
- ಅಪ ಬಳಗ
ಕೇಳಿದರೆ ನಿಮಗೆ ತಮಾಷೆ ಅನ್ನಿಸಲೂ ಬಹುದು. ಯಾರಾದರೂ ‘ಕಳೆ ಗಿಡ’ಗಳನ್ನು ನೆಟ್ಟು ಬೆಳೆಸುವುದುಂಟೇ? ತಿಪಟೂರಿನ ಬಳಿಯ ಎಲೆಯರಿವಿನ ಪ್ರಚಾರಕ ಮುರಳೀಧರ ಗುಂಗುರುಮಳೆ ಈ ಅಸಾಮಾನ್ಯ ಕೆಲಸಕ್ಕೆ ಏರಿದವರು!
ಅವರ ಹಿತ್ತಿಲಿಗೆ ಇಣುಕಿ ನೋಡಿದರೆ ಸಿಮೆಂಟ್ ರಿಂಗ್ ಇಟ್ಟು ಅದರೊಳಗೆ ಕಳೆ, ಅಲ್ಲಲ್ಲ, ‘ಹೊಲಬೇಲಿ ಸೊಪ್ಪಿನ’ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಇಂಥ 108 ರಿಂಗುಗಳೊಳಗೆ ಈ ಗಿಡಗಳು ಬೆಳೆದು ಮೇಲೇರುತ್ತಿವೆ.
ಮುರಳೀಧರ್ ಹೊಲಬೇಲಿ ಸೊಪ್ಪಿನ ಬಗ್ಗೆ ಆಸಕ್ತರ ಜತೆ ವಿಚಾರ ವಿನಿಮಯ ಮಾಡುತ್ತಲೇ ಇರುತ್ತಾರೆ.
“ವಿಡಿಯೋ ಅಥವಾ ಫೋಟೋದಲ್ಲಿ ಒಂದು ನಿರ್ದಿಷ್ಟ ಖಾದ್ಯಯೋಗ್ಯ ಎಲೆಯನ್ನು ಕಂಡು ವಿವರ ಓದಿ ಉಮೇದೇನೋ ಬರುತ್ತದೆ. ಆದರೆ ಗೊತ್ತಿಲ್ಲದ ಎಲೆ ತಿನ್ನಲು, ಅದರ ಪರಿಚಯ ಸ್ಪಷ್ಟವಾಗುವ ವರೆಗೆ ಧೈರ್ಯ ಬರುವುದಿಲ್ಲ. ಕೆಲವೊಂದು ಎಲೆಗಳು ಒಂದೇ ಥರ ಕಾಣುತ್ತವೆ” ಎನ್ನುತ್ತಾರೆ ಹಲವರು.
ಈ ಹಿನ್ನೆಲೆಯಿಂದ ಮುರಳಿ ಈಗ ತಮ್ಮ ಮನೆ ಹಿತ್ತಲಲ್ಲೇ ಭಾನುವಾರ ಗುರುಕುಲ ತೆರೆದಿದ್ದಾರೆ. ಪ್ರತಿ ತಿಂಗಳ ಎರಡನೆಯ ಭಾನುವಾರ ‘ಹೊಲಬೇಲಿ ಸೊಪ್ಪಿನ’ ಪರಿಚಯ ಶಿಬಿರ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 - 6 ರ ವರೆಗೆ. ಊಟವೂ ಗುರುಕುಲದಲ್ಲೇ. ಮರದ ಕೆಳಗೆ, ಹಿತ್ತಲಲ್ಲಿ ತಿರುಗಾಡುತ್ತಾ ತರಗತಿ ನಡೆಯುತ್ತದೆ. ಮೊದಲೇ ನೊಂದಾಯಿಸಿದ ಇಪ್ಪತ್ತು ಮಂದಿಗೆ ಮಾತ್ರ ಅವಕಾಶ.
“ಅಪ್ಪಟ, ಅದರಲ್ಲೂ ತುಂಬಾ ಆಸಕ್ತಿ ಇರುವವರು ಮಾತ್ರ ಬನ್ನಿ. ಇದು ಪಿಕ್ನಿಕಲ್ಲ” ಎಂದು ಮುರಳಿ ಸ್ಪಷ್ಟವಾಗಿ ತಿಳಿಸಿಬಿಡುತ್ತಾರಂತೆ. “ಇಲ್ಲಿ ಕಲಿತದ್ದನ್ನು ನಾಲ್ಕು ಜನಕ್ಕೆ ಹಂಚುವಷ್ಟು ಉತ್ಸಾಹ, ಸಮಯ ಮತ್ತು ಪ್ರೀತಿ ಇದ್ದವರನ್ನು ನವಿರಾಗಿ ವಿಚಾರ ತಿಳಿದುಕೊಂಡು ಆಯುತ್ತೇನೆ” ಎನ್ನುತ್ತಾರೆ.
ಇವರು ದಶಕಗಳಿಂದ ದೇಶದಲ್ಲೇ ಅನನ್ಯ ರೀತಿಯಿಂದ ಪ್ರಚುರಪಡಿಸುತ್ತಾ ಬಂದಿರುವ ‘ಅಜ್ಜಿಯ ಮಡಿಲು, ಸೊಪ್ಪಿನ ಕಡಲು’ (ಅಪ ನವೆಂಬರ್ 2024ರ ಮುಖಪುಟ ಲೇಖನ ಓದಿ) ಟೈಟಲಿನಡಿಯೇ ಈ ಕಾರ್ಯಕ್ರಮವೂ ಜರಗುತ್ತದೆ.
ಒಂದೆಡೆ ಮರದಡಿಯಲ್ಲಿ ಕುಳಿತು ಮೂಲಭೂತ ವಿಚಾರ ತಿಳಿಸಿದ ನಂತರ ನೇರ ಗಿಡಗಳ ಕಡೆಗೆ. ಪ್ರತಿ ಎಲೆಯನ್ನೂ ಪರಿಚಯಿಸುತ್ತಾ, ಪ್ರಮುಖ ವಿವರ ಕೊಟ್ಟು ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಮುಂದುವರಿಯುತ್ತಾರೆ. ಶಿಬಿರಾರ್ಥಿಗಳಿಗೆ ‘ಹೊಲಬೇಲಿ ಸೊಪ್ಪು’ಗಳನ್ನು ಕಣ್ಣಾರೆ ಕಂಡು, ಸ್ಪರ್ಶಿಸಿ ನೋಡಿ ಕಲಿಯುವ ಅವಕಾಶ. ಅಡುಗೆಯಲ್ಲಿ, ಔಷಧವಾಗಿ ಹೇಗೆ ಬಳಕೆ ಎಂಬ ಬಗ್ಗೆ ಮಾರ್ಗದರ್ಶನ. ಶಿಬಿರದ ಮೂಲೋದ್ದೇಶ ಒಂದಷ್ಟು ಹೊಲಬೇಲಿ ಸೊಪ್ಪುಗಳನ್ನು ನಿಸ್ಸಂದಿಗ್ಧವಾಗಿ ಗುರುತಿಸಲು ಕಲಿಸಿಕೊಡುವುದು.
ಶಿಬಿರ ಇಷ್ಟಕ್ಕೇ ಸೀಮಿತವಲ್ಲ. ಇವರೆಲ್ಲಾ ನೋಡಿ ಪರಿಚಯ ಮಾಡಿಕೊಂಡ ಎಲೆಗಳನ್ನು ಅಂದೇ ಮಧ್ಯಾಹ್ನದ ಅಡುಗೆಗೆ ಬಳಸುತ್ತಾರೆ. ತಂಬುಳಿ, ಅಷ್ಟೂ ಸೊಪ್ಪುಗಳ ಸಾಂಬಾರು, ಮುದ್ದೆ, ಅನ್ನ. ಹೇಗಿದೆ? ಎಲೆಗಳ ಪರಿಚಯವೂ ಆಯಿತು, ತಾವೇ ಸವಿಯುವ ಅಪೂರ್ವ ಅವಕಾಶವೂ ಸಿಕ್ಕಿತು. ಊಟದ ನಂತರದ ಅವಧಿಯಲ್ಲಿ ಮತ್ತೆ 54 ಗಿಡಗಳ ಪರಿಚಯ.
ಇಷ್ಟರಲ್ಲಿ ಗುಂಗುರುಮಳೆ ಅವರ ಆರು ಮಾಸಿಕ ಶಿಬಿರಗಳು ಕಳೆದಿವೆ.
ಎಲ್ಲಿಂದೆಲ್ಲಾ ಅಭ್ಯರ್ಥಿಗಳು ಬರುತ್ತಾರೆ?
“ದಾವಣಗೆರೆ, ಚಾಮರಾಜನಗರ, ಶಿವಮೊಗ್ಗ, ಕನಕಪುರ, ಮೈಸೂರು - ಎಲ್ಲರೂ ದೂರ ದೂರದ ಊರವರು.”
“ನಿಮ್ಮೂರುಗಳಲ್ಲಿ ನೀವೂ ಯಾವುದಾದರೂ ರೀತಿಯಲ್ಲಿ ಈ ಜ್ಞಾನ ಹಂಚಿಕೊಳ್ಳಿ. ಹಾಗೆ ಮಾಡುವಾಗ ನಿಮ್ಮ ಸುತ್ತಮುತ್ತಲೂ ಇರುವ ಗಿಡಗಳನ್ನೇ ಪರಿಚಯಿಸಿ. ನಿಮಗೆ ಗೊತ್ತಿಲ್ಲದ ಗಿಡ, ಎಲೆಗಳ ಫೋಟೋ ಕಳಿಸಿದರೆ ನಾನು ವಿವರ ಕೊಡುವೆ. ಕನಿಷ್ಠ ಮೂವತ್ತರಷ್ಟಾದರೂ ಹೊಲಬೇಲಿ ಸೊಪ್ಪುಗಳ ಪರಿಚಯ ಮಾಡಿಕೊಳ್ಳಿ. ಇತರರಿಗೂ ಪರಿಚಯಿಸಿ.” ಇದು ಗುಂಗುರುಮಳೆಯವರ ಕಳಕಳಿಯ ಸಲಹೆ.
ಮುರಳೀಧರ್ ಗುಂಗುರುಮಳೆ - - 99028 57065 (ಸಂಜೆ 6 - 7)