ADD

Back To Free Articles

September-2026

ಭೈರುಂಬೆಯ ‘ಕೃಷಿಕರ ಕಪಾಟು’

ಬೇರೆ ಯಾವುದೇ ಸಹಕಾರಿ ಸಂಘ, ರೈತೋತ್ಪಾದಕ ಸಂಘಗಳು ಭೈರುಂಬೆ ಅಥವಾ ಟಿಎಮ್ಮೆಸ್ ರೀತಿಯಲ್ಲಿ ಕೃಷಿಕರ ಉತ್ಪನ್ನ ಮಾರಿಕೊಡುವ ವಿಶೇಷ ಪ್ರಯತ್ನ  ಮಾಡುತ್ತಿದ್ದರೆ, ಅಡಿಕೆ ಪತ್ರಿಕೆಯ ವಾಟ್ಸಪ್ಪಿಗೆ ವಿವರ ಕಳಿಸಿಕೊಡಿ. - ಸಂ

- ಶ್ರೀ ಪಡ್ರೆ

 

ನೆಯಲ್ಲಿ ತಯಾರಿಸಿದ ಹಪ್ಪಳ, ಚಿಪ್ಸ್ ಇತ್ಯಾದಿ  ಸಣ್ಣಪ್ರಮಾಣದ ಉತ್ಪನ್ನಗಳನ್ನು  ಮಾರಲು ಭೈರುಂಬೆಯಲ್ಲಿ ಒಂದು ಒಳ್ಳೆಯ ವ್ಯವಸ್ಥೆ ಇದೆ. ಅದುವೇ ಸೊಸೈಟಿಯ (ಹುಳಗೋಳ) ‘ಕೃಷಿಕರ ಕಪಾಟು’.

ಈ ಸೊಸೈಟಿ ಈ ವ್ಯವಸ್ಥೆ ಆರಂಭಿಸಿದ್ದು ನಾಲ್ಕು ವರ್ಷ ಹಿಂದೆ. “ಸದಸ್ಯರು ತಮ್ಮ ಉತ್ಪನ್ನಗಳನ್ನು ಸಿಬಂದಿ ಹತ್ತಿರ ಬರೆಯಿಸಿ ಕಪಾಟಿನಲ್ಲಿಟ್ಟರೆ ಸಾಕು. ಆಸಕ್ತರು ಖರೀದಿಸಿದಾಗ ಆ ಬೆಲೆಯನ್ನು ಉತ್ಪಾದಕರಿಗೆ ಪಾವತಿಸುವ ಅಥವಾ ಅವರ ಖಾತೆಗೆ ಜಮಾ ಮಾಡುವ ಕೆಲಸ ಮಾಡುತ್ತೇವೆ. ಇದಕ್ಕೆ ಸೊಸೈಟಿಗೆ ಶುಲ್ಕ ಕೊಡಬೇಕಿಲ್ಲ.” ಎನ್ನುತ್ತಾರೆ ಸಿಇಒಜಿ.ಎಂ.ಹೆಗಡೆ.

 “ಯಾರೋ ಒಬ್ಬರು ಸದಸ್ಯರು ಹ್ಯಾಂಡ್ ಬ್ಯಾಗ್ ತಯಾರಿಸಿ ತಂದಿಟ್ಟು ಮಾರುತ್ತಿದ್ದಾರೆ. ಈಚೆಗೆ ಯಾರೋ ಲಿಂಬೆ ಹಣ್ಣು ಇಟ್ಟಿದ್ದರು. ಮೂರುನಾಲ್ಕು ಸದಸ್ಯರಂತೂ ಈ ವ್ಯವಸ್ಥೆಯ ಉಪಯೋಗ ಹೆಚ್ಚಾಗಿ ಪಡೆಯುತ್ತಿದ್ದಾರೆ” ಎನ್ನುತ್ತಾರೆ.

ಮಾರದೆ ಉಳಿದರೆ? “ಹಾಗಾಗುವುದು ಅಪರೂಪ. ಅಂಥ ಪರಿಸ್ಥಿತಿ ಬಂದರೆ, ನಾವು ಸೊಸೈಟಿಯ ಸಿಬಂದಿಯೇ ಯಾರಾದರೂ ಖರೀದಿಸಿ ಅವರಿಗೆ ರೊಕ್ಕ ಪಾವತಿಸುತ್ತೇವೆ. ಅವರಿಗೆ ಉತ್ಪನ್ನ ಪರತ್ (ಹಿಂದೆ) ಕೊಡುವುದಿಲ್ಲ.”

ಹಲಸು - ಬಾಳೆಕಾಯಿಗಳ ಚಿಪ್ಸ್ ಇದ್ದಾಗ ತಿಂಗಳಿಗೆ ನಾಲ್ಕೈದು ಸಾವಿರ ರೂ.ಗಳ ವ್ಯವಹಾರ ನಡೆಯುತ್ತದೆ. ಉಳಿದ ತಿಂಗಳು ಒಂದು ಸಾವಿರ ರೂ. ಕಡಿಮೆ.

ಹಾಗೆಂದು ದೊಡ್ಡ ಪ್ರಮಾಣದಲ್ಲಿ ಉತ್ಪನ್ನ ತಯಾರಿಸುವವರಿಗೆ ಈ ವೇದಿಕೆ ಮಾರಾಟಕ್ಕೆ ಸೂಕ್ತವಾಗದು. ಏಕೆಂದರೆ ಇಲ್ಲಿಗೆ ಬರುವ ಗ್ರಾಹಕವರ್ಗ ಸೀಮಿತ.

ಉಳಿದೆಡೆಗಳ ಪ್ರಾಥಮಿಕ ಸಹಕಾರಿ ಸೇವಾಸಂಘಗಳು (ಪ್ಯಾಕ್ಸ್ಸ್) ಕೂಡಾ ಈ ಥರದ ಒಂದು ಸಣ್ಣ ಪ್ರಯತ್ನ ಏಕೆ ಮಾಡಬಾರದು?

ಬೇರೆ ಯಾವುದೇ ಸಹಕಾರಿ ಸಂಘ, ರೈತೋತ್ಪಾದಕ ಸಂಘಗಳು ಭೈರುಂಬೆ ಅಥವಾ ಟಿಎಮ್ಮೆಸ್ ರೀತಿಯಲ್ಲಿ ಕೃಷಿಕರ ಉತ್ಪನ್ನ ಮಾರಿಕೊಡುವ ವಿಶೇಷ ಪ್ರಯತ್ನ  ಮಾಡುತ್ತಿದ್ದರೆ, ಅಡಿಕೆ ಪತ್ರಿಕೆಯ ವಾಟ್ಸಪ್ಪಿಗೆ ವಿವರ ಕಳಿಸಿಕೊಡಿ. - ಸಂ