ಉತ್ಪನ್ನಗಳನ್ನು ಕೊಂಡೊಯ್ದು ಕೊಟ್ಟ ಸದಸ್ಯರಿಗೆ ಅದರ ನಿಗದಿತ ಬೆಲೆಯನ್ನು ಸಂಸ್ಥೆ ಆ ಕೂಡಲೇ ಪಾವತಿಸುತ್ತದೆ.
- ಶ್ರೀ ಪಡ್ರೆ
ಶಿರಸಿಯ ದಿಗ್ಗಜ ಸಹಕಾರಿ ಸಂಸ್ಥೆಗಳಲ್ಲೊಂದು ಟೀಎಂಎಸ್. ಇದು ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘದ ಪುಟ್ಟ ಹೆಸರು. ಕಳೆದ ನಾಲ್ಕು ವರ್ಷಗಳಿಂದ ಸದಸ್ಯ ಕೃಷಿಕರಿಗೆ ಒಂದು ಅತ್ಯಪೂರ್ವ ಸೇವೆ ಒದಗಿಸುತ್ತಿದೆ.
ಕೃಷಿಕರ ಮನೆಗಳಲ್ಲಿ ಅವರೇ ಬೆಳೆಸಿದ ತರಕಾರಿ, ಹಣ್ಣುಗಳಲ್ಲಿ ಒಂದಷ್ಟು ಮಿಗತೆ ಉಳಿಯುವುದಿದೆ. ಅದು ನಗದಾಗಿ ಪರಿವರ್ತನೆ ಆಗುವುದೇ ಇಲ್ಲ. ಇಂಥ ಯಾವುದೇ ಹಣ್ಣು - ತರಕಾರಿಗಳನ್ನು ಟೀಎಂಎಸ್ಸಿಗೆ ಒಯ್ದು ಕೊಟ್ಟರೆ ಸಾಕು, ಅವರು ಅದರ ಮಾರಾಟ ಮಾಡುತ್ತಾರೆ.
“ನಮ್ಮ ಟೀಎಂಎಸ್ ಕೃಷಿಕರ ಈ ಥರದ ಚಿಲ್ಲರೆ ಉತ್ಪನ್ನಗಳನ್ನು ಮಾರಿಕೊಡುವುದು ಮಾತ್ರವಲ್ಲ, ಅವುಗಳ ಜವಾಬ್ದಾರಿಯನ್ನೂ ತೆಗೆದುಕೊಳ್ಳುತ್ತದೆ” ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕಿ ಇಂದಿರಾ ಗೋಪಾಲ ಹೆಗಡೆ.
ಜವಾಬ್ದಾರಿ ಎಂದರೆ ಹೇಗೆ?
ಉತ್ಪನ್ನಗಳನ್ನು ಕೊಂಡೊಯ್ದು ಕೊಟ್ಟ ಸದಸ್ಯರಿಗೆ ಅದರ ನಿಗದಿತ ಬೆಲೆಯನ್ನು ಸಂಸ್ಥೆ ಆ ಕೂಡಲೇ ಪಾವತಿಸುತ್ತದೆ. ಅನಂತರ ತನ್ನ ಮಳಿಗೆಯಲ್ಲಿ ಅದನ್ನು ವಿಕ್ರಯಿಸುತ್ತದೆ.
ಮಗೆಕಾಯಿ, ಬೆಂಡೆ, ಬೀನ್ಸ್, ಬದನೆ, ಹಲಸು, ಮಾವು, ಚಿಕ್ಕು - ಹೀಗೆ ಸ್ಥಳೀಯವಾಗಿ ಬೆಳೆಯುವ ಹಣ್ಣು ತರಕಾರಿಗಳು ಟೀಎಂಎಸ್ಸಿಗೆ ಬರುತ್ತವೆ. ಕೃಷಿಕರ ಉತ್ಪನ್ನವನ್ನು ಇಲ್ಲಿ ಪ್ರತ್ಯೇಕ ವಿಭಾಗವಾಗಿ ಇಡುವುದಿಲ್ಲ. ಸಂಸ್ಥೆ ತರಿಸಿ ಮಾರಾಟ ಮಾಡುವ ಉಳಿದ ಹಣ್ಣು ತರಕಾರಿಗಳ ಜತೆ ಇದೂ ಸೇರುತ್ತದೆ.
“ಕೃಷಿಕರ ಉತ್ಪನ್ನಗಳು ಭಾರೀ ಪ್ರಮಾಣದಲ್ಲೇನೂ ಬರುವುದಿಲ್ಲ. ಆಯಾಯಾ ಶ್ರಾಯ ಹೊಂದಿಕೊಂಡು ಇವನ್ನು ತರುತ್ತಾರೆ. ನಾವು ಆಯಾಯಾ ದಿನದ ಮಾರುಕಟ್ಟೆ ದರ ಆಧರಿಸಿ ನಿಶ್ಚಯ ಮಾಡಿದ ದರವನ್ನು ಅವರಿಗೆ ಕೂಡಲೇ ಪಾವತಿಸುತ್ತೇವೆ. ಮಗೆಕಾಯಿ, ಹಲಸು, ಮಾವು ಮತ್ತು ಈಚೆಗೆ ಬೆಣ್ಣೆಹಣ್ಣು ಸ್ವಲ್ಪ ದೊಡ್ಡ ಪ್ರಮಾಣದಲ್ಲೇ ಬರುತ್ತದೆ” ಎನ್ನುತ್ತಾರೆ ಇಲ್ಲಿನ ಸೂಪರ್ ಮಾರ್ಕೆಟ್ ವಿಭಾಗದ ಮುಖ್ಯಸ್ಥ ಮಹೇಶ್ ಕೇಶವ ಭಟ್.
“ಮಿಗತೆ ಉತ್ಪನ್ನಗಳಷ್ಟೇ ಇರುವ ಕಾರಣ, ಸದಸ್ಯರು ಟೀಎಂಎಸ್ಸಿಗೆ ಅದನ್ನು ಕೊಡಲೆಂದೇ ಹೋಗುವುದು ಅಪ್ರಾಯೋಗಿಕ. ಆ ಕಡೆ ಹೋಗುವ ಸಂದರ್ಭ ಬಳಸಿ ತಮ್ಮ ಬೆಳೆಯನ್ನು ಕೊಡುವುದು ಪ್ರಯೋಜನಕರ” ಎನ್ನುತ್ತಾರೆ ಇಂದಿರಾ ಹೆಗಡೆ.
ಸ್ವತಃ ಇಂದಿರಾ ಹೆಗಡೆ ಅವರೇ ಅವರ ಹಿತ್ತಿಲಿನ ವಿಶೇಷ ತಳಿ ರುದ್ರಾಕ್ಷಿ ಹಲಸನ್ನು ಬೇರೆಬೇರೆ ಸಂದರ್ಭದಲ್ಲಿ ಹೋಗುವಾಗ ಕೊಂಡೋಗಿ ಕೊಟ್ಟಿದ್ದಾರಂತೆ.
ಈ ಕಾರಣದಿಂದ ನನಗೆ ಒಳ್ಳೆ ತೃಪ್ತಿಕರ ಬೆಲೆಯೂ ಸಿಕ್ಕಿದೆ, ಹನಿಗೂಡಿ ಹಳ್ಳವೂ ಆಗಿದೆ” ಎನ್ನುತ್ತಾರೆ.
ವರ್ಷದಲ್ಲಿ ರೈತರು ತರುವ ಹಣ್ಣು - ತರಕಾರಿಗಳ ಪ್ರಮಾಣದಲ್ಲಿ ಏರಿಳಿತ ಇರುತ್ತದೆ. ಸೀಸನುಗಳಲ್ಲಿ, ರೈತರಿಂದ ಬೆಳೆ ಹೆಚ್ಚು ಬರುವಾಗ ತಿಂಗಳಿಗೆ ಅವರಿಗೆ ಒಟ್ಟು ಒಂದು ಲಕ್ಷ ರೂ.ಗಳ ಒಳ ಹೊರಗಿನ ಮೊತ್ತ ಪಾವತಿಸುವುದಿದೆ.
ರುಚಿರುಚಿಯ ಡಬಲ್ ಬೀನ್ಸ್ ಇಲ್ಲಿಗೆ ಸೀಸನಿನಲ್ಲಿ ಬರುವ ಒಂದು ತರಕಾರಿ. ಬನವಾಸಿ ಭಾಗದಲ್ಲಿ ಇದನ್ನು ಬೆಳೆಯುವವರು ಇದ್ದಾರಂತೆ. ಕರಾವಳಿ ಭಾಗಕ್ಕೆ ದಶಕದ ಹಿಂದೆ ಬರುತ್ತಿದ್ದ ಈ ಥರದ ಡಬಲ್ ಬೀನ್ಸ್ ಈಗ ಮಾರುಕಟ್ಟೆಗೆ ಬರುವುದೇ ಇಲ್ಲ. “ನಮ್ಮಲ್ಲಿ ಈ ವರ್ಷದಂತೆ ಮಳೆಗಾಲದ ಆರಂಭದಲ್ಲಿ ಹೆಚ್ಚು ಮಳೆ ಇಲ್ಲದಿದ್ದರೆ ಇದು 2 - 3 ತಿಂಗಳ ಕಾಲ ಬರುತ್ತಿರುತ್ತದೆ” ಎನ್ನುತ್ತಾರೆ ಮಹೇಶ್.
ಸದಸ್ಯರ ಮನೆಗಳಲ್ಲಿ ಮಿಗತೆ ಉಳಿದು ಮಣ್ಣಾಗುವ ಕೃಷ್ಯುತ್ಪನ್ನಗಳನ್ನು ಖರೀದಿಸುವ ಟೀಎಂಎಸ್ ಸಂಸ್ಥೆಯ ಈ ಸೇವೆ, ಟರ್ನ್ ಓವರ್ ಲೆಕ್ಕದಲ್ಲಿ ಚಿಲ್ಲರೆಯದಾದರೂ, ಅದರ ಹಿಂದಿನ ದೂರದರ್ಶಿತ್ವ ಮತ್ತು ಅದು ಹಾಕಿಕೊಟ್ಟ ಮಾದರಿ ಶ್ಲಾಘನೀಯ.
ಮಹೇಶ್. ಕೆ. ಭಟ್ - 82771 37673 (7 - 8 PM)