ಅಲ್ಲಿ ‘ಬನಾನಾ ಪ್ಯಾನ್ ಕೇಕ್’ ಅಂಗಡಿಗಳೇ ಇವೆ. ರುಚಿವಿಶೇಷಕ್ಕಿಂತಲೂ ಬಾಳೆಹಣ್ಣನ್ನು ರೋಟಿಯ ಜತೆ ಸಂಯೋಜಿಸಿ ಪ್ರೆಸೆಂಟ್ ಮಾಡುವ ಜಾಣ್ಮೆಯೇ ಮೆಚ್ಚುಗೆಗೆ ಅರ್ಹ.
- ಶ್ರೀ ಪಡ್ರೆ
ಚಿಯಾಂಗ್ ಮೈ ನಗರವನ್ನು ಇನ್ನೇನು ಬಿಡಬೇಕು ಎನ್ನುವಾಗ ರಸ್ತೆ ಬದಿಯಲ್ಲಿ ಗಮನ ಸೆಳೆದ ಅಂಗಡಿ ‘ಬನಾನಾ ಪ್ಯಾನ್ ರೋಟಿ’ಯದ್ದು.
ನಾವು ಥಾಯ್ಲೆಂಡಿನಲ್ಲಿ ಕೌಟುಂಬಿಕ ಪ್ರವಾಸದಲ್ಲಿದ್ದೆವು. ‘ಏನಿದು ಬನಾನಾ ರೋಟಿ’ ಎಂದು ದೊಡ್ಡ ಸ್ವರದಲ್ಲಿ ಕೇಳಿದೆ. “ನಾಳೆ ನಾವು ಭೇಟಿ ಕೊಡುವ ಫುಕೆಟ್ಟಿನಲ್ಲಿ ಇವು ಧಾರಾಳ ಇವೆ. ರಸ್ತೆ ಬದಿಯಲ್ಲಿ ಸಿಗುತ್ತವೆ” ಎಂದ ಮಗ.
ಮರುದಿನ ಫುಕೆಟ್ಟಿನ ರಸ್ತೆಗಳಲ್ಲಿ ಮುಂಜಾನೆಯೇ ಒಂದು ಸುತ್ತು ಹಾಕಿದೆ. ಬನಾನಾ ಪ್ಯಾನ್ ಕೇಕ್ ತಯಾರಿಸುವ ನಾಲ್ಕೈದು ಅಂಗಡಿಗಳು ಸಿಕ್ಕವು. ಕೆಲವಂತೂ ಹಿಂದಿನ ಎಸ್ಟಿಡಿ ಬೂತಿನಷ್ಟು ಚಿಕ್ಕವು.
ಇವರು ಮಾಡಿಕೊಡುವ ರೋಟಿ ಒಂದೇ ಥರದ್ದು ಅಲ್ಲ. ಅದರಲ್ಲೂ ಆರೆಂಟು ವಿಧದವು ಇವೆ. ಮೂಲ ಒಳಸುರಿ ಬಾಳೆಹಣ್ಣು. ಅದಕ್ಕೆ ಜೇನು, ದ್ರಾಕ್ಷಿ, ಸ್ಟ್ರಾಬೆರಿ, ಚಾಕೊಲೇಟ್, ಪೈನಾಪಲ್, ಹಾಲು - ಹೀಗೆ ಹತ್ತಾರು ವೈವಿಧ್ಯಮಯ ಚೇರ್ಚೆಗಳು. 50ರಿಂದ 60 ಬಾತ್ - ಎಂದರೆ ಮೂರರಿಂದ ಗುಣಿಸಿಕೊಳ್ಳಿ. ಅಷ್ಟು ರೂಪಾಯಿ.
ಒಂದು ಅಂಗಡಿಯ ಮಹಿಳೆಗೆ ಆರ್ಡರು ಕೊಟ್ಟೇಬಿಟ್ಟೆವು. ಬರೇ ಬಾಳೆಹಣ್ಣಿನ ಪ್ಲೈನ್ ರೋಟಿ. ಆಕೆ ಚಕಚಕನೆ ಕೆಲಸ ಆರಂಭಿಸಿದಳು. ಒಂದು ಕ್ಯಾವೆಂಡಿಶ್ ಥರದ ಬಾಳೆಹಣ್ಣನ್ನು ಥಟ್ಟಂತ ಅಡ್ಡಕ್ಕೆ ಕೊಯ್ದು ಬಿಲ್ಲೆಗಳಾಗಿಸಿಕೊಂಡಳು.
ಮನೆಯಿಂದ ತಯಾರಿಸಿ ತಂದ ರೊಟ್ಟಿಯ ಹಿಟ್ಟಿನ ಒಂದು ಚೆಂಡು ಹೊರತೆಗೆದು ಕೈಯಲ್ಲೇ ಅದನ್ನು ತಟ್ಟಿ ದೊಡ್ಡದಾಗಿಸಿದಳು. ಒಲೆ ಉರಿಸಿ ರೊಟ್ಟಿ ಅದಕ್ಕೇರಿಸಿ, ಮೇಲೆ ಬಾಳೆಹಣ್ಣಿನ ಬಿಲ್ಲೆಗಳನ್ನು ಹಾಕಿದ್ದಾಯಿತು. ಸ್ವಲ್ಪ ಬೆಣ್ಣೆ ಸೇರಿಸಿ ಎರಡೂ ಬದಿಯನ್ನು ಹೊಂಬಣ್ಣ ಬರುವಷ್ಟು ಬೇಯಿಸಿದಳು. ಮೇಲೆ ಸ್ವಲ್ಪ ಕ್ರೀಮಿನ ಪದರ.
ನಾವು ನಾಲ್ವರಿದ್ದೆವು. ಮಗ - ಸೊಸೆಯ ಹೆತ್ತವರು. ನಮ್ಮ ರೊಟ್ಟಿವಾಲಿ ಅಮ್ಮ ರೊಟ್ಟಿಯನ್ನು ಚೌಕದ ತುಂಡುಗಳನ್ನಾಗಿಸಿ ಕೊಟ್ಟರು. ಕೈ ಕೊಳೆಯಾಗದಂತೆ ಚಾಪ್ ಸ್ಟಿಕ್ ಕೂಡಾ ಇತ್ತು.
ನಾನು, ನನ್ನ ಸೊಸೆಯ ಅಪ್ಪ ಭಾವ ‘ಪರವಾಗಿಲ್ಲ. ಒಮ್ಮೆ ತಿನ್ನಬಹುದು’ ಎನ್ನುತ್ತಾ ತಿಂದೆವು. ನನ್ನ ಪತ್ನಿ ಮತ್ತು ಸೊಸೆಯ ಅಮ್ಮನಿಗೆ ಒಂದು ತುಂಡು ತಿಂದದ್ದೇ ಸಾಕಾಯಿತು. ಮುಗಿಸುವ ಕೆಲಸ ನಮಗಿಬ್ಬರಿಗೆ.
ರೊಟ್ಟಿ ಮೈದಾ ಹುಡಿಯದ್ದಾಗಿರಬೇಕು. ರುಚಿಯಲ್ಲಿ ಭಾರೀ ವಿಶೇಷ ಎನೂ ಇರಲಿಲ್ಲ. ಆ ಸಂಯೋಜನೆ. ಝಟ್‍ಪಟ್ ತಯಾರಿ ಮತ್ತು ಪ್ರೆಸೆಂಟೇಶನ್ ಮೆಚ್ಚುವಂತಿತ್ತು. ಇನ್ನೊಂದು ಮಾರುಕಟ್ಟೆಯಲ್ಲಿ ರೊಟ್ಟಿ / ದೋಸೆಯ ಆಕಾರ ಸ್ವಲ್ಪ ವಿಭಿನ್ನವಾಗಿತ್ತು. ಅದರಲ್ಲೂ ಕ್ರಿಯೇಟಿವಿಟಿ ಇತ್ತು.
ಅಂದ ಹಾಗೆ ಥಾಯ್‍ಲ್ಯಾಂಡಿನ ಸೂಪರ್ ಮಾರ್ಕೆಟ್ ಮತ್ತಿತರ ಬಹುತೇಕ ಎಡೆಗಳಲ್ಲಿ ಕ್ಯಾವೆಂಡಿಶಿನದೇ ಕಾರುಬಾರು. ನಮ್ಮ ತಮಿಳುನಾಡಿನ ವಿರೂಪಾಕ್ಷಿಯಂಥ ಸ್ಥಳೀಯ ತಳಿಯ ಹಣ್ಣೂ ಅಲ್ಲಲ್ಲಿ ಸಿಗುತ್ತದೆ. ಇದು ಕ್ಯಾವೆಂಡಿಶಿಗಿಂತ ರುಚಿ ಹೆಚ್ಚು.
ಬಾಳೆಹಣ್ಣನ್ನು ನಮ್ಮಲ್ಲಿರುವಂತೆ ಬಾಳೆಹಣ್ಣಾಗಿಯೇ ಮಾರುವ ಬದಲು ಬೇರೆಬೇರೆ ಉತ್ಪನ್ನಗಳಲ್ಲಿ ಥಾಯ್ ಮಂದಿ ಸೇರಿಸಿ ಮಾರುತ್ತಾರೆ. ಬಾಳೆಹಣ್ಣಿನ ಪಾನೀಯ ಸೂಪರ್ ಮಾರ್ಕೆಟುಗಳಲ್ಲಿದೆ.
ಚಿಯಾಂಗ್ ಮಾಯ್‍ಯಲ್ಲಿ ನಾವಿದ್ದ ಹೋಟೆಲಿನಲ್ಲಿ ಬಾಳೆಹಣ್ಣಿನ ಬಜ್ಜಿಯಂತಹ ತಯಾರಿಯೊಂದಿಗೆ ಜತೆ ಇನ್ಯಾವುದೋ ಪೇಯದ ಕಾಂಬೋ ಬಗ್ಗೆ ಪೋಸ್ಟರ್ ಮಾಡಿ ಪ್ರಚಾರ ಕೊಟ್ಟು ಸರ್ವ್ ಮಾಡುತ್ತಿದ್ದರು.