ಗಿರೀಶ್ ಭಾರದ್ವಾಜ್ ಎಂಬ ಸುಳ್ಯದ ಯುಗಪುರುಷ ತನ್ನ ಪಯಣದುದ್ದಕ್ಕೂ ಜೋಡಿಸಿದ್ದು ನದಿಯ ದಡಗಳನ್ನು ಮಾತ್ರವಲ್ಲ. ಅವರು ಹೃದಯಗಳನ್ನು ಬೆಸೆದರು. ಹೋದಹೋದಲ್ಲೆಲ್ಲಾ ಚರಿತ್ರೆ ನಿರ್ಮಿಸಿ ಹಿಂತಿರುಗಿದರು.
- ಶ್ರೀ ಪಡ್ರೆ
ಸರಕಾರದ ವತಿಯಿಂದ ಉತ್ತರ ಭಾರತದ ಹಳ್ಳಿಕೊಂಪೆಯಲ್ಲಿ ತೂಗುಸೇತುವೆ ಕಟ್ಟಲು ಒಂದು ತಂಡ ಹೋಗಿತ್ತು. ಕೆಲವು ಹಳ್ಳಿಗರು ಇವರನ್ನು ಕಂಡು ಪುಳಕಗೊಂಡು ಕೈಮುಗಿದರು. “ಸೇತುವೆ ಕಟ್ಟಿಕೊಟ್ಟು ಪುಣ್ಯ ಪಡೆಯಿರಿ. ನಿಮ್ಮ ಫೋಟೋ ಇಟ್ಟು ದಿನಾ ನಮಸ್ಕರಿಸುತ್ತೇವೆ” ಎಂದು ಉದ್ಗರಿಸಿದರು.
ಸೇತುವೆ ನಿರ್ಮಾಣ ತುಂಬ ಸವಾಲು ದಾಯಕವಾಗಿತ್ತು. ಮತ್ತೆ ಬಿಲ್ ಪಾಸಾಗಬೇಕಾದರೆ ನೂರೆಂಟು ಅಡ್ಡಿಗಳು, ಅತಿ ವಿಳಂಬ. ‘ಬೇಡವೇ ಬೇಡ’ ಎಂದು ಯೋಜನೆ ಕೈಬಿಟ್ಟು ನಿರ್ಮಾಣ ಗಾರರು ಮರುದಿನವೇ ಓಡುವ ನಿರ್ಧಾರ ಮಾಡಿದ್ದರು.
ಮಧ್ಯರಾತ್ರ್ರಿ ಅವರಿಗೊಂದು ಕನಸು. ಆ ಅಸಹಾಯಕ ಹಳ್ಳಿಗರ ಚಿತ್ರ ಎದುರಾಯಿತು. “ನಾವೂ ಕೈಬಿಟ್ಟರೆ ಇಲ್ಲಿ ಎಂದಿಗೂ ಸೇತುವೆ ಆಗದು. ಸರಕಾರದ, ಬಿಲ್ಲಿನ ಕತೆ ಹಾಗಿರಲಿ. ಈ ಹಳ್ಳಿಗರಿಗಾಗಿಯಾದರೂ ಸೇತುವೆ ಕಟ್ಟಲೇಬೇಕು” ಎನಿಸಿತು. ಸೇತುವೆ ಎದ್ದಿತು!
ಎರಡು ದಶಕಗಳಲ್ಲಿ 142 ತೂಗುಸೇತುವೆಗಳು. ಅವುಗಳ ಸಿಂಹಪಾಲೂ ಕುಗ್ರಾಮಗಳ ಎರಡು ದಡ ಜೋಡಿಸುವ ಜೀವನರೇಖೆಗಳು. ಹೊರಜಗತ್ತಿನ ಸಂಪರ್ಕವೇ ಸಿಗದ ಶಾಪಗ್ರಸ್ತ ಜನಸಮುದಾಯಗಳ ನನಸಾದ ಕನಸು.
ಗಿರೀಶ್ ಭಾರದ್ವಾಜ್ ಎಂಬ ಸುಳ್ಯದ ಯುಗಪುರುಷ ತನ್ನ ಪಯಣದುದ್ದಕ್ಕೂ ಜೋಡಿಸಿದ್ದು ನದಿಯ ದಡಗಳನ್ನು ಮಾತ್ರವಲ್ಲ. ಅವರು ಹೃದಯಗಳನ್ನು ಬೆಸೆದರು. ಹೋದ ಹೋದಲ್ಲೆಲ್ಲಾ ಚರಿತ್ರೆ ನಿರ್ಮಿಸಿ ಹಿಂತಿರುಗಿದರು.
‘ತೂಗುಸೇತುವೆಯ ಸರದಾರ’ರ ವ್ಯಕ್ತಿತ್ವ ತಿಳಿಯಲು ಅವರ ಬದುಕಿನ ನಾಲ್ಕಾರು ಘಟನೆಗಳೇ ಧಾರಾಳ.ಸೇತುವೆ ನಿರ್ಮಾಣ ಮುಗಿಯುವ ವರೆಗೆ ಗಿರೀಶ್ ಸೈಟ್ ಬಿಟ್ಟು ಹೋಗುತ್ತಲೇ ಇರಲಿಲ್ಲ. ಅದು ಅವರದೇ ನಿಯಮ. ಹರಿಯುವ ನದಿಯಿಂದ ತುಂಬ ಎತ್ತರದಲ್ಲಿ ಕಾರ್ಮಿಕರು ಕೆಲಸ ಮಾಡಬೇಕು. ಅಪಘಾತ ಸಾಧ್ಯತೆ ಜಾಸ್ತಿ. ಸ್ವ್ವಲ್ಪ ಎಚ್ಚರ ತಪ್ಪಿದರೂ ಬಿದ್ದು ಪ್ರವಾಹದೊಂದಿಗೆ ಹೋಗಬಹುದು. “ನಮ್ಮಲ್ಲಿ ಅತಿ ವಿಶ್ವಾಸದ ಹುಡುಗರೂ ಇದ್ದಾರೆ. ಅಂಥವರನ್ನು ಆಗಾಗ ಎಚ್ಚರಿಸಬೇಕು. ಬಿದ್ದರೆ ತಕ್ಷಣ ರಕ್ಷಿಸಲು ನಾನು ಸೈಟಿನಲ್ಲಿ ಇರಲೇಬೇಕು. ಎರಡು ಬಾರಿ ಹುಡುಗರು ಆಯ ತಪ್ಪಿ ಬಿದ್ದಿದ್ದರು”, ಅವರು ನೆನೆಯುತ್ತಾರೆ.
ಗಿರೀಶ್ ಒಳ್ಳೆಯ ಈಜುಗಾರ. ಎರಡು ಬಾರಿಯೂ ನದಿಗೆ ಬಿದ್ದ ಕಾರ್ಮಿಕರನ್ನು ಅವರು ದಡಕ್ಕೆ ತಂದು ಉಳಿಸಿದ್ದರು. “ಮನೆಯಲ್ಲೇ ಕುಳಿತರೆ ದಿನವಿಡೀ ಅಲ್ಲಿ ಏನಾಗುತ್ತದೋ ಎಂಬ ಆತಂಕ” ಆಗುತ್ತಿತ್ತಂತೆ. ಅವರ ಊಟ ತಿಂಡಿ, ನಿದ್ದೆ ಎಲ್ಲವೂ ಕಾರ್ಮಿಕರ ಜತೆಯೇ. ಅದೇ ಟೆಂಟಿನೊಳಗೆ. ಪ್ರತ್ಯೇಕ ಆಹಾರ ತಯಾರಿ ಇರಲಿಲ್ಲ. ಕಾರ್ಮಿಕರನ್ನು ಸೋದರ ಭಾವದಿಂದಲೇ ನೋಡುತ್ತಿದ್ದರು. ಎಲ್ಲರಿಗೂ ಅವರು ಗಿರೀಶಣ್ಣ.
ತಮ್ಮ ಸೇತುವೆ ಯಾರಿಗೂ ಅಪಾಯ ತರಬಾರದು ಎಂಬ ಹಟ ಅವರಲ್ಲಿತ್ತು. ಬರಬೇಕಾದ ಪಾವತಿ, ಕೆಲಸದ ನಿಯಂತ್ರಣಕ್ಕಿಂತಲೂ ಅವರು ಚಿಂತಿಸುತ್ತಿದ್ದದ್ದು ಸೇತುವೆಯ ಸುರಕ್ಷತೆಯ ಬಗ್ಗೆ.
2007ರಲ್ಲಿ ಸಿವಿಲ್ ಸೊಸೈಟಿ ಪತ್ರಿಕೆಗೆ ಮುಖಪುಟ ಲೇಖನಕ್ಕಾಗಿ ಗಿರೀಶ್ ಜತೆ ಒಂದು ದಿನ ಕಳೆದಿದ್ದೆ. ದೇಲಂಪಾಡಿಯಲ್ಲಿ ಪಯಸ್ವಿನಿ ನದಿಗೆ ಅಡ್ಡವಾಗಿ ಅವರ 66ನೆಯ ಸೇತುವೆ ಆರಂಭವಾಗಿತ್ತ್ತು. ಅವರು ಹಿಂದೆ ನಿರ್ಮಿಸಿದ ಒಂದು ಸೇತುವೆ ಕಂಡು ಊರವರೊಡನೆ ಮಾತಾಡಬೇಕಿತ್ತಲ್ಲಾ ಎಂದೆ. ಅವರು ನಮ್ಮನ್ನು ಹಳೆ ಸೇತುವೆಯ ಸೈಟಿಗೆ ಒಯ್ದರು.
ಸೇತುವೆ ಕಟ್ಟುತ್ತಾ ಗಿರೀಶ್ ಆಯಾಯಾ ಊರಿನವರೇ ಆಗುತ್ತಾರೆ. ಆ ಹಳ್ಳಿಗರು ತಮ್ಮ ಮನೆಯ ಪೂಜೆ, ಮದುವೆಗಳಿಗೆ ಇವರನ್ನೂ ಆಹ್ವಾನಿಸುತ್ತಾರೆ. ನಾವು ನೋಡಹೋದ ಸೇತುವೆಯ ಬಳಿಯ ಒಬ್ಬರು ಮಹನೀಯರು ಹೇಳಿದ್ದು ಹೀಗೆ: “ಗಿರೀಶರನ್ನು ಕಂಡರೆ ನಮಗೆ ಅಪರಾಧ ಭಾವ. ಸೇತುವೆಯ ಪೂರ್ತಿ ಬಿಲ್ ಇನ್ನೂ ಪಾವತಿಸಿಲ್ಲ. ಕೊಡಲು ಆಗಲೇ ಇಲ್ಲ. ಅವರು ಅದನ್ನು ಮನಸ್ಸಿನಲ್ಲಿ ಇಟ್ಟೇ ಇಲ್ಲ.” ಗಿರೀಶರಿಗೆ ಈ ಮಾತು ಹಿಡಿಸಲಿಲ್ಲ. ಮುನಿಸು ತೋರುತ್ತಾ “ಆ ಹಳೆ ಕತೆ ಹೇಳಲು ಅಲ್ಲ ನಾನಿವರನ್ನು ಇಲ್ಲಿಗೆ ಕರೆತಂದದ್ದು. ಸೇತುವೆಯ ಬಗ್ಗೆ ವಿವರ ತಿಳಿಸಿ” ಎಂದಿದ್ದರು.
“ಗಿರೀಶ್ ಅವರ ಬಗ್ಗೆ ಮೊದಲ ಬಾರಿ ಓದಿದಾಗಲೇ ಅವರನ್ನು ಭೇಟಿಯಾಗಬೇಕೆಂಬ ತೀವ್ರ ಆಸೆ ಉಂಟಾಯಿತು. ಅದು ಅವರ ತೂಗು ಸೇತುವೆಗಳ ಕಾರಣಕ್ಕಷ್ಟೇ ಅಲ್ಲ. ನಮ್ಮ ಸೇತುವೆಗಳು ಅವರದಕ್ಕಿಂತ ಹೆಚ್ಚು ಬಲಿಷ್ಠವಾಗಿವೆ, ಹೆಚ್ಚು ಬಾಳಿಕೆ ಬರುವಂತಿವೆ. ಆದರೆ ನನ್ನನ್ನು ಹೆಚ್ಚು ಆಕರ್ಷಿಸಿದ್ದು, ನನ್ನಂತೆಯೇ 20 ವರ್ಷಗಳಿಂದ ಲಾಭೋದ್ದೇಶ ವಿಲ್ಲದೆ ಜನಸೇವೆಯಲ್ಲಿ ತೊಡಗಿರುವ ವ್ಯಕ್ತಿಯನ್ನು ಅವರಲ್ಲಿ ಕಂಡೆ. ಒಂದು ಭೇಟಿಯಲ್ಲೇ ಅವರು ನನ್ನ ಆತ್ಮಬಂಧು ಮತ್ತು ಮಾರ್ಗದರ್ಶಕರಾದರು.”
ಈ ಮಾತು ಟೋನಿ ರುಟ್ಟಿಮಾನ್ (59) ಅವರದು. ಸ್ವಿಟ್ಜರ್‍ಲ್ಯಾಂಡ್‍ನವರು. ದಕ್ಷಿಣ ಅಮೆರಿಕ, ಕಾಂಬೋಡಿಯಾ, ಲಾವೋಸ್ ಹಾಗೂ ವಿಯೆಟ್ನಾಂ ದೇಶಗಳ ಬಡ ಸಮುದಾಯಗಳಿಗಾಗಿ ಸಮರ್ಪಣಾಭಾವದಿಂದ ತೂಗುಸೇತುವೆ ನಿರ್ಮಿಸುತ್ತಿರುವ ಮಾನವತಾವಾದಿ. 2007ರಲ್ಲಿ ಆಕಸ್ಮಿಕವಾಗಿ ಗಿರೀಶರ ಸಾಧನೆಯ ಬಗ್ಗೆ ತಿಳಿದು ಅವರ ಅಂಚೆ ವಿಳಾಸ ಮಾತ್ರ ಹಿಡಿದು ಹೇಳದೆ ಕೇಳದೆ ಸುಳ್ಯಕ್ಕೆ ಓಡೋಡಿ ಬಂದಿದ್ದರು.
ಆಂಧ್ರಪ್ರದೇಶದ ಲಕ್ನಾವರಂನಲ್ಲಿ ತೂಗು ಸೇತುವೆಗಳ ನಿರ್ಮಾಣ ನಡೆದಿತ್ತು. ನಕ್ಸಲ್‍ಪೀಡಿತ ಪ್ರದೇಶವಾದ ಕಾರಣ ಗಿರೀಶ್ ತಂಡಕ್ಕೆ 20 ಕಿ.ಮೀ. ದೂರದಲ್ಲಿ ವಸತಿ ಕಲ್ಪಿಸಲಾಗಿತ್ತು. ನಿರ್ಮಾಣ ಸಾಮಗ್ರಿಯನ್ನು ತಲೆಯ ಮೇಲೆ ಹೊತ್ತು ಸಾಗಿಸಬೇಕಾಗುತ್ತಿತ್ತು. ದಾರಿಯಲ್ಲಿ ನಕ್ಸಲರು ವಾಹನ ತಡೆಯುವುದು, ದೇಣಿಗೆ ಪೀಕಿಸುವುದು ನಡೆದೇ ಇತ್ತು.
ಒಂದು ದಿನ ಅಲ್ಲಿನ ಸರಪಂಚ ಯಾದಗಿರಿ – ಆತನೂ ನಕ್ಸಲನೇ – ಭಾರದ್ವಾಜರು ಕಾರ್ಮಿಕರ ಜೊತೆ ಊಟ ಮಾಡುವುದನ್ನು ನೋಡಿ ಆಶ್ಚರ್ಯಪಟ್ಟ. “ಇಲ್ಲೆಲ್ಲಾ ಮಾಲಿಕರು ನಮ್ಮನ್ನು ಹತ್ತಿರಕ್ಕೂ ಬಿಡುವುದಿಲ್ಲ” ಎಂದ. ಗಿರೀಶ್, “ನನ್ನ ಮೇಲಿರುವ ಮಾಲಿಕ ಒಬ್ಬನೇ. ಇವರೆಲ್ಲ ನನ್ನ ಮಕ್ಕಳಂತೆ,” ಎಂದರು. ಗಿರೀಶ್ ಯಾದಗಿರಿಯನ್ನೂ ‘ತಮ್ಮುಡು’ ಎಂದೇ ಕರೆಯುತ್ತಿದ್ದರು. ಆತ ಭಾವುಕನಾಗಿ, ‘ನಾನು ನಿಮ್ಮನ್ನು ಅಣ್ಣ ಎಂದು ಕರೆಯಬಹುದೇ?’ ಎಂದು ಕೇಳಿದ.
ಇದಾದ ನಂತರ ಸ್ಥಳೀಯ ಯುವಕರು ಬಂದು, “ನೀವು ಇಲ್ಲೇ ಉಳಿಯಿರಿ. ಯಾರು ನಿಮಗೆ ತೊಂದರೆ ಕೊಡುತ್ತಾರೋ ನಾವು ನೋಡುತ್ತೇವೆ” ಎಂದು ಭರವಸೆ ನೀಡಿದರು. ಅನಂತರ ಯಾರೂ ಇವರ ವಾಹನ ತಡೆಯಲಿಲ್ಲ; ಕಪ್ಪ ಕೇಳಲಿಲ್ಲ, ಅವರೆಲ್ಲಾ ನಗುತ್ತಾ ಗೌರವದಿಂದ ದಾರಿ ಬಿಡುತ್ತಿದ್ದರು. “ಆ ಯುವಕರಿಗೆ ಮೂಲಸೌಲಭ್ಯಗಳಿಲ್ಲ, ಕನಸುಗಳೂ ಇಲ್ಲ. ಪರಿಸ್ಥಿತಿಯೇ ಅವರ ಕನಸುಗಳನ್ನು ಕಸಿದು ಕೊಂಡಿದೆ. ಅದನ್ನು ಅರ್ಥಮಾಡಿ ವರ್ತಿಸಿದರೆ ಎಲ್ಲವೂ ಸಲೀಸು” ಎನ್ನುತ್ತಿದ್ದರು ಭಾರದ್ವಾಜ್.
2026 ಜುಲೈ 7ರಂದು 76ನೆಯ ವಯಸ್ಸಿನಲ್ಲಿ ಗಿರೀಶ್ ಈ ಜಗತ್ತಿಗೆ ವಿದಾಯ ಹೇಳಿದರು. ಭವಿಷ್ಯದಲ್ಲಿ ಯಾರಿಗೂ ಸರಿಗಟ್ಟಲಾಗದ ಸಾಧನೆ ಅವರದು. ಮಗ ಪತಾಂಜಲಿ ಭಾರದ್ವಾಜ್ ತೂಗುಸೇತುವೆಯ ಕಾರ್ಯ ಮುಂದುವರಿಸಿದ್ದಾರೆ.