ADD

Back To Free Articles

July-2026

‘ಈ ಗೇಮ್ ಚೇಂಜರಿನ ಸುದ್ದಿ ಎಲ್ಲೆಡೆ ಪ್ರಸ್ತಾಪಿಸುತ್ತೇನೆ’

“ಕರ್ನಾಟಕದ ಈಚೆಗಿನ ಉದಾಹರಣೆಗಳು ಕೃಷಿಕರು ಅಥವಾ ನವೋದ್ಯಮಿಗಳು ಹೆದ್ದಾರಿ ಬದಿಯಲ್ಲಿ ಒಂದು ಸ್ಟಾಲ್ ತೆರೆದು ಗೇರುಹಣ್ಣಿನ ತಾಜಾ ಜ್ಯೂಸ್ ಮಾರುವುದಕ್ಕೆ ತುಂಬು ಆತ್ಮವಿಶ್ವಾಸ ಕೊಟ್ಟಿವೆ”. ಕಲ್ಬಾವಿ ಬೊಟ್ಟು ಮಾಡುತ್ತಾರೆ, “ಈಚೆಗೆ ಹೊರಬಂದು ಗೆದ್ದ ಮೌಲ್ಯವರ್ಧನೆಯ ವಿಧಾನಗಳು ಎಲ್ಲ ರಾಜ್ಯಗಳಲ್ಲೂ ಅನುಸರಿಸುವಂಥದ್ದು, ಪ್ರಾಯೋಗಿಕ ಮತ್ತು ವರಮಾನದಾಯಕ.”

- ಶ್ರೀ

 
no image
 

ಳೆದ ಒಂದೆರಡು ತಿಂಗಳುಗಳಲ್ಲಿ ಕರ್ನಾಟಕದಲ್ಲಿ ಗೇರುಹಣ್ಣಿನ ಮೌಲ್ಯವರ್ಧನೆಯಲ್ಲಿ ನಡೆದಿರುವ ಬೆಳವಣಿಗೆಗಳು ದೇಶಕ್ಕೇ ದಾರಿ ತೋರಿಸುವಂಥವು”, ಕಲ್ಬಾವಿ ಪ್ರಕಾಶ್ ರಾವ್ ಹೇಳುತ್ತಾರೆ, “ಭಾಗವಹಿಸುವ ಎಲ್ಲಾ ವೇದಿಕೆಗಳಲ್ಲೂ ನಾನಿದನ್ನು ಪ್ರಸ್ತಾಪಿಸುತ್ತಿದ್ದೇನೆ. ನೋಡೋಣ. ಎಲ್ಲಾದರೂ ಈ ಕಿಡಿ ಉರಿಯಬಹುದು, ದೊಡ್ಡ ಆರಂಭ ಆಗಬಹುದು.”

ಪ್ರಕಾಶ್ ರಾವ್ ಗೋಡಂಬಿ ಸಂಸ್ಕರಣೆಯಲ್ಲಿ ಮೂರು ದಶಕಗಳ ಅನುಭವ ಮತ್ತು ಈ ರಂಗದ ದೇಶವಿದೇಶಗಳ ಒಳನೋಟ ಇರುವ ಉದ್ದಿಮೆದಾರರು. ‘ಕ್ಯಾಶ್ಯೂ ಆಪಲ್ ಟು ಮಾರ್ಕೆಟ್’ ವಾಟ್ಸಪ್ ಗುಂಪಿನ ಸಕ್ರಿಯ ಸದಸ್ಯರು.

ಕುರುವೇರಿ ದಂಪತಿಗಳು ಝೀರೋ ಅಡಿಟಿವ್ ಜ್ಯೂಸ್ ಮತ್ತು ಪಲ್ಪ್ ತಯಾರಿಸಿರುವುದು ಪ್ರಕಾಶ್ ರಾವ್ ಅವರ ಗಮನ ಸೆಳೆದಿದೆ. “ಎಲ್ಲಾ ದೊಡ್ಡದೊಡ್ಡ ಆಂದೋಳನಗಳು ಆರಂಭವಾಗುವುದು ಸಣ್ಣ ಕಿಡಿಯಿಂದ. ನಿಮ್ಮಗಳ ಅವಿರತ ಯತ್ನದಿಂದ ಇಂಥ ಕಿಡಿ ಜ್ವಲಿಸಿದೆ. ಈ ಉದಾಹರಣೆ ಇನ್ನೂ ಅದೆಷ್ಟೋ ಸಣ್ಣ ಮತ್ತು ದೊಡ್ಡ ಗೇರು ಬೆಳೆಗಾರರಿಗೆ ತಲಪಲಿದೆ, ಅವರೂ ಈ ದಾರಿ ಹಿಡಿಯುವುದು ಖಂಡಿತ” ಎನ್ನುತ್ತಾರೆ ರಾವ್.

ಕುರುವೇರಿ ವಿಶ್ವಕೇಶವ - ನವ್ಯಶ್ರೀ ಹತ್ತಿರದ ಬೆಳೆಗಾರರಿಂದ ಗೇರುಹಣ್ಣನ್ನು ಕಿಲೋಗೆ ರೂ.20ರ ದರದಲ್ಲಿ ಖರೀದಿಸಿದ್ದರು. “ಹತ್ತು ಕಿಲೋ ಗೇರು ಹಣ್ಣಿನಲ್ಲಿ ಒಂದು ಕಿಲೋ ಬೀಜದಿಂದ 150 ರೂ. ಮತ್ತು ಹಣ್ಣಿನಿಂದ 200 ರೂ. ಸಿಕ್ಕರೆ ಒಟ್ಟು ಈ ಹಿಂದೆ 150 ರೂ. ಸಿಗುವಲ್ಲಿ 350 ರೂ. ಸಿಕ್ಕಂತಾಗುತ್ತದೆ. ಭಾರತ ಈಚೆಗಿನ ದಶಕಗಳಲ್ಲಿ ಗೇರುಬೀಜ ಉತ್ಪಾದನೆಯಲ್ಲಿ ತೀವ್ರ ಕೊರತೆ ಅನುಭವಿಸುತ್ತಿದ್ದು ಆಫ್ರಿಕಾದಿಂದ ಆಮದು ಮಾಡುತ್ತಿದೆ. ಸರಕಾರ ಎಚ್ಚತ್ತು ಗೇರು ಕೃಷಿಯ ಹೆಚ್ಚಳಕ್ಕಾಗಿ ಕಾರ್ಯಕ್ರಮ ರೂಪಿಸುತ್ತಿದೆ. ಗೇರುಹಣ್ಣಿನಿಂದಲೂ ಆದಾಯ ಬರುವಂತಹ ಹೆಜ್ಜೆಗಳನ್ನು ಇಟ್ಟರೆ ಸಾಕು, ಆದಾಯವರ್ಧನೆಯಿಂದಾಗಿ ಕೃಷಿಕರು ಹೆಚ್ಚು ಗೇರುಬೀಜ ಉತ್ಪಾದಿಸಬಲ್ಲರು” ಎನ್ನುವುದು ಅವರ ಹಾರೈಕೆ.

“ಈಚೆಗಿನ ವರ್ಷಗಳಲ್ಲಿ ಭಾರತದಲ್ಲಿನ ತುಂಡು ಗೇರುಬೀಜದ ಔದ್ಯಮಿಕ ಬಳಕೆಯ ವರ್ಧನೆಯಾಗಿದೆ. ಹೀಗಾಗಿ ಗೋಡಂಬಿ ಉದ್ಯಮ ದಕ್ಷಿಣದಲ್ಲಿ ಮಾತ್ರವಲ್ಲ ದೇಶವಿಡೀ ಹಬ್ಬಿ ನಮ್ಮ ವಾರ್ಷಿಕ ಗೋಡಂಬಿ ಉತ್ಪಾದನಾ ಸಾಮಥ್ರ್ಯ 35 ಲಕ್ಷ ಟನ್ನಿಗೇರಿದೆ. ಆದರೆ ಕಚ್ಚಾ ಗೇರು ಬೀಜದ ಕೊರತೆಯಿಂದ ಕಳೆದ ಸಾಲಿನಲ್ಲಾದ ಉತ್ಪಾದನೆ ಕೇವಲ 22 ಟನ್. ನಮ್ಮಲ್ಲಿನ ಗೇರುಬೀಜ ಉತ್ಪಾದನೆಯನ್ನು ಹೆಚ್ಚಿಸಬೇಕಾದ ಅಗತ್ಯ ತುಂಬ ಇದೆ. ಈ ಲಕ್ಷ್ಯ ಈಡೇರಬೇಕಾದರೆ ಗೇರು ಕೃಷಿಕನ ಆದಾಯವರ್ಧನೆಯೊಂದೇ ಫಲಿತಾಂಶ ಕೊಡಬಹುದಾದ ಮಾರ್ಗ” ಎನ್ನುವುದು ಕಲ್ಬಾವಿಯವರ ಖಚಿತ ಅಭಿಪ್ರಾಯ.

ಪ್ರಕಾಶ್ ರಾವ್ ಅವರ ಪ್ರಕಾರ, “ಗೇರುಹಣ್ಣಿನ ಜ್ಯೂಸ್ ತಯಾರಿಸುವಾಗ ಅದರ ಒಗರು ತೆಗೆಯುವ ಕ್ರಮದ ಬಗ್ಗೆ ದಶಕಗಳ ಹಿಂದೆಯೇ ಅಧ್ಯಯನ ನಡೆದು ಶಿಫಾರಸು ಹೊರಬಂದಿತ್ತು. ಸಿಎಫ್‍ಟಿಆರ್‍ಐ ಈ ನಿಟ್ಟಿನಲ್ಲಿ ತುಂಬ ಕೆಲಸ ಮಾಡಿದೆ. ಬೇರೆ ಸಂಶೋಧನಾ ಸಂಸ್ಥೆಗಳೂ ಮಾಡಿವೆ. ಈ ಸರಳ ಮಾರ್ಗವೊಂದನ್ನೇ ಮನ ಮುಟ್ಟುವಂತೆ ತಿಳಿಸಿಕೊಟ್ಟ ಕಾರಣದಿಂದ ಈಗ ನಿಬ್ಬೆರಗಾಗಿಸುವ ಫಲಿತಾಂಶ ಬರುತ್ತಿದೆ.”

ರಾವ್ ತುರ್ತಾಗಿ ನಡೆಸಬೇಕಾದ ಕೆಲವು ಉಪಕ್ರಮಗಳತ್ತ ಗಮನ ಸೆಳೆಯುತ್ತಾರೆ. “ಗೇರು ರಸದಲ್ಲಿ ಸಿ ವಿಟಾಮಿನ್, ಆಂಟಿ ಆಕ್ಸಿಡೆಂಟ್ ಇತ್ಯಾದಿ ತುಂಬಾ ಪೋಷಕಾಂಶಗಳಿವೆ. ಯಾವ ಘಟಕಗಳು ಎಷ್ಟು ಇವೆ, ಇವುಗಳಿಂದ ಆರೋಗ್ಯಕ್ಕೆ ಏನೇನು ಕೊಡುಗೆಗಳಿವೆ ಎಂಬ ಬಗ್ಗೆ ಗಂಭೀರ ವೈಜ್ಞಾನಿಕ ಅಧ್ಯಯನ ಆಗಬೇಕಿದೆ. ಹಾಗೆಯೇ ಸರಕಾರ ಕೃಷಿಕರು ಮತ್ತು ಉದ್ದಿಮೆಗಳ ಉಮೇದು ಹೆಚ್ಚಾಗುವಂತೆ ಗೇರುಹಣ್ಣಿನ ಮೌಲ್ಯವರ್ಧನೆಯ ಬಗ್ಗೆಯೂ ಹೆಚ್ಚು ಒತ್ತು ಕೊಟ್ಟು ಯೋಜನೆ ರೂಪಿಸಿ ಗೇರು ಮತ್ತು ಕೊಕ್ಕೋ ಅಭಿವೃದ್ಧಿ ನಿರ್ದೇಶನಾಲಯದ (Directorate of Cashewnut and Cocoa Development (DCCD) ಮೂಲಕ ಸವಲತ್ತು, ಪ್ರೋತ್ಸಾಹ ಕೊಡಬೇಕಿದೆ. ಜತೆಜತೆಗೆ ಇನ್ನೂ ದೊಡ್ಡ ಸವಾಲೊಂದಿಗೆ. ಮೂರು ತಿಂಗಳು ಸಿಗುವ ಗೇರುಹಣ್ಣನ್ನು ಹಳ್ಳಿಗಳಿಂದ ಒಗ್ಗೂಡಿಸಿ ಉಳಿಗಾಲದಲ್ಲೂ  ಸಂಸ್ಕರಣೆ  ಮಾಡಲು  ಹೇಗೆ ಉಳಿಸಿಕೊಳ್ಳಬಹುದು ಎನ್ನುವ ಚಿಂತನೆ, ಕಾರ್ಯ ಯೋಜನೆಯೂ ಬೇಗನೆ ಆಗಬೇಕು” ಎನ್ನುತ್ತಾರೆ.

“ಭಾರತದಲ್ಲಿ ಔದ್ಯಮಿಕ ಕೌಶಲ ಮತ್ತು ಕ್ರಿಯಾಶೀಲತೆಗೇನೂ ಕೊರತೆ ಇಲ್ಲ. ಪ್ರಾಥಮಿಕ ಅಗತ್ಯಗಳನ್ನು ಪೂರೈಸಿ, ಸಂಶೋಧನೆ ಮೂಲಕ ದಾರಿ ತೋರಿದರೆ ಸಾಕು, ಗೇರುಹಣ್ಣಿನಿಂದ ಕೊನೆ ಉತ್ಪನ್ನ ತಯಾರಿಸಿ ಈ ವರೆಗೆ ಶೂನ್ಯ ಆದಾಯ ತರುತ್ತಿದ್ದ ರಂಗದಲ್ಲೇ ವರಮಾನ ಉಂಟು ಮಾಡುವ ಕೆಲಸ ತನ್ನಿಂದ ತಾನೇ ಆದೀತು. ನಮ್ಮ ದೇಶ ಇಂದು ಮಣ್ಣಾಗಿಸುತ್ತಿರುವ 90 ಲಕ್ಷ ಟನ್ ಗೇರುಹಣ್ಣಿನ ಗಣನೀಯ ಭಾಗವಾದರೂ ರೊಕ್ಕ ತರುವ ಹಾಗೆ ಆಗಬೇಕು” ಎನ್ನುತ್ತಾರೆ.

“ಕರ್ನಾಟಕದ ಈಚೆಗಿನ ಉದಾಹರಣೆಗಳು ಕೃಷಿಕರು ಅಥವಾ ನವೋದ್ಯಮಿಗಳು ಹೆದ್ದಾರಿ ಬದಿಯಲ್ಲಿ ಒಂದು ಸ್ಟಾಲ್ ತೆರೆದು ಗೇರುಹಣ್ಣಿನ ತಾಜಾ ಜ್ಯೂಸ್ ಮಾರುವುದಕ್ಕೆ ತುಂಬು ಆತ್ಮವಿಶ್ವಾಸ ಕೊಟ್ಟಿವೆ”. ಕಲ್ಬಾವಿ ಬೊಟ್ಟು ಮಾಡುತ್ತಾರೆ, “ಈಚೆಗೆ ಹೊರಬಂದು ಗೆದ್ದ ಮೌಲ್ಯವರ್ಧನೆಯ ವಿಧಾನಗಳು ಎಲ್ಲ ರಾಜ್ಯಗಳಲ್ಲೂ ಅನುಸರಿಸುವಂಥದ್ದು, ಪ್ರಾಯೋಗಿಕ ಮತ್ತು ವರಮಾನದಾಯಕ.” 

“ಈ ನಿಟ್ಟಿನಲ್ಲಿ ಕರ್ನಾಟಕ ಹಾಕಿಕೊಟ್ಟ ಅಡಿಪಾಯದ ವಿಷಯ ದೇಶದ ಉಳಿದೆಲ್ಲಾ ಗೇರು ಉದ್ದಿಮೆದಾರರು, ಕೃಷಿಕರು ಮತ್ತು ಆಡಳಿತಕ್ಕೆ ತಲಪಬೇಕು. ಆಗಸ್ಟ್ ತಿಂಗಳಲ್ಲಿ ಜೈಪುರದಲ್ಲಿ ನಡೆಯುವ ತ್ರಿದಿನದ ವಿಚಾರ ಸಂಕಿರಣದಲ್ಲಿ ನಾನು ಈ ಬಗ್ಗೆ ಬಲವಾಗಿ ಪ್ರಸ್ತಾಪಿಸುತ್ತೇನೆ. ನನಗೆ ಸಿಕ್ಕ ಎಲ್ಲ ವೇದಿಕೆಗಳಲ್ಲ್ಲೂ ಸಂತೋಷದಿಂದ  ಈ  ‘ಗೇಮ್ ಚೇಂಜರಿನ’ ವಿಷಯ ಹಬ್ಬಿಸುತ್ತೇನೆ” ಎನ್ನುತ್ತಾರೆ ಈ ಉದ್ಯಮಿ.