ADD

Back To Free Articles

May-2026

ಹುಣಿಸೆ ಹಣ್ಣಿನ ಪೇಸ್ಟ್ - ಕೃಷಿಕರ ವ್ಯಾಕ್ಯೂಮ್ ಪ್ಯಾಕಿಂಗ್

ನಾನು ರಖಂ ಗಿರಾಕಿಗಳಿಗೇ ಪ್ರಾಶಸ್ತ್ಯ ಕೊಡುತ್ತಿದ್ದೇನೆ. ನಾಲ್ಕಾರು ಹೋಟೆಲು ಮತ್ತು ಕ್ಯಾಟರರ್ಸ್ ಖಾಯಂ ಗಿರಾಕಿಗಳಿದ್ದಾರೆ. ತಿಂಗಳಿಗೆ ನೂರು - ನೂರ ಐವತ್ತು ಕಿಲೋ ಕೊಳ್ಳುತ್ತಾರೆ.

- ಶ್ರೀ

 
no image
 

ಮಿಳುನಾಡು ತೇಣಿಯ ಬಾಲ ಸಂತೋಷ್ ಇನ್ನೂ ವಿದ್ಯಾರ್ಥಿ. ಸಿವಿಲ್ ಎಂಜಿನೀಯರಿಂಗ್ ಅಂತಿಮ ವರ್ಷ ಓದುತ್ತಿದ್ದಾರೆ. ಇಷ್ಟರಲ್ಲೇ ತೇಣಿ ಕೇವೀಕೆಯ ಮಾರ್ಗದರ್ಶನದಲ್ಲಿ ಪುಟ್ಟ ಉದ್ದಿಮೆದಾರರೂ ಆಗಿದ್ದಾರೆ.

ಇವರು ತಯಾರಿಸುವ ಉತ್ಪನ್ನ ಒಂದೇ. ಹುಣಿಸೆ ಹಣ್ಣಿನ ಪೇಸ್ಟ್. ಕೇವೀಕೆಯ ಗೃಹ ವಿಜ್ಞಾನ ವಿಶೇಷಜ್ಞೆ  ರಮ್ಯಶಿವಸೆಲ್ವಿ ಮನೋಹರನ್ ಅವರಿಂದ ತರಬೇತಿ.

ಹುಣೆಸೆಹಣ್ಣಿನ ಪೇಸ್ಟ್ ತಯಾರಿಸಲು ನಾಲ್ಕು ಯಂತ್ರೋಪಕರಣ ಬೇಕು. ಆರೇಳು ಲಕ್ಷ ರೂಪಾಯಿ ಬಂಡವಾಳ ಅಗತ್ಯ. ಸದ್ಯ ತೇಣಿ ಕೇವೀಕೆಯ ಇನ್‍ಕ್ಯುಬೇಶನ್ ಸೆಂಟರಿನಲ್ಲೇ ಇವರು ತನ್ನ ಉತ್ಪನ್ನ ತಯಾರಿಸಿಕೊಂಡು ಮಾರುತ್ತಿದ್ದಾರೆ.

ತಿಂಗಳಿಗೆ ಮೂರು - ನಾಲ್ಕು ದಿನ ಉತ್ಪಾದನೆ. ಹುಣಿಸೆ ಹಣ್ಣು ವರ್ಷವಿಡೀ ಸಿಗುತ್ತದೆ. ಕಿಲೋಗೆ 120 ರೂ. ಬೆಲೆಯಿದೆ. ಕಾಲು, ಅರ್ಧ ಮತ್ತು ಒಂದು ಕಿಲೋದ ಜಾಡಿ ಪ್ಯಾಕಿಂಗ್ ಇದೆ. ರಖಂ ಆಗಿಯೂ ಪೂರೈಸುತ್ತಿದ್ದಾರೆ.

ಬಾಲಕರಿಗೆ ಉತ್ಪಾದನೆಗೆ ಒಬ್ಬರು ಖಾಯಂ ಸಹಾಯಕರಿದ್ದಾರೆ. ಮಾರಾಟ ಇವರದೇ ಜವಾಬ್ದಾರಿ. ತೇಣಿ ನಗರದಲ್ಲೇ ಮುಖ್ಯ ಮಾರಾಟ. ಹೋಟೆಲು, ಕ್ಯಾಟರರ್ಸ್ ನಡುವೆ ಬೇಡಿಕೆ. “ನಾನು ರಖಂ ಗಿರಾಕಿಗಳಿಗೇ ಪ್ರಾಶಸ್ತ್ಯ ಕೊಡುತ್ತಿದ್ದೇನೆ. ನಾಲ್ಕಾರು ಹೋಟೆಲು ಮತ್ತು ಕ್ಯಾಟರರ್ಸ್ ಖಾಯಂ ಗಿರಾಕಿಗಳಿದ್ದಾರೆ. ತಿಂಗಳಿಗೆ ನೂರು - ನೂರ ಐವತ್ತು ಕಿಲೋ ಕೊಳ್ಳುತ್ತಾರೆ.

ಸದ್ಯ ತಿಂಗಳಿಗೆ 600 ಕಿಲೋದ ಸುತ್ತಮುತ್ತ ಉತ್ಪಾದನೆ. ಉದ್ದಿಮೆ ಆಗಬಹುದು ಎಂಬ ಭರವಸೆ ಮೂಡಿದ್ದು ಬೇರೆಬೇರೆ ಯೋಜನೆಗಳ ಮೂಲಕ ಯಂತ್ರೋಪಕರಣಗಳಿಗಾಗಿ ಸಾಲದ ಅರ್ಜಿ ಹಾಕುತ್ತಿದ್ದಾರೆ.

ಕೊರಿಯರ್ ಮೂಲಕವೂ ರವಾನೆ ಇದೆ. ಆದರೆ ಕೌಟುಂಬಿಕ ವಲಯದ ಬೇಡಿಕೆ ಅಷ್ಟಾಗಿ ಇಲ್ಲ ಎನ್ನುತ್ತಾರೆ.

ಸಂಪರ್ಕ: 78068 80169

--------------------------------------------------------------------------------------------------------

ಕೃಷಿಕರ ವ್ಯಾಕ್ಯೂಮ್ ಪ್ಯಾಕಿಂಗ್

ಕಾಸರಗೋಡು ಜಿಲ್ಲೆಯ ಕಂಬಲ್ಲೂರಿನ ಶಶೀಂದ್ರನ್ ನಾಯರ್ ಎಮ್.ಆರ್. ಕಳೆದ ಎರಡು ವರ್ಷಗಳಿಂದ ಒಂದಷ್ಟು ಮೌಲ್ಯವರ್ಧನೆ ಮಾಡಲು ಆರಂಭಿಸಿದ್ದಾರೆ.

ಈ ಭಾಗದ ಕೃಷಿಕರು ಒಂದು ಕೃಷಿಕೂಟ ಮಾಡಿಕೊಂಡು ಹಲಸು, ಅರಿಶಿನ ಇತ್ಯಾದಿಗಳನ್ನು ಸಂಸ್ಕರಿಸಿ ಕೊನೆ ಉತ್ಪನ್ನ ತಯಾರಿಸುತ್ತಾರೆ. ಒಟ್ಟುಗೂಡಿ ಮಾರ್ಕೆಟ್ ಮಾಡುತ್ತಾರೆ.

ಇವರು ಹಲಸಿನ ಸೊಳೆಯನ್ನು ಡ್ರೈಯರಿನಲ್ಲಿ ಒಣಗಿಸಿ ಮಾರತೊಡಗಿದರು. ಅದು ಬಹು ಬೇಗನೆ ಹಾಳಾಗುತ್ತಿತ್ತು. ಅಲ್ಲಿಲ್ಲಿ ಅಧ್ಯಯನ ಪ್ರವಾಸ ಹೋಗಿದ್ದಾಗ ವ್ಯಾಕ್ಯೂಮ್ ಪ್ಯಾಕ್ ಮಾಡಿ ಇದನ್ನು ದೀರ್ಘ ಕಾಲ ಉಳಿಸಬಹುದು ಎಂದು ತಿಳಿಯಿತು.

ಕೃಷಿ ಇಲಾಖೆಯ ಸಹಾಯಧನದೊಂದಿಗೆ ನಾಯರ್ ವ್ಯಾಕ್ಯೂಮ್ ಪ್ಯಾಕಿಂಗ್ ಮೆಶಿನ್ ಕೊಂಡುಕೊಂಡರು. “ಅವಸರದಲ್ಲಿ ತಿಳಿಯದೆ ಹೆಚ್ಚು ಬೆಲೆ ಕೊಟ್ಟೆ. 50,000 ರೂ. ಪಾವತಿಸಿದೆ. ಅನಂತರ ವಿಚಾರಿಸಿದಾಗ ಈ ಥರದ್ದು 35,000 ರೂ.ಗಳಿಗೆ ಲಭ್ಯವಿದೆ ಎಂದು ತಿಳಿಯಿತು” ಎನ್ನುತ್ತಾರೆ.

ಈಗ ಇವರ ನಿರ್ಜಲೀಕೃತ ಹಲಸಿನ ಸೊಳೆ ಒಂದು ವರ್ಷ ಇಟ್ಟರೂ ಹಾಳಾಗುವುದಿಲ್ಲವಂತೆ. ಕೃಷಿಕರ ಮಟ್ಟದಲ್ಲಿ ವ್ಯಾಕ್ಯೂಮ್ ಪ್ಯಾಕಿಂಗ್ ಯಂತ್ರ ಕೊಂಡವರು ತೀರಾ ಕಮ್ಮಿ. ಮೌಲ್ಯವರ್ಧನೆ ನಡೆಸುವವರು ಈ ಯಂತ್ರದ ಪ್ಯಾಕಿಂಗಿನಿಂದ ಪ್ರಯೋಜನ ಪಡೆಯಬಹುದು ಎನ್ನುತ್ತಾರೆ.

ಸಂಪರ್ಕ :  94462 97632  (ಸಂಜೆ 6 - ರಾತ್ರಿ 8)