ADD

Back To Free Articles

June-2026

‘ನಾಂ ಮಟೂಂ’ ನಮ್ಮಲ್ಲೂ ಬರಲಿ

ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಅದೆಷ್ಟು ಸಸ್ಯ ಸಂತೆ, ಹಣ್ಣಿನ ಮೇಳಗಳು ನಮ್ಮಲ್ಲಿ ನಡೆಯುತ್ತವೆ! ಥಾಯ್ಲ್ಯಾಂಡ್, ಶ್ರೀಲಂಕಾಗಳಂತೆ ಬಿಲ್ವ, ಬೇಲ ಮೊದಲಾದ ಅವಗಣಿತ ಹಣ್ಣುಗಳಕುಡಿಯಲು ಸಿದ್ಧ ಪೇಯ

ತಯಾರಿಸಿ ಮಾರಲು ನಮಗೆ ವಿಪುಲಾವಕಾಶ ಇದೆ

 

- ಟೀಮ್‌ ಅಡಿಕೆ ಪತ್ರಿಕೆ

 
no image
 

ಭಾರತೀಯ ಮೂಲದ ಅವಗಣಿತ ಹಣ್ಣೊಂದರ ಚಹಾ ಥಾಯ್ಲ್ಯಾಂಡಿನಲ್ಲಿ ಜನಪ್ರಿಯ. ಅಲ್ಲಿನ ನಿವಾಸಿಗಳಿಗಷ್ಟೇ ಅಲ್ಲ, ವಿದೇಶಿ ಪ್ರವಾಸಿಗಳಿಗೂ ಇದರ ರುಚಿ, ಔಷಧೀಯ ಗುಣಗಳು ಇಷ್ಟವಾಗಿದೆ.  ಇದು ಎಲೆ ಕುದಿಸಿ ತಯಾರಿಸುವ ಚಹಾವಲ್ಲ. ಹಣ್ಣಿನಿಂದ ತಯಾರಿಸುವ ಚಹಾ. ಹರ್ಬಲ್ ಟೀ.

ಇದು ನಾಂ ಮಟೂಂ.  ಥಾಯ್ ಭಾಷೆಯಲ್ಲಿ ಮಟೂಂ ಎಂದರೆ ಬಿಲ್ವ, ನಾಂ ಎಂದರೆ ಚಹಾ.  ಇದು ನಮ್ಮ ಜ್ಯೂಸ್ ಬಿಲ್ವದ (Aegel marmelos) ಚಹಾ.  ಒಣ ಬಿಲ್ವ ಹಣ್ಣಿನ ಚಹಾ.

ತಾಜಾ ಮಾವಿನ ಹಣ್ಣು ಮತ್ತು ಬಾಳೆಹಣ್ಣಿನ ತಿರುಳಿಗೆ ಲಿಂಬೆ ರಸ ಸೇರಿಸಿದಾಗ ಸಿಗುವಂತಹ ಪರಿಮಳ, ರುಚಿ, ಹದ ಸಿಹಿಯಾದ ಆಹ್ಲಾದಕರ, ಚೇತೋಹಾರಿ ಮತ್ತು ಆರೋಗ್ಯಕರ ಪಾನೀಯ.  ಕೆಫೀನ್ ಇಲ್ಲ.  ಬಿಸಿಯಾಗಿಯೇ ಸೇವಿಸಬಹುದು. ತಂಪಾಗಿಸಿಯೂ ಕುಡಿಯಬಹುದು.  ಟೆಟ್ರಾಪ್ಯಾಕಿನಲ್ಲಿ ತುಂಬಿದರೆ ಬಹುಕಾಲ ಬಾಳಿಕೆಯೂ ಇದೆ. 

ಥಾಯ್ಲ್ಯಾಂಡಿಗೆ ಬರುವ ವಿದೇಶಿ ಪ್ರವಾಸಿಗರನ್ನು ಸ್ವಾಗತಿಸುವುದೇ ನಾಂ ಮಟೂಂ ವೆಲ್‌ಕಂ ಡ್ರಿಂಕಿನೊಂದಿಗೆ. ಮಸಾಜ್ ಸ್ಪಾಗಳಲ್ಲೂ ಇದರ ಬಳಕೆ ಚೆನ್ನಾಗಿದೆ.  ಸೂಪರ್ ಮಾರ್ಕೆಟಿನಲ್ಲಿ ಟೆಟ್ರಾಪ್ಯಾಕ್, ಟೀ ಅಂಗಡಿಗಳಲ್ಲಿ ಬಿಸಿ ಅಥವಾ ಐಸ್ ಹಾಕಿದ ಹರ್ಬಲ್ ಟೀ.

ಸೀಸನಿನಲ್ಲಿ ಬಿಲ್ವದ ಹಣ್ಣುಗಳನ್ನು ಚಕ್ರಾಕಾರದಲ್ಲಿ ಕತ್ತರಿಸಿ ಬೀಜ ತೆಗೆದು ಒಣಗಿಸುತ್ತ್ತಾರೆ.  ಬರೇ ಇವನ್ನೂ ಸೂಪರ್ ಮಾರ್ಕೆಟಿನಲ್ಲಿ ಮಾರಾಟ ಮಾಡುತ್ತಾರೆ.

ಥಾಯ್ಲ್ಯಾಂಡಿನಲ್ಲಿ ಬಿಲ್ವದ ತೋಟಗಳಿಲ್ಲ.  ನಮ್ಮಲ್ಲಿನಂತೆ ಅವರಿಗೂ ಇದು ಪವಿತ್ರ ಮರ.  ಬೌದ್ಧ ದೇವಾಲಯಗಳ ಆವರಣದಲ್ಲಿ ಇರಲೇಬೇಕಾದ ಪುಣ್ಯವೃಕ್ಷ.  ಮನೆಗಳ ಕೈತೋಟಗಳಲ್ಲಿ, ಕೃಷಿ ಭೂಮಿಯ ಅಂಚಿನಲ್ಲಿ, ಗುಡ್ಡಗಾಡುಗಳಲ್ಲಿ ಬೆಳೆಯುತ್ತಾರೆ.  ಮೈನರ್ ಫ್ರುಟ್ ಆದರೂ ನಿರ್ಲಕ್ಷಿತ ಹಣ್ಣಲ್ಲ. ಸಿಗುವ ಹಣ್ಣುಗಳನ್ನು ಮೌಲ್ಯವರ್ಧಿಸಿ ಮಾರುತ್ತಾರೆ.

ಅಲ್ಲಿನ ಬಿಲ್ವದ ಹಣ್ಣೂ ಗಾತ್ರದಲ್ಲಿ ದೊಡ್ಡದು.  ಹೆಚ್ಚು ರಸ, ಕಟು ತಾಜಾ ಪರಿಮಳ, ಸ್ವಲ್ಪ ಸಿಹಿಯೂ ಇದೆ.  ಸೀಸನಿನಲ್ಲಿ ತಾಜಾ ಹಣ್ಣಿನ ರಸ ಮಾರುತ್ತಾರೆ.  ನಾಂ ಮಟೂಂಗೆ ಅತಿ ಹೆಚ್ಚು ಬೇಡಿಕೆ ಇದೆ.

ಚಹಾ ತಯಾರಿ

ಹಣ್ಣಿನ ನಾಲ್ಕೈದು ಒಣ ತುಂಡುಗಳನ್ನು ಮೈಕ್ರೋವೇವ್ ಒಲೆಯಲ್ಲಿ ಬಣ್ಣ ಬದಲಾಗುವ ತನಕ ಬಿಸಿ ಮಾಡುತ್ತಾರೆ.  ಚಹಾ ಪಾತ್ರೆಗೆ ನೀರು ಮತ್ತು ಈ ತುಂಡು ಸೇರಿಸಿ ಹದ ಬೆಂಕಿಯಲ್ಲಿ ಮೆತ್ತಗಾಗುವ ತನಕ ಕುದಿಸುತ್ತಾರೆ. ಅನಂತರ ಶೋಧಿಸುತ್ತಾರೆ.  ರುಚಿಗೆ ಬೆಲ್ಲ, ಸಕ್ಕರೆ, ಜೇನುತುಪ್ಪ ಅಥವಾ ಹಾಲು ಸೇರಿಸಿ ಸವಿಯುತ್ತಾರೆ.

ಅಲ್ಲಿ ಹಾಲಿನ ಬಳಕೆ ಇಲ್ಲ.  ತಂಪು ವಾತಾವರಣದಲ್ಲಿ ಬಿಸಿ ಬಿಸಿ ಚಹಾ ಸವಿಯುತ್ತಾರೆ.  ಬಿಸಿಲಿನ ದಿನವಾದರೆ, ಸ್ನಾನ  / ಮಸಾಜ್ ಮಾಡಿದ ನಂತರ ಐಸ್ ಸೇರಿಸಿ ಸೇವಿಸುತ್ತಾರೆ.  ಹೋಟೆಲ್ ಗಳಲ್ಲಿ, ಸಮಾರಂಭಗಳಲ್ಲಿ ಊಟದ ಕೊನೆಯಲ್ಲಿ ಕೊಡುವುದೂ ಇದೆ.

ಸಿಹಿ ಸೇರಿಸದ ಬಿಲ್ವ ಚಹಾ ಮಧುಮೇಹವನ್ನು ನಿಯಂತ್ರಿಸುತ್ತದೆ.  ಜೀರ್ಣಕ್ರಿಯೆ ಹೆಚ್ಚಿಸುತ್ತದೆ.  ಮಲಬದ್ಧತೆ ನಿವಾರಣೆಗೂ ಸಹಕಾರಿ.  ಶೀತ ಪ್ರಕೃತಿ, ಕಫ, ಅಸ್ತಮಾ ಕಾಯಿಲೆಗಳ ಶಮನ  ಮಾಡುತ್ತದೆ. ದೇಹಕ್ಕೆ ತಂಪು.  ವಿಟಮಿನ್ ಸಿ ಮತ್ತು ಇತರ ಜೀವಸತ್ವಗಳೂ ಇವೆ.  ದೇಹದ ತೂಕ ನಿಯಂತ್ರಿಸಲೂ ಬಳಕೆಯಲ್ಲಿದೆ. ಮಧುಮೇಹಿಗಳು ಇದನ್ನು ಮಿತವಾಗಿ ಬಳಸಿ ಎಂಬ ಕಿವಿಮಾತು ಹೇಳುತ್ತಾರೆ. 

ಥಾಯ್ಲ್ಯಾಂಡಿನಲ್ಲಿ ಇದು  ನಾಂ ಮಟೂಂ. ಆದರೆ ನೆರೆಯ ಶ್ರೀಲಂಕಾದಲ್ಲಿ ಬಿಲಿಮಲ್ ಟೀ. ಇಲ್ಲಿನದು ಹಣ್ಣಿನಿಂದ ತಯಾರಿಸಿದ ಚಹಾ ಅಲ್ಲ.  ಬಿಲ್ವದ ಹೂವಿನದು. ನಾಟಿ ವೈದ್ಯ ಪದ್ಧತಿಯಲ್ಲಿ ವಿರೇಚಕವಾಗಿಯೂ ಬಳಕೆಯಲ್ಲಿದೆ.  ಅರೆ ಕಾಯಿಯಿಂದ ತಯಾರಿಸಿದ ಪುಡಿಯನ್ನು ಅತಿ ಸಾರ ನಿಯಂತ್ರಿಸಲೂ ಬಳಸುತ್ತಾರೆ. ಬಿಲ್ವದ ಒಣ ಎಲೆಗಳಿಂದಲೂ ಚಹಾ ತಯಾರಿಸುತ್ತಾರೆ.  ಬಿಲ್ವ ಶ್ರೀಲಂಕಾದಲ್ಲಿಯೂ ಪವಿತ್ರ ಮರ.  ಗುಡ್ಡಗಾಡುಗಳು, ತೋಟ, ಹಿತ್ತಿಲಲ್ಲಿ ಬೆಳೆಯುತ್ತಾರೆ. ತೋಟಗಳಿಲ್ಲ.

ಈ ಎರಡೂ ದೇಶಗಳಲ್ಲಿಯೂ ಸಾಂಪ್ರದಾಯಿಕ ಚಹಾ ಪ್ರಮುಖ ಬೆಳೆ.  ಟೀ ಜನಪ್ರಿಯ.  ಪಾನೀಯ ಟೀ ಪುಡಿಯನ್ನು ವಿದೇಶಗಳಿಗೂ ರಫ್ತು ಮಾಡುತ್ತಾರೆ.  ಆದರೂ ಬಿಲ್ವದ ಚಹಾವೂ ಜನಪ್ರಿಯವಾಗುತ್ತಿದೆ.  ವಿದೇಶಿಯರನ್ನೂ ಆಕರ್ಷಿಸುತ್ತಿದೆ.

ಥಾಯ್ಲ್ಯಾಂಡಿನ ಜನಸಂಖ್ಯೆ ಸುಮಾರು ಏಳು ಕೋಟಿ. ಅಂದರೆ, ಕರ್ನಾಟಕದ ಜನಸಂಖ್ಯೆಗಿತ ಸ್ವಲ್ಪ ಕಡಿಮೆ.  ಕರ್ನಾಟಕದ್ದು ಏಳೂವರೆ ಕೋಟಿ. ಥಾಯ್ಲ್ಯಾಂಡಿನ ವಿಸ್ತೀರ್ಣ ಕರ್ನಾಟಕದ್ದರ ಎರಡೂವರೆ ಪಾಲು ಹೆಚ್ಚು. ಐದು ಲಕ್ಷ ಚದರ ಕಿ.ಮೀ.

ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮದಲ್ಲಿ ಥಾಯ್ಲ್ಯಾಂಡಿಗೆ ನಾಲ್ಕನೇ ಸ್ಥಾನ.  ಪ್ರತಿವರ್ಷ ಮೂರೂವರೆ ಕೋಟಿ ವಿದೇಶಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.  ಇದರಿಂದ ಆರು ಲಕ್ಷ ಕೋಟಿ ರೂಪಾಯಿ  ಆದಾಯವಿದೆ.    ಇಷ್ಟು  ದೊಡ್ಡ ಪ್ರಮಾಣದ ಪ್ರವಾಸಿಗಳ ಅತಿಥಿ ಸತ್ಕಾರದ ಜವಾಬ್ದಾರಿ ಅಲ್ಲಿನ ಪ್ರವಾಸೋದ್ಯಮ ಇಲಾಖೆ, ಸ್ಥಳೀಯ ಆಡಳಿತ ಮತ್ತು ಸರಕಾರದ ಮೇಲಿದೆ. 

ಥಾಯ್ಲ್ಯಾಂಡಿಗೆ ಭೇಟಿ ನೀಡುವ ಪ್ರವಾಸಿಗರಿಂದಾಗಿಯೇ ಡ್ಯೂರಿಯನ್, ಮ್ಯಾಂಗೋಸ್ಟೀನ್, ರಂಬುಟಾನ್, ಲೊಂಗಾನ್, ಲಿಚಿ, ಪೊಮೆಲೊ, ಡ್ರಾಗನ್ ಫ್ರುಟ್ ಇತ್ಯಾದಿ ಹಣ್ಣುಗಳು ಜಗತ್ತಿನೆಲ್ಲೆಡೆ ಜನಪ್ರಿಯವಾಗಿವೆ.  ಹಾಗೆಯೇ ಅವರು ಎಷ್ಟೋ ನಿರ್ಲಕ್ಷಿತ ಹಣ್ಣುಗಳನ್ನೂ ಪರಿಚಯಿಸಿದ್ದಾರೆ.  ಇದರಲ್ಲಿ ಬಿಲ್ವವೂ ಸೇರಿದೆ.

ಭಾರತಕ್ಕೆ ವರ್ಷದಲ್ಲಿ ಸುಮಾರು ಇಪ್ಪತ್ತು ಲಕ್ಷ ವಿದೇಶೀ ಪ್ರವಾಸಿಗರು ಭೇಟಿ ನೀಡುತ್ತಾರೆ.  ಆದರೆ ಸುಮಾರು ಎಪ್ಪತ್ತು ಕೋಟಿ ದೇಶವಾಸಿಗಳೇ ದೇಶದೊಳಗೆಯೇ ಪ್ರವಾಸ ಹೋಗುತ್ತಾರೆ. ಇದು ನಮ್ಮ ಪ್ರವಾಸೋದ್ಯಮ ಇಲಾಖೆ ಕೊಡುವ ಮಾಹಿತಿ.

ರಜಾದಿನಗಳಲ್ಲಿ ನಮ್ಮಲ್ಲಿನ ಗಿರಿಧಾಮಗಳು, ಟ್ರೆಕ್ಕಿಂಗ್ ಪಾಯಿಂಟ್‌ಗಳು, ಪುಣ್ಯಕ್ಷೇತ್ರಗಳು, ಬೀಚ್‌ಗಳಲ್ಲಿನ ಜನರ ಒತ್ತಡ ಹೇಗಿರುತ್ತೆ ಗೊತ್ತಲ್ಲಾ. ಹೆದ್ದಾರಿಗಳ ವಾಹನ ಸಂಚಾರ, ರೈಲು, ವಿಮಾನಗಳಲ್ಲಿ ಪ್ರಯಾಣಿಕರ ಪರದಾಟಗಳನ್ನು ಗಮನಿಸಿ.  ಪ್ರವಾಸಿ ತಾಣಗಳಲ್ಲಿ ಸ್ಥಳೀಯ ಆಹಾರ ಪದ್ಧತಿ, ಹೊಸ ಹಣ್ಣು, ನಿರ್ಲಕ್ಷಿತ ಹಣ್ಣುಗಳನ್ನು, ಮೌಲ್ಯವರ್ಧಿತ ಉತ್ಪನ್ನಗಳನ್ನು ಪರಿಚಯಿಸಲು ವಿಪುಲ ಅವಕಾಶಗಳಿವೆ. 

ಕೃಷಿ ವಿವಿಗಳು, ಕೆವಿಕೆಗಳು, ತೋಟಗಾರಿಕಾ ಇಲಾಖೆಗಳು ಬಿಲ್ವ ಚಹಾ, ಕುಡಿಯಲು ಸಿದ್ಧ ಪೇಯಗಳನ್ನು ಆರೋಗ್ಯಕರ ಡ್ರಿಂಕ್ ಎಂದು ಪರಿಚಯಿಸಲು ಬೇಕಾದ್ದು ಮನಸ್ಸು ಮತ್ತು ಪ್ಲಾನ್ ಮಾತ್ರ.

ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಅದೆಷ್ಟು ಸಸ್ಯ ಸಂತೆ, ಹಣ್ಣಿನ ಮೇಳಗಳು ನಮ್ಮಲ್ಲಿ ನಡೆಯುತ್ತವೆ! ಬಿಲ್ವ, ಬೇಲ ಮೊದಲಾದ ಮೈನರ್ ಫ್ರುಟ್‌ಗಳ ‘ಕುಡಿಯಲು ಸಿದ್ಧ ಪೇಯ’   ತಯಾರಿಸಿ ಮಾರಲು ನಮಗೆ ವಿಪುಲಾವಕಾಶ ಇದೆ.

ನಮ್ಮ ದೇಶದಲ್ಲಿ ಥಾಯ್‌ಲ್ಯಾಂಡ್, ಶ್ರೀಲಂಕಾಗಳ ಅದೆಷ್ಟೋ ಪಟ್ಟು ಹೆಚ್ಚು ಹಣ್ಣೂ ಇದೆ. ಆದರೆ ನಾವೇಕೆ ಹಿಂದೆ? ಬಣ್ಣ ಮತ್ತು ಸಕ್ಕರೆ ಪಾಕದ ಪೇಯಗಳಿಗಿಂತ ಇಂಥವನ್ನು ಏಕೆ ಮುಂದೆ ತರಬಾರದು?