ಡಾಕ್ಟರರ ಬೆಳಗಿನ ಉಪಾಹಾರದ ಉತ್ಪನ್ನಗಳೆಲ್ಲವೂ ಆರೋಗ್ಯದ ದೃಷ್ಟಿಯಿಂದ ಮೇಲ್ಮೆ ಇರುವಂಥವು. ಉಪವಾಸಕ್ಕೂ ಸಲ್ಲುವಂಥವು.
- ಅಪ ಬಳಗ
ಉಪ್ಪಿಟ್ಟು ಅಥವಾ ಉಪ್ಮಾ ಕರ್ನಾಟಕ ಕರಾವಳಿಯಲ್ಲಿ ಮಾತ್ರವಲ್ಲ ರಾಜ್ಯದ ಹಲವೆಡೆಯ ಜನಪ್ರಿಯ ಮುಂಜಾನೆಯ ಉಪಾಹಾರ. ಇದರದೇ ಸಿಹಿಯ ಆವೃತ್ತಿ ಕ್ಷೀರ ಅಥವಾ ಶಿರಾ. ಬಾಳೆಕಾಯಿಯಿಂದಲೇ ಇವೆರಡನ್ನೂ ಮಾಡಿದರೆ ಹೇಗಾಗಬಹುದು?
ಇಷ್ಟು ಮಾತ್ರವಲ್ಲ, ಬಾಳೆಕಾಯಿಯ ದೋಸೆ, ಭಾಕ್ರಿ, ಊತಪ್ಪ ಇತ್ಯಾದಿ ಬ್ರೇಕ್ ಫಾಸ್ಟ್ ಐಟಮುಗಳನ್ನೂ ಮಹಾರಾಷ್ಟ್ರದ ಒಂದು ಉದ್ದಿಮೆ ತಯಾರಿಸತೊಡಗಿದೆ. ಅಲ್ಲಿನ ಜಲಗಾಂವ್ ಜಿಲ್ಲೆ ದೇಶದ ಬಾಳೆಕಾಯಿಯ ರಾಜಧಾನಿ. ಅಲ್ಲಿ ಹೆಕ್ಟಾರುಗಟ್ಟಲೆ ಬಾಳೆ ತೋಟ ಇರುವ ಕೃಷಿಕರಿದ್ದಾರೆ. ಆದರೆ ಕೃಷಿಕರ ಸಮಸ್ಯೆಯ ಮೂಲರೂಪ ಎಲ್ಲೆಲ್ಲೂ ಒಂದೇ.
ಕಳೆದ ಸೆಪ್ಟೆಂಬರದಲ್ಲಿ ಆರಂಭವಾದ ಈ ಉದ್ದಿಮೆ, ವಿಷ್ಣು ಅಗ್ರೋದ ಮಾಲಿಕರು ಒಬ್ಬರು ಡಾಕ್ಟರ್. ಡಾ. ಅರುಣ್ ಫಕೀರ್ ಚಂದ್‍ಪಾಟೀಲ್ ಅವರಿಗೆ ವಯಸ್ಸು 56. ಮೂವತ್ತೈದು ವರ್ಷಗಳ ಸುದೀರ್ಘ ವೈದ್ಯ ವೃತ್ತಿಯ ನಂತರ ಅವರು ಈ ಆಹಾರೋದ್ದಿಮೆಗೆ ಕಾಲಿಟ್ಟಿದ್ದಾರೆ.
ಡಾ. ಅರುಣ್ ಅವರಿಗೆ ಭಾರೀ ದೊಡ್ಡ ಬಾಳೆ ತೋಟ ಇದೆ. ಹತ್ತು ಹೆಕ್ಟಾರ್, ಒಂದು ಲಕ್ಷ ಗಿಡ. “ಆದರೂ ಕೆಲವೊಮ್ಮೆ ನಮ್ಮ ಉತ್ಪಾದನಾ ವೆಚ್ಚವೇ ಸಿಗುವುದಿಲ್ಲ. ಈ ಕಾರಣದಿಂದ ಬಾಳೆಕಾಯಿಯನ್ನು ಹಾಗೆಯೇ ಮಾರುವ ಬದಲು ಉತ್ಪನ್ನ ತಯಾರಿಸಿ ಮಾರೋಣ ಎಂದು ಹೊರಟಿದ್ದೇವೆ” ಎನ್ನುತ್ತಾರೆ. ಇವರ ಉದ್ದಿಮೆ ಬರೇ ಸಣ್ಣದಲ್ಲ. ಇಪ್ಪತ್ತೈದು ಮಂದಿ ಕಾರ್ಮಿಕರಿದ್ದಾರೆ.
ಒಟ್ಟು ಉತ್ಪನ್ನಗಳು ಎಂಟು-ಹತ್ತು ಇವೆ. ಆದರೂ ಅರುಣ್ ಮಹಾರಾಷ್ಟ್ರದಲ್ಲೇ ಮೊದಲ ಬಾರಿ ಬೆಳಗ್ಗಿನ ಉಪಾಹಾರದತ್ತ ಕಣ್ಣಿಟ್ಟಿದ್ದಾರೆ. “ಮೈದಾ ಅಥವಾ ಗೋಧಿಹುಡಿಗಿಂತ ಬಾಳೆ ಕಾಯಿಯ ಪೋಷಕಾಂಶ ಮೌಲ್ಯ ಹೆಚ್ಚು. ಹಾಗಾಗಿ ಇದನ್ನು ಬಳಕೆಗೆ ತರುವತ್ತ ನಮ್ಮ ವಿಶೇಷ ಯತ್ನ ಸಾಗಿದೆ” ಎನ್ನುತ್ತಾರೆ.
ಶಿರ ಮತ್ತು ಉಪ್ಮಾಗಳಿಗೆ ಒಂದೇ ಮೂಲವಸ್ತು ಒದಗಿಸುತ್ತಿದ್ದಾರೆ. ಹಾಗೆಯೇ ಭಾಕ್ರಿ, ಊತಪ್ಪ, ಪಡ್ಡುಗಳಿಗೆ ಬೇಕಾದ ಹುಡಿಗಳೂ ಇವೆ. ಇವುಗಳನ್ನು ಅಂಗಡಿಗಳ ಮೂಲಕ ಮಾರುತ್ತಿದ್ದಾರೆ. ಜಲಗಾಂವ್ ಜಿಲ್ಲೆಯಿಡೀ ಮಾರಾಟ ಜಾಲವಿದೆ. ಸುಮಾರು 50 ಅಂಗಡಿಗಳಿಗೆ ಇವನ್ನು ಪೂರೈಸುತ್ತಿದ್ದೇವೆ” ಎನ್ನುತ್ತಾರೆ.
ಭಾಕ್ರಿ ಮತ್ತು ಊತಪ್ಪದ ಬಾಕಾಹು (ಬಾಳೆಕಾಯಿ ಹುಡಿ) ಇವರ ಬ್ರೇಕ್‍ಫಾಸ್ಟ್ ಉತ್ಪನ್ನಗಳಲ್ಲೇ ಅತಿ ಹೆಚ್ಚು ಮಾರಾಟವಾಗುತ್ತಿದೆಯಂತೆ. ತಿಂಗಳಿಗೆ ಎರಡೂ ಹುಡಿಗಳು ಎರಡರಿಂದ ಎರಡೂವರೆ ಕ್ವಿಂಟಾಲ್ ಹೋಗುತ್ತಿದೆ. ಶಿರಾ, ಉಪ್ಮಾಗಳಿಗೆ ನಂತರದ ಸ್ಥಾನ.
ಬಾಳೆಕಾಯಿಯ ಉತ್ಪನ್ನಗಳು ಪಾರಂಪರಿಕ ಗೋಧಿ - ಮೈದಾಗಳ ಉತ್ಪನ್ನಗಳಿಂದ ಹೇಗೆ ವಿಭಿನ್ನ? “ಇವುಗಳಲ್ಲಿ ಕ್ಯಾಲ್ಶಿಯಂ, ಪೋಟ್ಯಾಸಿಯಂ ಮುಂತಾದ ಅಂಶಗಳು ಜಾಸ್ತಿ ಇದೆ. ಖನಿಜಗಳಿವೆ. ಆರೋಗ್ಯದ ದೃಷ್ಟಿಯಿಂದ ಇವು ತುಂಬಾ ಒಳ್ಳೆಯದು” ಎನ್ನುತ್ತಾರೆ ಡಾ. ಅರುಣ್.
ವಿಷ್ಣು ಅಗ್ರೋ ಉದ್ದಿಮೆಯ ಬ್ರಾಂಡ್‍ನೇಮ್ ಟಿಪ್ಸಿ ಚಾಪ್ಸಿ. ಮೂರು ರೀತಿಯ ಕುಕ್ಕೀಸ್ ಕೂಡಾ ಇವರು ತಯಾರಿಸುತ್ತಿದ್ದಾರೆ. “ಇವು ಮಕ್ಕಳ ನಡುವೆ ಆರೋಗ್ಯಪೂರಕ ಬಿಸ್ಕೆಟ್ಟುಗಳಾಗಿ ಒಲವು ಪಡೆಯುತ್ತಿವೆ. ನಮ್ಮ ಹೆಚ್ಚು ಬಿಕರಿಯಾಗುವ ಉತ್ಪನ್ನಗಳೆ ಇವು” ಎನ್ನುತ್ತಾರೆ ಅರುಣ್. ಸರಳಾ ಮಂಡೋರಿ ಈ ಉದ್ದಿಮೆಯ ಉತ್ಪನ್ನ ಅಭಿವೃದ್ಧಿಗಾರ್ತಿ. ಈಗ ಬಾಳೆಕಾಯಿಯ ಧೋಕ್ಲಾ ಮತ್ತು ಇಡ್ಲಿಗೆ ಬೇಕಾದ ಸಿದ್ಧ ಉತ್ಪನ್ನದ ಟ್ರಯಲ್ ನಡೆಸುತ್ತಿದ್ದಾರೆ.
ಮಹಾರಾಷ್ಟ್ರದ ಮಂದಿ ಜಾತಿಮತ ನೋಡದೆ ವರ್ಷದುದ್ದಕ್ಕೂ ಅದೆಷ್ಟೋ ದಿನ ಉಪವಾಸ ಮಾಡುತ್ತಾರೆ. ಕೆಲವೊಮ್ಮೆ ವಾರಕ್ಕೆ ಮೂರು-ನಾಲ್ಕು ದಿನ ಉಪವಾಸ ನಡೆಯುವುದೂ ಇದೆ. ಈ ಸಂದರ್ಭದಲ್ಲಿ ‘ಉಪವಾಸದ ದಿನಕ್ಕೆ ಸೂಕ್ತ’ ಎನ್ನುವ ಆಹಾರ ಇರುತ್ತದೆ. “ಉಪವಾಸದ ಆಹಾರ’ ಎಂದೇ ಇದನ್ನು ಪ್ರಚಾರಪಡಿಸಿ ಮಾರುತ್ತಾರೆ.
ಡಾಕ್ಟರರ ಬೆಳಗಿನ ಉಪಾಹಾರದ ಉತ್ಪನ್ನಗಳೆಲ್ಲವೂ ಆರೋಗ್ಯದ ದೃಷ್ಟಿಯಿಂದ ಮೇಲ್ಮೆ ಇರುವಂಥವು. ಉಪವಾಸಕ್ಕೂ ಸಲ್ಲುವಂಥವು. ಈ ಕಾರಣದಿಂದ ಇವುಗಳಿಗೆ ಒಂದು ‘ಮಿನಿಮಂ ಗ್ಯಾರಂಟಿ’ ಎನ್ನುವಂಥ ಗ್ರಾಹಕವರ್ಗ ಇರುತ್ತದೆ. “ಹಿಂದೆಲ್ಲಾ ಸಾಬುದಾಣಾ (ಸಾಬಕ್ಕಿ) ಮಾತ್ರ ಉಪವಾಸದ ಆಹಾರ ಆಗಿತ್ತು. ಈಗ ಜನರಿಗೆ ಬೇರೆಬೇರೆ ಆಯ್ಕೆ ಸಿಗುತ್ತಿದೆ. ಹೊಸತನ್ನು ಗ್ರಾಹಕರು ಸ್ವೀಕರಿಸುತ್ತಿದ್ದಾರೆ” ಎನ್ನುತ್ತಾರೆ ಈ ವೈದ್ಯರು. ಇವರಿನ್ನೂ ಉತ್ಪನ್ನಗಳ ಆನ್ ಲೈನ್ ಮಾರಾಟಕ್ಕೆ ತೊಡಗಿಲ್ಲ.
ಸಂಪರ್ಕ - 98227 54814