ತಾವೇ ಆವಿಷ್ಕರಿಸಿದ ಸಾಧನ, ಯಂತ್ರಗಳಿಂದ ಕೃಷಿಯನ್ನು ಹಗುರ ಮಾಡಿ ತೋರಿಸಿದ ಕೃಷಿಕರು
- ಶ್ರೀ
ಅನನ್ಯ ಕೃಷಿ ತಂತ್ರಜ್ಞ ನಿಟಿಲೆ
ಕೋಡಪದವಿನ ನಿಟಿಲೆ ಮಹಾಬಲೇಶ್ವರ ಭಟ್ಟರು ಕೃಷಿ ತಂತ್ರಜ್ಞರು. ಅವರ ಹೆಸರು ಜನಜನಿತವಾದದ್ದು ಅವರ ಕಾಳುಮೆಣಸು ಬಿಡಿಸುವ ಯಂತ್ರದಿಂದ. ಕನಿಷ್ಠ ಐನೂರು ಯಂತ್ರ ಮಾಡಿಕೊಟ್ಟಿರಬಹುದು.
ಕೊಕ್ಕೋ ಕೋಡು ಕತ್ತರಿಸುವ, ಬೋರ್ಡೋ ಕದಡಿಸುವ, ಪತ್ತಾಯಕ್ಕೆ ಒಗೆ ಹಾಕುವ, ಪಪ್ಪಾಯ ಹಣ್ಣು ಕೀಳುವ ಉಪಕರಣಗಳು, ಗೋಣಿ ಸ್ಟಾಂಡ್, ಅಡಿಕೆ ಶುಚಿ ಮಾಡುವ ಸ್ಟಾಂಡ್, ಕಳೆ ಕೀಳುವ ಸಾಧನ, ನಾಚಿಕೆ ಮುಳ್ಳು ಕೀಳುವ ಸಾಧನ, ಬಾಳೆಯ ಕಂದು ತೆಗೆಯುವ ಸಾಧನ, ಹುಣಸೆಹುಳಿ ಸಿಪ್ಪೆ ಬೇರ್ಪಡಿಸುವ, ಕಟ್ಟಿಗೆ ಕತ್ತರಿಸುವ ಸಾಧನ, ಗೊನೆಯಿಂದ ಅಡಿಕೆ ಬೇರ್ಪಡಿಸುವ ಸಾಧನ, ಗೋಣಿ ಸ್ಟಾಂಡ್, ಭಾರ ಎತ್ತುವ ಇಕ್ಕಳ, ಗೇರು ಹಣ್ಣು ಹೆಕ್ಕುವ ಸಾಧನ, ಬಾಗದೆ ಬಾಲ್ವ್‍ವಾಲ್ವ್‍ನ ತಿರುಗಿಸುವ ಸಾಧನ.. ಒಂದೇ ಎರಡೇ? ನಿಟಿಲೆ ಡಜನುಗಟ್ಟಲೆ ಕೃಷಿ ಯಂತ್ರೋಪಕರಣಗಳ ಜನಕ. ಅವರ ಉದ್ಯಮದ ಹೆಸರು ‘ನಿರ್ಗುಣ’.
ತಾವೇ ಆವಿಷ್ಕರಿಸಿದ ಸಾಧನ, ಯಂತ್ರಗಳಿಂದ ಕೃಷಿಯನ್ನು ಅವರು ಹಗುರ ಮಾಡಿ ತೋರಿಸಿದ್ದರು. ತನ್ನ ತೋಟದಲ್ಲಿ ಗೆದ್ದ ಆವಿಷ್ಕಾರಗಳನ್ನಷ್ಟೇ ಅವರು ಇತರರಿಗೆ ಪರಿಚಯಿಸುತ್ತಿದ್ದರು. ಅವರ ಸಂಶೋಧನೆಗಳು ಪುತ್ತೂರಿನ ಕೃಷಿ ಯಂತ್ರಮೇಳ, ಕೇರಳ ಸರಕಾರದ ಕೃಷಿ ವಸ್ತುಪ್ರದರ್ಶನ ‘ವೈಗಾ’ದಲ್ಲೂ ಜನಮನ್ನಣೆ ಪಡೆದಿದ್ದುವು.
ನಿಟಿಲೆಯವರ ಮನೆಯ ಬಳಿಯೇ ತೋಡು ಇದೆ. ಉತ್ಪನ್ನಗಳ ಸಾಗಾಟಕ್ಕೆ ಸೇತುವೆ ಬೇಕಿತ್ತು. ತಂತ್ರಜ್ಞರು ಒಂದೂವರೆ ಲಕ್ಷ ರೂಪಾಯಿ ಬೇಕೆಂದರು. ‘ನಾವೇ ಮಾಡೋಣ’ ಎನ್ನುತ್ತಾ ಮಹಾಬಲೇಶ್ವರ 35,000 ರೂ.ಗಳಲ್ಲಿ ‘ಕಾಂಕ್ರೀಟ್ ರಿಂಗ್’ ಸೇತುವೆ ನಿರ್ಮಿಸಿದರು. ಇದು ಕೇರಳದ ಗಮನ ಸೆಳೆಯಿತು. ಕಾಸರಗೋಡಿನ ಸಣ್ಣ ನೀರಾವರಿ ಇಲಾಖೆ ಜಿಲ್ಲೆಯಲ್ಲಿ ಇನ್ನೂರಕ್ಕೂ ಹೆಚ್ಚು ‘ರಿಂಗ್ ಚೆಕ್ ಡ್ಯಾಮ್’ ಕಟ್ಟಿಕೊಟ್ಟಿದೆ.
ಕರ್ನಾಟಕ ಸರಕಾರ, ಕ್ಯಾಂಪ್ಕೋ, ಗಿಡಗೆಳೆತನ ಸಂಘ ‘ಸಮೃದ್ಧಿ’ ನಿಟಿಲೆಯವರನ್ನು ಸನ್ಮಾನಿಸಿವೆ. 2026 ಪೆಬ್ರವರಿ 18ರಂದು ಮರೆಯಾದ ಅವರಿಗೆ ಅಪ ಕಂಬನಿ.
===========================================================
ಸೊಸೈಟಿ ದೋಟಿ ತಂಡದ ಅನನ್ಯ ಶಿಲ್ಪಿ
ಉ.ಕನ್ನಡ ಜಿಲ್ಲೆಯ ತ್ಯಾಗಲಿ ಸೊಸೈಟಿಯ ಅಧ್ಯಕ್ಷ ನಾರಾಯಣ ಬಂಗಾರೇಶ್ವರ ಹೆಗಡೆ (72) ಇನ್ನಿಲ್ಲ. ಕಳೆದ ಸಾಲಿನ ಅತಿವೃಷ್ಟಿಯ ನಡುವೆಯೂ ಸಾವಿರಾರು ಕೃಷಿಕರ ಅಡಿಕೆ ಬೆಳೆ ಉಳಿದಿದ್ದರೆ ಅದರ ಹಿಂದೆ ಎನ್.ಬಿ. ಹೆಗಡೆಯವರ ಬಂಗಾರದಂಥ ಮನಸ್ಸು ಮತ್ತು ಸಾಧನೆ ಇದೆ.
ಟೆಲಿಸ್ಕೋಪಿಕ್ ದೋಟಿ ಊರಿಗೆ ಇಳಿದಾಗ ಅದನ್ನು ಬಳಸುವ ಕುಶಲಕರ್ಮಿಗಳು ಬೇಕಾಗಿದ್ದರು. ಅಲ್ಲೊಬ್ಬರು, ಇಲ್ಲೊಬ್ಬರು ಇದ್ದರೆ ಸಾಲದು, ಜವಾಬ್ದಾರಿಯುತ ಸಂಸ್ಥೆ ತಂಡ ಕಟ್ಟುವುದು ಹೊರತು ಬೇರೆ ದಾರಿ ಇಲ್ಲ ಎಂದು ಹೆಗಡೆ ಮನಗಂಡರು. ತಮ್ಮ ಸೊಸೈಟಿಯ ನೆರಳಲ್ಲೇ ತಂಡ ಕಟ್ಟಿ ಊರವರಿಗೆ ಸಕಾಲಿಕ ಸೇವೆ ಒದಗಿಸಿದರು.
ಇದಕ್ಕಾಗಿ ಅವರು ಪಟ್ಟ ಪಾಡು ಕಡಿಮೆ ಅಲ್ಲ. ಸುತ್ತಮುತ್ತಲಿನ ಯುವಕರನ್ನು ಮನೆಗೆ ಕರೆದು, ಕಾಫಿ ಕೊಟ್ಟು ಬೆನ್ನು ತಟ್ಟಿ ‘ದೋಟಿ ಕೆಲಸದಲ್ಲಿ ಉಮೇದು ಇದೆಯಾ’ ಎಂದು ಕೇಳಿದರು. ಬೆಂಗಳೂರು ಬಸ್ಸು ಹತ್ತುವುದೇಕೆ, ಊರಲ್ಲೇ ಒಳ್ಳೆ ಸಂಬಳದ ಕೆಲಸ ಇದ್ದರೆ ಅಪ್ಪ ಅಮ್ಮನನ್ನು ನೋಡಿಕೊಂಡು ಇರಲು ಅನುಕೂಲ ಅಲ್ಲವೇ ಎಂದು ಮನವೊಲಿಸುತ್ತಿದ್ದರು.
ಕೊಳೆರೋಗ ಜೋರಾಗಿ ಹಬ್ಬಿದಾಗ ‘ನನ್ನ ಸೊಸೈಟಿಯ ಕಾರ್ಯಕ್ಷೇತ್ರ’ವೋ ಅಲ್ಲವೋ ಎಂದು ನೋಡದೆ ನೆರೆಯ ಊರುಗಳಿಗೆ ತಂಡ ಕಳಿಸಿದ್ದರು. ಜಿಲ್ಲೆಯ ಹಲವು ಸೊಸೈಟಿಗಳು ತಂಡ ಕಟ್ಟಲು ಹಿಂದೆ ಮುಂದೆ ನೋಡಿದಾಗ ‘ಹುಡುಗರನ್ನು ಗೊತ್ತು ಮಾಡಿ ನಮ್ಮಲ್ಲಿಗೆ ಕಳಿಸಿ. ನಾವು ಅವರನ್ನು ತರಬೇತುಗೊಳಿಸುತ್ತೇವೆ’ ಎನ್ನುವ ಮಾತನ್ನೂ ಹೇಳುತ್ತಿದ್ದರು. ಎರಡು ವರ್ಷ ಕಾಲ ‘ದೋಟಿ ತಂಡ ಕಟ್ಟಿ’ ಎನ್ನುವುದನ್ನು ಎಲ್ಲೆಡೆ ಶಿಫಾರಸು ಮಾಡುತ್ತಾ ಹೋದರು. ಈ ಉತ್ತೇಜನ ಫಲವನ್ನೂ ಕಂಡಿತು!
ಎನ್. ಬಿ. ಹೆಗಡೆ ಈ ‘ಥ್ಯಾಂಕ್‍ಲೆಸ್ ಜಾಬ್’ ಮಾಡಿದ್ದು ಕೃಷಿಕ ಸಮುದಾಯದ ಹಿತಕ್ಕಾಗಿ ಮಾತ್ರ. ಅದಕ್ಕವರು ಇನಿತೂ ಪ್ರಚಾರ ಬಯಸಿರಲಿಲ್ಲ. ತ್ಯಾಗಲಿ ಸೊಸೈಟಿ ಮಾಡಿ ಗೆಲ್ಲಿಸಿ ತೋರಿಸದಿದ್ದರೆ ಹಲವು ಸೊಸೈಟಿ ತಂಡಗಳು ರೂಪುಗೊಳ್ಳುತ್ತಲೇ ಇರಲಿಲ್ಲ.
ಗ್ರಾಮೀಣ ರಂಗದ ಸಾಧನೆ ವಿಧಾನಸೌಧದ ವರೆಗೂ ತಲಪುವಂತಿದ್ದರೆ, ಹೆಗಡೆಯವರನ್ನು ರಾಜ್ಯ ಪ್ರಶಸ್ತಿ ಹುಡುಕಿ ಬರಬೇಕಿತ್ತು. ಸೊಸೈಟಿಯ ಚೌಕಟ್ಟಿನೊಳಗೆ ಇಂಥ ತಂಡ ಕಟ್ಟಿ ತಂಡಕ್ಕೂ, ಊರವರಿಗೂ ನ್ಯಾಯ ಸಲ್ಲಿಸಬೇಕಾದರೆ ಅದರ ಹಿಂದಿನ ವ್ಯಕ್ತಿ ತಾಳ್ಮೆಯಲ್ಲಿ ಬುದ್ಧನಾಗಬೇಕು. ಕೂಡುಕುಟುಂಬ ಅಜ್ಜನಾಗಬೇಕು. ಬಂಗಾರೇಶ್ವರ ಅವೆಲ್ಲವೂ ಆಗಿದ್ದರು.
ನಾವುಗಳು, ಅಡಿಕೆ ಕೃಷಿ ಸಮುದಾಯದವರು ಎನ್. ಬಿ.ಹೆಚ್. ಬದುಕಿದ್ದಾಗಲೇ ಅವರನ್ನು ಸನ್ಮಾನಿಸಬೇಕಿತ್ತು. ಅದು ನಡೆಯಲಿಲ್ಲ. ಫೆ. 21ರಂದು ಅವರು ನಿಧನರಾದಾಗ ಮಾಧ್ಯಮಗಳಲ್ಲಿ ಅವರ ಸಾಧನೆಗೆ ತಕ್ಕ ಸುದ್ದಿ ಮೂಡಲಿಲ್ಲ. ಸಾರ್ವಜನಿಕ ನೆನಪು ತುಂಬ ಕ್ಷೀಣ ಎನ್ನುತ್ತಾರೆ. ಅಡಿಕೆ ಕೃಷಿಕರದು ಇನ್ನೂ ಕ್ಷೀಣ ಎನ್ನದೆ ವಿಧಿಯಿಲ್ಲ. ತ್ಯಾಗಲಿಯಲ್ಲಿದ್ದು ಅಡಿಕೆ ಕೃಷಿ ರಂಗಕ್ಕೆ ಸದ್ದಿಲ್ಲದೆ ಬುನಾದಿ ಕಟ್ಟಿಕೊಟ್ಟ ಈ ಸಾಧಕರಿಗೆ ಅಪದ ನಮನಗಳು.