ಹಲಸು ಬೆಳೆಸುವ ರಾಜ್ಯಗಳ ನಗರವಾಸಿಗಳಿಗೆ ಅಸೂಯೆಯಾಗಲೂಬಹುದು, ದೆಹಲಿಗರಿಗೆ ಇನ್ನು ಮುಂದೆ ಹಹ ಬೇಕೆಂದಾಗ ತಿನ್ನಲು ಸಿದ್ಧ ರೂಪದಲ್ಲಿ ಸಿಗುತ್ತದೆ. ಜಸ್ಟ್ ಎ ಕಾಲ್ ಅವೇ!
- ಎಸ್ಪಿ
‘ಎಂಟು ವರ್ಷ ಆಗಿತ್ತು ಹಲಸಿನ ಹಣ್ಣು ತಿಂದು. ಈಗ ತಿನ್ನುವಾಗ ಆದ ಸಂತೋಷ ಹೇಳತೀರದು.’ ‘ನನ್ನ ಅಜ್ಜಿ ಹಲಸಿನ ಹಣ್ಣು ತಿನ್ನದೆ ಎಷ್ಟೋ ವರ್ಷಗಳಾಗಿತ್ತು. ಆಕೆಗೆ ಈಗ ತಿನ್ನಲು ಸಿಕ್ಕಿದಾಗ ಕಣ್ಣೀರೇ ಬಂದು ಬಿಡ್ತು.’
ಇದು ದೆಹಲಿ ಕೇರಳಿಗರಿಗೆ ಈಚೆಗೆ ಹಹ ತಿನ್ನಲು ಸಿಕ್ಕಿದಾಗ ಮೂಡಿದ ಸಂಭ್ರಮದ ಸ್ಯಾಂಪಲುಗಳು! ಅವರಿಗೆ ಹಹ ಒಂದು ಹಣ್ಣು, ಒಂದು ಆಹಾರ ಮಾತ್ರವಲ್ಲ, ಅದು ಬಾಲ್ಯದ ಅಮೂಲ್ಯ ಸವಿನೆನಪು. ನೊಸ್ಟಾಲ್ಜಿಯಾ.
ಉತ್ತರ ಭಾರತದವರಿಗೆ ಎಳೆ ಹಲಸೇ ಹಲಸು. ಅಂದರೆ, ಅವರಿಗೆ ತರಕಾರಿಯಾಗಿ ಗುಜ್ಜೆ (ಎಳೆ ಹಲಸು) ತಿಂದು ಗೊತ್ತೇ ವಿನಃ ಹಲಸಿನ ಹಣ್ಣಿನ - ಹಹ - ರುಚಿ ಗೊತ್ತಿಲ್ಲದವರೇ ಹೆಚ್ಚು!
ದೆಹಲಿಗೆ ಹಲಸಿನ ಹಣ್ಣು ಪ್ರವೇಶಿಸಿದ್ದು ಈ ಸಾಲಿನಲ್ಲಿ - ಕೆಲವು ತಿಂಗಳುಗಳ ಹಿಂದೆ. ಅದೂ ತಿನ್ನಲು ಸಿದ್ಧ - ರೆಡಿ ಟು ಈಟ್ - ರೂಪದಲ್ಲಿ. ಈ ಹಿಂದೆ ಅಲ್ಲಿಲ್ಲಿ ಕೆಲವೆಡೆ ಇಡಿ ಹಲಸಿನ ಹಣ್ಣು ಮಾರುತ್ತಿದ್ದದ್ದು ಇದೆ. ಆದರೆ, ಈಗ, ವೃತ್ತಿಪರ ರೀತಿಯಲ್ಲಿ ಬಿಡಿಸಿಟ್ಟ, ಒಳ್ಳೆ ಗುಣಮಟ್ಟಕ್ಕೆ ಹೆಸರಾದ ಜಾತಿಯ ಹಲಸಿನ ಸೊಳೆಯ ಮಾರಾಟ ಆರಂಭವಾಗಿದೆ.
ಈ ಸಾಧನೆಯ ಹಿಂದೆ ಎರಡು ಸಂಸ್ಥೆಗಳಿವೆ. ದೆಹಲಿ ಮೂಲದ ‘ಸೌತ್ ಸೈಡ್ ಹೇಬಿಟ್ಸ್’ ಈ ಹಹವನ್ನು ದೆಹಲಿಗರಿಗೆ ಪೂರೈಸುತ್ತಿದೆ. ಕೇರಳದಲ್ಲಿ ಇದನ್ನು ಸಿದ್ಧ ಮಾಡಿ ಹೇಬಿಟ್ಸಿಗೆ ಒದಗಿಸುತ್ತಿರುವುದು ಕಣ್ಣೂರು ಬಳಿಯ ಆರ್ಟೋಕಾರ್ಪಸ್ ಫುಡ್ಸ್ ಲಿಮಿಟೆಡ್.
ಶೈತ್ಯೀಕರಿಸಿದ ರೂಪದಲ್ಲಿ, 400 ಗ್ರಾಮ್ ಪ್ಯಾಕೆಟಿನಲ್ಲಿ ಹಹ ಸೊಳೆಗಳನ್ನು ಇವರು ಒದಗಿಸುತ್ತಾರೆ. ದೆಹಲಿಯ ಸುಮಾರು ಇನ್ನೂರು ಸ್ಟೋರುಗಳಲ್ಲಿ ಇದು ಲಭ್ಯ. ಸೀಮಿತ ಜಾಗದಲ್ಲಿ ಡೋರ್ ಡೆಲಿವರಿಯೂ ಇದೆ. ಬೆಲೆ ರೂ. 290. ಪ್ಯಾಕೆಟಿನಲ್ಲಿ ಅಂದಾಜು 20ರಿಂದ 25 ಸೊಳೆಗಳು ಇರುತ್ತವೆ.
‘ಸೌತ್ ಸೈಡ್ ಹೇಬಿಟ್ಸ್’ ಸಂಸ್ಥೆಯ ರೂವಾರಿ ಪಾಲ್ ಮ್ಯಾಥ್ಯೂಸ್ ಕೇರಳ ಮೂಲದವರು. ಸ್ವಲ್ಪ ಕಾಲ ಬೆಂಗಳೂರಿನ ಇನ್ಫೋಸಿಸ್ ಉದ್ಯೋಗಿ. ನಂತರ ಎಂಬಿಎ ಕಲಿಯಲು ಹೋದವರು ದೆಹಲಿಯಲ್ಲೇ 15 ವರ್ಷಗಳಿಂದ ಇದ್ದಾರೆ.
ದೆಹಲಿಯಲ್ಲಿ ಕೇರಳಿಗರು ತಮ್ಮೂರ ತರಕಾರಿ, ತಿಂಡಿ ಸಿಗದೆ ಚಡಪಡಿಸುವುದನ್ನು ಅವರು ಗುರುತಿಸಿದರು. ಇವನ್ನು ಪೂರೈಸಲೆಂದೇ ಸಂಸ್ಥೆ ಕಟ್ಟಿದರು. ಇಡುಕ್ಕಿ ಜಿಲ್ಲೆಯ ಕೋದಮಂಗಲಂನಲ್ಲಿ ಇವರ ಒಂದಷ್ಟು ಕೇರಳ ತಿಂಡಿಗಳು ತಯಾರಾಗಿ ಶೈತ್ಯೀಕರಿಸಿದ - ಪ್ರೋಝನ್ - ರೂಪದಲ್ಲಿ ಹಾರಿ ದೆಹಲಿಗೆ ತಲುಪುತ್ತವೆ. “ಬೇಕರಿ, ಜೀನಸು, ಸಿದ್ಧ ಉಪಾಹಾರ - ಎಲ್ಲ ಸೇರಿ 300ಕ್ಕೂ ಹೆಚ್ಚಿನ ಕೇರಳದ ವಸ್ತುಗಳನ್ನು ನಾವು ಪೂರೈಸುತ್ತೇವೆ” ಎನ್ನುತ್ತಾರೆ ಇವರು.
ಈ ಪಟ್ಟಿಗೆ ಈಚೆಗೆ ಸೇರ್ಪಡೆ ಆದದ್ದು ರೆಡಿ ಟು ಈಟ್ ಪ್ರೋಝನ್ ಜ್ಯಾಕ್‍ಫ್ರುಟ್. ಇದನ್ನು ಆರ್ಟೋಕಾರ್ಪಸ್ ಕಂಪೆನಿ ಸಿದ್ಧಗೊಳಿಸಿ ವಿಮಾನದಲ್ಲಿ ಕಳಿಸಿಕೊಡುತ್ತದೆ. ಹಲಸಿನ ಹಣ್ಣು ಮಾತ್ರವಲ್ಲ, ಕಾಯಿ ಸೊಳೆಯನ್ನೂ (ರಾ ಜ್ಯಾಕ್ ಫ್ರುಟ್) ಇವರು ಬಳಸಲು ಸಿದ್ಧ ರೂಪದಲ್ಲಿ ಒದಗಿಸುತ್ತಾರೆ. ಊರಲ್ಲಿ ಸಿಗುವಾಗಲೆಲ್ಲಾ ಬ್ರೆಡ್ ಫ್ರುಟ್ (ದೀವಿ ಹಲಸು) ಕೂಡಾ ತರಿಸಿ ಮಾರುತ್ತಾರೆ. ಇದು ತಾಜಾ ರೂಪದಲ್ಲಷ್ಟೇ ಲಭ್ಯ. ಬೇಡಿಕೆ ಇರುವಷ್ಟು ಪೂರೈಕೆ ಇಲ್ಲ.
ಹಹಕ್ಕೆ ಸಿಕ್ಕಿದ ಅದ್ಭುತ ಒಲವಿನಿಂದ ಪ್ರೇರಣೆಗೊಂಡು ‘ಸೌತ್ ಸೈಡ್ ಹೇಬಿಟ್ಸ್’ ಈ ಬಾರಿ ಇದೇ ಹಣ್ಣಿನಿಂದ ಓಣಂ ಹಬ್ಬದ ಸಂದರ್ಭದಲ್ಲಿ ಪಾಯಸ ಮತ್ತು ಕೇಕ್ ತಯಾರಿಸಿ ದೆಹಲಿಗೆ ಪರಿಚಯಿಸಿತು. ಅದೂ ಕ್ಲಿಕ್ ಆಗಿದೆ. “ದೆಹಲಿಗರಿಗೆ ವರ್ಷವಿಡೀ ಹಲಸಿನ ಹಣ್ಣು ಪೂರೈಸಲು ಕಷ್ಟವಾಗದು ಅಷ್ಟು ಪ್ರೋಝನ್ ಹಣ್ಣು ಕೋಲ್ಡ್ ರೂಮಿನಲ್ಲಿ ಸ್ಟಾಕ್ ಇಟ್ಟುಕೊಂಡಿದ್ದೇವೆ” ಎನ್ನುತ್ತಾರೆ ಪಾಲ್.
ರೆಡಿ ಹಹ ಪೂರೈಕೆಗೆ ‘ಸೌತ್ ಸೈಡ್ ಹೇಬಿಟ್ಸ್’ ಹೊಸ ಕ್ರಮ ಅನುಸರಿಸಿದೆ ಪ್ರತಿ ಪ್ಯಾಕೆಟ್ಟನ್ನೂ ಪುಟ್ಟ ಥರ್ಮೋಕೋಲ್ ಪೆಟ್ಟಿಗೆಯೊಳಗೆ ಸೇರಿಸಿಯೇ ಪಾರ್ಸೆಲ್ ಕಳಿಸುತ್ತದೆ. ಡೋರ್ ಡೆಲಿವರಿ ಆರ್ಡರುಗಳಿಗೆ ಮಾತ್ರ ಈ ವ್ಯವಸ್ಥೆ. “ಇದರಿಂದ ಗ್ರಾಹಕರ ಕೈ ಸೇರುವಾಗ ಸೊಳೆಯ ಟೆಕ್ಸ್ಚರ್ ಬದಲಾಗುವುದಿಲ್ಲ. ಆಗಲೇ ಕೋಣೆ ಉಷ್ಣತೆಗೆ ತಂದು ತಿನ್ನಬಹುದು, ಅಥವಾ ಫ್ರಿಜ್ಜಿನಲ್ಲಿಟ್ಟು ಮತ್ತೆ ತಿನ್ನಬಹುದು” ಎನ್ನುತ್ತಾರೆ. ಮುಂದಿನ ದಿನಗಳಲ್ಲಿ ಆರ್ಡರ್ ಕಳಿಸಿ ಮೂರು ಗಂಟೆಗಳೊಳಗೆ ಡೆಲಿವರಿ ಮಾಡಬೇಕೆಂಬ ಪ್ಲಾನ್ ಪಾಲ್ ಮ್ಯಾಥ್ಯೂ ಅವರದು.
ಧಾರಾಳ ಹಲಸು ಬೆಳೆಸುವ ಕರ್ನಾಟಕ - ಕೇರಳದ ದೊಡ್ಡ ನಗರಗಳಲ್ಲೆಲ್ಲೂ ‘ರೆಡಿ ಟು ಈಟ್’ ಹಹ ಇನ್ನೂ ಡೋರ್ ಡೆಲಿವರಿ ಆರಂಭವಾಗಿಯೇ ಇಲ್ಲ ಎಂದರೂ ಸರಿಯೇ. ಉಳಿದೆಡೆಯವರಿಗೆ ಅಸೂಯೆಯಾಗಲೂಬಹುದು, ದೆಹಲಿಗರಿಗೆ ಇನ್ನು ಮುಂದೆ ಹಹ ಬೇಕೆಂದಾಗ ತಿನ್ನಲು ಸಿದ್ಧ ರೂಪದಲ್ಲಿ ಸಿಗುತ್ತದೆ. ಜಸ್ಟ್ ಎ ಕಾಲ್ ಅವೇ!
ಸೌತ್ ಸೈಡ್ ಹೇಬಿಟ್ಸ್, ದೆಹಲಿ
97467 43919