ADD

Back To Free Articles

Janaury-2026

25 ವರ್ಷದಿಂದ ಪ್ಯಾಶನ್ಫ್ರುಟ್ ಸ್ಕ್ವಾಶ್ ತಯಾರಿ

ತಮ್ಮದೇ ಹಣ್ಣಿನಿಂದ ಸಾವಿರ ಬಾಟ್ಲಿ ಉತ್ಪಾದನೆ. ಇದಕ್ಕಾಗಿಯೇ ಕಾಯುವ ಖಾಯಂ ಬಳಕೆದಾರರು.

- ಟೀಮ್‌ ಅಪ

 
no image
 

ಕೊಡಗಿನ ಸೋಮವಾರಪೇಟೆಯ ನಿರ್ಮಲಾ ಜಯಪ್ರಕಾಶ್ ಅವರದು ಕಾಫಿ ಬೆಳೆಗಾರರ ಕುಟುಂಬ. ನಿರ್ಮಲಾ ಕಳೆದ 25 - 30 ವರ್ಷಗಳಿಂದ ಪ್ಯಾಶನ್‍ಫ್ರುಟ್ ಸ್ಕ್ವಾಶ್ ಮಾಡಿ ಮಾರುತ್ತಿದ್ದಾರೆ. ಇವರ ಈ ಉತ್ಪನ್ನಕ್ಕೆ ತುಂಬ ಬೇಡಿಕೆ ಇದೆ.

ಹಾಗೆ ನೋಡಿದರೆ ಈಚೀಚೆಗೆ ನೂರಾರು ಗೃಹಿಣಿಯರು ಪ್ಯಾಶನ್‍ಫ್ರುಟ್ ಸ್ಕ್ವಾಶ್ ತಯಾರು ಮಾಡಿ ಮಾರುತ್ತಿದ್ದಾರೆ. ಇವೆಲ್ಲದರ ನಡುವೆ ನಿರ್ಮಲಾ ಅವರ ಸ್ಕ್ವಾಶಿಗೆ ತುಂಬ ಬೇಡಿಕೆ ಇದೆ. “ಒಂದು - ಒಂದೂವರೆ ವರ್ಷ ಇಟ್ಟರೂ ಹಾಳಾಗುವುದಿಲ್ಲ. ನಾನು ಬಹು ಎಚ್ಚರದಿಂದ ಅಳತೆಗಳು ತಪ್ಪದಂತೆ ಸ್ಟಾಂಡರ್ಡೈಸ್ ಮಾಡಿಕೊಂಡ ರೀತಿಯಲ್ಲೇ ಇವನ್ನು ತಯಾರಿಸುತ್ತೇನೆ” ಎನ್ನುತ್ತಾರೆ ಅವರು.

ತಾವು ಬೆಳೆಸಿದ ಹಣ್ಣುಗಳನ್ನು ಬಳಸಿಯೇ ಸ್ಕ್ವಾಶ್, ವೈನ್ ತಯಾರು ಮಾಡುವುದು ಇವರ ವಿಶೇಷ. “ನಮ್ಮಲ್ಲಿ ಏನೇನು ಹಣ್ಣು ಬೆಳೆಯುತ್ತದೋ ಅದರ ಉತ್ಪನ್ನ ತಯಾರು ಮಾಡುತ್ತೇನೆ” ಎನ್ನುತ್ತಾರೆ. ಅಂಜೂರ, ಬರ್ಮುಡಾ ಚೆರಿ, ದ್ರಾಕ್ಷೆ ಮತ್ತು ಕಬ್ಬಿನ ವೈನ್ ಮಾಡುತ್ತಾರೆ. ಕಂಚಿ ಹಣ್ಣಿನ ಸ್ಕ್ವಾಶ್ ಕೂಡ ಇದೆ. ಆದರೆ ಇವೆಲ್ಲವೂ ಅಲ್ಪ ಪ್ರಮಾಣದಲ್ಲಿ ಮಾತ್ರ.

ಪ್ಯಾಶನ್ ಫ್ರುಟ್ ಬೆಳೆ ಚೆನ್ನಾಗಿದ್ದಾಗ ಹೆಚ್ಚು ಸ್ಕ್ವಾಶ್ ಉತ್ಪಾದಿಸುತ್ತಾರೆ. ಇದೇ ಅವರ ಮುಖ್ಯ ಉತ್ಪನ್ನ. ಈ ವರ್ಷ ಹಣ್ಣು ಕಡಿಮೆ ಸಿಕ್ಕ ಕಾರಣ 600 ಬಾಟ್ಲಿಯಷ್ಟೇ ತಯಾರು ಮಾಡಲು ಸಾಧ್ಯವಾಯಿತು. ಹಿಂದಿನ ಹಲವು ವರ್ಷಗಳಲ್ಲಿ ತಲಾ ಸಾವಿರ ಬಾಟ್ಲಿ ಪ್ಯಾಶನ್ ಫ್ರುಟ್ ಸ್ಕ್ವಾಶ್ ತಯಾರಿಸಿದ್ದರು.

“ನಮ್ಮ ಅಂಗಡಿಗಳಲ್ಲಂತೂ ನಿರ್ಮಲಾರ ಪ್ಯಾಶನ್‍ಫ್ರುಟ್ ಸ್ಕ್ವಾಶಿಗೆ ತುಂಬ ಡಿಮಾಂಡ್. ಗ್ರಾಹಕರು ಕಾಯುತ್ತಲೇ ಇರುತ್ತಾರೆ. ನಿರ್ಮಲಾರ ಬಳಿಯೂ  ಕೇಳಿದಷ್ಟು   ಕೊಡಲು  ಆಗುತ್ತಿಲ್ಲ” ಎನ್ನುತ್ತಾರೆ ಮೂಡಿಗೆರೆ ಮತ್ತು ಚಿಕ್ಕಮಗಳೂರಿನಲ್ಲಿ ಹಸಿರು ಆಗ್ರ್ಯಾನಿಕ್ ಸ್ಟೋರ್ ನಡೆಸುತ್ತಿರುವ ಅರವಿಂದ್ ಭೂತನಕಾಡು. ಐದಾರು ವರ್ಷಗಳಿಂದ ಇವರು ನಿರ್ಮಲಾರಿಂದ 200 - 300 ಬಾಟ್ಲಿ ಪ್ಯಾಶನ್‍ಫ್ರುಟ್ ಸ್ಕ್ವಾಶ್ ತರಿಸಿ ಮಾರುತ್ತಾರೆ.

750 ಮಿಲ್ಲಿಲೀಟರಿನ ಒಂದು ಬಾಟ್ಲಿಗೆ ಇವರ ರಖಂ ದರ 350 ರೂ. ಗಾಜಿನ ಬಾಟ್ಲಿಯನ್ನೇ ಬಳಸುತ್ತಾರೆ. ಹಾಗಾಗಿ ಕೊರಿಯರ್ ಮೂಲಕ ಕಳಿಸಲು ಆಗುತ್ತಿಲ್ಲ. ಸ್ಕ್ವಾಶಿನ ಪ್ರಮಾಣದ ಮೂರರಷ್ಟು ನೀರು ಸೇರಿಸಿ ಕುಡಿಯಲು ಇವರು ಶಿಫಾರಸು ಮಾಡುತ್ತಾರೆ.

ನಿರ್ಮಲಾ  ಪ್ರಗತಿಪರ ಮಹಿಳಾ ವೇದಿಕೆಯ ಕಾರ್ಯದರ್ಶಿ, ಅಧ್ಯಕ್ಷೆ ಮೊದಲಾದ ಸ್ಥಾನಗಳಲ್ಲಿ ದುಡಿದ ಸಕ್ರಿಯ ಸದಸ್ಯೆ. ಮೂರು ದಶಕದ ಹಿಂದೆ ಒಮ್ಮೆ ಇವರು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞೆ  ಪದ್ಮಾವತಿಯವರನ್ನು ತರಬೇತಿ ಕೊಡಲು ಕರೆಸಿದ್ದರು. “ಅವರು ತಿಳಿಸಿಕೊಟ್ಟ ರೀತಿಯಲ್ಲೇ ನಾನು ಮಾಡುತ್ತಾ ಬಂದೆ. ಈಗ ಕೃಷಿ ವಿಜ್ಞಾನ ಕೇಂದ್ರಕ್ಕೆ ಹೋಗಿ ಜ್ಯೂಸ್ ತಯಾರಿಯ ತರಬೇತಿ ಪಡೆದವರಿಗಿಂತಲೂ ಹೆಚ್ಚು ಉತ್ಪಾದನೆ ನಾನು ಮಾಡುತ್ತಿದ್ದೇನೆ. ಮಾಡುತ್ತಾ ಮಾಡುತ್ತಾ ನನ್ನದೇ ಆದ ಕೆಲವು ಬದಲಾವಣೆಗಳನ್ನೂ ಅಳವಡಿಸಿಕೊಂಡಿದ್ದೇನೆ” ಎನ್ನುತ್ತಾರೆ.

ಕುಶಾಲನಗರ ಕಾಫಿಕ್ಲಬ್, ಮಂಜಿರಾಬಾದ್ ಕ್ಲಬ್, ನೆಂಟರಿಷ್ಟರು, ಬೆಂಗಳೂರಿನಲ್ಲಿರುವ ಮಗನ ಮೂಲಕ ಇವರ ಸ್ಕ್ವಾಶ್ ಮಾರಾಟವಾಗುತ್ತದೆ. “ಅವರೆಲ್ಲರ ಬಳಿ ಹಿಂದೆ ಬಳಸಿದವರು ಕೇಳುತ್ತಾ ಇರುತ್ತಾರೆ” ಎನ್ನುತ್ತಾರೆ ನಿರ್ಮಲಾ.

“ಅವರ ಸ್ಕ್ವಾಶ್ ರೆಸ್ಟೋರೆಂಟುಗಳಿಗೆ, ಬಾರುಗಳಿಗೂ ಹೋಗುತ್ತದೆ. ವೋಡ್ಕಾದ ಜತೆ ಸೇರಿಸಿ ಜನ ಕುಡಿಯುತ್ತಾರೆ. ಸೋಡದ ಜತೆ ಕುಡಿಯಲು ಚೆನ್ನಾಗಿರುತ್ತದೆ. ನಾನು ಕುಡಿಯುವ ರೀತಿ ಹಾಗೆಯೇ” ಎನ್ನುತ್ತಾರೆ ಅರವಿಂದ ಭೂತನಕಾಡು.

ಎಪ್ಪತ್ತರ ಇಳಿ ವಯಸ್ಸಿನಲ್ಲೂ ನಿರ್ಮಲಾರ ಹುಮ್ಮಸ್ಸು, ಶಿಸ್ತು ಮೆಚ್ಚುವಂಥದ್ದು. ಒಂದು ಬ್ಯಾಚಿಗೆ ಮೂರು ಲೀಟರ್ ಪ್ಯಾಶನ್ ಹಣ್ಣಿನ ರಸದ್ದಷ್ಟೇ ಸ್ಕ್ವಾಶ್ ತಯಾರಿಸುತ್ತಾರೆ. ಅದರಿಂದ 11 ಬಾಟ್ಲಿ ರೆಡಿ ಆಗುತ್ತದೆ. “ಪ್ರಮಾಣ ಇನಿತೂ ವ್ಯತ್ಯಾಸ ಆಗಬಾರದು. ಆದರೆ ಗುಣಮಟ್ಟವೂ ಬದಲಾಗುತ್ತದೆ” ಎಂಬ ಕಾರಣಕ್ಕೆ ಈ ಎಚ್ಚರ. ದಿನದಲ್ಲಿ ಮೂರು ಬ್ಯಾಚ್ ಉತ್ಪಾದಿಸಿದ್ದೂ ಇದೆಯಂತೆ.

ಬೇಡಿಕೆ ಪೂರೈಸಲು ಆಗದ ಕಾರಣ ನಿರ್ಮಲಾ ಪ್ರಚಾರ ಮಾಡುವುದೇ ಇಲ್ಲ. ಬ್ರಾಂಡ್ ಮಾಡ್ಕೊಳ್ಳಲೂ ಹೋಗಿಲ್ಲ. ಲೇಬಲ್ಲಿನಲ್ಲಿ ಒಂದೆಡೆ ಇಂಗ್ಲಿಷಿನ ‘ಎನ್’ ಎಂಬ ಅಕ್ಷರ ಇರುತ್ತದೆ ಅಷ್ಟೇ.