ADD

Back To Free Articles

Janaury-2026

ಬಸಳೆಗಾಗಿಯೇ ಮಳೆ ಮರೆ

ಬೆಳಕನ್ನು ಮಾತ್ರ ಒಳ ಬಿಟ್ಟು, ಮಳೆಯನ್ನು ತಡೆಯುವಮಳೆ ಮರೆಯಲ್ಲಿ ಕರಾವಳಿಯಲ್ಲಿ ಮಳೆಗಾಲದಲ್ಲೂ ಬಸಳೆಯನ್ನು ಚೆನ್ನಾಗಿ ಬೆಳೆಯಬಹುದು ಎಂದು ಈ ಕೃಷಿಕರು ತೋರಿಸಿಕೊಟ್ಟಿದ್ದಾರೆ.

- ಅಪ ಬಳಗ

 
no image
 

ಳೆದ ವರುಷ ಬಸಳೆ ಹದಿನೈದು ಸಾವಿರ ರೂಪಾಯಿ ತಂದು ಕೊಟ್ಟಿದೆ!”

ಪುತ್ತೂರು ತಾಲೂಕಿನ ಹಿರೇಬಂಡಾಡಿಯ ಗೋಪಾಲಕೃಷ್ಣ ಭಟ್ಟರು ಹೇಳಿದಾಗ ವಿಶೇಷವೇನೂ ಅನ್ನಿಸಲಿಲ್ಲ. ಅವರು ಮುಂದುವರಿದು, ‘ಮಳೆ ಮರೆ ಮಾಡಿದ್ದರಿಂದ ಮಾತ್ರ ಇದು ಸಾಧ್ಯವಾಯಿತು’ ಎಂದರು.

ಮಳೆಗಾಲದಲ್ಲಿ ಸೊಪ್ಪು ತರಕಾರಿಗಳು ಚೆನ್ನಾಗಿ ಬೆಳೆಯುವುದಿಲ್ಲ. ಮಳೆಯ ಹೊಡೆತಕ್ಕೆ ಇದ್ದೂ ಇಲ್ಲದಂತಿರುತ್ತದೆ. ಭಟ್ಟರು ಅದಕ್ಕೊಂದು ಪರಿಹಾರ ಕಂಡುಕೊಂಡಿದ್ದಾರೆ. ಪ್ಲಾಸ್ಟಿಕ್ ಹಾಸಿದ ಸೂರಿನೊಳಗೆ - ಮಳೆ ಮರೆ - ಚಪ್ಪರ ಹಾಕಿ ಬೆಳೆದಿದ್ದಾರೆ. 

ಇವರ ಮಳೆ ಮರೆಯ ಅಳತೆ 20 x 15 ಅಡಿ. ಐದಡಿ ಎತ್ತರದ ನಾಲ್ಕು ಸಿಮೆಂಟ್ ಕಂಬಗಳು. ಮಧ್ಯದ ಎರಡು ಕಂಬಗಳು ಹತ್ತಡಿ. ಅದರ ಮೇಲೆ ಪೂರ್ತಿ ಅವರಿಸುವಂತೆ ಸಿಲ್ಪಾಲಿನ್ ಶೀಟ್ ಹೊದಿಕೆ. ಎರಡೂ ಬದಿಯಲ್ಲಿಯೂ ನೆಲ ಮಟ್ಟದ ವರೆಗೂ ಇಳಿಸಿದ್ದಾರೆ. ಸಿಲ್ಪಾಲಿನ್ ಶೀಟಿನ ನಾಲ್ಕು ಕಂಬಗಳ ಅಂಚಿನಲ್ಲಿ ಪ್ರತ್ಯೇಕ ಗೂಟ ಹಾಕಿ ಶೀಟನ್ನು ಬಿಗಿದಿದ್ದಾರೆ. “ಹೀಗೆ ಮಾಡದಿದ್ದರೆ ಶೀಟ್ ಜಗ್ಗಿ, ಅದರಲ್ಲಿ ಮಳೆ ನೀರು ನಿಂತುಬಿಡುತ್ತದೆ. ಮಳೆ ನೀರು ಸುಲಭವಾಗಿ ಹರಿದು ಹೋಗುವಂತಿರಬೇಕು. ಶೀಟ್ ಹಾಳಾಗುವುದಿಲ್ಲ” ಎನ್ನುತ್ತಾರೆ.

ಮಳೆ ಮರೆಯೊಳಗೆ ಬಸಳೆ ಚಪ್ಪರವಿದೆ. ಸಾವಯವ ಗೊಬ್ಬರ ಉಣಿಕೆ. ನೆಲಗಡಲೆ ನೆನೆ ಹಾಕಿ ಎಂಟು ದಿವಸ ಕೊಳೆಸಿ ಅದರ ನೀರನ್ನು ಹದಿನೈದು ದಿನಕ್ಕೊಮ್ಮೆ ಎರೆಯುತ್ತಾರೆ. “ಮಳೆಗಾಲದಲ್ಲಿ ಪ್ರತ್ಯೇಕವಾಗಿ ನೀರಾವರಿ ಬೇಕಾಗಿಲ್ಲ. ಮಳೆ ಬಂದಾಗ ನೀರಿನ ಹನಿಗಳು ಸಹಜವಾಗಿ ಒಳಭಾಗಕ್ಕೆ ಚಿಮುಕಿಸಿದಂತಾಗುತ್ತದೆ. ವಾತಾವರಣದಲ್ಲಿ ತೇವಾಂಶವೂ ಜಾಸ್ತಿ ಇರುತ್ತದೆ. ಎರಡು - ಮೂರು ದಿವಸ ಮಳೆ ಬಾರದಿದ್ದರೆ ನೀರು ಉಣಿಸಬೇಕು.” ಮಳೆ ಮರೆಯೊಳಗಿನ ಚಪ್ಪರಕ್ಕೆ ಆರು ಬುಡ ಬಸಳೆ ಹಬ್ಬಿಸಿದ್ದಾರೆ. ಜೂನ್ ತಿಂಗಳಲ್ಲಿ ನಾಟಿ.

ಅವರದ್ದೇ ಇನ್ನೊಂದು ಪ್ರಯೋಗ ಗಮನಿಸಿ. ಅಡಿಕೆ ಒಣಗಿಸುವ ಸೋಲಾರ್ ಗೂಡಿನೊಳಗೂ ಬಸಳೆ ಕೃಷಿ ಮಾಡಿದ್ದಾರೆ. ಬುಡವಿರುವುದು ಗೂಡಿನ ಹೊರಗೆ. ಮಿಕ್ಕ ಬೆಳವಣಿಗೆಯೆಲ್ಲಾ ಒಳಗೆ. ಮಳೆ ವಿಪರೀತವಾದರೂ ಕೊಳೆಯುವ ಭಯವಿಲ್ಲ. “ಗೂಡಿನಲ್ಲಿ ಹಿತ - ಮಿತ ಶಾಖವಿರುವುದರಿಂದ ಚೆನ್ನಾಗಿ ಬೆಳೆಯುತ್ತದೆ. ಈ ವ್ಯವಸ್ಥೆ ಮಳೆಗಾಲಕ್ಕೆ ಮಾತ್ರ. ಮಳೆ ಬಿಟ್ಟಾಗ ಬಿಸಿಲು ಮನೆಯೊಳಗೂ ಶಾಖ ಹೆಚ್ಚಾಗುತ್ತದೆ.” ಎನ್ನುತ್ತಾರೆ. ಇದರೊಳಗೆ ಹದಿನಾರು ಬುಡ ಬಸಳೆಯಿದೆ. 

“ಬಿಸಿಲು ಮನೆ ಮತ್ತು ಮಳೆ ಮರೆಯಲ್ಲಿ ಒಟ್ಟಾಗಿ ಇಪ್ಪತ್ತೆರಡು ಬುಡ ಬಸಳೆಯಿದೆ. ಎರಡೂ ಸೇರಿ ಜೂನಿನಿಂದ ಫೆಬ್ರವರಿ ತನಕ ಇಳುವರಿಗೆ ತೊಂದರೆಯಿಲ್ಲ” ಎನ್ನುತ್ತಾ ಒಂದು ಸೂಕ್ಷ್ಮವನ್ನು ಹೇಳುತ್ತಾರೆ. “ಬಿಸಿಲು ಮನೆಯೊಳಗೆ ಬೆಳೆದ ಬಸಳೆಯ ಎಲೆಗಳಲ್ಲಿ ಹಸಿರು ಬಣ್ಣ ತುಸು ಕಡಿಮೆ ಎಂದೇ ಹೇಳಬಹುದು. ಎಲೆಗಳು ದಪ್ಪ ಬರುವುದಿಲ್ಲ. ಮಳೆ ಮರೆಯ ಎಲೆಗಳು ಅಗಲವಾಗಿ ಸೊಂಪಾಗಿ ಬೆಳೆಯುತ್ತವೆ.” ಸ್ಥಳೀಯ ಉಪ್ಪಿನಂಗಡಿಯ ತರಕಾರಿ ಅಂಗಡಿಗೆ ಮಾರಾಟ.

ಈ ವರುಷ ಮಳೆ ಮರೆಗೆ ಹೊಸತಾಗಿ ಬಿಳಿ ವರ್ಣದ ಸಿಲ್ಪಾಲಿನ್ ಶೀಟ್ ಹಾಸಿದ್ದಾರೆ. ಶೀಟಿಗೆ ನಾಲ್ಕು ಸಾವಿರ ರೂಪಾಯಿ ಮತ್ತು ನಿರ್ವಹಣೆಗೆ ಎರಡು ಸಾವಿರ ರೂ. ವೆಚ್ಚವಾಗಿದೆ. “ಸೋಲಾರ್ ಗೂಡಿಗಾಗಿ ತಂದ ಸಿಮೆಂಟ್ ಕಂಬಗಳಿದ್ದುವು. ಸಿಮೆಂಟ್ ಕಂಬದ ಬದಲಿಗೆ ಅಡಿಕೆ ಮರದ ಕಂಬವನ್ನು ಬಳಸಿ ವೆಚ್ಚ ಹಗುರವಾಗಿಸಬಹುದು. ಆದರೆ  ಬಾಳ್ವಿಕೆ ಕಡಿಮೆ. ಸ್ವಲ್ಪ ಎಚ್ಚರ ವಹಿಸಿದರೆ ಸಿಲ್ಪಾಲಿನ್ ಶೀಟ್ 3 - 4 ವರುಷ ಬಾಳ್ವಿಕೆ ಬರಬಹುದು. ವರುಷವೂ ತೆಗೆದು ಹಾಕುತ್ತಿದ್ದರೆ ಹಾಳಾಗಬಹುದು.”

ಮಳೆ ಮರೆಯೊಳಗೆ ಟೊಮೆಟೋ, ಹರಿವೆ ಬೆಳೆಯುತ್ತಿದೆ. ಫಲಿತಾಂಶ ಗೊತ್ತಾಗಬೇಕಷ್ಟೆ. “ನಮ್ಮ ಸುತ್ತಮುತ್ತ ಮೂರ್ನಾಲ್ಕು ಮಂದಿ ಮಳೆ ಮರೆಯಲ್ಲಿ ಸೊಪ್ಪು ತರಕಾರಿ ಬೆಳೆಯುತ್ತಾರೆ. ನನ್ನ ತಂಗಿಯ ಮನೆಯಲ್ಲಿ ಮಳೆ ಮರೆ ಮಾಡಿ ಯಶಸ್ಸಾಗಿದ್ದಾರೆ”, ಅಡುಗೆ ಮನೆಯಿಂದ ಮನೆಯೊಡತಿ ಗೀತಾ ಭಟ್ ದನಿ ಸೇರಿಸಿದರು.

99002 20805 (ಸಂಜೆ 6 - 8)