ADD

Back To Free Articles

Janaury-2026

ಕೇಸರಿ ತಿರುಳಿನ ಸಿಹಿ ಕಂಚಿ ಹಣ್ಣು

ಮಲೆನಾಡಿನಲ್ಲಿ ಕಂಚಿ ಹಣ್ಣು ಯಥೇಷ್ಟ ಇರುತ್ತಿತ್ತು. ಈಗದು ನಶಿಸಿ ಹೊಗುತ್ತಿದ್ದು ಬೆಳೆಸಿ, ಉಳಿಸಬೇಕಾದ ಅಗತ್ಯವಿದೆ.

- ವಸಂತ ಕುಮಾರ್‌ ಹರ್ಡೀಕರ್‌ ಕೊಪ್ಪ

 

ವರ್ಷದ ದೀರ್ಘ ಮಳೆ ಮುಗಿದು ಚಳಿ ಆರಂಭವಾಗುತ್ತಿದ್ದಂತೆ ನಮ್ಮ ಹಿತ್ತಿಲಿನ ಸಿಹಿ ಕಂಚಿ ಗಿಡದಲ್ಲಿ ಕೇಸರಿ ಬಣ್ಣದ ಹಣ್ಣುಗಳು ಗಮನ ಸೆಳೆದಿವೆ. ಇದು ಅಪರೂಪದ ತಳಿ.

ಕೊಪ್ಪ ಸಂತೆಯಿಂದ ತಂದ ಹಣ್ಣಿನ ಬೀಜದಿಂದ ಅಭಿವೃದ್ಧಿ ಮಾಡಿದ್ದೇವೆ. ಆರು ವರುಷದ ಹಿಂದೆ ನಾಟಿ ಮಾಡಿದ್ದ ಗಿಡದಲ್ಲಿ ಈ ವರುಷ ಮೊದಲ ಫಸಲು.

ಕಿತ್ತಳೆ ಹಣ್ಣನ್ನು ಹೋಲುವ ಕೇಸರಿ ಬಣ್ಣ. ಮೇಲ್ಮೈಯಲ್ಲಿ ದೊಡ್ಳಿ ಹಣ್ಣಿನಂತಿರುವ ಉಬ್ಬುತಗ್ಗುಗಳು. ತೆಳ್ಳಗಿನ ಸಿಪ್ಪೆ ಬಿಡಿಸಿದರೆ ರಸಭರಿತ ಕೇಸರಿ ಬಣ್ಣದ ಸಿಹಿಯಾದ ತೊಳೆಗಳಿವೆ. ಒಂದು ಹಣ್ಣಿನಲ್ಲಿ ಹದಿನೈದರಿಂದ ಇಪ್ಪತ್ತು ಬೀಜಗಳಿವೆ. ಗಿಡವು ಸುಮಾರು ಹತ್ತರಿಂದ ಹದಿನೈದು ಅಡಿ ಎತ್ತರ.

ಗಿಡದ ಕೆಳಭಾಗದಲ್ಲಿ ಚೂಪನೆಯ ಉದ್ದದ ಮುಳ್ಳುಗಳು. ಗಿಡದ ತುಂಬ ದಟ್ಟವಾದ ಹಸಿರಿನ ಎಲೆಗಳಿವೆ. ಮೂಸಂಬಿ ಗಾತ್ರದ ಕಾಯಿಗಳು. ಹಣ್ಣಿನ ಸಿಪ್ಪೆ ಬಿಡಿಸಲು ತುಸು ತ್ರಾಸ.

ಈ ಹಣ್ಣನ್ನು ಮೂಸಂಬಿ, ಕಿತ್ತಳೆಯ ಹಣ್ಣನ್ನು ತಿನ್ನುವಂತೇ ತಿನ್ನಬಹುದು. ಪಾನಕ ಮಾಡಿ ಕುಡಿಯಬಹುದು. ಕೆಲವರು ಇದರಿಂದ ಉಪ್ಪಿನಕಾಯಿ, ಗೊಜ್ಜು ಕೂಡ ಮಾಡುತ್ತಾರಂತೆ.

ಹಿಂದೆ ಮಲೆನಾಡಿನಲ್ಲಿ ಕಂಚಿ ಹಣ್ಣು ಯಥೇಷ್ಟ ಇರುತ್ತಿತ್ತು. ಈಗದು ನಶಿಸಿ ಹೊಗುತ್ತಿದ್ದು ಬೆಳೆಸಿ, ಉಳಿಸಬೇಕಾದ ಅಗತ್ಯವಿದೆ. ನಾಟಿ ತಳಿಯ ಇದು ಫಲಪ್ರೇಮಿಗಳ ಮನಸ್ಸು ಗೆಲ್ಲಬಹುದು. ಮುಂದಿನ ವರ್ಷ ಕಸಿ ಗಿಡಗಳನ್ನು ಮಾಡುವ ಯೋಚನೆಯಿದೆ.

ಈ ಹಿಂದೆ ಮಲೆನಾಡಿನ ರೈತರ ತೋಟಗಳಲ್ಲಿ ಕಂಚಿ ಹಣ್ಣು ಸಾಮಾನ್ಯವಾಗಿ ಇರುತ್ತಿತ್ತು. ಈಗ ಮಾತ್ರ ಅಪರೂಪವಾಗಿದೆ.

- ವಸಂತಕುಮಾರ್ ಹರ್ಡೀಕರ್, ಕೊಪ್ಪ

94495 40555