ಒಂದು ನಿಮಿಷಕ್ಕೆ 7 - 8 ಗೊನೆಗಳನ್ನು ಕೈಯಿಂದ ಫೀಡ್ ಮಾಡಬಹುದು. ಗೊನೆಯು ಯಂತ್ರದ ಹಲ್ಲುಗಳೆಡೆ ಸಿಲುಕಿ ಕಾಯಿ ಫಟಾಫಟ್ ಬೇರ್ಪಡುತ್ತದೆ. ಹತ್ತಡಿ ದೂರದೊಳಗೆ ಹರಡಿಕೊಳ್ಳುತ್ತದೆ.
- ಅಪ ಬಳಗ
ಗೊನೆಯಿಂದ ಹಣ್ಣಡಿಕೆಯನ್ನು ಬೇರ್ಪಡಿಸುವುದು ತನುಶ್ರಮದ ಕೆಲಸ. ಮರದ ತುಂಡಿಗೆ ಗೊನೆಯನ್ನು ಬಡಿದು ಬೇರ್ಪಡಿಸುವುದು ಪಾರಂಪರಿಕ. ಈ ಕೆಲಸವೀಗ ಹಗುರವಾಗಿದೆ. ಪುತ್ತೂರು ಮುಕ್ರಂಪಾಡಿಯ ಎಸ್.ಆರ್.ಕೆ. ಲ್ಯಾಡರ್ಸ್ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದೆ. ಅದು ಕೃಷಿಕ ಸ್ವೀಕೃತಿ ಪಡೆಯುತ್ತಿದೆ.
“ಪಾರಂಪರಿಕ ಕ್ರಮದಲ್ಲಿ ಐದು ಮಂದಿ ಒಂದು ದಿವಸದಲ್ಲಿ ಮಾಡುವ ಕೆಲಸವನ್ನು ಯಂತ್ರವು ಎರಡು ಗಂಟೆಯಲ್ಲಿ ಮಾಡುವ ಕ್ಷಮತೆಯನ್ನು ಹೊಂದಿದೆ.” ಎನ್ನುತ್ತಾರೆ ಎಸ್.ಆರ್.ಕೆ. ಲ್ಯಾಡರ್ಸಿನ ಮುಖ್ಯಸ್ಥ ಕೇಶವ ಅಮೈ.
ಒಂದು ನಿಮಿಷಕ್ಕೆ 7 - 8 ಗೊನೆಗಳನ್ನು ಕೈಯಿಂದ ಫೀಡ್ ಮಾಡಬಹುದು. ಗೊನೆಯು ಯಂತ್ರದ ಹಲ್ಲುಗಳೆಡೆ ಸಿಲುಕಿ ಕಾಯಿ ಫಟಾಫಟ್ ಬೇರ್ಪಡುತ್ತದೆ. ಹತ್ತಡಿ ದೂರದೊಳಗೆ ಹರಡಿಕೊಳ್ಳುತ್ತದೆ.
ಕಾಲು ಅಶ್ವ ಶಕ್ತಿಯ ಮೋಟಾರಿನಿಂದ ಚಾಲು. ವಿದ್ಯುತ್ ಕೈಕೊಟ್ಟಾಗ ಇನ್‍ವರ್ಟರ್‍ನಿಂದಲೂ ಚಾಲೂ ಮಾಡಬಹುದು. ಗೊನೆಯನ್ನು ಫೀಡ್ ಮಾಡುವಲ್ಲಿ ನಾಲ್ಕು ರಾಡ್ ಫಿಕ್ಸ್ ಮಾಡಿದ್ದಾರೆ. ಯಂತ್ರವು ಗೊನೆಯನ್ನು ಎಳೆದುಕೊಳ್ಳದಂತೆ ಇದು ಸೇಫ್ಟಿ ಗಾರ್ಡ್.
“ಅರ್ಧ ಆಶ್ವ ಶಕ್ತಿಯ ಮೋಟಾರನ್ನೂ ಬಳಸಬಹುದು. ಇದರಿಂದ ಯಂತ್ರದ ತಿರುಗುವ ವೇಗ ಹೆಚ್ಚಾಗಿ ಗೊನೆಯನ್ನು ಎಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಹಾಗಾಗಿ ಕಾಲು ಅಶ್ವಶಕ್ತಿಯ ಮೋಟಾರ್ ಸಾಕು” ಎಂದು ಶಿಫಾರಸು ಮಾಡುತ್ತಾರೆ ಕೇಶವ.
“ಇದರಲ್ಲಿ ಅಡಿಕೆಗೆ ಏಟಾಗುವುದಿಲ್ಲ. ಸಿಪ್ಪೆ ಏಳುವುದಿಲ್ಲ. ಸಾಂಪ್ರದಾಯಿಕ ಕ್ರಮದಲ್ಲಾದರೆ ಅಡಿಕೆಗೆ ಗಾಯವಾಗುವುದಲ್ಲದೆ ದೂರ ಹಾರುತ್ತದೆ ಕೂಡಾ. ತೋಟದಿಂದ ತಂದು ಅಂಗಳದಲ್ಲಿ ಪೇರಿಸಿಟ್ಟ ಗೊನೆಯ ಸನಿಹಕ್ಕೆ ಯಂತ್ರವನ್ನು ಒಯ್ದು ಅಡಿಕೆ ಬೇರ್ಪಡಿಸಬಹುದು. ಭಾರ ಸುಮಾರು 30 ಕಿಲೋ.”
“ಯಂತ್ರ ಕ್ಷಮತೆಯೊಂದಿಗೆ ಸಿದ್ಧವಾಗುವಾಗ ಅಡಿಕೆಯ ಕೊಯ್ಲು ಸೀಸನ್ ಮುಗಿದಿತ್ತು. ಈಗಾಗಲೇ ಬಳಸಿದವರು ತೃಪ್ತಿಕರವಾದ ಮಾಹಿತಿ ನೀಡಿದ್ದಾರೆ. ಕೃಷಿಕರ ಒಲವು ಪಡೆಯುತ್ತಿದೆ. ಬೆಲೆ ಸುಮಾರು ಇಪ್ಪತ್ತು ಸಾವಿರ ರೂಪಾಯಿ.
ಮೊದಲೇ ಆದೇಶ ಮಾಡಬೇಕಾಗಿಲ್ಲ. ನೇರ ಬನ್ನಿ. ಯಂತ್ರ ಸಿದ್ಧ ಇದೆ” ಎನ್ನುತ್ತಾರೆ. ಮೋಟಾರು ಹೊರತು ಬೇರೆ ನಿರ್ವಹಣೆ ಬಾರದು. ತೋಟದೊಳಗೆ ಒಯ್ದು ಅಲ್ಲೂ ಕೆಲಸ ಮಾಡಬಹುದು. ಶಬ್ದ ತೀರಾ ಕಡಿಮೆ.
“ಗೊನೆ ದೊಡ್ಡದಿದ್ದಾಗ ಸಾಂಪ್ರದಾಯಿಕ ಕ್ರಮದಲ್ಲಿ ಅಡಿಕೆ ಬೇರ್ಪಡಿಸುವುದು ಕಷ್ಟ. ಆಗ ಗೊನೆಯನ್ನು ತುಂಡು ಮಾಡಬೇಕಿತ್ತು. ಈಗ ಯಂತ್ರದಿಂದ ಸುಲಭವಾಗಿದೆ. ಎಷ್ಟೇ ದೊಡ್ಡ ಗೊನೆಯನ್ನಾದರೂ ಫೀಡ್ ಮಾಡಬಹುದು. ನಮ್ಮ ರಟ್ಟೆ ಬಲ ಹೊಂದಿಕೊಂಡು ನಿರಂತರ ಕೆಲಸ ಮಾಡಬಹುದು.” ಕೃಷಿಕ ಪ್ರವೀಣ್ ಕುಂಟ್ಯಾಣ ಇವರ ಅನುಭವ.
ಅಡಿಕೆ ಗೊನೆ ಬಡಿಯುವ ಯಂತ್ರ ಹೊಸದಲ್ಲ. ಆದರೆ ಕಂಪೆನಿಯೊಂದು ಹೀಗೆ ತಯಾರಿಸುತ್ತಿರುವುದು ಹೊಸದು.
ಕೇಶವರು ಕಾಳುಮೆಣಸು ಹಾಗೂ ಭತ್ತವನ್ನು ಶುಚಿಗೊಳಿಸುವ ಯಂತ್ರವೊಂದರ ಅಭಿವೃದ್ಧಿಯಲ್ಲಿದ್ದಾರೆ. ಎಲ್ಲವೂ ಸರಿ ಹೋದರೆ ಜನವರಿಯಲ್ಲಿ ಈ ಯಂತ್ರ ಕೃಷಿಕರಿಗೆ ದೊರಕಲಿದೆ.
ಒಂದು ಕಾಲಘಟ್ಟದಲ್ಲಿ ಅಲ್ಯೂಮಿನಿಯಂ ಏಣಿ, ಗಾಡಿಗಳನ್ನು ತಯಾರಿಸಿ ಕೃಷಿಕರ ಒಲವು ಪಡೆದುಕೊಂಡ ಸಂಸ್ಥೆ ಎಸ್.ಆರ್.ಕೆ. 2019 ರಲ್ಲಿ ಬೆಳ್ಳಿಹಬ್ಬವನ್ನು ಆಚರಿಸಿತ್ತು.
ಎಸ್.ಆರ್.ಕೆ.ಲ್ಯಾಡರ್ಸ್ - 93531 31313
srkladders@gmail.com