ADD

Back To Free Articles

Janaury-2026

ನಮ್ಮಲ್ಲೂ ಬಿಲ್ವದ ಚಹಾ!

ಚಹಾ ತಯಾರಿಗೆ ಬಿಲ್ವದ ಹಣ್ಣನ್ನಲ್ಲ, ಕಾಯಿಯನ್ನು ಬಳಸುತ್ತಾರೆ.

ಲೇ : ಶ್ರೀ ಪಡ್ರೆ

 

ದು ಎಳೆ ಬಿಲ್ವದ ಕಾಯಿಗಳಿಂದ ಮಾಡುವ ಚಹಾ.

ಬಿಲ್ವದ ಹಣ್ಣು ಗೊತ್ತಲ್ಲಾ? ಅದೇ ಶಿವ ಪೂಜೆಗೆ ಬಳಸುವ ಎಲೆಯ ಮರದ ಹಣ್ಣು. ಇದರ ಶಾಸ್ತ್ರೀಯ ಹೆಸರು ಏಗಲ್ ಮಾರ್ಮೆಲೋಸ್.

ಥಾಯ್ಲೆಂಡಿನಲ್ಲಿ ಬಿಲ್ವದ ಹಣ್ಣಿನ ಚಹಾ ಬಲು ಜನಪ್ರಿಯ. ಅವರದನ್ನು ಪ್ರವಾಸಿಗಳಿಗೂ ಪರಿಚಯಿಸುತ್ತಾರೆ. ಶ್ರೀಲಂಕಾದಲ್ಲೂ ಬಿಲ್ವದ ಚಹಾ ಇದೆ. ಇದರ ಎಲೆಗಳಿಂದಲೂ ಚಹಾ ಮಾಡುತ್ತಾರೆ.

ಈಚೆಗೆ ಅಸ್ಸಾಮಿನ ಒಂದು ಎಫ್‍ಪಿಒ - ರೈತೋತ್ಪಾದಕ ಸಂಸ್ಥೆ ಬಿಲ್ವದ ಚಹಾ ಮಾಡಲು ಬೇಕಾದ ಕಚ್ಚಾವಸ್ತುವನ್ನು ಮಾರತೊಡಗಿದೆ. ಈ ಸಂಸ್ಥೆಯ ಹೆಸರು ಧೀರ್‍ಬೀಲ್ ಫಾರ್ಮರ್ ಪ್ರೊಡ್ಯೂಸರ್ಸ್ ಕಂಪೆನಿ. ಇದು ಗುವಾಹತಿಯಿಂದ 200 ಕಿಲೋಮೀಟರ್ ದೂರದಲ್ಲಿದೆ. ಛಾಪರ್ ಎಂಬ ಗ್ರಾಮದಲ್ಲಿ ಈ ಸಂಸ್ಥೆ ಇದೆ.

ನೂರು ಗ್ರಾಮಿನ ಈ ಚಹಾ ತಯಾರಿಯ ಉತ್ಪನ್ನಕ್ಕೆ ಬೆಲೆ 65 ರೂ. ಇದನ್ನು ಚಹಾ ಪುಡಿ ಎನ್ನುವಂತಿಲ್ಲ. ಏಕೆಂದರೆ ಬಿಲ್ವದ ಕಾಯಿಯ ಚಿಕ್ಕ ಒಣ ತುಂಡುಗಳನ್ನೇ ಚಹಾ ಮಾಡಲೆಂದು ಒದಗಿಸುತ್ತಾರೆ.

ಸಂಸ್ಥೆಯ ಅಧ್ಯಕ್ಷ ಎಳೆ ಯುವಕ ಇನಾಮುಲ್ ಕರೀಮ್ ಪ್ರಕಾರ ಈ ಸಂಸ್ಥೆ ಬಿಲ್ವದ ಹಣ್ಣಿಗೆ ಸಂಬಂಧಪಟ್ಟದ್ದಲ್ಲ. “ನಮ್ಮ ಸುತ್ತಮುತ್ತಲಲ್ಲಿ ಬಿಲ್ವದ ಹಣ್ಣು ಧಾರಾಳ ಸಿಗುತ್ತದೆ. ಎಲ್ಲಾ ಮನೆಗಳ ಹತ್ತಿರವೂ ಇರುತ್ತದೆ, ನಾವು ಚಿಕ್ಕವರಾಗಿದ್ದಾಗಿನಿಂದಲೂ ಇದರ ಚಹಾ ಕುಡಿಯುತ್ತಾ ಬೆಳೆದಿದ್ದೇವೆ” ಎನ್ನುತ್ತಾರೆ ಇನಾಮುಲ್.

ಎರಡು ವರ್ಷ ಹಿಂದೆ ಇವರಿಗೆ ಮನದಲ್ಲಿ ಅಕಸ್ಮಾತ್ತಾಗಿ ಒಂದು ಯೋಚನೆ ಬಂತಂತೆ. “ಹೇಗೂ ನಮ್ಮದೇ ಎಫ್‍ಪಿಒ ಇದೆ. ಬಿಲ್ವದ ಹಣ್ಣೂ ಇದೆ. ಏಕೆ ನಾವು ಇದರ ಪ್ಯಾಕೆಟ್ ಮಾಡಿ ಮಾರಬಾರದು? ಹಾಗೆ ಹುಟ್ಟಿಕೊಂಡದ್ದು ಇದು. ಬಹುಶಃ ಇದು ಭಾರತದ ಪ್ರಪ್ರಥಮ ವಾಣಿಜ್ಯ ‘ಬೇಲ್ ಟೀ’ ಆಗಿರಲೂಬಹುದು.

ಒಂದೂವರೆ ವರ್ಷದಿಂದ ಇವರು ಮಾರಾಟ ಮಾಡುತ್ತಿದ್ದಾರೆ. ಒಂದಷ್ಟು ಆನ್‍ಲೈನ್ ಮೂಲಕ. ಅಸ್ಸಾಮಿನ ಕೆಲವು ಭಾಗಗಳ ಅಂಗಡಿಗಳಿಗೂ ಕಳಿಸುತ್ತಾರಂತೆ. ಇವರು 100 ಗ್ರಾಮಿನ ಪ್ಯಾಕೆಟ್ ಮಾತ್ರ ಮಾಡಿದ್ದಾರೆ. ಈ ವರೆಗೆ ಅಂದಾಜು ಒಂದು ಟನ್ ಮಾರಾಟ ಆಗಿದೆ ಎನ್ನುತ್ತಾರೆ.

ಬಿಲ್ವದ ಚಹಾ ಮಾಡುವುದು ಹೇಗೆ? “ಸರ್, ಸಾಮಾನ್ಯವಾಗಿ ಮಾಮೂಲಿ ಚಹಾ ಹೇಗೆ ಮಾಡುತ್ತೀರೋ ಹಾಗೆಯೇ” ಎನ್ನುತ್ತಾರೆ ಕರೀಮ್. ಸಕ್ಕರೆ ಅಥವಾ ಬೆಲ್ಲ, ಹಾಲು ಸೇರಿಸಬೇಕೇ? “ಅದು ಅವರವರ ಇಷ್ಟ” ಎನ್ನುತ್ತಾರೆ.

ಈ ಚಹಾ ತಯಾರಿಗೆ ಬಿಲ್ವದ ಹಣ್ಣನ್ನಲ್ಲ ಕಾಯಿಯನ್ನು ಬಳಸುತ್ತಾರೆ. ಮಾರ್ಚ್ - ಏಪ್ರಿಲ್ ಕಾಲದಲ್ಲಿ ಎಳೆ ಕಾಯಿ ಸಿಗುತ್ತದೆ. ಅದನ್ನು ಚೂರಿಯಲ್ಲಿ ಕತ್ತರಿಸುವಷ್ಟು ಎಳೆಯದಾಗಿರಬೇಕು. ನಾವು ಒಣಗಿಸುವುದು ಬಿಸಿಲಿನಲ್ಲೇ. ಐದಾರು ಬಿಸಿಲಿನಲ್ಲಿ ಚೆನ್ನಾಗಿ ಒಣಗುತ್ತದೆ” ಎನ್ನುತ್ತಾರೆ. ಇವರ ಸಂಸ್ಥೆ ಒಂದಷ್ಟು ರೈತರಿಂದ ಒಣ ಕಾಯಿಯ ತುಂಡನ್ನೇ ಖರೀದಿಸಿ ಪ್ಯಾಕ್ ಮಾಡಿ ಮಾರುತ್ತದೆ.

“ನಮ್ಮ ಗ್ರಾಮದ ಹಲವು ಮನೆಗಳಲ್ಲಿ ಈ ಚಹಾ ಕುಡಿಯುವ ಅಭ್ಯಾಸವಿದೆ. ಅದಕ್ಕಾಗಿ ನಾವು ನಾವೇ ಬಿಲ್ವದ ಕಾಯಿ ಒಣಗಿಸಿ ಇಟ್ಟುಕೊಳ್ಳುತ್ತೇವೆ. ನಮ್ಮ ಗ್ರಾಮದ ಒಂದು ಹೋಟೆಲಿನಲ್ಲೂ ಇದು ಲಭ್ಯವಿದೆ” ಎನ್ನುತ್ತಾರೆ ಇನಾಮುಲ್ ಕರೀಮ್.

ಭಾರತದಲ್ಲಿ ಇದುವೇ ಪ್ರಥಮ ಪ್ರಯತ್ನವೇ? ಬೇರೆ ಯಾರಾದ್ರೂ ಮಾರುಕಟ್ಟೆಗಿಳಿಸಿದ್ದಾರಾ? ಇದೊಂದೂ ಇನಾಮುಲ್ ಅವರಿಗೆ ಗೊತ್ತಿಲ್ಲ ಎನ್ನುತ್ತಾರೆ.

ಬಹುಶಃ ಇವರದೇ ಥರದ ಸಣ್ಣ ಘಟಕಗಳೂ ಈ ಚಹಾದ ಸಾಮಗ್ರಿ ಮಾರುತ್ತಲೂ ಇರಬಹುದು. ಇವರ ಜಾಹೀರಾತಿನಲ್ಲಿ ಏಗಲ್ ಮಾರ್ಮೆಲೋಸ್ ಅಥವಾ ಬೇಲ್ ಎಂಬ ಹೆಸರಿಲ್ಲ. ಅವರು ‘ವುಡ್ ಆಪಲ್ ಟೀ’ ಎಂದೇ ಕರೆದಿದ್ದಾರೆ!

“ಜೀರ್ಣಶಕ್ತಿಗೆ ಈ ಚಹಾ ಒಳ್ಳೆಯದು ಎಂಬುದು ನಮಗೆಲ್ಲರಿಗೂ ಗೊತ್ತು. ಇನ್ನೂ ಹಲವಾರು ಔಷಧ ಗುಣಗಳಿವೆ ಸರ್” ಎನ್ನುತ್ತಾರೆ ಇನಾಮುಲ್. ಇದು ಮೈ ಸ್ಟೋರಿನಲ್ಲೂ ಲಭ್ಯವಿದೆ.

ಧೀರ್‍ಬೀಲ್ ಫಾರ್ಮರ್ ಪ್ರೊಡ್ಯೂಸರ್ಸ್ ಕಂಪೆನಿ - 70023 69028