ADD

Back To Free Articles

August-2025

ಹ ಬೀ ಉತ್ಪನ್ನಗಳು - ಹಬೀ ಉಪ್ಮಾ, ಹ ಬೀ ಬುಡ್ಡಣ್ಣ, ಹ ಬೀ ರವಾದ ಕೇಸರಿಬಾತ್

ಹ ಬೀ ಉತ್ಪನ್ನಗಳು - ಹಬೀ ಉಪ್ಮಾ, ಹ ಬೀ ಬುಡ್ಡಣ್ಣ, ಹ ಬೀ ರವಾದ ಕೇಸರಿಬಾತ್ : ರಸರುಚಿ

ಲೇ : -ಪಿ. ಹರಿದಾಸ್ ಪನುತ್ತಿ, -ಮಮತಾ ಹೆಗಡೆ ಉತ್ರಳ್ಳಿ, - ಅರುಣಾ ಹೆಗಡೆ, ಅಶೀಸರ

 
no image
 

ಹಬೀ ಉಪ್ಮಾ

ಬೇಕಾಗುವ ವಸ್ತುಗಳು : ಅರಿಶಿನ ಮತ್ತು ಸ್ವಲ್ಪ ಉಪ್ಪು ಹಾಕಿದ ನೀರಿನಲ್ಲಿ ಬೇಯಿಸಿದ ಹಲಸಿನ ಬೀಜ (ಹಬೀ), ಕಡ್ಲೆಬೇಳೆ - 1 ಟೀ ಚಮಚ, ನೀರುಳ್ಳಿ  ಮಧ್ಯಮ ಗಾತ್ರದ್ದು ಒಂದು, ಹಸಿಮೆಣಸು - 2, ಎಣ್ಣೆ - 1 ಟೇಬಲ್ ಚಮಚ, ಸಾಸಿವೆ, ಕರಿಬೇವಿನ ಸೊಪ್ಪು.

ವಿಧಾನ : ಬೇಯಿಸಿದ ಹಬೀಯನ್ನು ಜಜ್ಜಿ ಹುಡಿ ಮಾಡಿ. ಬಾಣಲೆಗೆ ಎಣ್ಣೆ ಸುರಿದು ಸಾಸಿವೆ, ಕಡ್ಲೆ ಬೇಳೆ ಮತ್ತು ಬೇವಿನ ಸೊಪ್ಪು ಸೇರಿಸಿ. ಹೆಚ್ಚಿದ ನೀರುಳ್ಳಿ, ಹಸಿಮೆಣಸುಗಳನ್ನು ಹಾಕಿ ನೀರುಳ್ಳಿ ಕಂದು ಬಣ್ಣಕ್ಕೆ ಬರುವ ವರೆಗೆ ಮಗುಚಿ. ಈಗ ಜಜ್ಜಿ ಇಟ್ಟ ಹಬೀ ಸೇರಿಸಿ ಐದು ನಿಮಿಷ ತಿರುವಿ. ಮುಚ್ಚಳ ಹಾಕಿ ಎರಡು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಉಪ್ಮಾ ರೆಡಿ.

- ಪಿ. ಹರಿದಾಸ್ ಪನುತ್ತಿ

--------------------------------------------------------------------------------------------------

ಬೀ ಬುಡ್ಡಣ್ಣ :  ಬೇಕಾಗುವ ಪದಾರ್ಥಗಳು: ಹಲಸಿನ ಬೀಜ - 1 ಬೌಲ್, ಬೆಲ್ಲ - 3/4 ಬೌಲ್, ತೆಂಗಿನ ಕಾಯಿ ತುರಿ - 1/2 ಬೌಲ್, ತುಪ್ಪ ಸ್ವಲ್ಪ, ಏಲಕ್ಕಿ ಪುಡಿ ಸ್ವಲ್ಪ ಚಿಟಿಕೆ ಉಪ್ಪು

ವಿಧಾನ: ಮೊದಲು ಹಲಸಿನ ಬೀಜದ ಸಿಪ್ಪೆ ತೆಗೆದು ಕುಕ್ಕರ್‍ನಲ್ಲಿ ನೀರು ಸೇರಿಸಿ 5 - 6 ವಿಸಿಲ್ ಕೂಗಿಸಿ, ನುಣ್ಣಗೆ ಬೇಯಿಸಿಕೊಳ್ಳಬೇಕು. ನಂತರ ಬೇಯಿಸಿದ ಹಲಸಿನ ಬೀಜವನ್ನು ಚೆನ್ನಾಗಿ ಜಜ್ಜಿ ಒಂದು ಬಾಣಲೆಗೆ ಹಾಕಿ. ಅದಕ್ಕೆ ಬೆಲ್ಲ ಮತ್ತು ತೆಂಗಿನ ತುರಿ ಸೇರಿಸಿ. ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ ಮಿಶ್ರಣ ಗಟ್ಟಿಯಾಗುವ ವರೆಗೆ ಕಾಯಿಸಿ. ಚಿಟಿಕೆ ಉಪ್ಪು ಮತ್ತು ಏಲಕ್ಕಿ ಪುಡಿ ಸೇರಿಸಿ. ಮಿಶ್ರಣ ತಣ್ಣಗಾದ ನಂತರ ಉಂಡೆಗಳನ್ನು ಮಾಡಿ ಸ್ವಲ್ಪ ಒತ್ತಿ, ಕಟ್ಲೆಟ್ ಆಕಾರ ಮಾಡಿಕೊಳ್ಳಿ. ನಂತರ ಕಾದ ತವಾ ಮೇಲೆ ತುಪ್ಪ ಸವರಿ ಬೇಳೆ ಬುಡ್ಡಣ್ಣನನ್ನು ಎರಡೂ ಕಡೆ ಹೊಂಬಣ್ಣ ಬರುವವರೆಗೆ ಬೇಯಿಸಿ. ಬಿಸಿ ಬಿಸಿಯಾದ ರುಚಿಕರವಾದ ಹಲಸಿನ ಬೀಜದ ಬುಡ್ಡಣ್ಣ ಸವಿಯಲು ಸಿದ್ಧ.

- ಮಮತಾ ಹೆಗಡೆ ಉತ್ರಳ್ಳಿ

ಬೀ ರವಾದ ಕೇಸರಿಬಾತ್ : ಬೇಕಾಗುವ ಸಾಮಗ್ರಿ: ಹ ಬೀ ರವಾ ಒಂದು ಲೋಟ, ತುಪ್ಪ ಅರ್ಧ ಲೋಟ - 4 ರಿಂದ 5 ಚಮಚ. ಸಕ್ಕರೆ ಒಂದೂವರೆ ಲೋಟ, ನೀರು ಎರಡೂವರೆ ಲೋಟ (ಬೇಕಾದಲ್ಲಿ ಹಾಲನ್ನೂ ಬಳಸಬಹುದು.) ರುಚಿಗೆ ಸ್ವಲ್ಪ ಉಪ್ಪು, ಸ್ವಲ್ಪ ಏಲಕ್ಕಿ ಪೌಡರ್, ಗೋಡಂಬಿ, ದ್ರಾಕ್ಷಿ.

ವಿಧಾನ:  ಹಲಸಿನ ಬೀಜದ ಹಿಟ್ಟು ಹಾಗೂ ರವಾ ಇವೆರಡರಿಂದಲೂ ಮಾಡಬಹುದು.  ನಾನಿಲ್ಲಿ ಹ ಬೀ ರವಾದಿಂದ ಮಾಡಿರುವೆ.  ಒಂದು ಬಾಣಲೆಗೆ 4 ರಿಂದ 5 ಚಮಚ ತುಪ್ಪ ಹಾಕಿ ಅದಕ್ಕೆ ಹ ಬೀ ರವಾ ಹಾಕಿ ಹೊಂಬಣ್ಣ ಬರುವ ಹಾಗೆ ಹುರಿದುಕೊಂಡು ರುಚಿಗೆ ಚಿಟಿಕೆ ಉಪ್ಪನ್ನು ಹಾಕಿ ಕುದಿಯುವ ನೀರನ್ನು ಹಾಕಿ ಕೈಯಾಡಿಸಬೇಕು.  ನೀರು ಆರುತ್ತಿದ್ದಂತೆ ಹ ಬೀ ರವಾ ಬೆಂದ ಮೇಲೆ ಸಕ್ಕರೆಯನ್ನು ಹಾಕಿ ಚೆನ್ನಾಗಿ ಹದವಾದ ಉರಿಯಲ್ಲಿ ಕೈಯಾಡಿಸುತ್ತಿರಬೇಕು.  ಸಕ್ಕರೆ ಕರಗಿ ನೀರೆಲ್ಲಾ ಆರುತ್ತಿದ್ದಂತೆ ತುಪ್ಪವು ತಳದಲ್ಲಿ ಬರುತ್ತಿರುವಾಗ ಏಲಕ್ಕಿ ಪೌಡರ್, ಹುರಿದಿಟ್ಟುಕೊಂಡ ಗೋಡಂಬಿ, ದ್ರಾಕ್ಷಿ ಹಾಕಿ ಚೆನ್ನಾಗಿ ಕೈಯಾಡಿಸಿದರೆ ಬಿಸಿ ಬಿಸಿಯಾದ ರುಚಿಕರವಾದ ಘಮಘಮಿಸುವ ಹಲಸಿನ ಬೀಜದ ರವಾದಿಂದ ಮಾಡಿದ ಕೇಸರಿಬಾತ್ ಸವಿಯಲು ಸಿದ್ದ.

- ಅರುಣಾ ಹೆಗಡೆ, ಅಶೀಸರ