ಕಾಸರಗೋಡು ಕೇವೀಕೆಯ ತರಬೇತಿ. ಉತ್ಪನ್ನ ತಯಾರಿಯಲ್ಲಿ ಉತ್ಸುಕತೆ; ಮಾಡಿದ್ದನ್ನು ಮಾರಲು ಪತಿಯ ಅಂಗಡಿ. ಈ ಎಳೆಯ ಉದ್ದಿಮೆದಾರ್ತಿ ಬೆಳೆಯುವ ಗುಣ ತೋರುತ್ತಿದ್ದಾರೆ.
- ಅಪ ಬಳಗ
ಕಾಸರಗೋಡಿನ ಬಳಿಯ ಉದುಮದ ಸುಹ್ರಾ ಫಯಾಝ್ ಗೃಹಿಣಿ. ಗೃಹ ಉದ್ದಿಮೆ ಆರಂಭಿಸಲು ಅತೀವ ಆಸಕ್ತಿ. ಮೂರು ವರ್ಷ ಹಿಂದೆ ಈ ರಂಗಕ್ಕೆ ಪಾದಾರ್ಪಣೆ ಮಾಡಿದ್ದು ಕಾಸರಗೋಡು ಕೇವೀಕೆ ಮಾರ್ಗದರ್ಶನದಿಂದ. ಅಲ್ಲಿನ ವಿಜ್ಞಾನಿ ಡಾ. ಸರಿತಾ ಹೆಗಡೆಯವರ ತರಬೇತಿ. ಇವರ ಉದ್ದಿಮೆಯ ಹೆಸರು ‘ಝೊರ್ರಾಸ್ ಫುಡ್ಸ್ಸ್’.
ಈಗ ಸುಹ್ರಾ ಪಾಸ್ತಾ ಸ್ಪೆಶಲಿಸ್ಟು, ಹಲಸಿನಕಾಯಿ ಅಲ್ಲದೆ ಹಲಸಿನ ಬೀಜದಿಂದಲೂ ಪಾಸ್ತಾ ತಯಾರಿಸುತ್ತಾರೆ. “ನಮ್ಮಲ್ಲಿ ಪಾಸ್ತಾ ಬಳಕೆ ಕಡಿಮೆ. ಆದರೆ ಹಲಸಿನ ರುಚಿ ಅದರಲ್ಲಿ ಉಳಿಯುವ ಕಾರಣ ಜನ ಇಷ್ಟಪಡುತ್ತಾರೆ” ಎನ್ನುತ್ತಾರೆ ಇವರು. ಇನ್ನೂರು ಗ್ರಾಮಿನ ಪಾಸ್ತಾ ಪ್ಯಾಕೆಟಿನ ಬೆಲೆ 125 ರೂ.
ಹಲಸಿನ ಹಣ್ಣಿನ ಪೇಡಾ ಇನ್ನೊಂದು ಉತ್ಪ್ಪನ್ನ. ಹಲಸಿನ ಬೀಜದ ಇಡಿಯಪ್ಪಮ್ ಮಿಕ್ಸ್ ಕೂಡಾ ತಯಾರಿಸುತ್ತಾರೆ. ಇಡಿಯಪ್ಪಮ್ ಅಂದರೆ ಶ್ಯಾವಿಗೆ. ಸೀಸನಿನಲ್ಲಿ ಬಕ್ಕೆ ಹಲಸಿನ ಹಣ್ಣನ್ನು ಒಣಗಿಸಿಯೂ ಮಾರುತ್ತಾರೆ.
“ಕಲಿಸಿದ್ದನ್ನು ತಕ್ಷಣ ಗ್ರಹಿಸಿ ಏನೂ ತಡ ಮಾಡದೆ ಉತ್ಪನ್ನ ತಯಾರಿಸುವುದರಲ್ಲಿ ಸುಹ್ರಾ ನಿಪುಣೆ. ಉತ್ಪನ್ನಗಳಲ್ಲಿ ಆಕೆ ಇಟ್ಟುಕೊಳ್ಳುವ ಅಚ್ಚುಕಟ್ಟುತನ ಎಲ್ಲರೂ ಅನುಸರಿಸಬೇಕಾದಂಥದ್ದು” ಎನ್ನುತ್ತಿರುತ್ತಾರೆ ಡಾ. ಸರಿತಾ. ಕಾಯಿ ಹಲಸಿನ ಸೊಳೆಯ ಹುಡಿ, ಹಬೀ (ಹಲಸಿನ ಬೀಜದ) ಹುಡಿ ಇವರ ಇನ್ನೆರಡು ಉತ್ಪನ್ನಗಳು.
ಗಂಡ ಫಯಾಝ್ ಅವರಿಗೆ ಉದುಮ ಪೇಟೆಯಲ್ಲಿ ಅಂಗಡಿ ಇದೆ. ಹೀಗಾಗಿ ಸುಹ್ರಾ ಅವರಿಗೆ ಮಾರುಕಟ್ಟೆ ಸಲೀಸು. ಈ ವರೆಗೆ ಆರ್ಡರಿಗೆ ಅನುಸಾರವಷ್ಟೇ ಉತ್ಪಾದನೆ ಮಾಡುತ್ತಿದ್ದಾರೆ. ಅಗತ್ಯ ಇದ್ದಾಗ ಒಬ್ಬರು ಸಹಾಯಕಿಯನ್ನು ಕರೆಯುತ್ತಾರೆ.
“ಈಚೀಚೆಗೆ ಬೇರೆ ಅಂಗಡಿಯವರೂ ಪ್ರಾಡಕ್ಟ್ಸ್ ಕೇಳತೊಡಗಿದ್ದಾರೆ” ಎನ್ನುತ್ತಾರೆ. ಇವರ ಉತ್ಪನ್ನ ಶ್ರೇಣಿಯಲ್ಲಿ ಹಬೀ ಪುಟ್ಟು ಪುಡಿಯೂ ಇದೆ. ಇದಕ್ಕೆ ಹಲಸಿನ ಬೀಜದ ಹುಡಿ ಮತ್ತು ಅಕ್ಕಿ ಅರ್ಧರ್ಧ ಭಾಗ ಹಾಕುತ್ತಾರೆ. ತಮ್ಮ ಹಲಸಿನ ಕೆಲವೊಂದು ಉತ್ಪನ್ನಗಳಿಗಾಗಿ ಇವರು ಹಲಸಿನ ಸೊಳೆ ಮತ್ತು ಬೀಜದ ಹುಡಿ ಮಾಡಿ ಇಟ್ಟುಕೊಳ್ಳುತ್ತಾರೆ. ‘ಚಕ್ಕಪ್ಪೊಡಿ’ (ಕಾಯಿಸೊಳೆ ಹುಡಿ, ಕಾಯಿ ಹಲಸಿನ ಹುಡಿ)ಗೆ ಕಾಂಞಂಗಾಡಿನ ಕಡೆಯಿಂದ ಒಳ್ಳೆ ಬೇಡಿಕೆ ಇದೆಯಂತೆ.
ಸ್ಥಳೀಯ ಪಂಚಾಯತಿನ ವಿಶೇಷ ಕಾರ್ಯಕ್ರಮಕ್ಕೆ ಹಲಸಿನ ಅಡುಗೆ ಮಾಡಿ ಪೂರೈಸುವುದೂ ಇವರೇ. ಮೂರು ವರ್ಷಗಳಿಂದ ಸಿಗುತ್ತಿರುವ ಈ ಅಸೈನ್ಮೆಂಟ್ ಊರ ಜನರಿಗೆ ಇವರ ಹಲಸು ಉತ್ಪನ್ನಗಳ ಪರಿಚಯ ಮಾಡಿಕೊಟ್ಟಿದೆ.
“ಸರಿತಾ ಮ್ಯಾಮ್ ಕಲಿಸಿಕೊಡುವ ರೀತಿಯನ್ನು ಯಾರೂ ಮೆಚ್ಚಬೇಕು. ಉತ್ಪನ್ನ ನಿರೀಕ್ಷಿತ ಮಟ್ಟ ತಲುಪದೆ ಅವರು ಬಿಡುವವರಲ್ಲ. ಹೀಗಾಗಿ ನಮ್ಮ ಉದ್ದಿಮೆಯಲ್ಲಿ ಗುಣಮಟ್ಟ ಪಾಲನೆ ಸಾಧ್ಯವಾಗಿದೆ. ಅವರು ಹೇಳಿಕೊಟ್ಟದ್ದನ್ನೆಲ್ಲಾ ಅನುಸರಿಸಿಕೊಂಡು ಹೋದರಾಯಿತು” ಎನ್ನುತ್ತಾರೆ.
ಝೊರ್ರಾಸ್ ಫುಡ್ಸ್ - 90202 79110