ದಿನಕ್ಕೆ ನೂರು ಬಾಟ್ಲಿ ಮಾರಾಟವಾಗುತ್ತಿದೆ. ವಿತರಣೆಗಾರರು ಕೇಳಲು ಆರಂಭಿಸಿದ್ದ್ದಾರೆ.
- ಅಪ ಟೀಮ್
ಕಾಸರಗೋಡಿನ ಪಾರಕಟ್ಟ್ಟಾದ ಈ ದಂಪತಿಗಳ ಗೃಹೋದ್ಯಮ ಹೊಸದು. ಆರಂಭಿಸಿ ನಾಲ್ಕು ತಿಂಗಳು ಆಯಿತಷ್ಟೇ. ಇವರ ಮುಖ್ಯ ಉತ್ಪನ್ನ ಬೊಂಡ - ಎಳನೀರು - ಚಿಪ್ಸ್. ಸಿಪಿಸಿಆರ್‍ಐಯ ತರಬೇತಿ. ಎಳನೀರು ತಿರುಳಿನ ಚಿಪ್ಸ್ ಎಂದರೂ ಇದು ಸ್ಥಳೀಯವಾಗಿ ಬನ್ನಂಗಾಯಿ ಎಂದು ಕರೆಯುವ ಎಳೆ ತೆಂಗಿನಕಾಯಿಯದು.
ಗ್ರೇಸಿ - ಕೆ.ಜೆ. ಜೋಸೆಫ್ ಅವರ ಉದ್ದಿಮೆಯ ಹೆಸರು ‘ಬ್ಲೆಸ್ ಫಾರ್ಮ್ ಫ್ಲೇವ್’. ಉತ್ಪನ್ನಗಳ ವ್ಯಾಪಾರಿನಾಮ ‘ಫಾರ್ಮ್ ಫ್ಲೇವ್’. ಚಿಪ್ಸ್ ಮಾಡಲು ಬಳಸುವ ಬನ್ನಂಗಾಯಿಯ ನೀರನ್ನು ಇವರು ಸ್ಕ್ವಾಶ್ ಮಾಡುತ್ತಾರೆ.
ಈಚೆಗೆ ಸ್ಕಾಶ್‍ನಿಂದಲೇ ಲಘು ಪೇಯ ಮಾಡಲು ಆರಂಭಿಸಿದ್ದಾರೆ. ಇನ್ನೂರು ಮಿ. ಲೀಟರಿನ ಬಾಟ್ಲಿಗೆ 20 ರೂ. ಇವರಿನ್ನೂ ದೊಡ್ಡ ಮಟ್ಟದ ಮಾರ್ಕೆಟಿಂಗ್ ಆರಂಭಿಸಿಲ್ಲ. ವಸ್ತುಪ್ರದರ್ಶನಗಳಲ್ಲಿ ಭಾಗವಹಿಸುತ್ತಾರೆ.
ಇವರ ಚಿಪ್ಸಿನಲ್ಲಿ ಎರಡು ಪರಿಮಳದ್ದು ಇದೆ. ಪೆಪ್ಪರ್ ಮತ್ತು ಸ್ಪೈಸಿ. ಬೆಲೆ 35 ಗ್ರಾಮಿಗೆ 50 ರೂ., 150 ಗ್ರಾಮ್ ಪ್ಯಾಕೆಟಿಗೆ 150 ರೂ. ಇವು ಅಮೆಝಾನ್ ಮೂಲಕ ಮಾರಾಟವಾಗುತ್ತಿದೆಯಂತೆ. ಕುಟುಂಬಶ್ರೀ ಮೇಳಗಳಲ್ಲೂ ಪಾಲ್ಗೊಂಡು ಮಾರುತ್ತಾರೆ.
ನಾಲ್ಕು ಮಂದಿ ಸಿಬಂದಿ ಇದ್ದಾರೆ. ದಿನಕ್ಕೆ 8 ಕಿಲೋ ಚಿಪ್ಸ್ ತಯಾರಾಗುತ್ತದೆ. ಬಾಟ್ಲಿ ಜ್ಯೂಸಿಗೆ ಲಿಂಬೆ, ಶುಂಠಿ ಇತ್ಯಾದಿ ಸೇರಿಸುತ್ತಾರೆ. ಪ್ರಿಸರ್ವೇಟಿವ್ ಇಲ್ಲ. ರೈಲ್ವೇ ಇಲಾಖೆಯ ‘ಒಎಸ್ ಒಪಿ’ (ವನ್ ಸ್ಟೇಶನ್, ವನ್ ಪ್ರಾಡಕ್ಟ್) ಯೋಜನೆಯನ್ವಯ ಇವರಿಗೆ ಕಾಸರಗೋಡು ರೈಲ್ವೇ ಸ್ಟೇಶನಿನಲ್ಲಿ ಒಂದು ಮುಂಗಟ್ಟು ಸಿಕ್ಕಿದೆ. ಅಲ್ಲಿ ಚಿಪ್ಸ್ ಮತ್ತು ಜ್ಯೂಸ್ ಮಾರಾಟವಾಗುತ್ತಿದೆ.
“ದಿನಕ್ಕೆ 100 ಬಾಟ್ಲಿ ಜ್ಯೂಸ್ ಮಾರಾಟವಾಗುತ್ತಿದೆ. ನಾವು ಆದಷ್ಟು ಫ್ರೆಶ್ ಆಗಿಯೇ ತಯಾರಿಸಿ ಒದಗಿಸುತ್ತೇವೆ, ಪ್ರತಿದಿನ ನಮ್ಮ ಸಿಬಂದಿ ಇಲ್ಲಿಗೆ ಬಂದು ಆ ದಿನಕ್ಕೆ ಬೇಕಾದ ಜ್ಯೂಸಿನ ಬಾಟ್ಲಿ ಒಯ್ಯುತ್ತಾರೆ” ಎನ್ನುತ್ತಾರೆ ಗ್ರೇಸಿ.
“ಎರಡು ಉತ್ಪನ್ನಗಳಿಗೂ ಒಳ್ಳೆ ಪ್ರತಿಕ್ರಿಯೆ ಬರುತ್ತಿದೆ. ಈಚೆಗೆ ಕೆಲವು ವ್ಯಾಪಾರಸ್ಥರು ವಿತರಣೆಗಾಗಿ ಕೇಳಹತ್ತಿದ್ದಾರೆ” ಎನ್ನುತ್ತಾರೆ ಈ ದಂಪತಿ.
ಬ್ಲೆಸ್ ಫಾರ್ಮ್ ಫ್ಲೇವ್ ಸಂಪರ್ಕ
94466 74185