ADD

Back To Free Articles

February-2025

ಮುಜಂಟಿ ಕುಟುಂಬದ ಜತೆ ಜೇನುದಾತ ಹೂಗಿಡಗಳ ಕಟ್ಟಿಂಗ್ಸ್

ಇವರು ಗ್ರಾಹಕರಿಗೆ ಮುಜಂಟಿ ಜೇನು ಕುಟುಂಬದ ಜತೆ ಸದಾಕಾಲ ಪರಾಗ, ಮಧುರಸ ಒದಗಿಸುವ ಗಿಡಬಳ್ಳಿಗಳ ಪ್ಲಾಂಟಿಂಗ್ ಮೆಟೀರಿಯಲನ್ನೂ ಒದಗಿಸುತ್ತಾರೆ.

- ಟೀಮ್ ಅಪ

 
no image
 

ಕಾಸರಗೋಡು ಸಿಪಿಸಿಆರೈಯ ವಸ್ತು ಪ್ರದರ್ಶನದಲ್ಲಿ  ಜೇನು ಕೃಷಿಕ ಪುದ್ಯೋಡು ರಾಮಚಂದ್ರ ಕಾಣಸಿಕ್ಕರು. ಅವರ ಸ್ಟಾಲಿನಲ್ಲಿ ಮುಜಂಟಿ ಜೇನಿನ ಪೆಟ್ಟಿಗೆಗಳ ಜತೆ ಒಂದಷ್ಟು ಗಿಡಗಳ ಗೆಲ್ಲುಗಳನ್ನೂ ಪ್ಯಾಕ್ ಮಾಡಿ ಇಟ್ಟಿದ್ದರು.

ಇದೇನಿದು? ಎಂದು ಕೇಳಿದಾಗ ಸಿಕ್ಕಿದ ಉತ್ತರ ಕುತೂಹಲಕಾರಿ.

“ಮುಜಂಟಿ ಜೇನು ನೊಣಗಳು ಹೆಚ್ಚು ದೂರ ಹಾರಲಾರವು. ಶಾಸ್ತ್ರಜ್ಞರ ಪ್ರಕಾರ ಹೆಚ್ಚೆಂದರೆ 800 - 900 ಮೀಟರ್ ಸುತ್ತಳತೆಯಿಂದ ಇವು ಆಹಾರ ಸಂಗ್ರಹಿಸುತ್ತವೆ. ನಮ್ಮಲ್ಲಿಂದ ಈ ಜೇನು ಕುಟುಂಬ ಖರೀದಿಸಿ ಒಯ್ಯುವ ಗ್ರಾಹಕರ ಹಿತ್ತಿಲಲ್ಲಿ ಜೇನು ತಯಾರಿಗೆ ಮಧುರಸ ಸಿಗಬೇಕಲ್ಲಾ? ಅದಕ್ಕಾಗಿ ಜೇನುನೊಣಗಳ ಬೆಳವಣಿಗೆಗೆ ಸದಾ ಕಾಲ ಪರಾಗ, ಮಧುರಸ ಒದಗಿಸುವ ಕೆಲವು ಗಿಡಗಳ ಕಟ್ಟಿಂಗ್ಸ್ ಪ್ಯಾಕೇಜನ್ನೂ ಮಾರುತ್ತಿದ್ದೇವೆ”, ರಾಮಚಂದ್ರ ವಿವರಿಸತೊಡಗಿದರು.

“ಸಾಮಾನ್ಯವಾಗಿ ಇವುಗಳೆಲ್ಲಾ ಕಾಂಡದ ತುಂಡುಗಳಿಂದ ಚಿಗುರಿ ಗಿಡ ಆಗುವಂತಹವುಗಳು. ಬೇಲಿಯ ಪಕ್ಕದಲ್ಲಿ ನೆಟ್ಟರೆ ಚೆಂದದ ಹೂ ಬಿಟ್ಟು ಮನಸ್ಸಿಗೂ ಮುದ ಕೊಡುತ್ತವೆ. ಜೇನುನೊಣಗಳಿಗೂ ಆಹಾರ ಒದಗಿಸಿಕೊಡುತ್ತವೆ.

ಮಲಯಾಳಂನಲ್ಲಿ ‘ತಣಲ್ ಕಪ್ಪ’ ಎಂದು ಕರೆಯುವ ಮರಗೆಣಸು ತರಹದ ಗಿಡದಲ್ಲಿ ಗೆಡ್ಡೆಯೂ ಆಗುತ್ತದೆ, ಆದರೆ ಖಾದ್ಯಯೋಗ್ಯವಲ್ಲ.  ಸಾಮಾನ್ಯವಾಗಿ ಇದರಲ್ಲಿ ಜೂನ್ ತಿಂಗಳಿನಿಂದ ಜನವರಿಯ ವರೆಗೂ ನಿರಂತರವಾಗಿ ಹೂ ಆಗುತ್ತದೆ. ವಿಶೇಷವೆಂದರೆ ಹೂಗಳು ಕೆಳಮುಖವಾಗಿ ಇರುತ್ತದೆ. ಇದರಿಂದಾಗಿ ಮಳೆನೀರಿನಲ್ಲಿ ಪರಾಗ, ಮಧುರಸ ತೊಳೆದು ಹೋಗುವ ಸಮಸ್ಯೆಯಿಲ್ಲ. 

ಇನ್ನೊಂದು ಡಿಸೆಂಬರ್ ಹೂ ಎಂದು ಕರೆಯುವ ಗಿಡ. ಇದರಲ್ಲಿ ಡಿಸೆಂಬರಿನಿಂದ ಜನವರಿಯ  ವರೆಗೂ  ನಿರಂತರ  ಗೊಂಚಲು ಗೊಂಚಲಾಗಿ ಹೂ ಬಿಡುತ್ತದೆ. ಜೇನು ನೊಣಗಳನ್ನು ಆಕರ್ಷಿಸುತ್ತದೆ.

ಬೇಲಿ ಪಾರಿಜಾತ ಅಥವಾ ಕದಿರು ಪಾರಿಜಾತ ಹೂ ಉದ್ದನೆಯ ದಾರದಲ್ಲಿ ಪೋಣಿಸಿದಂತೆ ಇರುತ್ತದೆ. ಒಂದು ತಿಂಗಳ ವರೆಗೂ ಅರಳುತ್ತಾ ಇರುತ್ತದೆ. ಬಹಳ ಪರಿಮಳ.  ಜೇನು ನೊಣಗಳು ಇದರ ಮೇಲೆ ಮುಗಿಬಿದ್ದು ಮಧುರಸ ಸಂಗ್ರಹಿಸುತ್ತವೆ.

ಕಾಡು ಸೂರ್ಯಕಾಂತಿ ನೋಡಲು ಸೂರ್ಯ ಕಾಂತಿ ಗಿಡದಂತೆಯೇ ಇರುತ್ತದೆ. ಇದರಲ್ಲಿ ಹಳದಿ ಬಣ್ಣದ ಹೂ ಮೂಡುತ್ತಲೇ ಇರುತ್ತದೆ. ರೆಡ್ ಪೌಡರ್ ಪಫ್ ಹೂವನ್ನು ಊರಿನಲ್ಲಿ ಮೀಸೆ ಹೂವು ಎಂದೂ ಕರೆಯುತ್ತಾರೆ. ಇದು ದಿನಾಲೂ ಹಲವಾರು ಹೂಗಳನ್ನು ಅರಳಿಸುತ್ತದೆ; ತುಡುವೆ ಮತ್ತು ಮುಜಂಟಿ ಜೇನುನೊಣಗಳನ್ನು ಆಕರ್ಷಿಸುತ್ತದೆ.

ಬೆಟ್ಟದಾವರೆ ದಾಸವಾಳದಂತಹ ಹೂವು ಬಿಡುತ್ತದೆ. ಬೆಳಗ್ಗಿನ ಸಮಯದಲ್ಲಿ ಬಿಳಿ ಬಣ್ಣವಿದ್ದು ಸಂಜೆ ಕೆಂಪು ಬಣ್ಣಕ್ಕೆ ಬದಲಾಗುತ್ತದೆ. ಬಿಳಿಯಾಗಿಯೇ ಉಳಿಯುವ ಬೆಟ್ಟದಾವರೆಯೂ ಇದೆ.

ಜೇನುಗೂಡು ಒಯ್ಯುವ ಗ್ರಾಹಕರಿಗೆ ಮೇಲೆ ವಿವರಿಸಿದಂತಹ ಹತ್ತಿಪ್ಪತ್ತು ಗಿಡಗಳ ಕಟ್ಟಿಂಗುಗಳನ್ನೂ ಮಾರಾಟ ಮಾಡುತ್ತೇವೆ. ಇವು ಮಧುವನದಲ್ಲಿ ನೆಡಲು ಉತ್ತಮ!

ಹೂವು ಬಿಟ್ಟು ಜೇನುನೊಣಗಳನ್ನು ಆಕರ್ಷಿಸುವ ಆಂಟಿಗೊನೋನಿನಂತಹ ಕೆಲವು ಬಳ್ಳಿಗಳೂ ಇವೆ. ಅವುಗಳ ಬೀಜಗಳನ್ನೂ ಕೊಡುತ್ತೇವೆ. ಹಿಂದೆಲ್ಲ್ಲಾ ಇಂತಹ ಹೂವಿನ ಗಿಡಗಳನ್ನು ತಯಾರು ಮಾಡಿ ಮಾರಾಟ ಮಾಡುತ್ತಿದ್ದೆವು. ಈ ವಿಧಾನ ಸಾಗಾಣಿಕೆಗೆ ಸ್ವಲ್ಪ ಕಷ್ಟಕರ. ಹೀಗಾಗಿ ಈಗ ಗೆಲ್ಲುಗಳಿಂದ ಗಿಡ ಬರುವಂತಹ ಕಟ್ಟಿಂಗ್ಸ್ ಮಾರಾಟ ಮಾಡುತ್ತೇವೆ.

ಹಿಂದಿನ ರಾತ್ರಿ ಕಟ್ ಮಾಡಿ, ಟಿಶ್ಯೂ ಪೇಪರಿನಲ್ಲಿ ಸುತ್ತಿ ನೀರು ಸಿಂಪಡಿಸಿ ಪ್ಯಾಕ್ ಮಾಡುತ್ತೇವೆ. ಇದು ತಾಜಾ ಆಗಿ ಉಳಿಯುತ್ತವೆ. ಗ್ರಾಹಕರು ಇವನ್ನೊಯ್ದು ಕುಂಡ ಅಥವಾ ಜಮೀನಲ್ಲಿ ಬೆಳೆಯಬಹುದು”, ಮಾತು ಮುಗಿಸಿ ರಾಮಚಂದ್ರ ವಿವರಿಸಿದ ಕೆಲವು ಗಿಡಗಳ ಹೂಗಳನ್ನೂ ತೋರಿಸಿದರು.

ಪುದ್ಯೋಡು ರಾಮಚಂದ್ರ - 96451 16495