ADD

Back To Free Articles

March-2025

ಚೀನಾದಿಂದ ಕೇರಳಕ್ಕೆ ಕೀಟಾಹಾರಿ ಪ್ರವಾಹ

ಉದ್ಯಾನಗಳಲ್ಲಿ ನೆಡಲು, ನೆಟ್ಟು ಗಿಡಗಳು ಕೀಟ ಬೇಟೆ ಆಡುವುದನ್ನು ನೋಡಲು, ಚೀನಾದಿಂದ ಕೇರಳಕ್ಕೆ ಸಾವಿರಗಟ್ಟಲೆ ನಳನಳಿಸುವ ಕೀಟಭಕ್ಷಕ ಗಿಡಗಳು ಆಮದಾಗುತ್ತಿವೆ.

ಲೇ :  ಅಪ ಬಳಗ

 
no image
 

ಹೈಸ್ಕೂಲಿನ ಪಾಠದಲ್ಲಿ ‘ಕೀಟಾಹಾರಿ ಸಸ್ಯ’ಗಳ ಬಗ್ಗೆ ಓದಿದ್ದು ನೆನಪಿದೆಯಾ?

ಕೀಟಗಳನ್ನೇ ಭಕ್ಷಿಸುವ ನೆಪಂಥಿಸ್ (ಪಿಚರ್ ಪ್ಲಾಂಟ್), ಡ್ರೊಸೇರಾ ಮೊದಲಾದ ಗಿಡಗಳ ಚಟುವಟಿಕೆಯ ವಿವರಗಳು ಅಚ್ಚರಿ ಮೂಡಿಸುವಂಥದ್ದು.

ಈ ಮಾಂಸಾಹಾರಿ ಗಿಡಗಳ ಬಗ್ಗೆ ಈಚೆಗೆ ನೆನಪಾದದ್ದು ಎಲ್ಲಿ ಗೊತ್ತೇ? ಕೇರಳದ ಕಣ್ಣೂರಿನಲ್ಲಿ ನಡೆದ ಪುಷ್ಪ ಪ್ರದರ್ಶನದಲ್ಲಿ.

ಕಣ್ಣೂರಿನಲ್ಲಿ ನೆಪಂಥಿಸ್ ಗಿಡಗಳದ್ದೇ ಒಂದು ಪುಟ್ಟ ಪ್ರದರ್ಶನ ಕಂಡು ಆವಾಕ್ಕಾದೆ. ಅಷ್ಟೊಂದು ಗಿಡಗಳನ್ನು ಒಂದೆಡೆ ಕಂಡ ಖುಶಿ ಒಂದಾದರೆ, ಒಳಗೊಳಗೇ ಇದು ಪ್ಲಾಸ್ಟಿಕಿನವು ಇರಬಹುದೇ ಎಂಬ ಅನುಮಾನ.

ಹತ್ತಿರ ಹೋಗಿ ನೋಡಿದಾಗ ಅಚ್ಚರಿ ಹೆಚ್ಚಿತು. ಅಲ್ಲಿ ಈ ಗಿಡಗಳ ಬಗ್ಗೆ ಇಂಗ್ಲಿಷಿನಲ್ಲಿ ಸಂಕ್ಷಿಪ್ತ ವಿವರಣೆ ಇತ್ತು. “ಕೀಟಗಳನ್ನು ಹಿಡಿಯುವ ಕ್ರಮ: ದ್ರವದ ಪರಿಮಳಕ್ಕೆ ಆಕರ್ಷಿತವಾಗುವ ಕೀಟಗಳು ದ್ರವದೊಳಕ್ಕೆ ಬೀಳುತ್ತವೆ. ಬಿದ್ದಾಗ ಮುಚ್ಚಳ ಮುಚ್ಚುತ್ತದೆ” ಎಂದು ವಿವರಿಸಿದ್ದರು. ಈ ಗಿಡಗಳನ್ನು ಚೀನಾದಿಂದ ಆಮದು ಮಾಡಲಾಗಿದೆ ಎಂದೂ ಬರೆದಿತ್ತು!

ಹೂಜಿಯಾಕಾರದ ಪರಿವರ್ತಿತ ಎಲೆಗಳೇ ಈ ಗಿಡದ ಕೀಟ ಹಿಡಿಯುವ ರಚನೆಗಳು. ಅದಕ್ಕೇ ಹೂಜಿ ಗಿಡ ಎಂಬ ಹೆಸರು. ಗಿಡಗಳು ಎಷ್ಟು ಚೆನ್ನಾಗಿದ್ದುವೆಂದರೆ ಎಲೆಗಳೊಂದೂ ಬಾಡಿರಲಿಲ್ಲ, ಜಖಂಗೊಂಡಿರಲಿಲ್ಲ. ದೊಡ್ಡ ದೊಡ್ಡ ಗಿಡಗಳು. ಪ್ರತಿ ಗಿಡದಲ್ಲೂ ಹಲವಾರು ಹೂಜಿಗಳು!

ಈ ಗಿಡಗಳನ್ನು ಆಮದು ಮಾಡಿಕೊಂಡ ನರ್ಸರಿ ಕಣ್ಣೂರಿನ ತಾಝೆ ಚೊವ್ವದಲ್ಲಿರುವ ಎಬಿ ಗ್ರೀನ್ ಇನ್ ಡೋರ್ ಪ್ಲಾಂಟ್ಸ್ ಆಂಡ್ ಪಾಟ್ಸ್. ಅದರ ಮಾಲಿಕರಾದ ಎಂ. ರಮೀಝ್ ಅವರ ಬಳಿ ಮಾತಾಡಿದೆವು.

 ಈ ನರ್ಸರಿ ನೆಪಂಥಿಸ್ ಗಿಡಗಳನ್ನು ಆಮದು ಮಾಡತೊಡಗಿ ಎರಡು ವರ್ಷವಾದುವಂತೆ. “ನಮ್ಮ ದೇಶದಲ್ಲೂ ನೆಪಂಥಿಸ್ ಗಿಡಗಳು ಮೇಘಾಲಯದಲ್ಲಿ ಇವೆ. ಆದರೆ ಅಲ್ಲಿಂದ ಈ ಥರ ಕಳಿಸಿಕೊಡುವ ವ್ಯವಸ್ಥೆ ಇದ್ದಂತಿಲ್ಲ. ಅದಕ್ಕೂ ಮುಖ್ಯವಾಗಿ ಇಷ್ಟು ಸೊಗಸಾಗಿ ಬೆಳೆದು ನಿಂತ ದೊಡ್ಡ ಗಿಡಗಳು ಇಲ್ಲಿಲ್ಲ. ಹೀಗಾಗಿ ನಾವಿದನ್ನು ಚೀನಾದಿಂದಲೇ ತರಿಸುತ್ತಿದ್ದೇವೆ. ಅವರು ಗಿಡಗಳಿಗೆ ಒಂದಿಷ್ಟೂ ಹಾನಿ ಆಗದಂತೆ ಪ್ಯಾಕ್ ಮಾಡಿ ಕಳಿಸುತ್ತಾರೆ” ಎನ್ನುತ್ತಾರೆ ರಮೀಝ್.

ರಮೀಝ್ ಅವರ ಪ್ರಕಾರ ಪ್ರಕೃತಿಯಲ್ಲಿರುವ ಹಲವು ಕೀಟಾಹಾರಿ ಗಿಡಗಳ - ಡ್ರೊಸೇರಾ, ಯುಟ್ರಿಕ್ಯುಲೇರಿಯಾ, ವೀನಸ್ ಫ್ಲೈ ಟ್ರ್ಯಾಪ್  ಇತ್ಯಾದಿಗಳು - ಪೈಕಿ, ಇಲ್ಲಿ, ನಮ್ಮ ವಾತಾವರಣಕ್ಕೆ ಚೆನ್ನಾಗಿ ಹೊಂದಿಕೊಳ್ಳುವುದು ಈ ಹೂಜಿ ಗಿಡ ಮಾತ್ರ. ಈ ಗಿಡದ ಕೀಟ ಬೇಟೆ ನಡೆಯುವುದು ರಾತ್ರಿ ಕಾಲವಂತೆ.

“ಇದನ್ನು ಅರೆ ನೆರಳಿರುವಲ್ಲಿ ನೆಟ್ಟು ನಿಯಮಿತವಾಗಿ ನೀರು ಕೊಡುತ್ತಿರಬೇಕು. ನಾವು ಕೊಡುವ ಒಂದು ಗಿಡದಲ್ಲಿ ನಾಲ್ಕಾರು ಪಿಳ್ಳೆ (ಎಗೆ) ಗಳಿರುತ್ತವೆ. ಅವನ್ನು ಎಚ್ಚರದಿಂದ ಬೇರ್ಪಡಿಸಿ ನೆಟ್ಟು ಗಿಡ ಸಂಖ್ಯೆ ಹೆಚ್ಚಿಸಬಹುದು. ನಮ್ಮಿಂದ ಗಿಡ ಖರೀದಿಸುವ ಹಲವು ನರ್ಸರಿಗಳು ಈ ರೀತಿಯಿಂದ ಹೆಚ್ಚು ಗಿಡ ಮಾಡಿ ಮಾರುತ್ತಿವೆ. ನಾವು ಗಿಡವನ್ನು ತಲಾ 800 ರೂ.ಗಳಿಗೆ ಮಾರಿದರೆ, ಅವರು ಚಿಕ್ಕ ಗಿಡ ತಯಾರಿಸಿ 400 ರೂ.ಗಳಂತೆ ಮಾರುತ್ತಿರುತ್ತಾರೆ”, ರಮೀಝ್ ಹೇಳುತ್ತಾರೆ.

ಇವರದೇ ಕೊಚ್ಚಿಯಲ್ಲಿ ಮಳಿಗೆ ಇದೆಯಂತೆ. “ಪ್ರತಿ ತಿಂಗಳೂ ನಾವು ಆಮದು ಮಾಡುವ ಗಿಡಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೆಪಂಥಿಸ್ ಇರುತ್ತದೆ. ತಂತಮ್ಮ ಮನೆಯ ಉದ್ಯಾನಗಳಲ್ಲಿ - ಈ ಗಿಡ ಒಂದು ಕೌತುಕ ತಾನೇ - ಇದನ್ನು ನೆಟ್ಟು ಬೆಳೆಸಲು ಆಸಕ್ತಿ ಇರುವ ತುಂಬ ಗಿರಾಕಿಗಳಿದ್ದಾರೆ” ಎನ್ನುತ್ತಾರೆ ಇವರು.  ಇವರು ಹೇಳುವ ಪ್ರಕಾರ, ತಿಂಗಳಿಗೆ ಎರಡು ಕನ್‍ಸೈನ್ ಮೆಂಟುಗಳು ಬರುತ್ತಿದ್ದು, ಒಂದೊಂದರಲ್ಲೂ ಸಾವಿರದಷ್ಟು ನೆಪಂಥಿಸ್ ಗಿಡಗಳಿರುತ್ತವೆ.

ಶೈಕ್ಷಣಿಕ ಉದ್ದೇಶಕ್ಕಾಗಿ ಉದ್ಯಾನವನ ಇರುವ ಶಾಲೆಗಳೂ ಇದನ್ನು ಖರೀದಿಸುತ್ತವಂತೆ. ಆದರೂ ಮನೆ ಬಳಿ ನೆಡುವ ಗ್ರಾಹಕ ವರ್ಗವೇ ದೊಡ್ಡದಂತೆ. “ಕೊಡಗು ಮತ್ತು ಆಂಧ್ರಪ್ರದೇಶದಲ್ಲಿ ನಮ್ಮ ದೊಡ್ಡದೊಂದು ಗಿರಾಕಿ ವರ್ಗವಿದೆ. ಅಲ್ಲಿಗೆ ಪ್ರತಿ ಸಲ ಕಳಿಸುತ್ತಿರುತ್ತೇವೆ. ಆಮದಾಗಿ ದಿನಗಳೊಳಗೇನೇ ಈ ಗಿಡಗಳು ಖಾಲಿಯಾಗುತ್ತವೆ” ಎನ್ನುತ್ತಾರೆ. ಕೊರಿಯರ್ ಮೂಲಕ ಕಳಿಸುವ ವ್ಯವಸ್ಥೆಯೂ ಇದೆಯಂತೆ.

ರಮೀಝ್ ಅವರ ಸಂಪರ್ಕ  70346 66165