ಬ್ಲಾಂಚ್ ಮಾಡಿ ಫ್ರಿಜ್ಜಿನ ಫ್ರೀಝರಿನಲ್ಲಿಟ್ಟ ಗುಜ್ಜೆ, ಕಣಿಲೆ, ಹಲಸಿನ ಕಾಯಿಸೊಳೆ, ಕಣಿಲೆಗಳು ಅಕಾಲದಲ್ಲೂ ‘ತಾಜಾ’ ರುಚಿಯನ್ನೇ ಕೊಡುತ್ತವೆ.
- ಶೈಲಜಾ ಪಡ್ರೆ
ನವೆಂಬರ್ ಎರಡನೆ ವಾರದಲ್ಲಿ ದೀಗುಜ್ಜೆ (ದೀವಿ ಹಲಸು, ಬ್ರೆಡ್ ಫ್ರುಟ್) ಕಾಯಿಹುಳಿ - ಮೇಲಾರ ಸವಿದೆವು. ತಿಂದವರಾರೂ ಅದು ತಾಜಾ ಅಲ್ಲ ಎನ್ನುವಂತಿರಲಿಲ್ಲ. ಪರಿಮಳ ಸ್ವಲ್ಪ ಕಡಿಮೆ ಏನೋ. ಬಾಕಿ ಎಲ್ಲಾ ಗುಣಗಳಲ್ಲೂ ತಾಜಾದಂತೆಯೇ ಇತ್ತು. ಆದರಿದು ಪ್ರೋಝನ್ ದೀಗುಜ್ಜೆ.
ಕಳೆದ ಬೇಸಗೆಯಲ್ಲಿ ಎಳೆ ಹಲಸನ್ನು (tender jack ಗುಜ್ಜೆ) ಫ್ರೀಜರಿನಲ್ಲಿ ಇರಿಸಿ ಮಳೆಗಾಲ ಕೊನೆ ವರೆಗೂ ಬಳಸಿದ್ದೆವು. ಅದಕ್ಕೂ ಫುಲ್ ಮಾರ್ಕು.
ಕಳೆದ ವರ್ಷದ ಕತೆ. ತೋಟದಲ್ಲಿ ಅಡ್ಡಾಡುತ್ತಿರುವಾಗ ಸ್ವಲ್ಪ ಗುಜ್ಜೆ ಕಾಪಿಡಬೇಕೆಂದು ಯೋಚಿಸುತ್ತಿದ್ದೆ. ತರಕಾರಿಗಳನ್ನು ಬ್ಲಾಂಚ್ ಮಾಡಿ ಫ್ರೀಜರಿನಲ್ಲಿಟ್ಟರೆ ತಾಜಾತನ ಉಳಿಸಿಕೊಳ್ಳುವುದೆಂದು ಓದಿದ್ದೆ. ಗುಜ್ಜೆಯನ್ನೂ ಇದೇ ರೀತಿ ಸಂಗ್ರಹಿಸಿಡೋಣ ಎನಿಸಿತು.
ಬ್ಲಾಂಚಿಂಗ್ ಎಂದರೇನು? ತರಕಾರಿಯ ತುಂಡುಗಳನ್ನು ಕುದಿಯುವ ನೀರಿನಲ್ಲಿ ಒಂದೆರಡು ನಿಮಿಷ ಇಡಬೇಕು. ಗುಜ್ಜೆ ಕತ್ತರಿಸಿದ ಕೂಡಲೇ ಸ್ವಲ್ಪ ಮಜ್ಜಿಗೆ ಸೇರಿಸಿದ ನೀರಿನಲ್ಲಿ (ಈ ಆರೈಕೆ ಎಳೆ ಹಲಸಿಗೆ ಮಾತ್ರ) ಹಾಕಬೇಕು. ಇದು ಗುಜ್ಜೆಯ ಬಣ್ಣ ಬದಲಾಗುವುದನ್ನು ತಡೆಯುತ್ತದೆ. ಐದು ನಿಮಿಷದ ನಂತರ ತುಂಡುಗಳನ್ನು ತೆಗೆದಿಡಿ. ಬ್ಲಾಂಚಿಂಗಿಗೆ ನೀರು ಕುದಿಯಲಿಡುವಾಗ ಎರಡು ಚಮಚ ಉಪ್ಪು ಹಾಕಿದರೆ ಉತ್ತಮ.
ಕುದಿ ಬರಲು ಪ್ರಾರಂಭವಾದಾಗ ಗುಜ್ಜೆಯ ತುಂಡು ಹಾಕಿ ಒಂದೆರಡು ನಿಮಿಷ ಕಾಯಿರಿ. ನಂತರ ತೆಗೆದು ತಣಿಯಲು ತಣ್ಣೀರಿನಲ್ಲಿ ಹಾಕಿ ಸ್ವಲ್ಪ ಹೊತ್ತಲ್ಲಿ ತೆಗೆಯಿರಿ. ಕೂಡಲೇ ತಣ್ಣಗೆ ಮಾಡುವುದು ಮುಖ್ಯ. ಅನಂತರ ಫ್ಯಾನಿನ ಕೆಳಗೆ ಬಟ್ಟೆಯಲ್ಲಿ ಹರವಿ ಒಣಗಿಸಬೇಕು. ತುಂಡುಗಳನ್ನು ಜಿಪ್‍ಲಾಕ್ ಕವರುಗಳಲ್ಲಿ ಹಾಕಿಡಬಹುದು. ಒಮ್ಮೆ ಉಪಯೋಗಿಸಲು ಬೇಕಾದಷ್ಟು ಗುಜ್ಜೆ ಮಾತ್ರ ಒಂದೊಂದು ಕವರು / ಡಬ್ಬಗಳಲ್ಲಿ ಹಾಕಿ ಇಟ್ಟರೆ ಕೆಲಸ ಸುಲಭ.
ಇದೇ ರೀತಿಯಲ್ಲಿ ನಾವು ಕಣಿಲೆ (ಎಳೆ ಬಿದಿರು), ಹಲಸಿನ ಕಾಯಿಸೊಳೆಗಳನ್ನೂ ಸಂರಕ್ಷಿಸಿದ್ದೇವೆ. ಆರು ತಿಂಗಳಲ್ಲಿ ಬಳಸಿದ್ದೇವೆ. ಶುಚಿತ್ವ ಕಾಪಾಡಿ ಎಚ್ಚರದಿಂದ ಕಾಪಾಡಿದರೆ ಒಂದು ವರ್ಷವಾದರೂ ಹಾಳಾಗದು ಅನಿಸುತ್ತದೆ.
ದೀಪಾವಳಿಗೆ ಹಲಸಿನ ದೋಸೆ
“ಬ್ಲಾಂಚ್ ಮಾಡಿ ಫ್ರೀಝರಿನಲ್ಲಿಟ್ಟ ಹಲಸಿನ ಕಾಯಿಸೊಳೆಯ ದೋಸೆ ಮಾಡಿದ್ದೆವು ಈ ದೀಪಾವಳಿಗೆ. ಯಾವಾಗಲೂ ಮೂರು ತಿನ್ನೋವ್ನು, ಅಕಾಲದ್ದಲ್ವಾ ಅಂತ ನಾಲ್ಕು ದೋಸೆ ತಿಂದುಬಿಟ್ಟೆ “ ಎನ್ನುತ್ತಾರೆ ಕೇಶವಚಂದ್ರ.
ಸರ್ವೆ ಬಳಿಯ ಕೃಷಿಕ ಪೆರುಮುಂಡ ಕೇಶವಚಂದ್ರ ಕಳೆದ ಸಾಲಿನಲ್ಲಿ ಹೊಸದಾಗಿ ಫ್ರೀಝರ್ ಖರೀದಿಸಿದ್ದರು. ಅದು ಸದುಪಯೋಗ ಆದ ಖುಷಿಯಲ್ಲಿದ್ದರು.
“ಪರಿಮಳ ಸ್ವಲ್ಪ ಕಡಿಮೆ ಇರಬಹುದು. ಆದರೇನು, ಆಫ್ ಸೀಸನ್ ಸಿಕ್ಕುವಾಗ ಈ ಕೊರತೆ ಗೌಣ. ರುಚಿಗೇನೂ ತೊಂದರೆ ಇಲ್ಲ” ಎನ್ನುತ್ತಾರೆ.
ಕಾಟಿಪಳ್ಳ ಶ್ಯಾಮಪ್ರಸಾದ್ ಕೂಡಾ ಇದೇ ರೀತಿ ಬ್ಲಾಂಚ್ ಮಾಡಿ ಹಲಸಿನ ಸೊಳೆ ಫ್ರೀಝರಿನಲ್ಲಿಟ್ಟವರು. ದೀಪಾವಳಿಗೆ ದೋಸೆ ಮಾಡಿ ತಿಂದು ‘ಸೂಪರ್’ ಎನ್ನುತ್ತಿದ್ದಾರೆ.