ಈ ಬಾರಿ ಸಿಗುವ ಮೊದಲ ಕೆಲವು ಗುಜ್ಜೆಗಳು ದೋಸೆ - ರೊಟ್ಟಿ - ಇಡ್ಲಿ - ಶ್ಯಾವಿಗೆ - ಪರಾಟಾಗಳಾಗಿ ಮನೆಮಂದಿಯ ಹೊಟ್ಟೆ ಸೇರಲಿ.
- ಶ್ರೀ
ನಮ್ಮ ಕರಾವಳಿಯ ಮಂದಿಗೆ (ಬೆಳೆದ ಹಣ್ಣಾಗದ ಹಲಸಿನ) ಕಾಯಿಸೊಳೆ ದೋಸೆ ಅಚ್ಚುಮೆಚ್ಚು. ಅದೆಷ್ಟೋ ಕೃಷಿಕುಟುಂಬಗಳಲ್ಲಿ ಇನಿತೂ ಅಕ್ಕಿ ಹಾಕದೆ ದೋಸೆ ಮಾಡಬಲ್ಲ ಹಲಸಿನ ಕಾಯಿ ಕೊಡುವ ‘ದೋಸೆ ಮರ’ ಇದೆ.
ಆದರೆ ಗುಜ್ಜೆ(ಎಳೆ ಹಲಸು)ಯನ್ನು ತರಕಾರಿಯಾಗಿ ಬಳಸಿದ್ದು ಬಿಟ್ಟರೆ ದೋಸೆ ಮಾಡುವ ಪರಿಪಾಠ ಇಲ್ಲ. ಕಳೆದ ತಿಂಗಳು ಒಡಿಸ್ಸಾದ ‘ಪ್ರೇರಣಾ ಶ್ರೋತ್’ ಗೃಹ ಉದ್ದಿಮೆಯ ಪುಷ್ಪಲತಾ ಪಂಡಾ ಅವರಿಂದ ಈ ವಿದ್ಯೆ ತಿಳಿದು ಆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ್ದೆ.
ಈ ಲೇಖನ ತಯಾರು ಮಾಡುವುದರೊಳಗೆ ಕರಾವಳಿಯ ಎಂಟು ಕುಟುಂಬಗಳು ಗುಜ್ಜೆ ದೋಸೆ ಮಾಡಿ ಮೆಚ್ಚಿಕೊಂಡಿವೆ. ಉಪ್ಪಿನಂಗಡಿ ಬಳಿಯ ಹತ್ತೊಕ್ಲಿನ ಶೀಲಾ ಉಮೇಶ್ ಗುಜ್ಜೆ ಪರಾಟ ಮಾಡಿ ಅದು ಆಲೂ ಪರಾಟಕ್ಕಿಂತ ಕಡಿಮೆಯಿಲ್ಲ ಎಂದಿದ್ದಾರೆ. ಈ ಸಂಚಿಕೆಯ 59ನೇ ಪುಟದಲ್ಲಿ ಗುಜ್ಜೆ ದೋಸೆ ಮತ್ತು ಪರಾಟದ ಪಾಕ ವಿವರಗಳಿವೆ. ಇಡ್ಲಿಯನ್ನೂ ಮಾಡಬಹುದು.
ದಿವ್ಯ ಪ್ರವೀಣ್ ಮುಂಡೋಳಿಮೂಲೆ ದೋಸೆ ಅಲ್ಲದೆ ರೊಟ್ಟಿಯನ್ನೂ ಮಾಡಿದ್ದಾರೆ. “ಎರಡಕ್ಕೂ ಅಕ್ಕಿ ಮತ್ತು ಗುಜ್ಜೆ ಸಮಪ್ರಮಾಣದಲ್ಲಿ ಹಾಕಿದ್ದೆ. ಹಿಟ್ಟನ್ನು ಸ್ವಲ್ಪ ಬೇಯಿಸಿ ರೊಟ್ಟಿ ಮಾಡಿದೆ. ಅಕ್ಕಿ ರೊಟ್ಟಿಯಂತೆ ಇದಕ್ಕೂ ಒಂದು ಫ್ಲೇವರ್ ಬಂದಿದ್ದು ತಿನ್ನಲು ಹಿತ ಎನಿಸಿತು” ಎನ್ನುತ್ತಾರೆ ದಿವ್ಯ. “ದೋಸೆಯನ್ನು ಒಳ್ಳೆ ಗರಿಗರಿಯಾಗಿ ಮಾಡಬರುತ್ತದೆ. ಎಲ್ಲರಿಗೂ ಸ್ವೀಕಾರಾರ್ಹ ರುಚಿ. ರೊಟ್ಟಿ ಹಿಟ್ಟಿನಿಂದ ಶ್ಯಾವಿಗೆಯೂ ಮಾಡಬಹುದು ಎನಿಸುತ್ತದೆ. ನೆಗೆಟಿವ್ ಹೇಳುವಂಥದ್ದೇನೂ ಕಾಣಲಿಲ್ಲ” ಎನ್ನುತ್ತಾರೆ ದಿವ್ಯ.
ಗುಜ್ಜೆಯಲ್ಲಿ ಕ್ಯಾಲೊರಿ ಕಡಿಮೆ. ಕಾರ್ಬೋಹೈಡ್ರೇಟ್ ಬಳಕೆ ಕುಗ್ಗಿಸಲು ಈ ದೋಸೆ - ರೊಟ್ಟಿಗಳು ಸಹಕಾರಿ. ಅಕ್ಕಿಯ ಬದಲು ಸಿರಿಧಾನ್ಯ ಸೇರಿಸಿದರೆ ಮಧುಮೇಹಿಗಳಿಗೂ ಉತ್ತಮ.
ಅಪ್ ಬ್ರಾಕೆಟ್ ರೆಸ್ಟೋರೆಂಟ್, ಹೋಮ್ ಸ್ಟೇ, ರೆಸಾರ್ಟ್‍ಗಳಲ್ಲೂ ಗುಜ್ಜೆಯ ದೋಸೆ - ರೊಟ್ಟಿ - ಇಡ್ಲಿಗಳನ್ನು ತಮ್ಮ ಮೆನುವಿನಲ್ಲಿ ಸೇರಿಸಿಕೊಳ್ಳಬಹುದು.
ಇದೇ ಸಂಚಿಕೆಯ 27ನೇ ಪುಟದಲ್ಲಿ ದೇಶದಲ್ಲೇ ಮೊದಲ ಬಾರಿ ಗುಜ್ಜೆ ದೋಸೆ - ಇಡ್ಲಿಗಳ ಸಿದ್ಧ ಹಿಟ್ಟು ತಯಾರಿಸಿ ಮಾರುಕಟ್ಟೆ ಮಾಡಿ ಯಶಸ್ಸು ಪಡೆದ ಮೇಲೆ ತಿಳಿಸಿದ ಪುಷ್ಪಲತಾ ಪಂಡಾ ಅವರ ಯಶೋಗಾಥೆಯನ್ನೂ ಓದಿ.
ಇನ್ನೇನು ಹಲಸಿನ ಸೀಸನ್ ಹತ್ತಿರ ಬರುತ್ತಿದೆ. ಈ ಬಾರಿ ಸಿಗುವ ಮೊದಲ ಕೆಲವು ಗುಜ್ಜೆಗಳು ದೋಸೆ - ರೊಟ್ಟಿ - ಇಡ್ಲಿ - ಶ್ಯಾವಿಗೆ - ಪರಾಟ ಗಳಾಗಿ ಮನೆಮಂದಿಯ ಹೊಟ್ಟೆ ಸೇರಲಿ.