ವಿದ್ಯಾರ್ಥಿ ಜೀವನದಲ್ಲೇ ಇವರಿಗೆ ಕೃಷಿಪ್ರೀತಿ ಹುಟ್ಟಿದರೆ ಅದು ಭಾರೀ ದೊಡ್ಡ ಕೊಡುಗೆ ತಾನೇ?
ಲೇ : ಶ್ರೀ
ಕೇರಳದ ಇಬ್ಬರು ಹೈಸ್ಕೂಲ್ ವಿದ್ಯಾರ್ಥಿನಿಯರು ‘ಅರ್ನ್ ವ್ಹೈಲ್ ಯು ಲರ್ನ್’ - ಅಂದರೆ, ಓದುತ್ತಿರುವಾಗಲೇ ಸಂಪಾದನೆ ಮಾಡಿ ಸುದ್ದಿ ಮಾಡಿದ್ದಾರೆ. ಆಲೆಪ್ಪಿ ಜಿಲ್ಲೆಯ ಲಕ್ಷ್ಮಿ ಮತ್ತು ಗೌರಿ ನಂದಾ ಈ ಸಾಧಕಿಯರು.
ಇಬ್ಬರೂ ಅಕ್ಕತಂಗಿಯರ ಮಕ್ಕಳು. ವಯಸ್ಸಿನ ವ್ಯತ್ಯಾಸ ಆರೇ ತಿಂಗಳು. ಇಬ್ಬರೂ ಎಂಟನೆಯ ಕ್ಲಾಸು. ಇವರು ಹಣ ಸಂಪಾದಿಸಿದ್ದು ಕೃಷಿಯಿಂದ ಎನ್ನುವುದು ವಿಶೇಷ!
ಪಂಚಾಯತ್ ಕಚೇರಿಯ ಆದೇಶದ ಮೇರೆಗೆ ಇವರು ಫೋಟ್ರೇಗಳಲ್ಲಿ 20,000 ತರಕಾರಿ ಗಿಡ ತಯಾರಿಸಿಕೊಟ್ಟಿದ್ದಾರೆ. ಇದರಿಂದ ಸಿಕ್ಕಿದ ಮೊತ್ತ 40,000 ರೂ. ಆದೇಶ ಬಂದರೆ ಇನ್ನಷ್ಟು ಗಿಡ ಮಾಡಿ ಕೊಡುವ ಹುಮ್ಮಸ್ಸಿನಲ್ಲಿ ಇದ್ದಾರೆ.
ಗಿಡ ತಯಾರಿಯ ಮುಖ್ಯ ಕೆಲಸ - ಫೋಟ್ರೇಗಳಿಗೆ ಮಿಶ್ರಣ ತುಂಬುವುದು, ಬಿತ್ತುವುದು ಇತ್ಯಾದಿ ಇವರು ನಡೆಸಿದ್ದು ರಜಾದಿನ - ಭಾನುವಾರದಂದು. ಮೂರು ವಾರಗಳ ನಂತರ ಪಂಚಾಯತಿಗೆ ಗಿಡ ಕೊಟ್ಟಿದ್ದಾರೆ.
ಫೋಟ್ರೇ ಗಿಡಗಳಿಗೆ ಬಹು ಚಿಕ್ಕ ಪ್ರಮಾಣದ ನೀರಾವರಿ ಸಾಕು. ಗೌರಿ - ಲಕ್ಷ್ಮಿಯರಿಗೆ ಶಾಲೆ ಇದ್ದಾಗ ಈ ಕೆಲಸ ನಿರ್ವಹಿಸಿದ್ದು ಅವರ ಅಕ್ಕ ಸಿ.ಎ. ಓದುತ್ತಿರುವ ಗೌರಿ ಕೃಷ್ಣ.
“ಖಚಿತ ಆದೇಶ ಕೊಟ್ಟರೆ ಇನ್ನೂ ಗಿಡ ಮಾಡಿಕೊಡಲು ಸಿದ್ಧ. ಆದರೆ ನಮಗೆ ಮಿನಿಮಮ್ ಆರ್ಡರ್ 10,000 ಗಿಡ. ಆದೇಶ ಕೊಟ್ಟರೆ ತಲಾ ಎರಡು ರೂಪಾಯಿಯ ದರದಲ್ಲಿ ಮಾಡಿ ಕೊಡಬಲ್ಲೆವು” ಎನ್ನುತ್ತಾಳೆ ಗೌರಿ ನಂದಾ. ಫೋಟ್ರೇ ಗಿಡ ತಯಾರು ಮಾಡುವ ವಿಧಾನ ಇಬ್ಬರಿಗೂ ಚೆನ್ನಾಗಿ ಗೊತ್ತಿದೆ.
ಈ ಮಕ್ಕಳು ಅವರ ಸೋದರಮಾವ ನಿಷಾದ್ ರಾಜಶೇಖರನ್ ಅವರ ಗರಡಿಯಲ್ಲಿ ಪಳಗಿದವರು. ನಿಷಾದ್ ಪೂರ್ಣಾವಧಿ ತರಕಾರಿ ಕೃಷಿಕರು. ಪಾಲಕ್ಕಾಡ್ ಜಿಲ್ಲೆಯ ಕಂಞಕುಳಿಯಲ್ಲಿ ಐದೆಕ್ರೆಯಲ್ಲಿ ಐವತ್ತು ಥರದ ತರಕಾರಿ ಬೆಳೆಸುತ್ತಾರೆ. ಇವರದು ‘ಸೇಫ್ ಟು ಈಟ್’ ಉತ್ಪನ್ನ. ಕೇರಳದ ಈ ಭಾಗದಲ್ಲಿ ಪ್ರಪ್ರಥಮವಾಗಿ ‘ಮಾರಾರಿ ಫ್ರೆಶ್’ ಎಂಬ ತಾಜಾ ತರಕಾರಿಗಳ ಆನ್‍ಲೈನ್ ಮಾರ್ಕೆಟಿಂಗ್ ಆರಂಭಿಸಿ ಗೆದ್ದವರು. ತರಕಾರಿ ಕೃಷಿಯಲ್ಲಿ ರಾಜ್ಯ ಪ್ರಶಸ್ತಿ ವಿಜೇತ.
ಕೇರಳದ ತರಕಾರಿ ಕೃಷಿಕರೀಗ ನೇರ ಬಿತ್ತನೆ ಮಾಡುವುದು ಬಹು ಕಮ್ಮಿ. ಫೋಟ್ರೇ ಗಿಡಗಳಲ್ಲಿ ತುಂಬ ಪ್ರಯೋಜನವಿದೆ. ಹಾಗಾಗಿ ಅವನ್ನೇ ಕೊಳ್ಳುತ್ತಾರೆ. ಪಂಚಾಯತಿನಿಂದಲೂ ಹತ್ತಾರು ಸ್ಕೀಮುಗಳಡಿ ತರಕಾರಿ ಗಿಡಗಳನ್ನು ಮಿತ ಬೆಲೆಗೆ ಪೂರೈಸುತ್ತಿರುತ್ತಾರೆ. ಮಾವನ ಜತೆ ಸೇರಿ ಫೋಟ್ರೇ ಗಿಡ ತಯಾರಿಯ ಮರ್ಮಗಳನ್ನು ಈ ಇಬ್ಬರೂ ಕಲಿತಿದ್ದಾರೆ.
ಪಂಚಾಯತಿನಿಂದ ನಿಷಾದ್ ಅವರಿಗೆ 20,000 ಗಿಡಗಳಿಗೆ ಆದೇಶ ಬಂದಿತ್ತು. ಕೆಲಸಗಳ ಒತ್ತಡದಿಂದಾಗಿ ಇವರು ‘ಸಾಧ್ಯವಾಗದು’ ಎಂದು ಕೈಬಿಡುವ ಯೋಚನೆಯಲ್ಲಿದ್ದರು. ಈ ವಿಚಾರ ತಿಳಿದ ವಿದ್ಯಾರ್ಥಿನಿಯರು, “ಆಗೋದಿಲ್ಲ ಎನ್ನಬೇಡಿ. ನಾವು ಮಾಡಿ ಕೊಡುತ್ತೇವೆ” ಎಂದು ಮುಂದೆ ಬಂದರಂತೆ. ಅದರಂತೆ ಗಿಡ ತಯಾರು ಮಾಡಿಯೂ ಕೊಟ್ಟರು.
“ಕೇರಳದಲ್ಲಿ ಪಂಚಾಯತು ಯೋಜನೆಗಳಿಗೇ ವರ್ಷಕ್ಕೆ ಒಂದು ಕೋಟಿ ಗಿಡ ಬೇಕು. ಚಳಿಗಾಲದ ತರಕಾರಿ ಇತ್ಯಾದಿ ಮುಖ್ಯ ಆರೇಳು ತರಕಾರಿ ಗಿಡ ತಯಾರಿಸಲು ಉತ್ಪಾದನಾ ವೆಚ್ಚ 70 ಪೈಸೆ ಬೀಳುತ್ತದೆ. ಪಂಚಾಯತು ಕೃಷಿಕರಿಗೆ ಗಿಡ ವಿತರಿಸುವುದು ಮೂರು ರೂಪಾಯಿಗೆ. ಒಮ್ಮೆ ಇದರ ಕ್ರಮ ಸರಿಯಾಗಿ ತಿಳಿದುಕೊಂಡರೆ ಗೌರಿ - ಲಕ್ಷ್ಮಿಯವರಂತಹ ಮಕ್ಕಳೇ ತಯಾರಿಸಬಹುದು. ಹೆತ್ತವರ ಪ್ರೋತ್ಸಾಹ ಬೇಕು, ಅಷ್ಟೇ” ಎನ್ನುತ್ತಾರೆ ನಿಷಾದ್.
ಅವರ ಪ್ರಕಾರ, “ನೂರು ಗಿಡ ಮಾಡುವುದಕ್ಕೂ ಹತ್ತು ಸಾವಿರ ಮಾಡುವುದಕ್ಕೂ ಬೀಳುವ ಮುಖ್ಯ ಕೆಲಸಗಳ ವ್ಯತ್ಯಾಸ ಬಲು ಚಿಕ್ಕದು. ರಜಾದಿನಗಳನ್ನೂ ಸೇರಿಸಿ, ಶಾಲಾ ದಿನಚರಿಯ ನಡುವಿನ ಸ್ವಲ್ಪ ಸಮಯ ಇದಕ್ಕೆ ಸಾಕು. ಮಿತ ಬೆಲೆಯಲ್ಲಿ ಪೂರೈಸಿಯೂ ವಿದ್ಯಾರ್ಥಿಗಳು ಉತ್ತೇಜಕ ಆದಾಯ ಪಡೆಯಬಹುದು.”
“ಸಿಗುವ ಹಣದ ಮಾತು ಬದಿಗಿರಲಿ, ಹದಿಹರೆಯದಲ್ಲಿ ಮೊಬೈಲಿನಲ್ಲಿ ಮುಳುಗಿ ಸಮಯ ಕಳೆಯುವುದಕ್ಕೆ ಬದಲು ವಿದ್ಯಾರ್ಥಿ ಜೀವನದಲ್ಲೇ ಇವರಿಗೆ ಕೃಷಿಪ್ರೀತಿ ಹುಟ್ಟಿದರೆ ಅದು ಭಾರೀ ದೊಡ್ಡ ಕೊಡುಗೆ ತಾನೇ?” ಪ್ರಶ್ನಿಸುತ್ತಾರೆ ಈ ಪ್ರಶಸ್ತಿ ವಿಜೇತ ಕೃಷಿಕ.