ಬಯೋ ಎನ್ಜೈಮ್ ತಯಾರಿ ಹೊಸ ಜ್ಞಾನವಲ್ಲ. ಆದರೆ ಅಡಿಕೆಯಲ್ಲಿ ಹೊಸತು. ಇದೊಂದು ಉತ್ತಮ ನೈಸರ್ಗಿಕ ಗೊಬ್ಬರವೂ ಹೌದು ಎನ್ನುತ್ತಾರೆ ಇವರು.
- ಕಾರನ್ತ
“ಎಳೆ ಅಡಿಕೆಯ ಸಿಪ್ಪೆಯನ್ನು ತ್ಯಾಜ್ಯವೆಂದು ಬಿಸಾಡಬೇಡಿ. ಅದನ್ನು ‘ಲಿಕ್ವಿಡ್ ಡಿಟರ್ಜಂಟಿನಂತೆ’ ಬಳಕೆ ಮಾಡಬಹುದು” ಎನ್ನುತ್ತಾರೆ ರವಿರಾಜ್. ಇವರು ದ.ಕ.ದ ಬೆಳ್ತಂಗಡಿ ತಾಲೂಕಿನ ಕಣಿಯೂರು ಪಿಲಿಗೂಡಿನ ಕೃಷಿಕರು.
“ಜೈವಿಕ ತ್ಯಾಜ್ಯ ನೀರು ಮತ್ತು ಸಕ್ಕರೆ/ಬೆಲ್ಲದ ಜತೆ ಕಲಸಿದಾಗ ಬ್ಯಾಕ್ಟೀರಿಯಾದ ಸೃಷ್ಟಿಯಾಗುತ್ತದೆ. ಅದರಿಂದ ಕಿಣ್ವ (ಎನ್‍ಜೈಮ್) ಉತ್ಪತ್ತಿಯಾಗುತ್ತದೆ. ಇದಕ್ಕೆ ಕೊಳೆ, ಕೆಟ್ಟ ವಾಸನೆಗಳನ್ನು ತೆಗೆಯುವ ಗುಣವಿದೆ. ರಾಸಾಯನಿಕ ಡಿಟರ್ಜಂಟಿಗಿಂತ ಉತ್ತಮ. ಇದನ್ನು ಅಡಿಕೆಯಿಂದಲೂ ತಯಾರಿಸಬಹುದು” ಎನ್ನುತ್ತಾರೆ ಇವರು.
ಇದರ ತಯಾರಿ ಹೇಗೆ? ರವಿರಾಜ್ ತಮ್ಮ ಫಾರ್ಮುಲಾ ವಿವರಿಸುತ್ತಾರೆ : “ಹತ್ತು ಲೀಟರ್ ನೀರು, ಮುನ್ನೂರು ಗ್ರಾಮ್ ಎಳೆ ಅಡಿಕೆ ಸಿಪ್ಪೆ ಮತ್ತು ನೂರು ಗ್ರಾಂ ಬೆಲ್ಲ ಯಾ ಸಕ್ಕರೆ ಬೇಕಾಗುವ ಒಳಸುರಿಗಳು. ಮೊದಲು ನೀರಿನಲ್ಲಿ ಸಕ್ಕರೆ/ಬೆಲ್ಲವನ್ನು ಕದಡಿಸಿ. ಈ ಪಾಕಕ್ಕೆ ತುಂಡರಿಸಿದ ಅಥವಾ ಜಜ್ಜಿದ ಅಡಿಕೆ ಸಿಪ್ಪೆಯನ್ನು ಸೇರಿಸಿ ಗಾಳಿಯಾಡದ ಜಾರ್ ಅಥವಾ ಕಂಟೈನರಿನಲ್ಲಿ ಹಾಕಿ ನೆರಳಿನಲ್ಲಿಡಿ. ಒಂದು ತಿಂಗಳ ವರೆಗೆ ನಿತ್ಯ ಕದಡಿಸುತ್ತಿರಬೇಕು. ನಂತರದ ತಿಂಗಳು ಒಂದೆರಡು ಬಾರಿ ತಿರುವಿ.
ಮೂರು ತಿಂಗಳ ಬಳಿಕ ಬಳಕೆಗೆ ಸಿದ್ಧ. ಮೇಲ್ಭಾಗದಲ್ಲಿ ದ್ರವ, ಕೆಳಭಾಗದಲ್ಲಿ ಚರಟ ಸಂಗ್ರಹವಾಗಿರುತ್ತದೆ. ದ್ರವವನ್ನು ಸೋಸಿ ಬೇರೆ ಪಾತ್ರೆಯಲ್ಲಿ ಸಂಗ್ರಹ. ಚರಟವನ್ನು ಗೊಬ್ಬರವಾಗಿ ಬಳಸಬಹುದು. ನೈಸರ್ಗಿಕವಾಗಿ ಕಳಿಯಲು ಮೂರು ತಿಂಗಳುಗಳ ಕಾಲ ಬೇಕು. ಈಸ್ಟ್ ಸೇರಿಸಿದರೆ ಒಂದೇ ತಿಂಗಳಲ್ಲಿ ಕಳಿಯುತ್ತದೆ.”
ಈ ದ್ರವ ‘ಲಿಕ್ವಿಡ್ ಡಿಟರ್ಜಂಟ್’. ಅಡಿಕೆ ಸಿಪ್ಪೆಯ ‘ಶುಚಿದ್ರವ’ ಎನ್ನೋಣ. ನೆಲ ಸ್ವಚ್ಛತೆ, ಟೈಲ್ಸ್ ಶುಚಿ, ಪಾತ್ರೆ ತೊಳೆಯಲು, ಟೈಲ್ಸಿಗೆ ಪೈಂಟ್- ಗ್ರೀಸ್ ಬಿದ್ದರೆ ತೊಳೆಯಲು ಸುಲಭ. ನೊರೆ ಬರುವುದಿಲ್ಲ. ಇದಕ್ಕೆ ಪರಿಮಳ ದ್ರವ ಸೇರಿಸಬಹುದು. ಸ್ನಾನಕ್ಕೆ ಆಗದು!
“ಅಡಿಕೆಯ ಎಳೆ ಕಾಯಿಯ ಸಿಪ್ಪೆ ಹಸಿಯಾಗಿರಬೇಕು. ಒಣಗಿದ್ದರೆ ಅದರಲ್ಲಿರುವ ಜೀವಸತ್ವ ನಾಶವಾಗಿರುತ್ತದೆ. ಸಿಪ್ಪೆಯನ್ನು ನೀರುಳ್ಳಿ ಹೆಚ್ಚಿದಂತೆ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಬಹುದು ಅಥವಾ ಜಜ್ಜಿದರೂ ಓಕೆ. ಪಾರದರ್ಶಕ ಜಾರ್ ಅಥವಾ ಕಂಟೈನರ್ ಆದರೆ ನಿತ್ಯ ಕಣ್ಗಾವಲಿಗೆ ಉತ್ತಮ” ದ್ರವ ತಯಾರಿಯ ಸೂಕ್ಷ್ಮಗಳಿವು. ಇದರ ಚರಟ ಗೊಬ್ಬರವಾಗಿ ಫಲಪ್ರದ. ಅಡಿಕೆ ತರಕಾರಿಗಳಿಗೆ ಹೆಚ್ಚು ಪೌಷ್ಟಿಕ.
“ಇನ್ನೂರು ಲೀಟರ್ ನೀರಿಗೆ ಎರಡು ಲೀಟರ್ ದ್ರವವನ್ನು ಮಿಕ್ಸ್ ಮಾಡಿದ ದ್ರಾವಣವು ಅಡಿಕೆಗೆ ಉತ್ತಮ ಗೊಬ್ಬರ. ಅಂತೆಯೇ ಇನ್ನೂರು ಲೀ. ನೀರಿಗೆ ಒಂದು ಲೀಟರ್ ಸೇರಿಸಿದ ದ್ರಾವಣವು ತರಕಾರಿಗಳಿಗೆ ಉತ್ತಮ ಗೊಬ್ಬರವಾಗುತ್ತದೆ”. ರವಿರಾಜರು ತಮಗಾಗಿ ಕಂಡುಹಿಡಿದ ಗುಣವಿದು. ಕೃಷಿಕರು ತಾವೇ ಮನೆಯಲ್ಲಿ ತಯಾರು ಮಾಡಿಕೊಳ್ಳಬೇಕೆಂಬ ಆಶಯ ಅವರದು.
“ಕೆಮಿಕಲ್ ಫ್ರೀ ಅಲ್ವಾ. ನಗರದಲ್ಲಿ ಉತ್ತಮ ಬೇಡಿಕೆ ಬರಬಹುದು. ಬಯೋ ಎನ್ಜೈಮ್ ತಯಾರಿ ಹೊಸ ಜ್ಞಾನವಲ್ಲ. ಆದರೆ ಅಡಿಕೆಯಲ್ಲಿ ಹೊಸತು. ಇದೊಂದು ಅತ್ಯುತ್ತಮ ನೈಸರ್ಗಿಕ ಗೊಬ್ಬರ” ಎನ್ನುತ್ತಾರೆ.
ರವಿರಾಜ್ ‘ನ್ಯಾಚುರಲ್ ಆರ್ಗಾನಿಕ್ಸ್’ ಮೂಲಕ ತಮ್ಮ ಮನೆ ತಯಾರಿ ಸಾಬೂನುಗಳ ಮಾರುಕಟ್ಟೆ ಮಾಡುತ್ತಿದ್ದಾರೆ.
ರವಿರಾಜ್
77605 45001, 93790 65001
(ಸಂಜೆ 7 - 9)
ravirajdurga@yahoo.com
----------------------------------------------------------------------------------------------------
ಮನೆ ತಯಾರಿ ಸಾಬೂನು
ಅರಶಿನ, ಶಿಕಾಕಾಯಿ ಮತ್ತು ಅರಶಿನ, ತೆಂಗಿನೆಣ್ಣೆ, ಅಲೋವೆರಾ, ನೀಮ್ ಫ್ರುಟ್ ಚಾರ್ಕೋಲ್, ಬೇವು - ಅರಶಿನ.. ಮೊದಲಾದ ಸಾಬೂನುಗಳನ್ನು ಕೇಳಿ ಪಡೆವ ಗ್ರಾಹಕರು. ಎಲ್ಲವೂ ಮನೆ ತಯಾರಿ. ಆನ್‍ಲೈನ್ ಮೂಲಕವೂ ಖರೀದಿಸಬಹುದು.
ಅರೆಕಾ ಚಾರ್ಕೋಲ್ - ಇದನ್ನು ಚಾಲಿ ಅಡಿಕೆಯ ಇದ್ದಿಲಿನಿಂದ ಮಾಡಿದ ಹಲ್ಲುಪುಡಿ - ಆರೋಗ್ಯದಾಯಕ ಉತ್ಪನ್ನ. ಹಲ್ಲುನೋವು ಶಮನಗೊಳಿಸುವ ಗುಣ.