ADD

Back To Free Articles

November-2024

ಏಳು ದಶಕ ಹಳೆಯ ಜೇನು ಸಂಘ

ಜೇನಿನಿಂದ ಮಾತ್ರವಲ್ಲದೆ ಇತರ ಕೃಷ್ಯುತ್ಪನ್ನಗಳಿಂದಲೂ ಮೌಲ್ಯವರ್ಧನೆ ಮಾಡುವ ಹನ್ನೆರಡು ಮಂದಿಯ ತಂಡ ಇವರಲ್ಲಿದೆ. ಸಂಸ್ಥೆಯ ವಾರ್ಷಿಕ ಟರ್ನ್ ಓವರ್ 2.5ರಿಂದ 3 ಕೋಟಿ ರೂ.

ಅಪ

 
no image
 

ಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣ ಮಹಾಬಲೇಶ್ವರ. ಅಲ್ಲಿ ಏಳು ದಶಕ ಹಳೆಯ ಜೇನು ಸಂಘ ಒಂದಿದೆ. ಮಹಾಬಲೇಶ್ವರ್ ಮಹೋತ್ಪಾದಕ್ ಸಹಕಾರಿ ಸೊಸೈಟಿ. ಇದು ಆರಂಭವಾದದ್ದು 1955ರಲ್ಲಿ.

ಈ ಜೇನು ಸಂಘದಲ್ಲಿರುವ ಸದಸ್ಯರು ಒಟ್ಟು 1700. ಅದರಲ್ಲಿ ಸಕ್ರಿಯರಾಗಿರುವವರು, ಎಂದರೆ ಜೇನು ಉತ್ಪಾದಿಸಿ ಒದಗಿಸುವವರು 700 ಮಂದಿ. ಸತಾರಾ ಜಿಲ್ಲೆಯ ಮಹಾಬಲೇಶ್ವರ, ಜಾವೊಳಿ ಮತ್ತು ವಾಯ್ - ಈ ಮೂರು ತಾಲೂಕುಗಳಲ್ಲಿ ಇದರ ಕಾರ್ಯಕ್ಷೇತ್ರ ಇದೆ. ಇವರು ಪ್ರತಿವರ್ಷ 25,000 ದಿಂದ 30,000 ಕಿಲೋ ಜೇನು ಉತ್ಪಾದಿಸುತ್ತಾರೆ. ಮಹಾರಾಷ್ಟ್ರದಲ್ಲಿ ಅತ್ಯಧಿಕ ಜೇನು ಉತ್ಪಾದನೆ ಮಾಡುವುದು ಈ ಸಂಘವಂತೆ.

ಈ ಪ್ರದೇಶವಿಡೀ ಗುಡ್ಡಗಾಡು. ಹೀಗಾಗಿ ಕಾಡು ಹೂಗಳಿಂದ ಸಂಗ್ರಹವಾಗುವ ಜೇನೇ ಹೆಚ್ಚು. ಈ ಕಾರಣದಿಂದ ಇವರ ಜೇನಿಗೆ ಒಳ್ಳೆ ಹೆಸರಿದೆ. ಇದರಲ್ಲಿ ಔಷಧ ಗುಣಗಳು ಹೆಚ್ಚು ಎಂಬ ನಂಬಿಕೆಯಿದೆ.

ಇಲ್ಲಿ ಅಕ್ಟೋಬರದಿಂದ ಮೇ ತಿಂಗಳು ಜೇನಿನ ಸೀಸನ್. ಅತ್ಯಧಿಕ ಜೇನು ತಯಾರಾಗುವುದು ಮಾರ್ಚ್ - ಏಪ್ರಿಲ್ ತಿಂಗಳುಗಳಲ್ಲಿ. ಇವರ ಸದಸ್ಯರಲ್ಲಿ ಹೆಚ್ಚಿನವರೂ ಬೇರೆಬೇರೆ ಬೆಳೆ ತೆಗೆಯುವ ರೈತರು. ಸರಾಸರಿ 10 ರಿಂದ 15 ಪೆಟ್ಟಿಗೆಗಳಲ್ಲಿ ಜೇನು ಸಾಕಣೆ. 25ರಿಂದ 100 ಪೆಟ್ಟಿಗೆ ಇಟ್ಟುಕೊಂಡವರು ಹೆಚ್ಚಲ್ಲದಿದ್ದರೂ, ಇದ್ದಾರೆ.

“ಹೂವಿನ ಸೀಸನ್ ಹೊಂದಿಕೊಂಡು ನಮ್ಮಲ್ಲಿ ಒಟ್ಟು ಏಳು ಥರದ ಜೇನು ಒಟ್ಟಾಗುತ್ತದೆ. ಇವುಗಳ ಖರೀದಿ ದರದಲ್ಲೂ ವ್ಯತ್ಯಾಸವಿದೆ. ನಮ್ಮ ಸರಾಸರಿ ಖರೀದಿ ದರ ಕಿಲೋಗೆ 500 ರೂ.” ಎನ್ನುತ್ತಾರೆ ಉಪ ಪ್ರಬಂಧಕ ವಿ.ವಿ.ಜಾಧವ್.

ಇವರ ಸದಸ್ಯರಲ್ಲಿ 50 ಮಂದಿ ಸಾವಯವ ದೃಢೀಕರಣ ಆದವರಿದ್ದಾರಂತೆ. ಇವರು ಸರಾಸರಿ 8 ರಿಂದ 9,000 ಕಿಲೋ ಜೇನು ಉತ್ಪಾದಿಸುತ್ತಾರೆ. ಸಾವಯವ ಜೇನಿಗೆ ಒಳ್ಳೆ ಬೇಡಿಕೆ ಇದೆಯಂತೆ.

1970ರಷ್ಟು ಹಿಂದೆಯೇ ಈ ಸಂಸ್ಥೆ ಜೇನಿನ ಮೌಲ್ಯವರ್ಧನೆ ಆರಂಭಿಸಿತ್ತು. ಜೇನಿನ ಚಾಕೊಲೇಟ್ ಈ ಉತ್ಪನ್ನಗಳಲ್ಲೊಂದು. ನೇರಳೆ ಹಣ್ಣು ಮತ್ತು ಸ್ಟ್ರಾಬೆರಿಯ ಜೇನುಮಿಶ್ರಿತ ಸಕ್ಕರೆರಹಿತ ಜ್ಯಾಮುಗಳು, ಜೇನು - ಆಲೋವೆರಾ ಜ್ಯೂಸ್ ಮೊದಲಾದುವು ಇವರ ಮೌಲ್ಯವರ್ಧಿತ ಉತ್ಪನ್ನಗಳು.

ಪ್ರಸಿದ್ಧ ಪ್ರವಾಸಿ ತಾಣವಾದ ಕಾರಣ ಇವರ ಅರ್ಧಕ್ಕರ್ಧ ಉತ್ಪನ್ನಗಳು ಇವರ ಕೇಂದ್ರ ಕಚೇರಿಯಿಂದಲೇ ನೇರವಾಗಿ ಬಿಕರಿ ಆಗುತ್ತವಂತೆ.

ಇದಲ್ಲದೆ ಮಹಾರಾಷ್ಟ್ರದ ಹಲವು ನಗರಗಳಲ್ಲಿ, ಮಹಾಬಲೇಶ್ವರದಲ್ಲೂ ಇವರ ವಿತರಣೆಗಾರರು, ಏಜೆಂಟರು ಇದ್ದಾರೆ. ಇವರ ಉತ್ಪನ್ನಗಳು ಪೂನಾ, ಕರ್ಹಾಡ್, ಮುಂಬಯಿ, ಸತಾರಾ, ವಾಯ್, ಅಹಮದ್ ನಗರ್ ಮೊದಲಾದ ನಗರಗಳಿಗೆ ಹೋಗುತ್ತವೆ.

ಜೇನು ಮತ್ತದರ ಉತ್ಪನ್ನಗಳಲ್ಲದೆ ಈ ಸಂಘ ಹಲವಾರು ಹಣ್ಣುಗಳ ಸಿರಪ್, ಸ್ಕ್ವಾಶ್, ಜ್ಯಾಮ್, ಉಪ್ಪಿನಕಾಯಿಗಳನ್ನೂ ತಯಾರಿಸುತ್ತದೆ. ಇವೆಲ್ಲವನ್ನೂ ಪ್ರವಾಸಿಗಳನ್ನು ದೃಷ್ಟಿಯಲ್ಲಿಟ್ಟು ತಯಾರಿಸಲಾಗುತ್ತದೆ.  “ನಮ್ಮಲ್ಲಿ ಅದಾಗಲೇ ಇದ್ದ ಯಂತ್ರೋಪಕರಣ ಮತ್ತು ಅಡಿಕಟ್ಟು ಸೌಕರ್ಯ ಬಳಸಿ ಈ ಜೇನೇತರ ಉತ್ಪನ್ನಗಳನ್ನು ತಯಾರಿಸಬಹುದಿತ್ತು. ಹಾಗಾಗಿ ಈ ಕೆಲಸಕ್ಕೂ ಕೈಹಾಕಿದೆವು. ಮೌಲ್ಯವರ್ಧನೆಯ ವಿಭಾಗದಲ್ಲಿ ನಮಗೆ ಹನ್ನೆರಡು ಜನ ಸಿಬಂದಿಗಳಿದ್ದಾರೆ. ವರ್ಷಕ್ಕೆ 2.5 ಕೋಟಿಯಿಂದ 3 ಕೋಟಿ ರೂಪಾಯಿಗಳ ಟರ್ನ್ ಓವರ್ ಆಗುತ್ತಿದೆ” ಎನ್ನುತ್ತಾರೆ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಮಹಾದೇವ್ ಜಾಧವ್.

ಜಾಲತಾಣ : www.madhusagar.co.in