ADD

Back To Free Articles

November-2024

ಹೊಲಬೇಲಿ ಸೊಪ್ಪಿಗೆ ನಗರದಲ್ಲೂ ಬೇಡಿಕೆ

ಮೈಸೂರಿನಸಖತ್ ಸೊಪ್ಪುಸಂತೆಗೆ ಪ್ರತಿ ಭಾನುವಾರ ಕಾಳಪ್ಪ ಹೊಲಬೇಲಿ ಸೊಪ್ಪನ್ನು ಆದೇಶದ ಮೇರೆಗೆ ಪೂರೈಸುತ್ತಿದ್ದಾರೆ.

- ಟೀಮ್ ಅಡಿಕೆ ಪತ್ರಿಕೆ

ಫೋಟೋ : ಕಾವ್ಯ

 
no image
 

ಹೊಲಬೇಲಿ ಸೊಪ್ಪುಗಳನ್ನು ಈ ಕಡೆ ಬೆರಕೆ ಸೊಪ್ಪು ಅಂತಲೇ ಕರೆಯುತ್ತಾರೆ. ನಗರಗಳಲ್ಲೂ ಇದಕ್ಕೆ ಬೇಡಿಕೆ ಇದೆ. ಈ ಬಗ್ಗೆ ತಿಳಕೊಂಡವರು ತಮಗೆ ಈ ಸೊಪ್ಪು ಬೇಕು ಎಂದು ಹೇಳುವ ಮಟ್ಟಕ್ಕೆ ಬರುತ್ತಾರೆ.”

ಇದು ಪಿರಿಯಾಪಟ್ಟಣದ 52ರ ಹರೆಯದ ಕೃಷಿಕ, ಬೀಜ ಸಂರಕ್ಷಕ ಕಾಳಪ್ಪ ಅವರ ಮಾತು. ಇವರು ಕಳೆದೆರಡು ವರ್ಷಗಳಿಂದ ಮೈಸೂರಿನ ಸಾಪ್ತಾಹಿಕ  ಸಾವಯವ ಸಂತೆ ‘ಸಖತ್ ಸೊಪ್ಪಿ’ಗೆ ಹೊಲಬೇಲಿ ಸೊಪ್ಪು ಒಯ್ದು ಮಾರುತ್ತಿದ್ದಾರೆ.

ಕಾಳಪ್ಪರಲ್ಲಿ ಇತರ ಉತ್ಪನ್ನಗಳೂ ಇರುತ್ತವೆ. ಆದರೆ ಸಖತ್ ಸೊಪ್ಪು ಸಂತೆಯಲ್ಲಿ ತಾನೇತಾನಾಗಿ ಬೆಳೆಯುವ ಕಾಡುಸೊಪ್ಪುಗಳನ್ನು ಪೂರೈಸುವುದು ಇವರು ಮಾತ್ರ.

ಇವರು ತುಂಬ ಸೊಪ್ಪು ತರಕಾರಿ ಬೆಳೆಸುತ್ತಾರೆ. ಅದನ್ನು ಒಯ್ದು ಮಾರುತ್ತಿದ್ದಾಗ ಕೆಲವರು ತಮಗೆ ಬೇಕಾದ ನಿರ್ದಿಷ್ಟ ಹೊಲಬೇಲಿ ಸೊಪ್ಪನ್ನು ಮುಂದಿನ ವಾರ ತಂದು ಕೊಡಲು ಸಾಧ್ಯವೇ ಎಂದು ವಿಚಾರಿಸಿದರು. ಕಾಳಪ್ಪನವರ ‘ಸಪ್ಲೈ ಆನ್ ಇಂಡೆಂಟ್’ ಆರಂಭವಾದದ್ದು ಹೀಗೆ.

“ಆರ್ಡರಿಗೆ ಅನುಸಾರವಾಗಿ ಮಾತ್ರ ಹೊಲಬೇಲಿ ಸೊಪ್ಪು ಒಯ್ಯುತ್ತೇನೆ. ಹಿಂದಿನ ದಿವಸ ಫೋನ್, ವಾಟ್ಸಪ್ ಮೂಲಕ ಗ್ರಾಹಕರು ಆರ್ಡರ್ ಕೊಡುತ್ತಾರೆ. ‘ಇಂಥಿಂಥದೇ ಸೊಪ್ಪು’ ಬೇಕು ಎಂದು ಕೇಳುವ ಗ್ರಾಹಕರಿದ್ದಾರೆ” ಎನ್ನುತ್ತಾರೆ ಕಾಳಪ್ಪ.

ಇವರು ಮಾರುಕಟ್ಟೆ ಮಾಡುವುದರಲ್ಲಿ ‘ಬೆಳೆಸದೆ ಬೆಳೆಯುವ’ ಸುಮಾರು ಹತ್ತು - ಹನ್ನೆರಡು ಸೊಪ್ಪು ಜಾತಿಗಳಿವೆ. ಈ ಪೈಕಿ ಅತಿ ಹೆಚ್ಚು ಬೇಡಿಕೆ ಇರುವ ಆರು ಸೊಪ್ಪುಗಳನ್ನು ಕಾಳಪ್ಪ ಪಟ್ಟಿ ಮಾಡುತ್ತಾರೆ. ಅವು: ಕೊಮ್ಮೆ, ಅಣ್ಣೆ, ಗೋಣಿ, ಒಂದೆಲಗ, ಹೊನಗನ್ನೆ ಮತ್ತು ಕನ್ನೆ ಸೊಪ್ಪು.

ಬಹುಪಾಲು ಸೊಪ್ಪು ಅವರದೇ ಜಮೀನಿನಲ್ಲಿ ಸಿಗುತ್ತದೆ. ಇಲ್ಲದೆ ಹೋದರೆ ನೆರೆಹೊರೆಯ ಜಾಗಗಳಿಂದ ವ್ಯವಸ್ಥೆ ಮಾಡುತ್ತಾರೆ. “ತಾನಾಗಿ ಬೆಳೆಯುವುದಾದರೂ ಅವರ ಜಮೀನಿನಿಂದ ನಾನು ಬಿಡಿಸಿಕೊಳ್ಳುವುದಲ್ಲ. ಅವರೇ ಕಂತೆ ಮಾಡಿ ಕೊಡುತ್ತಾರೆ. ಅವರಿಗೆ ರೊಕ್ಕ ಕೊಟ್ಟು ತರುತ್ತೇನೆ” ಎನ್ನುತ್ತಾರೆ. ಇವರು ಒಂದು ಕಂತೆಯಲ್ಲಿ ಅಂದಾಜು ನೂರು ಗ್ರಾಮ್ ಸೊಪ್ಪು ಇರಬಹುದು. 10 ರಿಂದ 15 ರೂ.ಗಳಿಗೆ ಮಾರುತ್ತಾರೆ.

ಈ ಪೈಕಿ ಕೊಮ್ಮೆ ಮತ್ತು ಗೋಣಿ ಸೊಪ್ಪು ಬೇಸಿಗೆಯಲ್ಲೂ ಸಿಗುತ್ತದಂತೆ. ಉಳಿದೆಲ್ಲಾ ಸೊಪ್ಪು ಮಳೆಗಾಲದ ಆರು ತಿಂಗಳು - ಮೇಯಿಂದ ದಶಂಬರ ವರೆಗೆ - ಮಾತ್ರ ಲಭ್ಯವಿರುತ್ತದೆ. “ಕೆಲವೊಮ್ಮೆ ಮಳೆಗಾಲಾನಂತರ ನಮ್ಮಲ್ಲಿನ ಪಕ್ಕದ ಬೆಟ್ಟದ ತಪ್ಪಲಿನಲ್ಲಿ ಇವು ಸಿಗುವುದಿದೆ” ಎನ್ನುತ್ತಾರೆ.

ಒಂದು ನಿರ್ದಿಷ್ಟ ಸೊಪ್ಪಿನ ಮತ್ತೂ 25 ಕಂತೆಗೆ ಬೇಡಿಕೆ ಇದೆ ಎಂದಿಟ್ಟುಕೊಳ್ಳಿ. ಕಾಳಪ್ಪ ಐದಾರು ಕಂತೆ ಜಾಸ್ತಿ ಮಾತ್ರ ಒಯ್ಯುತ್ತಾರೆ. ಹಾಗಾಗಿ ಮಾರದೆ ಬಾಡುವ, ಹಾಳಾಗುವ ಆತಂಕ ಇಲ್ಲ. ಇವರು ಅದನ್ನು ಹಿಂದಿನ ದಿನ ಸಂಜೆ ಕಿತ್ತುಕೊಂಡು ಕಂತೆ ಮಾಡಿಟ್ಟು ಬೆಳ್ಳಂಬೆಳಗ್ಗೆ ನಾಲ್ಕು ಗಂಟೆಗೆ ಮೈಸೂರು ಬಸ್ ಏರುತ್ತಾರೆ. ಒಳ್ಳೆ ಸೀಸನಿನಲ್ಲಿ ಇವರ ಜತೆ ನೂರು ಕಂತೆಗಳಷ್ಟು ಹೊಲಬೇಲಿ ಸೊಪ್ಪು ಇರುತ್ತದೆ.

ಹೊಲಬೇಲಿ ಸೊಪ್ಪಿನ ಗ್ರಾಹಕರು ಪಲ್ಯ, ಸಾಂಬಾರು, ಬೆರಕೆ ಸೊಪ್ಪಿನ ಸಾರು ಇತ್ಯಾದಿ ಮಾಡುತ್ತಾರಂತೆ. ಇನ್ನು ಕೆಲವರು ‘ಇದನ್ನು ಹೇಗೆ ಅಡುಗೆ ಮಾಡಲಿ’ ಎಂದು ಕೇಳುತ್ತಾರಂತೆ. ಔಷಧೀಯ ಉದ್ದೇಶಕ್ಕಾಗಿಯೇ ಕೇಳುವವರೂ ಇದ್ದಾರಂತೆ.

“ಕೊಮ್ಮೆ ಸೊಪ್ಪು ದೇಹದ ಉಷ್ಣತೆಯನ್ನು ತಗ್ಗಿಸುತ್ತದೆ. ಬಾಯಿಯಲ್ಲಿ ಮೂಡುವ ಬೊಕ್ಕೆಯ ಶಮನ ಮಾಡುತ್ತದೆ. ಅಣ್ಣೆ ಸೊಪ್ಪು ಕರುಳಿನ ಸಮಸ್ಯೆ ಇದ್ದವರಿಗೆ ಸೂಕ್ತ.”

 ಕೆಲವರು ಕನ್ನೆ, ಗೋಣಿ ಸೊಪ್ಪುಗಳ  ಬೀಜ ಕೇಳುವವರೂ ಇದ್ದಾರೆ. ಸಖತ್ ಸೊಪ್ಪು ಸಂತೆಗೆ ಒಮ್ಮೊಮ್ಮೆ ವಿದೇಶೀಯರೂ ಬರುವುದಿದೆ. ಅವರಲ್ಲಿ ಕೆಲವರಿಗೆ ಔಷಧೀಯ ಗುಣ ಇರುವ ಹೊಲಬೇಲಿ ಸೊಪ್ಪುಗಳ ಪರಿಚಯ ಇರುತ್ತದೆ. ಗಣಿಕೆ ಸೊಪ್ಪು ಹಲವರಿಗೆ ಪರಿಚಯ ಇದೆ. “ಅವರೂ ಬೀಜ ಕೇಳುತ್ತಾರೆ. ಆದರೆ ಬೀಜ ಆಗುವ ಸಮಯ ಕಾದು ಬೀಜದ ಸಂಗ್ರಹ ಮಾಡುವುದು ಸುಲಭವಲ್ಲ” ಎನ್ನುತ್ತಾರೆ ಕಾಳಪ್ಪ.

“ನಾವು ಮನೆಯಲ್ಲಿ ಸುಮಾರು ಇಪ್ಪತ್ತು ಜಾತಿಯ ಹೊಲಬೇಲಿ ಸೊಪ್ಪು ತಿನ್ನುತ್ತೇವೆ. ಕನಿಷ್ಠ ವಾರಕ್ಕೊಮ್ಮೆ ಇದರ ಅಡುಗೆ ಮಾಡುತ್ತೇವೆ. ಬೇಳೆ ಹಾಕಿ ಮಸೊಪ್ಪು, ಬೆರಕೆ ಸಾಂಬಾರು ಮಾಡುವುದೇ ಜಾಸ್ತಿ” ಎನ್ನುತ್ತಾರೆ.

ಇವರ ಬೆಟ್ಟದಲ್ಲಿ ಬೇಸಿಗೆಯಲ್ಲಿ ಸಿಗುವ ಆನೆಪಾದ ಸೊಪ್ಪು ತುಂಬಾ ರುಚಿಕರವಂತೆ. “ಇದಕ್ಕೆ ನಂಕಡೆ ಮರಳೆ ಸೊಪ್ಪು ಅಂತೀವಿ. ಇದನ್ನು ಧಾರವಾಡ ಕಡೆಯವರು ಕೇಳ್ತಾರೆ. ಮೈಸೂರಿನವರಿಗೆ ಅಷ್ಟಾಗಿ ಗೊತ್ತಿಲ್ಲ.”

ಕಾಳಪ್ಪನವರ ಪ್ರಕಾರ, ನಂಜನಗೂಡು, ಹೆಚ್.ಡಿ. ಕೋಟೆ ಮತ್ತು ಪಿರಿಯಾಪಟ್ಟಣಗಳಂತಹ ಕಾಡಂಚಿನ ಸಮುದಾಯಗಳಲ್ಲಿ ಈ ಥರದ ಹೊಲಬೇಲಿ ಸೊಪ್ಪಿನ ಬಳಕೆ, ಅರಿವು, ಉಳಿದವರಿಗಿಂತ ಚೆನ್ನಾಗಿದೆ. 

ಪಿರಿಯಾಪಟ್ಟಣದ ಸುತ್ತಮುತ್ತಲಿನಿಂದ ಪುತ್ತೂರು, ಸುಳ್ಯ, ಕಾಸರಗೋಡುಗಳ ಕಡೆಗೆ ಬೆಳೆಸಿದ ಸೊಪ್ಪು ತರಕಾರಿಯ ಜತೆ ಸ್ವಲ್ಪ ಅಣ್ಣೆ, ಕೊಮ್ಮೆ ಮತ್ತು ಗೋಣಿಯಂತಹ ಹೊಲಬೇಲಿ ಸೊಪ್ಪನ್ನೂ ಮಾರಾಟಕ್ಕೆ ಒಯ್ಯುತ್ತಾರಂತೆ. “ಇವರೆಲ್ಲಾ ಮಧ್ಯವರ್ತಿಗಳೇ. ಆ ಭಾಗದಲ್ಲಿ ಕೆಲಸದಲ್ಲಿರುವ ನಮ್ಮ ಕಡೆಯವರೇ ಇವರ ಮುಖ್ಯ ಗ್ರಾಹಕರು” ಎನ್ನುತ್ತಾರೆ ಕಾಳಪ್ಪ.

ಕಾಳಪ್ಪ - 94806 47369 (ರಾತ್ರಿ 7 - 8)