ADD

Back To Free Articles

October-2024

ಪರಿಸ್ನೇಹಿ ಗ್ರೋ ಬ್ಯಾಗ್

ಪ್ಲಾಸ್ಟಿಕ್ ಗ್ರೋ ಬ್ಯಾಗುಗಳಿಗಿಂತ ರಬ್ಬರಿನದ ಬೆಲೆ ಮೂರು ಪಟ್ಟು, ಆದರೆ ಬಾಳಿಕೆ ಅದಕ್ಕೂ ಹೆಚ್ಚು ಪಟ್ಟು

ಎನ್ನುತ್ತದೆ ತಯಾರಕ ಸಂಸ್ಥೆ.

- ಟೀಮ್ ಅಪ

 
no image
 

ಳೆದ ಕೆಲವು ವರ್ಷಗಳಿಂದ ಗ್ರೋ ಬ್ಯಾಗುಗಳು ಜನಪ್ರಿಯವಾಗುತ್ತಿವೆ. ಬೇರೆಬೇರೆ ಕಾರಣಕ್ಕಾಗಿ ಸ್ಥಳದ ಕೊರತೆ, ಭೂಮಿ ಇಲ್ಲದವರು ಮಾತ್ರವಲ್ಲ ಧಾರಾಳ ಜಾಗ ಇರುವ ಕೃಷಿಕರೂ ಗ್ರೋ ಬ್ಯಾಗ್ ಬಳಸುತ್ತಿದ್ದಾರೆ. ಪ್ಲಾಸ್ಟಿಕ್ಕಿನಿಂದ ತಯಾರು ಮಾಡುವುದು ಈ ಕೃಷಿ ಒಳಸುರಿಯ ಒಂದು ದೊಡ್ಡ ಕೊರತೆ.

ಈಗ ಕೇರಳದ ಕೋಟ್ಟಯಂನ ಒಂದು ರೈತೋತ್ಪಾದಕ ಕಂಪೆನಿ ರಬ್ಬರಿನ ಗ್ರೋ ಬ್ಯಾಗುಗಳನ್ನು ಮಾರುಕಟ್ಟೆಗೇರಿಸಿದೆ. ರಬ್ ಫಾರ್ಮ್ ಹೆಸರಿನ ಈ ಚಿಕ್ಕ ಸಂಸ್ಥೆ ಸದ್ಯ ಒಂದೇ ಮಾದರಿಯ ಗ್ರೋ ಬ್ಯಾಗ್ - ಹತ್ತು ಲೀಟರಿನದು - ಉತ್ಪಾದಿಸುತ್ತಿದೆ. ಇದರ ಬೆಲೆ ರೂ. 150. ಇದರ ಬಣ್ಣ ಕಪ್ಪು.

ಎರಡು ಮಾದರಿಗಳ ಒಳಾಂಗಣ ಕುಂಡಗಳನ್ನೂ ರಬ್ ಫಾರ್ಮ್ ತಯಾರಿಸುತ್ತಿದೆ. ಈ ಪೈಕಿ ದೊಡ್ಡದು 5.7 ಲೀಟರಿನದರ ಬೆಲೆ 450 ರೂ. ಚಿಕ್ಕದು, ಒಂದು ಲೀಟರಿನದರ ಬೆಲೆ ರೂ 150. ಇವು ಬೇರೆಬೇರೆ ಆಕರ್ಷಕ ಬಣ್ಣಗಳಲ್ಲಿ ಸಿಗುತ್ತವೆ.

ಸಂಸ್ಥೆಯ ಅಧ್ಯಕ್ಷ ಡಾ. ಜಾಕೊಬ್ ಮ್ಯಾಥ್ಯೂ ರಬ್ಬರ್ ಬೋರ್ಡಿನ ಆಡಳಿತ ಮಂಡಳಿಯಲ್ಲಿ ಇದ್ದವರು. “ಕೇರಳ ಸರಕಾರ ಈಗ ಎಲ್‍ಡಿಪಿಇಯ ಗ್ರೋ ಬ್ಯಾಗುಗಳನ್ನು ನಿಷೇಧಿಸಿದೆ. ಅದಕ್ಕೆ ಬದಲು ಹೆಚ್‍ಡಿಪಿಇಯದನ್ನು ಬಳಸಲು ಸಲಹೆ ಮಾಡುತ್ತಿದೆ. ನಮ್ಮ ಗ್ರೋ ಬ್ಯಾಗು ಡಿಗ್ರೇಡೇಬಲ್ ಆಗಿದೆ. ಮಾತ್ರವಲ್ಲ ಹತ್ತು ವರ್ಷ ಬಾಳಿಕೆ ಬರಬಹುದು” ಎನ್ನುತ್ತಾರೆ ಡಾ. ಜಾಕೊಬ್.

“ಸಾಮಾನ್ಯ ಗ್ರೋ ಬ್ಯಾಗುಗಳು 40 - 50 ರೂಪಾಯಿಗಳಿಗೆ ಸಿಗುವಾಗ ನಮ್ಮದಕ್ಕೆ ಮೂರು ಪಟ್ಟು ಬೆಲೆ ಕೊಡಲು ಸಾಮಾನ್ಯ ಗ್ರಾಹಕರು ಹಿಂದೇಟು ಹಾಕುತ್ತಾರೆ. ಆದರೆ ದೊಡ್ಡ ನಗರಗಳಲ್ಲಿ ನಮಗೆ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿದೆ. ಸರಕಾರದ ವಿವಿಧ ಯೋಜನೆಗಳಲ್ಲಿ ಈ ಪರಿಸ್ನೇಹಿ ಬ್ಯಾಗು ಬಳಸಬೇಕೆಂದು ಸರಕಾರಕ್ಕೆ ಮನವಿ ಮಾಡಿದ್ದೇವೆ. ಅನುಕೂಲಕರ ನಿರ್ಧಾರ ಬರಬಹುದು ಎಂಬ ನಿರೀಕ್ಷೆಯಿದೆ” ಎನ್ನುತ್ತಾರೆ ಅವರು.

ಇವರ ಪ್ರಕಾರ, ಒಂದೊಂದು ಗಾತ್ರದ ಕುಂಡ - ಬ್ಯಾಗುಗಳಿಗೂ ಪ್ರತ್ಯೇಕ ಡೈ ನಿರ್ಮಿಸಬೇಕಾಗಿದ್ದು  ಅದಕ್ಕೆ ಹೆಚ್ಚಿನ ಬಂಡವಾಳ ಬೇಕಿದೆ. ದೊಡ್ಡ ಆರ್ಡರು ಸಿಕ್ಕರೆ, ಬೇರೆಬೇರೆ ಗಾತ್ರದವನ್ನು ತಯಾರು ಮಾಡಬಹುದು.

ತಮ್ಮ ಗ್ರೋ ಬ್ಯಾಗುಗಳು ಸುಲಭದಲ್ಲಿ ಹಾನಿಗೆ ಒಳಗಾಗುವುದಿಲ್ಲ. ಮಾತ್ರವಲ್ಲ ಗಿಡಗಳ ರೀಪಾಟಿಂಗ್ ನಡೆಸುವುದು ತುಂಬ ಸುಲಭ ಎನ್ನುವುದು ಇವರು ತಿಳಿಸುವ ಇನ್ನೊಂದು ಗುಣ.

ಹತ್ತು ವರ್ಷ ಬಾಳಿಕೆ ಬರಬಹುದು ಅಂತ ಈ ಹೊಸ ಸಂಸ್ಥೆ ಹೇಗೆ ಹೇಳುತ್ತಿದೆ? ಜಾಕೊಬ್ ಉತ್ತರಿಸುತ್ತಾರೆ, “ನಾವು ಈ ಬಗ್ಗೆ ರಬ್ಬರ್ ಬೋರ್ಡ್ ಮೂಲಕ ಹಲವು ಪರೀಕ್ಷೆಗಳನ್ನು ಮಾಡಿ ನೋಡಿ ಈ ಅಂಶವನ್ನು ಖಾತ್ರಿಪಡಿಸಿಕೊಂಡಿದ್ದೇವೆ.”

ರಬ್ಬರಿಗೆ ಇರುವೆ, ಗೆದ್ದಲುಗಳು ತೊಂದರೆ ಮಾಡುವುದಿಲ್ಲ ಎನ್ನುತ್ತಾರೆ ಜಾಕೊಬ್. “ಏಕೆಂದರೆ ಈ ಉತ್ಪನ್ನದಲ್ಲಿ ಸೆಲ್ಯುಲೋಸ್ ಇಲ್ಲ. ಈ ಕೀಟಗಳು ತಿನ್ನುವಂಥದ್ದೇನೂ ಇಲ್ಲದ ಕಾರಣ ಅವುಗಳು ಈ ಕಡೆ ಬರುವುದಿಲ್ಲ.”

ಸದ್ಯಕ್ಕೆ ಈ ಉತ್ಪನ್ನಗಳ ಬಗ್ಗೆ ಕೇರಳ ಬಿಟ್ಟು ಹೊರಪ್ರಪಂಚಕ್ಕೆ ಅಷ್ಟಾಗಿ ತಿಳಿದಿಲ್ಲ. ಆದರೆ ಅಮೆಝಾನ್ ಮತ್ತು ಫ್ಲಿಪ್‍ಕಾರ್ಟ್‍ಗಳ ಮೂಲಕ ಆನ್‍ಲೈನ್ ಮಾರಾಟ ನಡೆಯುತ್ತಿದೆ. ಈ ಉತ್ಪನ್ನಗಳ ಮಾರಾಟ ಸುರುವಾದ ಕಳೆದ ಎಂಟು ತಿಂಗಳಿಂದೀಚೆಗೆ ಒಟ್ಟು 8 ಲಕ್ಷ ರೂ.ಗಳ ವ್ಯವಹಾರ ನಡೆದಿದೆಯಂತೆ.

ರಬ್‍ಫಾರ್ಮ್ ಸಂಪರ್ಕ : 85476 49156 rubfarmco@gmail.com