ADD

Back To Free Articles

October-2024

ಅಡಿಕೆ ಸಿಪ್ಪೆಯನ್ನು ಹಗ್ಗವಾಗಿಸುವ 93ರ ಅಜ್ಜ

ಕಳೆದ ಮೂರು ವರ್ಷಗಳಲ್ಲಿ ಅಜ್ಜ ಹೊಸೆದ ಅಡಿಕೆ ಸಿಪ್ಪೆಯ ಹಗ್ಗ ಇನ್ನೂರು ಮೀಟರ್ ಮೀರಬಹುದಂತೆ.

ಟೀಮ್ ಅಪ

 
no image
 

ಕೇರಳದ ಆಲೆಪ್ಪಿ ಜಿಲ್ಲೆಯ ಕಾಯಂಕುಳಂ ಸನಿಹದ ಹಳ್ಳಿಯ ಪೂವನ್ ಕುಟ್ಟಿ ಅವರಿಗೀಗ 93. ಚಟುವಟಿಕೆಯಿಂದಲೇ ಇದ್ದಾರೆ.

ಮೂರು ವರ್ಷ ಹಿಂದೆ ಕುಟ್ಟಿ ಒಂದು ಅಪರೂಪದ ಹವ್ಯಾಸಕ್ಕೆ ತೊಡಗಿದರು. ಅಡಿಕೆ ಸಿಪ್ಪೆಯಿಂದ ಹಗ್ಗ ತಯಾರಿ. ಹಗ್ಗ ತಯಾರಿಯ ಕೌಶಲ್ಯ ಅವರಲ್ಲಿ ಮೊದಲೇ ಇತ್ತು. ಅದಕ್ಕಾಗಿ ತೆಂಗಿನ ಸಿಪ್ಪೆಯನ್ನು ನೀರಿನಲ್ಲಿ ನೆನೆಸಿಡಬೇಕು. ನಂತರ ಅದರ ನಾರು ಪ್ರತ್ಯೇಕಿಸಿ ಹೊಸೆಯುತ್ತಾ ಹೋಗಬೇಕು.

ಹೀಗೆ ತಯಾರಿಸಿದ ತೆಂಗಿನ ಹಗ್ಗದಿಂದ ಹಿಂದೆಲ್ಲಾ ಮೀನು ಹಿಡಿಯುವ ಗೂಡು ತಯಾರಿಸುವುದಿತ್ತು. ಈಗಲೂ ಕುಟ್ಟಿ ಈ ಥರದ ಗೂಡು ತಯಾರಿಸಿ ಆಸಕ್ತರಿಗೆ 1,000 - 1,500 ರೂ. ಗೆ ಮಾರುತ್ತಾರೆ.

ಕುಟ್ಟಿಯವರಿಗೆ ವೀಳ್ಯ ಹಾಕುವ ಅಭ್ಯಾಸವಿದೆ. ಅದಕ್ಕಾಗಿ ಅಂಗಡಿಯಿಂದ ಹೊಗೆಸೊಪ್ಪು, ಎಲೆ, ಅಡಿಕೆ ತರುತ್ತಿರುತ್ತಾರೆ. ಒಮ್ಮೆ ಹಣ್ಣಡಿಕೆಯ ಸಿಪ್ಪೆಯನ್ನು ತೆಂಗಿನ ಸಿಪ್ಪೆಯ ಬದಲು ಬಳಸಬಾರದೇಕೆ ಅನಿಸಿತು. ಅಡಿಕೆ ಸಿಪ್ಪೆಯ ನಾರು ಉದ್ದ ತೀರಾ ಕಮ್ಮಿ. ಆದರೂ ಕುಟ್ಟಿ ಛಲ ಬಿಡಲಿಲ್ಲ. ಪ್ರಯತ್ನಪಡುತ್ತಲೇ ಹೋದರು.

ಸತತ ಯತ್ನದಿಂದ ಕುಟ್ಟಿ ಗೆದ್ದರು. ಅವರ ಹತ್ತಿರದಲ್ಲೆಲ್ಲೂ ಅಡಿಕೆ ತೋಟ ಇಲ್ಲ.  ಸುತ್ತುಮುತ್ತಲಲ್ಲಿ ಬೀಡಾ ಮಾರುವ ಗೂಡಂಗಡಿಗಳಿವೆ. ಕುಟ್ಟಿ ಅವರೊಡನೆ ವಿನಂತಿ ಮಾಡಿದ್ದಾರೆ. “ಅಡಿಕೆಯ ಸಿಪ್ಪೆ ಎಸೆಯಬೇಡಿ. ನನಗೆ ಬೇಕು” ಎಂದಿದ್ದಾರೆ.

ಈಗ ನಾಲ್ಕೈದು ಅಂಗಡಿಯವರು ಸಿಪ್ಪೆ ತೆಗೆದಿಡುತ್ತಾರೆ. ಇವರು ಬರುವುದು ಕಾಣುತ್ತಲೇ, “ಕುಟ್ಟಿಯೇಟ್ಟನ್ ವನ್ನು. ಪಾಕಿಂಡೆ ತೊಂಡ್ ಕೊಡುಕ್ಕಾ” (ಕುಟ್ಟಿಯಣ್ಣ ಬಂದರು. ಅಡಿಕೆಯ ಸಿಪ್ಪೆ ಕೊಡೋಣ) ಎನ್ನುತ್ತಾ ಕೊಡುತ್ತಾರೆ.

ಹಣ್ಣಡಿಕೆ ಸಿಪ್ಪೆಯೇ ಬೇಕು. ಕಾಯಿ ಅಡಿಕೆಯಿಂದ ಹಗ್ಗ ತಯಾರಿ ಸಾಧ್ಯವಿಲ್ಲ. ಬಿಡು ಸಮಯದಲ್ಲಿ ಹಗ್ಗ ತಯಾರಿ ಆರಂಭವಾಗುತ್ತದೆ. ಮೊದಲಿಗೆ ಸಿಪ್ಪೆಯನ್ನು ನೀರಿನಲ್ಲಿ ನೆನೆ ಹಾಕಬೇಕು.

ಮೂರು - ನಾಲ್ಕು ತಿಂಗಳು. ನಂತರ ಕೈಯಲ್ಲಿ ಅಡಿಕೆ ಸಿಪ್ಪೆಯ ನಾರುಗಳನ್ನು ಬೇರ್ಪಡಿಸುತ್ತಾರೆ.

ಅಡಿಕೆ ಸಿಪ್ಪೆಯಲ್ಲಿ ಎರಡು ಥರದ ನಾರು ಇರುತ್ತದೆ. ಒಂದು ದಪ್ಪನಾಗಿರುತ್ತದೆ. ಇನ್ನೊಂದು ಬಲು ತೆಳ್ಳಗೆ. ಹಗ್ಗ ತಯಾರಿಗೆ ದಪ್ಪ ನಾರು ಬೇಕು. ಒಂದಷ್ಟು ನಾರುಗಳನ್ನು ಒಗ್ಗೂಡಿಸಿ ಹಸ್ತದಡಿ ಇಟ್ಟು ಅದನ್ನು ಹೊಸೆಯುತ್ತಾರೆ. ಇವು ಮುಂದೆ ತಯಾರಿಸಲಿರುವ ಹಗ್ಗಕ್ಕೆ ಬಳಸುವ ಎಳೆಗಳು. ಈ ಥರದ ಸಾಕಷ್ಟು ಎಳೆಗಳನ್ನು ತಯಾರಿಸಿಡುವುದು ಮೊದಲನೆಯ ಹಂತ.

ಎರಡನೆಯ ಹಂತದಲ್ಲಿ ಈ ಎಳೆಗಳನ್ನು ಒಂದಕ್ಕೊಂದು ಕೂಡಿಸಿ ತಿಕ್ಕುತ್ತಾ ಹಗ್ಗ ತಯಾರಿ ಮಾಡುತ್ತಾರೆ. ಕುಟ್ಟಿ ನುರಿತವರಾದ ಕಾರಣ ಹಗ್ಗ ಹೊಸೆಯಲು ಹೆಚ್ಚು ಕಾಲ ಬೇಡ.

ಮಗ ತುಳಸೀಧರನ್ ಸಹಾಯದಿಂದ ಅಡಿಕೆ ಪತ್ರಿಕೆ ಕುಟ್ಟಿಯವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿತು. “ಒಂದು ಅಡಿ ಉದ್ದದ ಬೆರಳಿನಷ್ಟು ದಪ್ಪದ ಹಗ್ಗ ಹೆಣೆಯಲು 50ರಷ್ಟು ಅಡಿಕೆಯ ಸಿಪ್ಪೆ ಬೇಕಾಗಬಹುದು. ಇಷ್ಟುದ್ದದ ಹಗ್ಗದ ಎರಡನೆಯ ಘಟ್ಟದ ತಯಾರಿಗೆ  ಒಂದು ಗಂಟೆ ಸಾಕು” ಎನ್ನುತ್ತಾರೆ ಕುಟ್ಟಿ.

“ಅವರು ಈ ಹಗ್ಗವನ್ನು ಮಾರುವುದಿಲ್ಲ. ನಡುನಡುವೆ ಆಸಕ್ತರಿಗೆ, ನೋಡಲು ಬಂದವರಿಗೆ ಕೊಡುವುದಿದೆ” ಎನ್ನುತ್ತಾರೆ ತುಳಸೀಧರನ್. ಲೆಕ್ಕ ಇಟ್ಟಿಲ್ಲವಾದರೂ, ಈ ವರೆಗೆ ಕುಟ್ಟಿ ಹೊಸೆದ   ಅಡಿಕೆ ಸಿಪ್ಪೆಯ ಹಗ್ಗ ಒಟ್ಟು 200 ಮೀಟರ್ ಮೀರಬಹುದಂತೆ.

ಅವರು ವಿವಿಧ ಗಾತ್ರದ ಬೇರೆಬೇರೆ ಉದ್ದದ ಹಗ್ಗ ಇವರು ತಯಾರಿಸಿದ್ದಾರೆ. ಅದನ್ನು ಆಡು ಕಟ್ಟಲು ಬಳಸಿದ್ದು ಬಿಟ್ಟರೆ ಬೇರೆ ರೀತಿ ಉಪಯೋಗಿಸಿ ನೋಡಿಲ್ಲ.

“ನಾವು ಅಡಿಕೆ ಸಿಪ್ಪೆಯ ಹಗ್ಗವನ್ನು ಟಗ್ ಆಫ್ ವಾರಿನಂತೆ ಆಚೀಚೆಯಿಂದ ಎಳೆದು. ಬೇರೆಬೇರೆ ರೀತಿ ಜಗ್ಗಿ ಪರೀಕ್ಷಿಸಿದ್ದೇವೆ. ಬಹುಶಃ ತೆಂಗಿನ ನಾರಿನ ಹಗ್ಗಕ್ಕಿಂತಲೂ ಗಟ್ಟಿ ಎನಿಸುತ್ತದೆ. ಸುಲಭದಲ್ಲಿ ತುಂಡಾಗುವುದಿಲ್ಲ” ಎನ್ನುತ್ತಾರೆ ತುಳಸೀಧರನ್.

ಈಚೆಗೆ ಸಿಪಿಸಿಆರ್‍ಐಯ ಕಾಯಂಗುಳಂ ಕೇಂದ್ರದಲ್ಲಿ ಪೂವನ್ ಕುಟ್ಟಿ ಅವರನ್ನು ಸನ್ಮಾನಿಸಿದರು. ಆ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ರೆಗಿ ಥಾಮಸ್ ಅವರ ಪ್ರಕಾರ, “ಅಡಿಕೆಯ ಸಿಪ್ಪೆಯಿಂದ ಹಗ್ಗ ತಯಾರಿಯ ಮಾಡುವ ಕಲೆ ಕುಟ್ಟಿ ಅವರಿಗೆ ಮಾತ್ರ ಸಿದ್ಧಿಸಿದೆ; ಬೇರಾರೂ ಈ ಕೌಶಲ್ಯದಲ್ಲಿ ಯಶಸ್ವಿಯಾಗಿಲ್ಲ್ಲ ಎನ್ನುತ್ತಾರೆ ಅವರು.”

ತುಳಸೀಧರನ್ - 94001 40037 (7 - 8 Pm)

(ಸುಳಿವು : ಡಾ. ರೆಗಿ ಥಾಮಸ್, ಸಿಪಿಸಿಆರ್‍ಐ, ಕಾಯಂಗುಳಂ)