“ಕಮಿಶನ್ ಕೊಡಬೇಕಾದರೆ ದರ ಹೆಚ್ಚಿಸಬೇಕು. ಅದು ಗ್ರಾಹಕರಿಗೆ ಹೊರೆ. ದರ ಕುಗ್ಗಿಸಿದರೆ ಗುಣಮಟ್ಟ ಕಡಿಮೆ ಮಾಡಬೇಕು. ಈ ಉಸಾಬರಿಗಳೇ ಬೇಡ. ಆನ್ಲೈನ್ ವ್ಯಾಪಾರವೇ ಒಳ್ಳೆಯದು”
- ಟೀಮ್ ಅಪ
ಕರಾವಳಿಯ ಜನಪ್ರಿಯ ಹಲಸಿನ ಉತ್ಪನ್ನ ‘ಉಪ್ಪುಸೊಳೆ’ ಯಾರಿಗೆ ಗೊತ್ತಿಲ್ಲ? ಅದರ ಪಲ್ಯ, ರೊಟ್ಟಿ, ಉಂಡ್ಲುಕಕ್ಕೆ (ಉಂಡ್ಲಕಾಳು) ಸೆಳೆರುಚಿ. ತರಕಾರಿ ಅಂಗಡಿ, ಮೇಳಗಳಲ್ಲಿ ಪ್ಲಾಸ್ಟಿಕ್ ಕವರಿನೊಳಗೆ ಉಪ್ಪುಸೊಳೆಯನ್ನು ಪ್ಯಾಕ್ ಮಾಡಿ ಮಾರಾಟ ಮಾಡುತ್ತಿರುವುದನ್ನು ನೋಡಿದ್ದೇವೆ.
ಅದನ್ನೇ ಈ ವರೆಗೆ ಯಾರೂ ಜಾಡಿಯೊಳಗೆ ತುಂಬಿ, ಲೇಬಲ್ ಅಂಟಿಸಿ ಬ್ರಾಂಡ್ ಮಾಡಿ ಮಾರಿಲ್ಲ. ಈಗ ಉಪ್ಪುಸೊಳೆಗೂ ಬ್ರಾಂಡಿಂಗ್ ಭಾಗ್ಯ!
ತುಳುನಾಡಿನ ‘ಉಪ್ಪಾಡ್ ಪಚ್ಚಿಲ’ನ್ನು ಬ್ರಾಂಡ್ ಮಾಡಿದವರು ಉಡುಪಿ ಸಂತೆಕಟ್ಟೆಯ ಕೃಷಿಕ ಸದಾನಂದ ನಾಯಕ್. ಇದರ ಶೇ.90ರಷ್ಟನ್ನೂ ಆನ್‍ಲೈನಿನಲ್ಲಿ ನೇರ ಗ್ರಾಹಕರಿಗೇ ಮಾರಿರುವುದು ಅವರ ಇನ್ನೊಂದು ಸಾಧನೆ. ಇವರ ಉತ್ಪನ್ನದ ವ್ಯಾಪಾರಿನಾಮ ‘ಫಾರ್ಮ್ ಫ್ರೆಶ್’.
ಹಿಂದೆ ಮನೆ ಬಳಕೆಗಷ್ಟೇ ಉಪ್ಪುಸೊಳೆ ತಯಾರಿಸುತ್ತಿದ್ದರು. ಕಳೆದ ವರುಷ ಮಾರಾಟ ಆರಂಭಿಸಿದ್ದರು. ಉತ್ತಮ ಸ್ಪಂದನ. ಈ ವರುಷ ಉದ್ದಿಮೆ ಸ್ವರೂಪ ನೀಡಿದರು. ಸೊಳೆ ಕಾಪಿಡುವ, ಗುಣಮಟ್ಟ ಉಳಿಸುವ ಹಾಗೂ ಬ್ರಾಂಡಿಂಗಿನ ಬಗ್ಗೆ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಬೇತಿ.
ಉಪ್ಪುಸೊಳೆ ಮತ್ತಿತರ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಕೇಂದ್ರ ಸರಕಾರದ ‘ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಯೋಜನೆ (PMFME) ಯಿಂದ ಆರ್ಥಿಕ ಸಹಾಯ ಪಡೆದಿದ್ದಾರೆ.
“ಇಷ್ಟೆಲ್ಲಾ ಅಡಿಗಟ್ಟಿನ ಬಳಿಕ ಧೈರ್ಯ ಬಂತು. ಕಳೆದ ವರುಷ ಒಂದೂವರೆ ಕ್ವಿಂಟಾಲ್, ಈ ವರುಷ ಸುಮಾರು ಎರಡು ಕ್ವಿಂಟಾಲಿನಷ್ಟು ಉಪ್ಪುಸೊಳೆ ಸಿದ್ಧಪಡಿಸಿದ್ದೇನೆ. ಈ ಉತ್ಪನ್ನಕ್ಕೆ ಗ್ರಾಹಕರು ಇಲ್ಲ ಎಂದಾಗದು” ಎನ್ನುತ್ತಾರೆ.
ಒಂದು ಕಿಲೋದ ಉಪ್ಪುಸೊಳೆ ಜಾಡಿಗೆ ರೂ. 120. ಕೊರಿಯರ್, ಅಂಚೆ ವೆಚ್ಚ ಪ್ರತ್ಯೇಕ. ಬೆಂಗಳೂರು, ಮುಂಬಯಿ, ಪುಣೆ ಮೊದಲಾದ ನಗರಗಳಲ್ಲಿ ಹಲಸಿನ ರುಚಿ ಅರಿತ ಗ್ರಾಹಕರಿದ್ದಾರೆ. ಉತ್ಪನ್ನಗಳ ಪ್ರಚಾರಕ್ಕೆ ಫೇಸ್‍ಬುಕ್, ವಾಟ್ಸಾಪ್ ಗುಂಪುಗಳ ಬಳಕೆ. ಬಾಯಿಂದ ಬಾಯಿಗೆ ಪ್ರಚಾರ.
“ಒಂದು ಕಿಲೋದ ಜಾಡಿಯಲ್ಲಿ ಸುಮಾರು 700 - 800 ಗ್ರಾಮಿನಲ್ಲಿ ಸೊಳೆ, ಮಿಕ್ಕಿದ್ದು ಉಪ್ಪು ನೀರು. ಇದು ಸೊಳೆಯ ಸಂರಕ್ಷಣೆಗಾಗಿ” ಎನ್ನುತ್ತಾರೆ ನಾಯಕ್.
ಸ್ಥಳೀಯ ಅಂಗಡಿಗಳಲ್ಲಿ ಮಾರಾಟವಿಲ್ಲ. ಕಾರಣ, ಕಮಿಶನ್ ಮತ್ತು ದರಗಳಲ್ಲಿ ಪೈಪೋಟಿ. “ಕಮಿಶನ್ ಕೊಡಬೇಕಾದರೆ ದರ ಹೆಚ್ಚಿಸಬೇಕು. ಅದು ಗ್ರಾಹಕರಿಗೆ ಹೊರೆ. ದರ ಕುಗ್ಗಿಸಿದರೆ ಗುಣಮಟ್ಟ ಕಡಿಮೆ ಮಾಡಬೇಕು. ಈ ಉಸಾಬರಿಗಳೇ ಬೇಡ. ಆನ್ಲೈನ್ ವ್ಯಾಪಾರವೇ ಒಳ್ಳೆಯದು” ಎನ್ನುವ ನಿಲುವು. “ಬ್ರಾಂಡ್ ಮಾಡಿದ್ದರಿಂದ ಉತ್ಪನ್ನವನ್ನು ಜನ ಗುರುತಿಸುತ್ತಾರೆ. ಆಹಾರ ಇಲಾಖೆಯಿಂದ ಪರವಾನಿಗೆ ಪಡೆಯ ಗುಣಮಟ್ಟ ಕಾಯಲೇಬೇಕು” ಎನ್ನುತ್ತಾರೆ.
ಕಳೆದ ವರುಷ ತಮ್ಮ ಹಿತ್ತಿಲಿನ ಹಲಸಿನ ಕಾಯಿಗಳನ್ನಷ್ಟೇ ಬಳಸಿದ್ದರು. ಈ ವರುಷ ನೆರಯವರಿಂದಲೂ ಖರೀದಿ. ಉಪ್ಪಿನಲ್ಲಿ ಹಾಕಿಟ್ಟ ಸೊಳೆಯು ಮೂವತ್ತು ದಿವಸಗಳ ಬಳಿಕ ಬಳಕೆಗೆ ರೆಡಿಯಾಗುತ್ತದೆ. ಆದೇಶಕ್ಕನುಸಾರವಾಗಿ ಜಾರಿಗೆ ತುಂಬಿಸಿ ಕಳುಹಿಸುತ್ತೇವೆ. “ಸೊಳೆಗಳು ತುಂಬಾ ಮೆದು ಇದ್ದರೆ, ಉಪ್ಪುಸೊಳೆಗೆ ಆಗದು” ಎನ್ನುತ್ತಾರೆ.
ಸದಾನಂದರ ಮುಖ್ಯ ಕೃಷಿ ಅಡಿಕೆ, ಭತ್ತ ಮತ್ತು ತೆಂಗು. ಎಡೆ ಸಮಯದಲ್ಲಿ ಇತರ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ. “ಅರಸಿನ ಬೆಳೆದೆ. ಮಾರುಕಟ್ಟೆಗೆ ಕೊಂಡುಹೋದರೆ ಚಿಲ್ಲರೆ ಬೆಲೆ. ಅದಕ್ಕೊಂದು ಉಪಾಯ ಮಾಡಿದೆ. ಇದನ್ನು ಪೌಡರ್ ಮಾಡಿದೆ. ಗ್ರಾಹಕರಿಗೆ ಇಷ್ಟವಾಯಿತು.”
ಹಲಸಿನ ಕಾಯಿ ಸೊಳೆಗಳನ್ನು ಉಪ್ಪು ನೀರಿನಲ್ಲಿ ಸಂರಕ್ಷಿಸಿ ಇಡುವುದನ್ನು ಉಪ್ಪುಸೊಳೆ ಅನ್ನುತ್ತಾರೆ. ಇದರಿಂದ ಪಲ್ಯ, ಹಪ್ಪಳ, ಸಾಂಬಾರು, ಸೊಳೆ ರೊಟ್ಟಿ ತಯಾರಿ ಪಾರಂಪರಿಕ.
ನಾಯಕರು ಹಪ್ಪಳ, ಉಪ್ಪಿನಲ್ಲಿ ಹಾಕಿಟ್ಟ ಮಾವು, ಕಣಿಲೆ, ಪೆಜಕ್ಕಾಯಿ, ಉದ್ದಿನ ಹಪ್ಪಳ, ಸಾಂಬಾರು ಪುಡಿ ಇತ್ಯಾದಿ ಉತ್ಪನ್ನ ತಯಾರಿಸುತ್ತಾರೆ. ಬಹುತೇಕ ಆನ್‍ಲೈನ್ ಮಾರಾಟ.
ಪತ್ನಿ ಶ್ವೇತಾ ಹೆಗಲೆಣೆ. ಸಹಾಯಕರ ಅವಲಂಬನೆಯಿಲ್ಲ.
ಸದಾನಂದ ನಾಯಕ್, 94481 72728, 94826 57287