ADD

Back To Free Articles

September-2024

ಮನೆಯೇ ಮಾರುಕಟ್ಟೆ

ಕೃಷಿಕರ ಮನೆ ಹೆದ್ದಾರಿಯ ಅಂಚಿನಲ್ಲೇ ಇದೆ. ರಸ್ತೆ ಬದಿಯಲ್ಲಿ ಆರೆಂಟು ಹಣ್ಣು ಇಟ್ಟಿರುತ್ತಾರೆ. ಬೇಕಾದವರು ಕಾರು ನಿಲ್ಲಿಸಿದಾಗ ಮನೆಯ ಹೆಣ್ಮಕ್ಕಳು ಅಲ್ಲಿಗೆ ಹೋಗಿ ವ್ಯಾಪಾರ ಕುದುರಿಸುತ್ತಾರೆ.

- ಅಪ ತಂಡ

 

ಗಿರಾಕಿಗಳು ಕೇಳ್ಕೊಂಡು ಬರ್ತಾರೆ ಸರ್, ಹಾಗಾಗಿ ಬಹುಪಾಲು ಹಲಸನ್ನೂ ಮನೆಯಿಂದಲೇ ಮಾರುತ್ತೇವೆ.” ಇದು ಕಾಚಹಳ್ಳಿಯ ಕೃಷಿಕ ಸುರೇಶರ (49) ಹೆಮ್ಮೆಯ ಮಾತು.

ಇವರಿಗೆ ಮನೆಯೇ ಮಾರುಕಟ್ಟೆ. ಎಷ್ಟು ಜನ ಕೃಷಿಕರಿಗಿದೆ ಈ ಭಾಗ್ಯ ಹೇಳಿ?

ಒಟ್ಟು 22 ಎಕ್ರೆ ಕೃಷಿಭೂಮಿ. ಕೂಡುಕುಟುಂಬ. 30 ಮಂದಿ ಸದಸ್ಯರು. ಬೆಂಗಳೂರಿನಿಂದ ಇವರೂರು 55 ಕಿಲೋಮೀಟರ್. ದೊಡ್ಡಬಳ್ಳ್ಳಾಪುರ - ಚಿಕ್ಕಬಳ್ಳಾಪುರ ರಸ್ತೆಯಂಚಲ್ಲೇ ಮನೆ. ಹಲಸಿನ ಮರಗಳು ಒಟ್ಟು 22 ಇವೆ.

“ನಾವು ಮನೆಯಿಂದಲೇ ಹಲಸು ಮಾರತೊಡಗಿ 25 ವರ್ಷವಾಗಬಹುದು. ಸ್ನೇಹಿತರು, ಗೊತ್ತಿರುವವರು ‘ಹಣ್ಣಿದೆಯೇನ್ರೀ ಅಂತ ಕೇಳುತ್ತಾ ಬರುವವರು. ಆಗೆಲ್ಲಾ ಏನು, 10ರಿಂದ 50 ರೂ.ಗಳೊಳಗೆ ಬೆಲೆ ಹೇಳ್ತಿದ್ವಿ”, ನೆನೆಯುತ್ತಾರೆ ಸುರೇಶ್.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ 2008ರಲ್ಲಿ ತೂಬುಗೆರೆ ಹಲಸು ಬೆಳೆಗಾರರ ಸಂಘ ಸ್ಥಾಪನೆ ಮಾಡಿಕೊಟ್ಟಿತು. ಅನಂತರ ಈ ಕೃಷಿಕರ ಹಲಸು ಮಾರಾಟ ಇನ್ನೂ ಚುರುಕಾಯಿತು. “ಸಂಘ ರಚನೆ ಆದ ಮೇಲೆ ಸಿಕ್ಕಿದ ಬೆಲೆಗೆ ಬೇರೆಯವರಿಗೆ ಹಣ್ಣು ಕೊಡೋದನ್ನು ನಿಲ್ಲಿಸಿದೆವು.  ‘ಕಾಚಹಳ್ಳಿ’ ಹಲಸಿಗೆ ಒಳ್ಳೆ ಹೆಸರು ಬಂತು. ತುಂಬ ಬೆಳೆಯಿದ್ದ ಮರವೊಂದಕ್ಕೆ ಮಧ್ಯವರ್ತಿಗಳು 5ರಿಂದ 10,000 ಕೊಡಹತ್ತಿದರು.” ಉಳಿದವನ್ನು ಇವರೇ ಮಾರುತ್ತಿದ್ದರು.

ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇವರದೇ ರಸ್ತೆಯಲ್ಲಿ ಹೋಗಬೇಕು. ದೂರ ಆರು ಕಿಲೋಮೀಟರ್. ಅಲ್ಲಿ ಹೋದವರು ಹನ್ನೆರಡು ಕಿಲೋಮಿಟರ್ ದೂರದ ನಂದಿ ಹಿಲ್ಸಿಗೂ ವಿಹಾರ ಹೋಗುತ್ತಾರೆ. ವಾರಾಂತ್ಯ ಸಂದರ್ಶಕರು ಜಾಸ್ತಿ. “ಜತೆಗೆ ಯೂನಿವರ್ಸಿಟಿಯವರು ನಮ್ಮ ಹಲಸಿಗೆ ಕೊಟ್ಟ ಪ್ರಚಾರವೂ ಸೇರಿಕೊಂಡಾಗ ಹಲಸಿಗೆ ಒಳ್ಳೆ ಕಾಲ ಬಂತು”, ಸುರೇಶ್ ವಿವರಿಸುತ್ತಾರೆ.

ಈ ಹಿಂದೆ ಹಣ್ಣು ಕೊಂಡವರು ಮೊದಲೇ ಫೋನಿಸಿ, ‘ಹಿಂದೆ ಬರ್ತಾ ನಮಗೆ ಎರಡು ಹಣ್ಣು ಬೇಕು’ ಅಂತ ಹೇಳುವುದು ಸಾಮಾನ್ಯ. ಸುತ್ತುಮುತ್ತಲಿರುವ ಕೃಷಿಕರೂ ಕೂಡಾ ‘ಒಳ್ಳೆ ಹಣ್ಣು ಬೇಕಾದರೆ ಸುರೇಶಣ್ಣನ ಮನೆಗೆ ಹೋಗಿ’ ಎಂದು ಕಳಿಸೋದು ಇದೆಯಂತೆ.

‘ಅಂಗಡಿ’ ಅಂದರೆ ಏನೂ ಇಲ್ಲ. ಮನೆ ಆವರಣದ ಹೊರಗೆ ರಸ್ತೆಯ ಬದಿಯಲ್ಲೇ ನಾಲ್ಕಾರು ಹಣ್ಣು ಇಟ್ಟಿರುತ್ತಾರೆ. ವಿಷಯ ಗೊತ್ತಿರುವ ಗ್ರಾಹಕರ ಕಾರು ನಿಲ್ಲುತ್ತದೆ. ಮನೆಯವಲ್ಲಿದ್ದ ಯಾರಾದರೂ ಹೋಗಿ ವ್ಯಾಪಾರ ಕುದುರಿಸುತ್ತಾರೆ. ಹಣ್ಣಿನ ಗಾತ್ರ, ಗುಣಮಟ್ಟ ಹೊಂದಿ 150ರಿಂದ 350 ರೂ. “ನಾವು ಗಂಡಸರು ಹೊಲಗಳಲ್ಲಿ ಕೆಲಸದಲ್ಲಿರುತ್ತೇವೆ. ಮನೆ ಹೆಣ್ಮಕ್ಕಲೇ ವ್ಯಾಪಾರ ನಿಭಾಯಿಸುತ್ತಾರೆ. ಶನಿ, ಭಾನುವಾರಗಳಲ್ಲಿ ತಲಾ 3,000 ರೂ. ವರೆಗೂ ಸಿಕ್ಕಿದ್ದಿದೆ.”

ಇವರ 22 ಮರಗಳಲ್ಲಿ 8 ಮರ ತುಂಬಾ ಹೆಚ್ಚು ಇಳುವರಿಯದ್ದು. 500 - 600 ಹಣ್ಣಾಗುವುದೂ ಇದೆ. ಇದರಲ್ಲಿ 6 - 7 ಚಂದ್ರ ಹಲಸು - ಕೆಂಪು ಸೊಳೆಯದ್ದು. ಇವರ ಒಂದು ಉತ್ತಮ ತಳಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಡಾ. ಶ್ಯಾಮಲಮ್ಮ ಗುರುತಿಸಿ ‘ಕೆಟಿ - 18’ ಎಂಬ ಹೆಸರು ಕೊಟ್ಟಿದ್ದಾರೆ. ಕೃವಿವಿಯಲ್ಲೂ ಇದರ ಕಸಿ ಗಿಡ ಮಾಡಿ ಮಾರುತ್ತಿದ್ದಾರೆ ಎನ್ನುತ್ತಾರೆ ಇವರು.

ಸುರೇಶ್ ಈಚೆಗಿನ ವರ್ಷಗಳ ವರೆಗೂ ಹಲಸಿನ ಮೇಳಗಳಿಗೆ ಮಿನಿರಾಜು ಅವರ ಜತೆ ಹಣ್ಣು ಒಯ್ಯುತ್ತಿದ್ದರು. ಈಚೆಗೆ ಸ್ವಲ್ಪ ಕಡಿಮೆ ಮಾಡಿದ್ದಾರೆ. ಮನೆ ಮಾರುಕಟ್ಟೆಗೇ ಈಗ ಹೆಚ್ಚಿನ ಗಮನ.  ಇವರೇ ಹಣ್ಣು ತಿಂದು ಎಸೆದ ನಾಲ್ಕು ಹೊಸ ಗಿಡಗಳಲ್ಲೂ ಬೆಳೆ ಬರತೊಡಗಿದೆ. ಅವೆಲ್ಲವೂ ಕೆಂಪೇ. “ಕೆಂಪು ಸೊಳೆಯದಿದೆಯೇ ಎಂದು ಕೇಳುವ ಗ್ರಾಹಕರು ಹೆಚ್ಚು.”

ಈ ಕುಟುಂಬಕ್ಕೆ ವರ್ಷಕ್ಕೆ ಸರಿಸುಮಾರು ಒಂದೂಮುಕ್ಕಾಲು ಲಕ್ಷ ರೂ. ಹಲಸಿನಿಂದಲೇ ಬರುತ್ತದೆ.

ಸುರೇಶ್ - 98451 70030 (7 - 8 pm)