ಹೂಕೋಸು, ಎಲೆಕೋಸುಗಳ ಬೇರಿನಿಂದ ಹೂ ತನಕ ಕೀಟಗಳಿಗೆ ರುಚಿ. ಹಾಗಾಗಿ ಎಲೆ ತಿನ್ನುವ, ಬೇರು ತಿನ್ನುವ ಕೀಟಗಳು ಬೇಗ ಆಕ್ರಮಿಸುತ್ತವೆ. ಗಿಡಗಳನ್ನು ತುಂಡರಿಸುತ್ತವೆ. ಇವುಗಳ ನಿಯಂತ್ರಣಕ್ಕೆ ಸೂರಿ ಕಷಾಯ ಸಿಂಪಡಣೆ ಮಾಡುತ್ತಾರೆ. “ಹಸಿಮೆಣಸು, ಸಾಸಿವೆ, ಬೆಳ್ಳುಳ್ಳಿ ಇವುಗಳನ್ನು ರುಬ್ಬಿ, ಸೋಸಿ ಇಟ್ಟುಕೊಳ್ಳ್ಳಿ. ಅದನ್ನು 50 : 50 ಪ್ರಮಾಣದಲ್ಲಿ ನೀರಿನೊಂದಿಗೆ ಮಿಶ್ರಮಾಡಿ ಸಿಂಪಡಿಸಿದರೆ ಹುಳಗಳ ಬಾಧೆ ಕಡಿಮೆ” ಎನ್ನುತ್ತಾರೆ.
- ಅಪ ಬಳಗ
ಪ್ರದೀಪ್ ಸೂರಿಯವರು ಸಾವಯವ ಕೃಷಿಕರು. ಮಂಗಳೂರು ಕುಳಾಯಿ - ಹೊಸಬೆಟ್ಟಿನವರು. ಐದಾರು ವರುಷಗಳಿಂದ ಕ್ಯಾಬೇಜ್, ಕಾಲಿಪ್ಲವರ್ ಬೆಳೆಯುತ್ತಿದ್ದಾರೆ. ಇವು ಮೂರು ತಿಂಗಳ ಬೆಳೆ.
ಸೂರಿಯವರು ಮಾರುಕಟ್ಟೆಯ ಉದ್ದೇಶದಿಂದ ಕೃಷಿ ಮಾಡುತ್ತಿಲ್ಲ. ಸ್ವಂತಕ್ಕೆ ಮತ್ತು ಆಪ್ತೇಷ್ಟರಿಗೆ ಹಂಚಿಕೆ. “ಆರಂಭಕ್ಕೆ ಬಹಳ ಚೆನ್ನಾಗಿ ಬಂದಿತ್ತು. ಮಂಗಳೂರಿನ ಸಾವಯವ ಬಳಗದ ಸಂತೆಯಲ್ಲಿ ಮಾರಾಟ ಮಾಡಿದ್ದೆ”. ನೆನಪು ಮಾಡಿಕೊಳ್ಳುತ್ತಾರೆ.
ಇವರು ಕಾಲಿಫ್ಲವರ್, ಕ್ಯಾಬೇಜ್; ಪಾಕ್ ಚೋಯ್, ಸೆಲೆರಿ, ಲೆಟ್ಯೂಸ್ ಇತ್ಯಾದಿ ಎಲೆ ತರಕಾರಿಗಳಲ್ಲದೆ ಕ್ಯಾರೆಟ್, ಮೂಲಂಗಿ, ಟೊಮೆಟೋ, ನವಿಲುಕೋಸು, ಬ್ರೊಕೋಲಿಗಳನ್ನೂ ತಮಗಾಗಿ ಬೆಳೆದದ್ದಿದೆ.
ಅಕ್ಟೋಬರ್ ಬಳಿಕ ಗಿಡ ನಾಟಿ. ವಾರಕ್ಕೊಮ್ಮೆ ನಿಯಮಿತವಾಗಿ ಗೊಬ್ಬರ ಉಣಿಕೆ. ನೆಲಗಡಲೆ ಹಿಂಡಿ, ಹರಳಿಂಡಿ, ಸೆಗಣಿ ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ ನಾಲ್ಕೈದು ದಿವಸ ಕೊಳೆಸಬೇಕು. ಈ ಮಿಶ್ರಣವು ತುಂಬಾ ದಪ್ಪವಾಗಿರಬಾರದು. ಇದನ್ನು 50 : 50 ಅನುಪಾತದಲ್ಲಿ ನೀರಿನೊಂದಿಗೆ ಮಿಶ್ರ ಮಾಡಿ ಗಿಡಗಳಿಗೆ ಉಣಿಕೆ. ಇದು ಉತ್ತಮ ಗೊಬ್ಬರ.
ಮಣ್ಣು ತಯಾರಿಯ ಬಗ್ಗೆ ಪ್ರದೀಪರ ಸಲಹೆ: ಗಿಡ ನಾಟಿ ಮಾಡುವ ಹತ್ತು, ಹದಿನೈದು ದಿವಸ ಮೊದಲು - ಮಣ್ಣಿನಲ್ಲಿರುವ ಕಸ, ಕಡ್ಡಿ, ಕಲ್ಲುಗಳನ್ನು ತೆಗದು ಶುಚಿಗೊಳಿಸಿ ಹಸನು ಮಾಡಿಟ್ಟುಕೊಳ್ಳಿ. ಇದಕ್ಕೆ ಸೆಗಣಿ, ಸುಡುಮಣ್ಣು ಸೇರಿಸಿ ಮಡಿ ಮಾಡಿಟ್ಟುಕೊಳ್ಳಿ. ಬೇರುಗಳು ಸೂಕ್ಷ್ಮವಾಗಿರುವುದರಿಂದ ಗಿಡಗಳನ್ನು ನಾಟಿ ಮಾಡುವಾಗ ತುಂಬಾ ಎಚ್ಚರ ಬೇಕು.
“ಕಳೆದ ಚಳಿಗಾಲದಲ್ಲಿ ಮಾತ್ರ ವಾತಾವರಣದ ಏರುಪೇರಿನಿಂದಾಗಿ ಹೂಕೋಸು, ಎಲೆಕೋಸುಗಳು (ಕ್ಯಾಬೇಜ್, ಕಾಲಿಪ್ಲವರ್) ಕೈಕೊಟ್ಟುವು” ಎನ್ನುತ್ತಾರೆ. ಚಳಿ ಕಡಿಮೆ ಇದ್ದ ಕಾರಣ ಈ ಅನುಭವ ಸಾರ್ವತ್ರಿಕ. ಈ ತರಕಾರಿಗಳಿಗೆ ರಾತ್ರಿ ಹೊತ್ತು ತಂಪು ಹವೆ ಬೇಕು. ಕಳೆದ ವರುಷ ಹೇಳುವಂತಹ ತಂಪು ಹವೆ ಇದ್ದಿರಲಿಲ್ಲ.
ಹೂಕೋಸು, ಎಲೆಕೋಸುಗಳ ಬೇರಿನಿಂದ ಹೂ ತನಕ ಕೀಟಗಳಿಗೆ ರುಚಿ. ಹಾಗಾಗಿ ಎಲೆ ತಿನ್ನುವ, ಬೇರು ತಿನ್ನುವ ಕೀಟಗಳು ಬೇಗ ಆಕ್ರಮಿಸುತ್ತವೆ. ಗಿಡಗಳನ್ನು ತುಂಡರಿಸುತ್ತವೆ. ಇವುಗಳ ನಿಯಂತ್ರಣಕ್ಕೆ ಸೂರಿ ಕಷಾಯ ಸಿಂಪಡಣೆ ಮಾಡುತ್ತಾರೆ. “ಹಸಿಮೆಣಸು, ಸಾಸಿವೆ, ಬೆಳ್ಳುಳ್ಳಿ ಇವುಗಳನ್ನು ರುಬ್ಬಿ, ಸೋಸಿ ಇಟ್ಟುಕೊಳ್ಳ್ಳಿ. ಅದನ್ನು 50 : 50 ಪ್ರಮಾಣದಲ್ಲಿ ನೀರಿನೊಂದಿಗೆ ಮಿಶ್ರಮಾಡಿ ಸಿಂಪಡಿಸಿದರೆ ಹುಳಗಳ ಬಾಧೆ ಕಡಿಮೆ” ಎನ್ನುತ್ತಾರೆ.
“ಉಳಿದ ತರಕಾರಿಗಳಾದರೆ ಗೊಬ್ಬರ ಕೊಟ್ಟು ನಾಲ್ಕೈದು ದಿವಸ ಮರೆತರೂ ತೊಂದರೆ ಯಾಗುವುದಿಲ್ಲ. ಇವುಗಳು ಹಾಗಲ್ಲ. ಪ್ರತಿ ದಿವಸವೂ ಕೀಟಗಳು ಬಂದಿವೆಯೋ, ಗಿಡಗಳು ಸೊರಗಿ ದೆಯೋ ಎಂದು ಎಚ್ಚರದಿಂದ ನೋಡುತ್ತಿರಬೇಕು”.
ತರಕಾರಿ ಕೃಷಿ ಮಾಡುವ ಜಾಗದ ಸುತ್ತ ನೆರಳು ಬಲೆ ಹಾಕಿದರೆ ಮಿಡತೆಗಳ ಹಾವಳಿ ಕಡಿಮೆ.
(ಓದಿ : ಅಪ / ದಶಂಬರ 2017 / ‘ನಾವೂ ಕ್ಯಾಬೇಜ್ ಬೆಳೆದೆವು’)
94488 71231 (ಸಂಜೆ 6 - 8)