ADD

Back To Free Articles

May-2024

ಗೌರಿಗೆ ಒಲಿದ ಗಂಗೆ

ಅಂಗನವಾಡಿಯ ಚಿಣ್ಣರಿಗೆ ಸರಕಾರ ಕುಡಿನೀರು ಒದಗಿಸಿಲ್ಲ. ಕೆಲಸ ಮಾಡಿದ ಮಹಾನ್ ವ್ಯಕ್ತಿ, ಏಕವ್ಯಕ್ತಿ ಸೈನ್ಯ ಕಟ್ಟಿ ಛಲ ವಹಿಸಿದ ಕೂಲಿಗಾರ್ತಿ ಗೌರಿ.

- ಶಿವಾನಂದ ಕಳವೆ

 
no image
 

ಶಿರಸಿಯ ಗಣೇಶ ನಗರದ ಗೌರೀ ನಾಯ್ಕರ ಜಲಕಾಯಕ ಈಗ ರಾಜ್ಯ ಸುದ್ದಿ. ಎಲ್ಲಾ ಮಾಧ್ಯಮಗಳಲ್ಲಿ ಯಶದ ಗಾಥೆಗಳು. ಕಾರಣ, ಅಂಗನವಾಡಿಯ ನೀರಿನ ಸಮಸ್ಯೆಗೆ ಸ್ವತಃ ಬಾವಿ ತೋಡಿ ಯಶಸ್ಸು. ಬಹುಶಃ ಇಷ್ಟೇ ಆಗುತ್ತಿದ್ದರೆ ಮಾಧ್ಯಮ ಕತ್ತು ತಿರುಗಿಸುತ್ತಿರಲಿಲ್ಲವೋ ಏನೋ. ಅವರ ಕಾಯಕಕ್ಕೆ ಎದುರಾದ ಅಡ್ಡಿಗಳನ್ನು ಛಲದಿಂದ ಎದುರಿಸಿ, ತನ್ನ ಸಂಕಲ್ಪವನ್ನು ಈಡೇರಿಸಿದ ದಿಟ್ಟ ನಿಲುವುಗಳಿಂದಾಗಿ ಗೌರಿ ನಾಯ್ಕರ ಕತೆ ಸುದ್ದಿಯಾಯಿತು.

ಗೌರಿ ಅಕ್ಕ ಓದಿದ್ದು ಎರಡನೇ ತರಗತಿ. ಹೊಟ್ಟೆಪಾಡಿಗಾಗಿ ಕೂಲಿ ಬದುಕು. ಎಳೆಯ ವಯಸ್ಸಿನಲ್ಲೇ ವೈಧವ್ಯ. ಮನೆಯ ಹಿಂದೆ ಸಣ್ಣ ತೋಟ ಎಬ್ಬಿಸಿದರು. ಹಸಿರಿನ ನಡುವೆ ನೋವು ನುಂಗಿದರು. ಬದುಕಿನ ಬಳ್ಳಿಗಳಾದ ಮಕ್ಕಳನ್ನು ಬೆಳೆಸಿದರು. ತೋಟಕ್ಕೆ ನೀರಿಲ್ಲವೆಂದು ಎರಡು ಬಾವಿಗಳನ್ನು ಸ್ವತಃ ತೆಗೆದರು.

ಹತ್ತಾರು ಮಂದಿ ಸಹಾಯಕರ ಸಹಾಯದಿಂದ, ಹೊಸ ತಂತ್ರಜ್ಞಾನಗಳ ನೆರವಿನಿಂದ ಸುಲಭದಲ್ಲಿ ರಾತ್ರಿ ಬೆಳಗಾಗುವುದರೊಂದಗೆ ಬಾವಿ ಕೊರೆಯಬಹುದು.  ಗೌರಿ ನಾಯ್ಕರದು ಏಕ ವ್ಯಕ್ತಿ ಸೈನ್ಯ. ಮನೆಯಿಂದ ಕೂಗಳತೆ ದೂರದ ಅಂಗನವಾಡಿಯ ಮಕ್ಕಳಿಗೆ ಕುಡಿಯುವ ನೀರಿಗಾಗಿ ಬಾವಿ ತೆಗೆಯಲು ನಿರ್ಧಾರ ಮಾಡಿದರು. ಸ್ವಂತಕ್ಕಾಗಿ ಮಾಡಿದ ಎರಡು ಬಾವಿಗಳಲ್ಲಿ (2017, 2021) ಸಮೃದ್ಧಿಯಾಗಿ ನೀರು ತೆಗೆದ ಅನುಭವವೇ ಮೂರನೇ ಬಾವಿಗೆ ಶ್ರೀಕಾರ. ಅದೂ ಮಕ್ಕಳ ಹೊಟ್ಟೆ ತಂಪು ಮಾಡಲು!

ಬಕೆಟು, ಹಗ್ಗಗಳು, ಗುದ್ದಲಿ, ಪಿಕ್ಕಾಸಿ, ಏಣಿ.. ಇವಿಷ್ಟು ಹತ್ಯಾರಗಳು. ಬೆಳ್ಳಂಬೆಳಿಗ್ಗೆ ಎದ್ದು   ಅಗೆಯುವ ಕಾಯಕ. ಅಗೆಯುತ್ತಾ ಹೋದಂತೆ ಬಕೆಟಿಗೆ ಮಣ್ಣು ತುಂಬಿದರು. ಏಣಿಯ ಮೂಲಕ ಮಣ್ಣು ತುಂಬಿದ ಬಕೆಟನ್ನು ತಲೆಯಲ್ಲಿ ಹೊತ್ತು ಮೇಲೇರುತ್ತಿದ್ದರು. ಬಕೆಟಿನಿಂದ ಮಣ್ಣನ್ನು ಖಾಲಿ ಮಾಡಿದ ಬಳಿಕ ಪುನಃ ಬುಟ್ಟಿಯೊಂದಿಗೆ ಇಳಿದು ಮಣ್ಣು ತುಂಬಿಸುವುದು. ಹೀಗೆ ನಿರಂತರ ತಿಂಗಳುಗಟ್ಟಲೆ ಕೆಲಸ.

ಯೋಚಿಸಿ. ಗೌರಿ ಎಷ್ಟು ಬಾರಿ ಬಾವಿಗೆ ಇಳಿದಿರಬಹುದು,  ಏರಿರಬಹುದು? ಅವರ ಶ್ರಮ ವ್ಯರ್ಥವಾಗಲಿಲ್ಲ. ನಲವತ್ತೈದು ಅಡಿಯಲ್ಲೇ ಗಂಗೆ ಪ್ರತ್ಯಕ್ಷಳಾದಳು.

ಬಾವಿ ತೆಗೆಯುತ್ತಿದ್ದಂತೆ ಇಲ್ಲಸಲ್ಲದ ನೆಪವೊಡ್ಡಿ ಬಾವಿ ಮುಚ್ಚಿಸುವ ಒತ್ತಡ ಬರುತ್ತಿತ್ತು. ‘ಅಂಗನವಾಡಿಯ ಜಾಗ ನಿಮ್ಮದಲ್ಲ. ಅದಕ್ಕೆ ಪರವಾನಿಗೆ ಇಲ್ಲ, ಸುರಕ್ಷತೆ ಇಲ್ಲ’ ಎನ್ನುವ ರೀತಿಯ ಹತ್ತಾರು ಸಬೂಬುಗಳು. ಮೂವತ್ತು ಅಡಿ ಅಗೆದಾಗುವ ಹೊತ್ತಿಗೆ ನಿಲ್ಲಿಸುವಂತೆ ಆದೇಶ. ಒಂದು ಹಂತದಲ್ಲಿ ಗೌರಿ ಅಧೀರರಾದರು. ಒಂದಷ್ಟು ಮಂದಿ ಜಲಪ್ರೇಮಿಗಳ ಬೆಂಬಲ ಸಿಕ್ಕಿತು. ಸಂಸದರೂ ಕೈಜೋಡಿಸಿದರು. ಅಡ್ಡಿಗಳು ನಿವಾರಣೆಯಾದುವು. ಗೌರಿ ಕಾಯಕ ಮುಂದುವರಿಸಿದರು.

ಶಿರಸಿಯಂತಹ ಮಲೆನಾಡಿನ ಪ್ರದೇಶದಲ್ಲಿ ತೆರೆದ ಬಾವಿ. ಬಳಕೆ ಎಲ್ಲೆಡೆ ಸಾಮಾನ್ಯವಾಗಿತ್ತು. ಈಗ ಕೊಳವೆ ಬಾವಿಗಳು ಹೆಚ್ಚುತ್ತ ಅಂತರ್ಜಲ ಮಟ್ಟ ಕುಸಿದಿದೆ. ಪಾರಂಪರಿಕ ತೆರೆದ ಬಾವಿ ತೋಡುವ ಕಾರ್ಯವನ್ನು ರಾಜ್ಯಕ್ಕೆ ನೆನಪಿಸುವ, ಸ್ಥಳೀಯ ಜ್ಞಾನಕ್ಕೆ ಮಹತ್ವ ನೀಡುವ ಕಾರ್ಯ ಗೌರಿಯದು. ಯಾರ ಬಳಿಯೂ ಸಹಾಯ ಕೇಳದೆ ಒಂಟಿಯಾಗಿ ಬಾವಿ ತೆಗೆಯುವ ಕಾರ್ಯ ಮಾಡಿದ ಗೌರಿಯ ಕಾಯಕದಿಂದ ಪಾಠ ಕಲಿಯಬೇಕಿದೆ.

ತನ್ನ ತೋಟಕ್ಕೆ ನೀರಿನ ಕೊರತೆ ಆದಾಗ ಒಬ್ಬರೇ 60 - 65 ಆಡಿ ಆಳದ ಬಾವಿ ತೆಗೆದ ಗೌರಿ ನಾಯ್ಕರ ಅನುಭವಕ್ಕೆ ಶರಣು. ಅಂಗನವಾಡಿಗಾಗಿ ತೆಗೆದ ಬಾವಿಯಲ್ಲೇನೋ ನೀರು ಸಿಕ್ಕಿತು. ಆದರೆ ರಿಂಗ್ ಇಳಿಸುವುದು, ಸುರಕ್ಷೆಗಾಗಿ ಕಟ್ಟೆ ಕಟ್ಟುವ ಕೆಲಸಗಳು ಆಗಬೇಕಿದೆ.

ಗೌರಿಯವರ ತನುಶ್ರಮ ಮತ್ತು ಅಂಗನವಾಡಿಯ ಮಕ್ಕಳ ಮೇಲಿನ ಪ್ರೀತಿಯ ಗಾಢತೆಗಾಗಿ ಸಂಸದರು ‘ಜಲಗೌರಿ’ ಅಭಿದಾನದಿಂದ ಗೌರವಿಸಿದ್ದಾರೆ.

ಅಂಗನವಾಡಿಯ ಮಕ್ಕಳಿಗೆ ಈಗ ಬಾವಿಯ ನೀರಿನ ಸಿಹಿ. ಹೊಟ್ಟೆ ತಂಪು. ಗಂಗೆ ಗೌರಿಯನ್ನು ಹರಸಿದ ಗಾಥೆ ನಮಗೆಲ್ಲಾ ಸ್ಫೂರ್ತಿಯಾಗಲಿ. ಈ ಬಾವಿಯೀಗ ‘ಗೌರಿ ಬಾವಿ’. ಗೌರಿಯಕ್ಕ ಪಾರಂಪರಿಕ ತೆರೆದ ಬಾವಿಗಳ ಜಾಗೃತಿಯ ರಾಯಭಾರಿ.

(ಈ ಲೇಖನ ಶಿವಾನಂದ ಕಳವೆಯವರ ಬರಹ ಆಧಾರಿತ.  ಸಂಪಾದಿಸಿ ಪ್ರಕಟಿಸಿದ್ದೇವೆ.  ಚಿತ್ರಗಳೂ ಕಳವೆ ಅವರದೇ)