ADD

Back To Free Articles

April-2024

ಕೇಕೃವಿಯ ಉಪ್ಪುಗುಜ್ಜೆ ವಿಧಾನ

ಎಳೆ ಹಲಸನ್ನು ಒಂದು ವರ್ಷ ಕಾಲ ಸಂರಕ್ಷಿಸಿ ಇಡಲು ಕ್ರಮ ಅನುಸರಿಸಬಹುದು.

- ಅಪ ಬಳಗ

 

ಕೇರಳ ಕೃಷಿ ವಿಶ್ವವಿದ್ಯಾಲಯ (ಕೇಕೃವಿ) ಎಳೆಹಲಸನ್ನು (ಗುಜ್ಜೆ) ಉಪ್ಪುನೀರಿನಲ್ಲಿ ಸಂರಕ್ಷಿಸುವ ವಿಧಾನವನ್ನು ಸರಳೀಕರಿಸಿ ಅಭಿವೃದ್ಧಿಪಡಿಸಿದೆ. ಈ ಉತ್ಪನ್ನವನ್ನು ನಾವು ಉಪ್ಪುಗುಜ್ಜೆ ಎಂದು ಕರೆಯೋಣ.

ಕಾಂಞಂಗಾಡ್ ಬಳಿ ಇರುವ ಪಡನಕ್ಕಾಡ್ ಕೃಷಿ ಕಾಲೇಜಿನಲ್ಲಿ ಈ ಅಧ್ಯಯನ ನಡೆದಿದೆ. ಅ ಈ ವಿಧಾನವನ್ನು ಸ್ಟಾಂಡರ್ಡೈಸ್ ಮಾಡಿದ ವಿಜ್ಞಾನಿ ಅಲ್ಲಿನ ಆಹಾರ ಮತ್ತು ಪೋಷಕಾಂಶ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವಿ. ಕೃಷ್ಣಶ್ರೀ.

ಮೊತ್ತಮೊದಲು  ಶೇಕಡಾ ಹತ್ತರ ಉಪ್ಪುನೀರು ದ್ರಾವಣ ಮಾಡಿಕೊಳ್ಳಬೇಕು. ಇದಕ್ಕಾಗಿ ಕುದಿಸಿ ತಣಿಸಿದ ನೀರು ಬಳಸುವುದು ಉತ್ತಮ. ಒಂದು ಲೀಟರ್ ನೀರಿಗೆ ನೂರು ಗ್ರಾಂ ಉಪ್ಪು ಹಾಕಿ. ಕಲ್ಲುಪ್ಪು ಬಳಸಬಹುದು. ಆದರೆ ಅಂಗಡಿಗಳಲ್ಲಿ ಸಿಗುವ ಒಳ್ಳೆ ಗುಣಮಟ್ಟದ ಶುದ್ಧೀಕರಿಸಿದ ಉಪ್ಪು ಇನ್ನೂ ಒಳ್ಳೆಯದು. ಉಪ್ಪುನೀರನ್ನು ಕುದಿಸಿ ತಣಿಸಿ ಇಟ್ಟುಕೊಳ್ಳಬೇಕು.

ಉಪ್ಪುಗುಜ್ಜೆ ಹಾಕಿಡಲು ಒಳ್ಳೆಯ ಗಾಜಿನ ಬಾಟ್ಲಿ ಬಳಸಿ. ಇದನ್ನು ಚೆನ್ನಾಗಿ ತೊಳೆದು ಒಂದಿಷ್ಟು ತೇವಾಂಶವೂ ಉಳಿಯದಂತೆ ಒಣಗಿಸಿ ಮೊದಲೇ ಇಟ್ಟುಕೊಂಡಿರಬೇಕು. ಬಾಟ್ಲಿಯಲ್ಲಿ ಸ್ವಲ್ಪವೂ ತೇವಾಂಶ ಉಳಿಯಬಾರದು.

ಈಗ ತುಂಡರಿಸಿದ ಗುಜ್ಜೆಯನ್ನು ಬಾಟ್ಲಿಗೆ ತುಂಬಿ. ಈ ತುಂಡುಗಳೆಲ್ಲಾ ಸರಿಯಾಗಿ ಮುಳುಗುವಷ್ಟು ಮಾಡಿಟ್ಟ ಉಪ್ಪುನೀರು ದ್ರಾವಣವನ್ನು ಹೊಯ್ಯಿರಿ. ಕೊನೆಗೆ ಮುಚ್ಚಳವನ್ನು ಸರಿಯಾಗಿ, ಅಂದರೆ ಒಳಗೆ ಗಾಳಿ ಸಂಚಾರವಾಗದಂತೆ ಮುಚ್ಚಿ ಕಾಪಿಡಿ.

“ಒಂದು ವರ್ಷವಾದರೂ ಇದು ಹಾಳಾಗದೆ ಉಳಿಯುತ್ತದೆ. ವರ್ಷದ ಕೊನೆಗೆ ಉಪ್ಪುನೀರಿನ ಬಣ್ಣ ನಸುವಾಗಿ ಬದಲಾದರೂ ಯಾವುದೇ ಸೋಂಕು ಇರಲಿಲ್ಲ. ನಾವು 15 ಮತ್ತು 20 ಶೇಕಡಾ ಉಪ್ಪುನೀರು ಹಾಕಿಯೂ ಪ್ರಯೋಗ ನಡೆಸಿದ್ದೇವೆ. ಎಳೆ ಹಲಸು ಈ ದ್ರಾವಣಗಳಲ್ಲೂ ಹಾಳಾಗದೆ ಉಳಿದಿದೆ. ಆದರೆ ಎಳೆ ಹಲಸಿನ ತುಂಡುಗಳು ತುಂಬ ಉಪ್ಪು ಎಳೆದುಕೊಂಡು ಅಡುಗೆಗೆ ತಯಾರು ಮಾಡಿಕೊಳ್ಳಲು ಹೆಚ್ಚು ಬಾರಿ ತೊಳೆಯಬೇಕು. ನೀರು ಮತ್ತು ಸಮಯ ಹೆಚ್ಚು ಬಳಕೆಯಾಗುತ್ತದೆ” ಎನ್ನುತ್ತಾರೆ ಕೃಷ್ಣಶ್ರೀ.

“ಬದಲಿಗೆ 10% ಉಪ್ಪುನೀರು ಬಳಸಿದರೆ, ಅಡುಗೆಗೆ ಪ್ರತ್ಯೇಕ ಉಪ್ಪು ಬಳಸುವುದು ಬೇಡ. ಒಮ್ಮೆ ಚೆನ್ನಾಗಿ ತುಂಡುಗಳನ್ನು ತೊಳೆದು ನೇರ ಅಡುಗೆ ಆರಂಭಿಸಬಹುದು.”

ಈ ವಿಧಾನ ಬಳಸಿ ಉಪ್ಪುಗುಜ್ಜೆ ಹಾಕಿ ಬಳಸುವವರು ಕೊನೆಗೆ ಅಡಿಕೆ ಪತ್ರಿಕೆಗೆ ಫೋಟೋದೊಂದಿಗೆ ಹಿಮ್ಮಾಹಿತಿ ಕಳಿಸಿ ಕೊಟ್ಟರೆ ಸಂತೋಷ.