ADD

Back To Free Articles

April-2024

ಅಪೂರ್ವ ಮಧುರ ನಾರಂಙ

ಕೇರಳದ ಕಲ್ಲಿಕೋಟೆಯ ಬಳಿಯ ಹಳ್ಳಿಯಲ್ಲಿರುವ ಮರ ಶತಾಯುಷಿ. ಈಗಿನ ಮಾಲಿಕರ ಅಜ್ಜ ನೆಟ್ಟದ್ದು.

- ಅಪ ತಂಡ

 
no image
 

ತಿಂಗಳುಗಳ ಹಿಂದೆ ನಮ್ಮ ಕಾಡುಕಿತ್ತಳೆಯ (ಇಳ್ಳಿ ಹಣ್ಣು)  ಸುದ್ದಿ ಸಾಮಾಜಿಕ ಮಾಧ್ಯಮಗಳ ಮೂಲಕ ಕೇರಳದಲ್ಲೂ ಹಬ್ಬಿತ್ತು.

ಈ ಸುದ್ದಿ ಓದಿ “ಇದೇ ಥರದ ‘ಮಧುರ ನಾರಂಙ’ ಎಂಬ ಕಿತ್ತಳೆ ನಮ್ಮಲ್ಲಿ ಹಲವೆಡೆ ಇತ್ತು. ದಶಕಗಳ ಹಿಂದಿನ ಕತೆಯಿದು. ನಾನು ಚಿಕ್ಕವನಾಗಿದ್ದಾಗ ತಿಂದು ಇಷ್ಟಪಟ್ಟಿದ್ದೆ” ಎಂದು ಪ್ರತಿಕ್ರಿಯಿಸಿದವರು ಕೋಟ್ಟಯಂ ಜಿಲ್ಲೆಯ ಹಣ್ಣು ಕೃಷಿಕ, ಮಾಜಿ ಚೆಫ್ ಟೋಮ್ ಪೂಞರ್.

ಹೀಗೆ ಮಧುರ ನಾರಂಙದ ಸಿಹಿನೆನಪು ಕಾಡತೊಡಗಿದ ಮೇಲೆ ಟೋಮ್ ತಮ್ಮ ಮಿತ್ರವರ್ಗದ ನಡುವೆ ಈ ಬಗ್ಗೆ ವಿಚಾರಿಸಿದರು. ನಾವೂ ಸಾಮಾಜಿಕ ಮಾಧ್ಯಮಗಳ ಮೂಲಕ ಜಾಲಾಡುವ ಯತ್ನ ಮಾಡಿದೆವು. ‘ಅಲ್ಲಿತ್ತು, ಇಲ್ಲಿತ್ತು, ಮರುವ ಕಿತ್ತಳೆ ಸಿಹಿಯೆಂದು ಬಿಂಬಿಸಲು ಕಿತ್ತಳೆ ವ್ಯಾಪಾರಿಗಳು ಎಲ್ಲಾ ಜಾತಿಯದನ್ನೂ ಮಧುರ ನಾರಂಙ (ಸಿಹಿ ಕಿತ್ತಳೆ) ಎಂದು ಕರೆಯುತ್ತಾರೆ’ ಎಂದೆಲ್ಲಾ ಪ್ರತಿಕ್ರಿಯೆಗಳು ಬಂದುವು.

ಆದರೆ ಮಧ್ಯ ವಯಸ್ಸಿನ ಟೋಮ್ ನೆನಪು ಮಾಡಿಕೊಂಡ ಒಂದು ಪ್ರತ್ಯೇಕ ಜಾತಿಯ ‘ಮಧುರ ನಾರಂಙ’ದ ಬಗ್ಗೆ ಎಲ್ಲಿಂದಲೂ ಧನಾತ್ಮಕ ಸುಳಿವು ಸಿಗಲಿಲ್ಲ. ‘ಅಳಿದು ಹೋಗಿದೆಯೇನೋ, ಅಲ್ಲ, ಎಲ್ಲೋ ಮೂಲೆಯ ಹಳ್ಳಿಯಲ್ಲಿ ಒಂದೆರಡು ಮರ ಇದ್ದರೂ ಇರಬಹುದೇನೋ’ ಎಂದೆಲ್ಲಾ ಮಾತಾಡಿಕೊಂಡೆವು.

ಈಗ ನೋಡಿ, ಕೇರಳದ ಕೋಝಿಕ್ಕೊಡಿನ ಬಳಿಯ ಎಲೆಟ್ಟಿಲಿನಿಂದ ‘ಮಧುರ ನಾರಂಙ’ ಮರದ ಸುದ್ದಿ ಬಂದಿದೆ. ಟೀವಿ ವರದಿಗಳೂ ಬಂದಿವೆ. ಕಳೆದೆರಡು ವರ್ಷಗಳಿಂದ ಈ ಮರದಲ್ಲಿ ಬಂಪರ್ ಬೆಳೆ ಬಂದಿದೆಯಂತೆ.

ಅಲ್ಲಿನ ಕೊಡುವಳ್ಳಿ ಎಂಬ ಊರಿನ ಮಾಲಿಯಕ್ಕಲ್ ಮನೆಯಲ್ಲಿದೆ ಈ ಮರ. ಒಡೆಯರು ಮೊಹಮ್ಮದ್ ಎಲೆಟ್ಟಿಲ್ ಅವರಿಗೀಗ ವಯಸ್ಸು 63. “ನನ್ನ ಅಜ್ಜ ನೆಟ್ಟ ಮರವಿದು. ಹಿತ್ತಿಲಿನಲ್ಲಿದೆ. ಹಾಗೆಯೇ ಉಳಿಸಿಕೊಂಡು ಬಂದಿದ್ದೇನೆ. ಮರಕ್ಕೆ 90 ಅಥವಾ ನೂರು ವರ್ಷವೇ ಆದರೂ ಆಗಿರಬಹುದು” ಎನ್ನುತ್ತಾರೆ ಮೊಹಮ್ಮದ್.

ಹತ್ತು ಹಣ್ಣು ಒಂದು ಕಿಲೋ ಆಗಬಹುದಂತೆ. ಗಾತ್ರ ಒಂದೇ ರೀತಿ ಇರುವುದಿಲ್ಲ. ಹಣ್ಣು ದೊಡ್ಡದಿದ್ದರೆ 150 ಗ್ರಾಮ್ ತೂಗುತ್ತದೆ. ಫೆಬ್ರವರಿ - ಮಾರ್ಚ್ ಹಣ್ಣಾಗುವ ಕಾಲ.  ಎಲ್ಲಾ ವರ್ಷವೂ ಹಣ್ಣು ಕೊಡುತ್ತಿದ್ದರೂ ಪ್ರಮಾಣ ಬಹಳ ಕಡಿಮೆ. ಈ ವರ್ಷ ಸಾವಿರಕ್ಕೂ ಮಿಕ್ಕಿ ಹಣ್ಣು ಕೊಟ್ಟಿದೆ.

“ಸಣ್ಣ ಹುಳಿ ಇದೆ. ಆದರೆ ಸರಿಯಾಗಿ ಹಣ್ಣಾದರೆ, ಆ ಹುಳಿಯೂ ಮಾಯವಾಗಿ ಸಿಹಿಯೇ ಆಗುತ್ತದೆ. ಜ್ಯೂಸಿಗಂತೂ ಹೇಳಿ ಮಾಡಿಸಿದ್ದು. ನಾವು ಸ್ನೇಹಿತರಿಗೆ ಕೊಡುತ್ತೇವೆ. ಜ್ಯೂಸ್ ಮಾಡಿ ಕುಡಿಯುತ್ತೇವೆ”, ಮೊಹಮ್ಮದ್ ತಿಳಿಸುತ್ತಾರೆ.

ಮೊಹಮ್ಮದ್ ಅವರಿಗೆ ಮದುವೆ ಆದದ್ದು ವಯನಾಡಿನಿಂದ. ‘ಅಲ್ಲೂ ಇಂಥದ್ದೇ ನಾಲ್ಕು ಮರ ಇತ್ತು.  ಅದರ  ಹಣ್ಣು  ಇದಕ್ಕಿಂತಲೂ ದೊಡ್ಡ, ರುಚಿಯೂ ಚೆನ್ನಾಗಿತ್ತು’ ಎನ್ನುತ್ತಾರೆ. ಆದರೆ ಅಲ್ಲಿದ್ದದ್ದೂ ಮಧುರ ನಾರಂಙ ಎನ್ನುವ ಇದೇ ಜಾತಿಯೋ ಎನ್ನುವುದು ಇವರಿಗೆ ಖಚಿತವಿಲ್ಲ.

ಈ ವರೆಗೆ ಇವರ ಅಜ್ಜ ಮರದ ಗಿಡ ಅಥವಾ ಕಸಿಯ ಪ್ರಯತ್ನ ಮಾಡಿಲ್ಲ. ಈಗ ಈ ಹಣ್ಣು ಸುದ್ದಿಯಾದಾಗ ಹಲವರು ಕಸಿ ಗಿಡ ಕೇಳುತ್ತಿದ್ದಾರಂತೆ. ಚಕ್ಕೋತದ ಅಡಿ ಗಿಡಕ್ಕೆ ಇದನ್ನು ಕಸಿ / ಬಡ್ ಮಾಡಿ ಗಿಡ ಮಾಡುವ ಯೋಜನೆ ಮೊಹಮ್ಮದ್ ಅವರಿಗಿದೆ. “ಇದರದೇ ನರ್ಸರಿ ಮಾಡೋಣ ಅಂದುಕೊಂಡಿದ್ದೇನೆ” ಎನ್ನುತ್ತಾರೆ.

ಎರಡೆಕ್ರೆ ಆಸ್ತಿ ಹೊಂದಿರುವ ಇವರಿಗೆ ತೆಂಗು, ಅಡಿಕೆ, ಜಾಯಿಕಾಯಿ, ಬಾಳೆ ಇತ್ಯಾದಿ ಬೆಳೆಗಳಿವೆ. ಜೇನು ಕೃಷಿಯಲ್ಲಿ ಅತ್ಯಾಸಕ್ತಿ. ಒಟ್ಟು 50 ಪೆಟ್ಟಿಗೆಗಳಿವೆ.

“ನಿಕಟ ಭವಿಷ್ಯದಲ್ಲಿ ಮೊಹಮ್ಮದ್ ಅವರಲ್ಲಿಗೆ ಭೇಟಿ ಕೊಡುವೆ” ಎನ್ನುತ್ತಿದ್ದಾರೆ ಟೋಮ್ ಪೂಞರ್. ಆದರೆ ಹಣ್ಣು ತಿನ್ನದೆ ಹೊರತು ಅವರ ಕನಸಿನ ‘ಮಧುರ ನಾರಂಙ’ ಇದುವೆಯೋ ಎಂದು ಖಚಿತಪಡಿಸುವುದು ಹೇಗೆ?

ಮೊಹಮ್ಮದ್ ಅವರ ಬಳಿ ‘ಮಧುರ ನಾರಂಙ’ ತಳಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

ಮೊಹಮ್ಮದ್ ಎಲೆಟ್ಟಿಲ್ (ಮಲೆಯಾಳಂ ಮಾತ್ರ)  94953 38827

(ರಾತ್ರಿ 7 - 8)