ADD

Back To Free Articles

April-2024

ಮಹಾರಾಷ್ಟ್ರದ ಹಹ ಬರ್ಫಿ

ರುಚಿ ನೋಡಿದವರೆಲ್ಲಾ ತುಂಬ ಮೆಚ್ಚಿಕೊಳ್ಳುತ್ತಿದ್ದಾರಂತೆ. ಮುಂಬಯಿಯ ದಶದಿನಗಳ ಎಕ್ಸಿಬಿಶನಿನಲ್ಲಿ ಇದರ 2,000 ಪ್ಯಾಕೆಟ್ಟುಗಳು ಮಾರಿಹೋಗಿವೆ.

- ಅಪ ತಂಡ

 

 
no image
 

ಹಾರಾಷ್ಟ್ರದ ಚಿಪ್ಲೂಣಿನಿಂದ ಹೊರಹೊರಟಿರುವ ಜ್ಯಾಕ್‍ಫ್ರುಟ್ ಬರ್ಫಿ ಹಲಸಿನ ಹಣ್ಣಿನ ಒಂದು ಹೊಸ ಉತ್ಪನ್ನ. ಈ ಹಿಂದೆ ಇನ್ನೊಂದು ಘಟಕ ಈ ಥರದ ಬರ್ಫಿ ಹೊರತಂದಿದ್ದರೂ ಅದು ಅಷ್ಟೊಂದು ರುಚಿಕರವಾಗಿರಲಿಲ್ಲ.

ಹಿರಿಯ ನಾಗರಿಕ ಅಭಯ್ ಅಂತರ್ಕರ್ ಅವರ ‘ಕೊಂಕಣ್ ಗೃಹ್ ಉದ್ಯೋಗ್’ ಸಂಸ್ಥೆ ಹಹ (ಹಲಸಿನ ಹಣ್ಣಿನ) ಬರ್ಫಿ ಹೊರತಂದದ್ದು ಕಳೆದ ದೀಪಾವಳಿಯ ಹೊತ್ತಿಗೆ. ಅಂದರೆ ಇನ್ನೂ ಆರು ತಿಂಗಳು ಆಗಿಲ್ಲ. ಕಾಲು ಕಿಲೋ ಪ್ಯಾಕೆಟಿಗೆ 160 ರೂ. ಬೆಲೆ.

ಕಳೆದ ವರ್ಷ ಇವರು ಅರ್ಧ ಟನ್ ಹಹ ಪಲ್ಪ್ ಮಾಡಿದ್ದರು. ಅದರಿಂದ ಈ ಬರ್ಫಿ ತಯಾರಿ. ಪಲ್ಪ್ ಅಲ್ಲದೆ ನಿರ್ಜಲೀಕರಿಸಿದ ತೆಂಗಿನ ತುರಿ, ಸಕ್ಕರೆ ಮತ್ತು ಹಾಲಿನ ಹುಡಿಯನ್ನೂ ಸೇರಿಸುತ್ತಾರೆ.

 ಬರ್ಫಿಯಲ್ಲಿ ಹಲಸಿನ ಹಣ್ಣಿನ ಪರಿಮಳ ಬಹು ಆಕರ್ಷಕವಾಗಿದೆ. ರುಚಿಯೂ ಹಾಗೆಯೇ. ಪ್ಯಾಕಿಂಗ್ ಮತ್ತು ಹೊರ ಪೊಟ್ಟಣ ವೃತ್ತಿಪರವಾಗಿದ್ದು ಆಕರ್ಷಕವಾಗಿದೆ. “ಈ ಪ್ಯಾಕಿಂಗಿಗೇ ನಮಗೆ 11 ರೂ. ಖರ್ಚಾಗುತ್ತದೆ” ಎನ್ನುತ್ತಾರೆ ಅಭಯ್.

ದಿನಕ್ಕೆ 200 - 300 ಪ್ಯಾಕೆಟ್ ಉತ್ಪಾದನೆ. ತಿಂಗಳ ಹಿಂದೆ ಮುಂಬಯಿಯಲ್ಲಿ ಹತ್ತು ದಿನಗಳ ವಸ್ತುಪ್ರದರ್ಶನ ನಡೆಯಿತು. ಅಷ್ಟು ಅವಧಿಯಲ್ಲಿ 2,000 ಪ್ಯಾಕೆಟ್ ಮಾರಿಹೋದದ್ದು ಅಭಯ್ ಅವರಿಗೆ ದೊಡ್ಡ ಆತ್ಮವಿಶ್ವಾಸ ಮೂಡಿಸಿದೆ.

“ರುಚಿ ತೋರಿಸಿದಲ್ಲಿ, ಕೊಂಡುಕೊಂಡವರ ನಡುವೆ ತುಂಬ ಒಳ್ಳೆ ಪ್ರತಿಕ್ರಿಯೆ ಬಂದಿದೆ. ಆದರೆ ನನ್ನ ಪಲ್ಪ್ ಸ್ಟಾಕ್ ಕಡಿಮೆ ಇರುವ ಕಾರಣ ಉತ್ಪಾದನೆಯನ್ನು ಹದವಾಗಿ ಮುಂದೆ ಒಯ್ಯುತ್ತಿದ್ದೇವೆ” ಎನ್ನುತ್ತಾರೆ ಇವರು.

‘ಕೊಂಕಣ್ ಗೃಹ್ ಉದ್ಯೋಗ್’ ಇನ್ನೂ ಕೆಲವು ಉತ್ಪನ್ನಗಳನ್ನು ಹೊರತರುತ್ತಿದೆ. ಇವರಿಗೆ ಮುಂಬಯಿಯಲ್ಲ್ಲಿ ಆರೇಳು ವಿತರಕರಿದ್ದಾರೆ. ಆದರೆ ಸದ್ಯಕ್ಕೆ ಮುಂಬಯಿಯ ಒಬ್ಬರು ಮತ್ತು ಸತಾರಾದ ಇನ್ನೊಬ್ಬರು ವಿತರಕರಿಗೆ ಮಾತ್ರ ಹಹ ಬರ್ಫಿ ಪೂರೈಸುತ್ತಿದ್ದಾರೆ.

ಇವರ ವಾಸಸ್ಥಳ ಮತ್ತು ಈ ಮನೆ ಉದ್ದಿಮೆ ನಡೆಯುತ್ತಿರುವ ಚಿಪ್ಲೂಣ್ ಒಂದು ಚಿಕ್ಕ ಪಟ್ಟಣ. ಇಲ್ಲಿನ ಐದಾರು ಅಂಗಡಿಗಳ ಮೂಲಕವೂ ಹಹ ಬರ್ಫಿ ಮಾರಾಟವಾಗುತ್ತಿದೆ.

ಅಭಯ್ ಈ ಉತ್ಪನ್ನಕ್ಕೆ ರಸಸಂರಕ್ಷಕಗಳನ್ನು ಬಳಸುವುದಿಲ್ಲ. ಆರಂಭದಲ್ಲಿ ಈ ಬರ್ಫಿಗೆ ತಾಳಿಕೆ ಕೇವಲ 30 ದಿನ ಇತ್ತು. ಇದು ಮಾರಾಟಕ್ಕೆ ಒಂದು ತೊಡಕು. ಈಗ ಟ್ರಯಲ್ ಮಾಡಿ ಮಾಡಿ ತಾಳಿಕೆಯನ್ನು ಎರಡು ತಿಂಗಳಿಗೇರಿಸಿದ್ದಾರೆ.

ಅಭಯ್ ಈಚೆಗೆ ಕಾರ್ಯನಿಮಿತ್ತ ಕರ್ನಾಟಕದ ಉಡುಪಿಗೆ ಬಂದಿದ್ದರು. ಅಲ್ಲಿ ಭೇಟಿ ಆದ ಕೆಲವರಿಗೆ ತನ್ನ ಬರ್ಫಿಯ ಸ್ಯಾಂಪಲ್ ಕೊಟ್ಟರು. “ಒಂದು ತುಂಡು ತಿಂದವರೇ ಎಲ್ಲರೂ ಇಷ್ಟಪಟ್ಟು ಮಾರಾಟಕ್ಕಿದೆಯೇ, ಮನೆಗೊಯ್ಯಲು ಬೇಕು” ಎಂದರಂತೆ.

ಹಾಗೆ ನೋಡಿದರೆ ಈ ಉತ್ಪನ್ನ ಈಗ ಬಿಕರಿಯಾಗುತ್ತಿರುವ ಸೀಮಿತ ಪ್ರದೇಶದಿಂದ ಎಷ್ಟೋ ಹೊರಗೂ ಕ್ಲಿಕ್ ಆಗಬಹುದು. ಬೆಂಗಳೂರು, ಮೈಸೂರು, ದಕ, ತಮಿಳುನಾಡು ಮತ್ತು ಕೇರಳದ ಮಂದಿಯೂ ಇದನ್ನು ಖಂಡಿತ ಸ್ವೀಕರಿಸಬಹುದು.

“ಈಗ ಹಲಸಿನ ಹಣ್ಣಿನ ಸೀಸನ್ ಆರಂಭವಾಗಿದೆಯಷ್ಟೇ. ಕುಡಾಲಿನಲ್ಲಿ ಪಲ್ಪಿಗಾಗಿ ಬೇಡಿಕೆ ಇಟ್ಟಿದ್ದೇನೆ. ಈ ಬಾರಿ ಎರಡು ಟನ್ ಪಲ್ಪ್ ಶೇಖರಿಸಿಡಬೇಕೆಂದಿದ್ದೇನೆ. ಇದರಿಂದ ವರ್ಷಪೂರ್ತಿ ಬರ್ಫಿ ಒದಗಿಸಲು ಸಾಧ್ಯವಾಗಬಹುದು” ಎನ್ನುತ್ತಾರೆ. ಹೀಗೆ ಉತ್ಪಾದನೆ ಹೆಚ್ಚಿಸಿದ ನಂತರ ಕೊರಿಯರ್ ಮೂಲಕವೂ ಕಳಿಸಿಕೊಡುತ್ತಾರಂತೆ.

ಕೇರಳದಲ್ಲಿ ಮಿಲ್ಮಾ ಸಂಸ್ಥೆ ಹಹ ಪೇಡಾ ತಯಾರಿಸಿ ಮಾರತೊಡಗಿ ಐದಾರು ವರ್ಷಗಳಾಗಿದೆ. ಇದು ಮಿಲ್ಮಾ ಏಜೆಂಟರ ಮೂಲಕ ಬೇರೆಬೇರೆ ಊರುಗಳಲ್ಲಿ ಮಾರಾಟವಾಗುತ್ತಿದೆ. ಇದು ಕೂಡಾ ಒಂದು ರುಚಿಕರ ಉತ್ಪನ್ನವೇ. ಆದರೆ ಮಿಲ್ಮಾ ಪೇಡಾ ಮತ್ತು ಈ ಹಹ ಬರ್ಫಿಗೆ ರುಚಿಯಲ್ಲಿ ಸ್ವಲ್ಪ ವ್ಯತ್ಯಾಸವಿದೆ.

ದುರದೃಷ್ಟಕರ ವಿಚಾರವೆಂದರೆ ಗ್ರಾಹಕ ಒಲವು ಚೆನ್ನಾಗಿದ್ದರೂ ಮಿಲ್ಮಾ ಸಂಸ್ಥೆ ಹಹ ಪೇಡಾಕ್ಕೆ ಪ್ರಚಾರ ಕೊಟ್ಟಿಲ್ಲ. ಹಿರಿಯ ಅಧಿಕಾರಿಗಳ ಸ್ಥಳಾಂತರವಾದಾಗ ಅವರ ನಿಲುವಿನಲ್ಲಿ ಆಗುವ ಬದಲಾವಣೆಗಳಿಂದ ಈ ಉತ್ಪನ್ನ ಪಡೆಯಬೇಕಾದಷ್ಟು ಜನಪ್ರಿಯತೆ ಪಡೆದಿಲ್ಲ.

ಹಹ ಬರ್ಫಿ ಖಾಸಗಿ ರಂಗದ ಉತ್ಪನ್ನವಾದ ಕಾರಣ ಈ ಥರದ ದೊಡ್ಡ ಸರಕಾರಿ ಸಂಸ್ಥೆಗಳ ಮಿತಿಗಳು ಇದಕ್ಕಿಲ್ಲ.

ಸಂಪರ್ಕ ನಂಬರು - 79720 05377, 94238 05050