ADD

Back To Free Articles

March-2024

ಅಡಿಕೆ ಐಸ್ಕ್ರೀಮಿಗೂ ಮಾನ

ಅಡಿಕೆ ಪ್ರದೇಶದಿಂದ ಹೊರಗೆ ಒಯ್ದರೂ ಅಡಿಕೆ ಐಸ್ಕ್ರೀಮ್ ಒಲವು ಪಡೆಯುವುದು ಖಂಡಿತಎನ್ನುತ್ತಾರೆ ಸಾಗರದ ತಯಾರಕರು.

- ಅಪ ತಂಡ

 
no image
 

ಸಾಗರದ ಪ್ರಕೃತಿ ನ್ಯಾಚುರಲ್ ಐಸ್‍ಕ್ರೀಮ್ ಉದ್ದಿಮೆ ಆರಂಭವಾಗಿ ನಾಲ್ಕು ವರ್ಷ ಸಂದಿದೆ. ಆರಂಭದಿಂದಲೂ ಇವರು ತಯಾರಿಸುತ್ತಿದ್ದ ಅಡಿಕೆ ಐಸ್‍ಕ್ರೀಮ್ ಊರ ಗ್ರಾಹಕರ ಗಮನ ಸೆಳೆದಿದೆ.

ಸಾಗರದ ಚಾಮರಾಜಪೇಟೆಯಲ್ಲಿರುವ ಇವರ ಅಂಗಡಿಯಲ್ಲಿ ಅಡಿಕೆ ಐಸ್‍ಕ್ರೀಮಿನ ಸ್ಕೂಪ್ ಮತ್ತು ಫ್ಯಾಮಿಲಿ ಪ್ಯಾಕ್ ಇದ್ದೇ ಇರುತ್ತದೆ. ಈಚೆಗೆ ಆರು ತಿಂಗಳ ಕಾಲ ಕಾರಣಾಂತರದಿಂದ ಇದನ್ನು ತಯಾರಿಸಲು ಆಗಿರಲಿಲ್ಲ. ಗ್ರಾಹಕರಿಗೆ ಇದು ಎಷ್ಟು ಹಿಡಿಸಿದೆ ಎಂದರೆ, ‘ಅಡಿಕೆ ಐಸ್‍ಕ್ರೀಮ್ ಇಲ್ವಾ?’ ಎಂದು ಕೇಳುತ್ತಲೇ ಇದ್ದರು. ಮಾಲಿಕ ವಿದ್ಯಾಧರ ಭಟ್ ಈಗ ಮತ್ತೆ ಇದನ್ನು ಮಾಡತೊಡಗಿದ್ದಾರೆ.

ಮದುವೆಗಳಲ್ಲಿ ಐಸ್‍ಕ್ರೀಮ್ ಸರ್ವ್ ಮಾಡಲು ಇವರಿಗೆ ಆರ್ಡರ್ ಬರುತ್ತಿರುತ್ತದೆ. ಅಂಥಲ್ಲಿ ನಾಲ್ಕೈದು ವಿಧದ ಐಸ್‍ಕ್ರೀಮ್ ಒಯ್ಯುತ್ತಾರೆ. ಈ ಪೈಕಿ ಅಡಿಕೆಯದು ಇದ್ದೇ ಇರುತ್ತದೆ. ವಿದ್ಯಾಧರ ಭಟ್ಟರ ಪ್ರಕಾರ ಎಲ್ಲಾ ವಯೋಗುಂಪಿನವರೂ ಇದನ್ನು ಸವಿಯುತ್ತಾರೆ, ಇಷ್ಟವೂ ಪಡುತ್ತಾರೆ. “ಕಾಲೇಜು ವಿದ್ಯಾರ್ಥಿಗಳು, ಗೃಹಿಣಿಯರು, ಹಿರಿಯ ನಾಗರಿಕರೂ ಸವಿಯುತ್ತಾರೆ.”

“ಎಲೆ ಅಡಿಕೆ ಹಾಕದವರೂ ತಿನ್ನುತ್ತಾರೆ. ಅಡಿಕೆ ಬೆಳೆಗಾರರೂ ಇಷ್ಟಪಡುತ್ತಾರೆ. ಹಲವರು ಆರಂಭದಲ್ಲಿ ‘ಬೇಡ, ಬೇಡ’ ಎಂದೇ ಹೇಳುತ್ತಾರೆ. ‘ಒಮ್ಮೆ ಸ್ಯಾಂಪಲ್ ನೋಡಿ’ ಎಂದು ಒತ್ತಾಯಿಸಿದ ಮೇಲೆ  ತಿಂದು  ಖುಷಿಪಡುವವರೂ  ಇದ್ದಾರೆ.ಒಂದಷ್ಟು ಮಕ್ಕಳಂತೂ ಇದನ್ನು ತುಂಬ ಲೈಕ್ ಮಾಡುತ್ತಾರೆ” ಎನ್ನುತ್ತಾರೆ ಇವರು.

ಕೆಲವರು ಇದರಲ್ಲಿ ತೊಗರಿನ ಅಂಶ ಇರಬಹುದು ಎಂಬ ಊಹೆಯಿಂದ ರುಚಿ ನೋಡಲು ಮುಂದೆ ಬರುತ್ತಿಲ್ಲವಂತೆ. ಆದರೆ ಈ ಐಸ್‍ಕ್ರೀಮಿನಲ್ಲಿ ತೊಗರಿನ ಅಂಶವೇ ಇಲ್ಲ. “ಸ್ವೀಟ್ ಪಾನ್ ತಿಂದ ಹಾಗೆ ಆಗುತ್ತದೆ” ಎನ್ನುತ್ತಾರಂತೆ ಕೆಲವರು.

ಸಾಗರದ ಬೇರೆ ಒಬ್ಬಿಬ್ಬರು ಅಡಿಕೆ ಐಸ್‍ಕ್ರೀಮ್ ತಯಾರಿಸಿದ್ದರೂ, ಗುಣಮಟ್ಟ ಅಷ್ಟಾಗಿ ಇಲ್ಲದ ಕಾರಣ ಕ್ಲಿಕ್ ಆಗಲಿಲ್ಲವಂತೆ. ಶಿರಸಿಯಲ್ಲೂ ಇನ್ನೂ ಯಾರೂ ಇದನ್ನು ಮಾಡುತ್ತಿಲ್ಲವಂತೆ.

ವಿದ್ಯಾಧರ ತಮ್ಮ ಅಡಿಕೆ ಐಸ್‍ಕ್ರೀಮಿಗೆ ಬದನಾಜೆಯವರ ಪೂಗಸಾರವನ್ನು ಮೂಲವಸ್ತುವಾಗಿ ಬಳಸುತ್ತಾರೆ.  ಸಾಗರದಲ್ಲೊಬ್ಬರು   ಸಿಹಿ  ಬೀಡಾ ಅಂಗಡಿಯವರಿಗಾಗಿ ಕತ್ತರಿಸಿದ ಎಳೆ ಅಡಿಕೆಯನ್ನು ಸಿದ್ಧರೂಪದಲ್ಲಿ ತಯಾರಿಸಿಕೊಡುತ್ತಾರೆ. ಇದನ್ನು ವಿದ್ಯಾಧರ್ ತಮ್ಮ ಅಡಿಕೆ ಐಸ್‍ಕ್ರೀಮನ್ನು ಅಲಂಕರಿಸಲು ಬಳಸುತ್ತಾರೆ. ಈ ಅಲಂಕಾರ ಐಸ್‍ಕ್ರೀಮಿನ ಮೂಲವಸ್ತ್ತುವಿನ ಸೂಚನೆಯನ್ನೂ ಕೊಡುತ್ತದೆ.

ಪ್ರಕೃತಿ ನ್ಯಾಚುರಲ್ ಐಸ್‍ಕ್ರೀಮ್ ಒಟ್ಟು 35 ಥರದ ಐಸ್‍ಕ್ರೀಮ್ ತಯಾರಿಸುತ್ತದೆ. ಎಲ್ಲದಕ್ಕೂ ನೈಸರ್ಗಿಕ ಕಚ್ಚಾ ವಸ್ತು ಬಳಸುತ್ತಾರೆ. ಜೇನು, ಅಂಜೂರ, ಎಳನೀರು, ಪೇರಳೆ, ಸೀತಾಫಲ, ಕ್ಯಾರೆಟ್, ಬೀಟ್ ರೂಟ್, ಚಿಕ್ಕು - ಇವರ ವಿಶೇಷಗಳಲ್ಲಿ ಕೆಲವು.

ಕಿತ್ತಳೆ ಸಿಪ್ಪೆ, ಸೌತೆಕಾಯಿ-ಸೂಜಿ ಮೆಣಸು ಐಸ್‍ಕ್ರೀಮುಗಳು ಇವರದೇ ಅನುಶೋಧನೆಯ ಫಲ. ಹುಣಿಸೆಹಣ್ಣಿನದನ್ನೂ ಮಾಡುತ್ತಾರೆ. ವಿದ್ಯಾಧರ ಹೊಸಹೊಸ ಐಸ್‍ಕ್ರೀಮುಗಳ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಇಂಥದ್ದರಲ್ಲಿ ಒಂದು ಹೋಳಿಗೆ ಐಸ್‍ಕ್ರೀಮ್.

ಅಡಿಕೆ ಐಸ್‍ಕ್ರೀಮ್ ಪರಿಚಯಿಸಿದ ಸ್ವಲ್ಪ ಕಾಲದಲ್ಲೇ ಕೋವಿಡ್ ಬಂತು. ಆ ಅಧ್ಯಾಯ ಇಲ್ಲದೆ ಹೋಗಿದ್ದರೆ ಇಷ್ಟರಲ್ಲೇ ಅಡಿಕೆ ಐಸ್‍ಕ್ರೀಮು ಇನ್ನಷ್ಟು ಜನಪ್ರಿಯತೆ ಪಡೆಯುತ್ತಿತ್ತು ಎನ್ನುತ್ತಾರೆ.

“ಈಗ ತಿಂಗಳಿಗೆ 30 ಲೀಟರ್ ಅಂತೂ ಸರಾಸರಿಯಾಗಿ ಹೋಗುತ್ತಿದೆ. ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಅಡಿಕೆ ಪ್ರದೇಶದಿಂದ ಹೊರಗೆ ಒಯ್ದರೂ ಅಡಿಕೆ ಐಸ್‍ಕ್ರೀಮ್ ಒಲವು ಪಡೆಯುವುದು ಖಂಡಿತ” ಎನ್ನುತ್ತಾರೆ ವಿದ್ಯಾಧರ ಭಟ್.

ವಿದ್ಯಾಧರ ಭಟ್   94820 67663