ADD

Back To Free Articles

March-2024

ಬೆಳೆದು ನೋಡಿ,ಗೆರೆ ಸೋರೆಕಾಯಿ

ಗೆರೆ ಸೋರೆಯನ್ನು ಬಸರಿ ಬಾಣಂತಿಯರಿಗೆ ನೀಡುವ ವಾಡಿಕೆಯಿದೆ. ಬಾಣಂತಿಯರಿಗೆ 2-3 ದಿನಕ್ಕೊಮ್ಮೆ ಸೋರೆಯ ಅಡುಗೆ ಉಣಿಸುತ್ತಾರೆ.

- ಸಂದೀಪ್ ಮಂಜುನಾಥ್, ಎಂ.ಎಸ್ಸಿ. ಕೃಷಿ, ಹುಣಸೂರು

 
no image
 

ಗೆರೆ ಸೋರೆಕಾಯಿ ಗೊತ್ತೇ? ಇದರ ಮೈಮೇಲೆ ಉದ್ದನೆಯ ಗೆರೆಗಳಿರುತ್ತವೆ. ಅದರಿಂದಲೇ ಬಂದ ಹೆಸರು - ಗೆರೆ ಸೋರೆಕಾಯಿ.

ಈ ಸೋರೆ ಮೊಣಕೈಗಿಂತಲೂ ಚಿಕ್ಕದು. ಈಗಿನ ಅಣುಕುಟುಂಬಗಳ ಅಡುಗೆಗೆ ಸರಿ ಹೋಗುತ್ತದೆ. ಬೇರೆ ತಳಿಯ ಸೋರೆಕಾಯಿಗಳು ಬೇಯಿಸುವಾಗ ನೀರು ಬಿಟ್ಟುಕೊಡುತ್ತದೆ. ಆದರೆ ಗೆರೆ ಸೋರೆ ಬೇಯಿಸುವಾಗ ನೀರು ಬಿಟ್ಟುಕೊಳ್ಳದೆ ಹದವಾಗಿ ಬೇಯುತ್ತದೆ. ಬಹುಶಃ ಈ ಗುಣದಿಂದಲೇ ಎಲ್ಲರೂ ಇದನ್ನು ಹೆಚ್ಚು ಇಷ್ಟಪಡುತ್ತಾರೆ.

ಎಳೆಯ ಕಾಯಿಗಳು ಅಡುಗೆಗೆ ಹೇಳಿ ಮಾಡಿಸಿದಂತಿರುತ್ತದೆ. ಸ್ವಲ್ಪ ಬಲಿತರೂ ಚಿಂತೆಯಿಲ್ಲ. ಸಿಪ್ಪೆ ತಿಗೆದು ಉಪಯೋಗಿಸಬಹುದು. ಮಜ್ಜಿಗೆ ಸಾರು, ಬಸ್ಸಾರು, ತಾಲಿಪಟ್ಟು, ಹಲ್ವ, ಪಲ್ಯ -  ಹತ್ತಾರು ಬಗೆಯ ರುಚಿರುಚಿ ಅಡುಗೆಗಳನ್ನು ಮಾಡಬಹುದು.

ನನ್ನ ಅತ್ತೆ ಸೀಗೆಕಾಯಿ ಕಮಲಮ್ಮ ಈ ತಳಿಯನ್ನು ನಾಲ್ಕು ದಶಕಗಳಿಂದ ಬೆಳೆಸುತ್ತಾ ಕಾಪಾಡುತ್ತಾ ಬಂದಿದ್ದಾರೆ. ಕಮಲಮ್ಮ ಮದುವೆಯಾಗಿ ಬಂದಿದ್ದು ಕೋಳಾಲ ಸಮೀಪದ ಬ್ಯಾಟರಾಯನಪಾಳ್ಯಕ್ಕೆ. ಕೋಳಾಲ ಅರೆ ಮಲೆನಾಡಿನಂತೆ ಹೆಚ್ಚು ಮಳೆ ಬೀಳುವ ಪ್ರದೇಶ. ಫಲವತ್ತಾದ ಕೆಂಪು ಮಣ್ಣು ಇಲ್ಲಿನದು.

ಕಮಲಮ್ಮನವರ ಪತಿ ಮದುವೆಯ ನಂತರ ಬಹುಬೇಗ ತೀರಿಕೊಂಡರು. ಹಾಗಾಗಿ ವ್ಯವಸಾಯದ ಚುಕ್ಕಾಣಿ ಇವರ ಕೈಗೆ ಬಂತು. ಇವರ ಕೃಷಿ ಆಸಕ್ತಿ  ಗಮನಿಸಿ ನಾಲ್ಕು ದಶಕಗಳ ಹಿಂದೆ ಹಿರಿಯರೊಬ್ಬರು ತಮ್ಮಲ್ಲಿದ್ದ ಗೆರೆ ಸೋರೆ ಬೀಜಗಳನ್ನು ನೀಡಿದರು. ಇದನ್ನು ಕಮಲಮ್ಮ ಜತನದಿಂದ ಬೆಳೆಸಿ ಕೇಳಿದವರಿಗೆಲ್ಲಾ ಬೀಜ ಕೊಡುತ್ತಾ ಬಂದಿದ್ದಾರೆ. ನಾವೂ ಇದರ ಬೀಜಗಳನ್ನು ಹಲವಾರು ಮಂದಿಗೆ ಹಂಚಿದ್ದೇವೆ.

ಒಂದೇ ಬಳ್ಳಿಯಲ್ಲಿ ಎಲೆಗೊಂದರಂತೆ ನೂರಾರು ಕಾಯಿ ಬಿಡುತ್ತದೆ. ಮಳೆಗಾಲ ಉತ್ತಮವಾಗಿದ್ದರೆ ಸಂಕ್ರಾಂತಿಯ ವರೆಗೂ ಕಾಯಿಗಳು ದೊರೆಯುತ್ತದೆ. ಕೋಳಾಲದ ಅಕ್ಕಪಕ್ಕ ಇರುವ ಕಮಲಮ್ಮನವರ ನೆಂಟರ ಜಮೀನಿನಲ್ಲಿ ನೀರಾವರಿ  ಸೌಲಭ್ಯ ಇದೆ.

ಅಲ್ಲಿ ಬೇಸಿಗೆ ಕಾಲದಲ್ಲೂ ಬೆಳೆ ಬರುತ್ತದೆ. ಸ್ವಲ್ಪ ಆರೈಕೆ ಮಾಡಿದರೆ ವರ್ಷಪೂರ್ತಿ ಕಾಯಿ ಸಿಗಬಹುದು. ಕೀಟ - ರೋಗ ಬಾಧೆ ಅಷ್ಟಾಗಿ ಇಲ್ಲ. ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಕಾಯಿಯೊಳಗೆ ಹುಳಗಳು ಕಾಣಿಸುತ್ತವೆ. ಮೋಹಕ ಬಲೆ ಉಪಯೋಗಿಸಿ ಈ ಸಮಸ್ಯೆ ನಿಯಂತ್ರಿಸಬಹುದು.

ಗೆರೆ ಸೋರೆಯನ್ನು ಬಸರಿ ಬಾಣಂತಿಯರಿಗೆ ನೀಡುವ ವಾಡಿಕೆಯಿದೆ. ಬಾಣಂತಿಯರಿಗೆ ಎರಡು ಮೂರು ದಿನಕ್ಕೊಮ್ಮ ಸೋರೆಯ ಅಡುಗೆ ಉಣಿಸುತ್ತಾರೆ. ಇದರಿಂದ ಎದೆ ಹಾಲು ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ. ಕೊರಟಗೆರೆ ಭಾಗದಲ್ಲಿ ಗೆರೆ ಸೋರೆಯನ್ನು ತಂಪೆಂದು ಪರಿಗಣಿಸಿ ದೇಹದ ಉಷ್ಣತೆ ತಗ್ಗಿಸಲು ಬಳಸುತ್ತಾರೆ. ಒಣಗಿದ ಸೋರೆ ಬುರುಡೆಗಳಿಗೆ ತೂತು ಮಾಡಿ ಆಕರ್ಷಕ ಕಲಾಕೃತಿಗಳನ್ನು  ಮಾಡಬಹುದು.

ಗೆರೆ ಸೋರೆಯ ಬೀಜ ಬೇಕಾದವರು ಲೇಖಕರನ್ನು ಸಂಪರ್ಕಿಸಿ - 94807 97169

-----------------------------------------------------------------------------------------------------

ಬೆಳೆ ಜಾಸ್ತಿ : ಸ್ಮಿತಾ ಮತ್ತು ರಜನೀಶ್ ಇಬ್ಬರೂ ಮಣಿಪಾಲದ ಬಳಿಯ ಅತ್ರಾಡಿಯಲ್ಲಿ ಡಾಕ್ಟರುಗಳು. ಕೆಳ ಅಂತಸ್ತಿನಲ್ಲಿ ಇವರ ವಾಸ. ಮೇಲೆ ಹೋಮ್ ಸ್ಟೇ ನಡೆಸುತ್ತಿದ್ದಾರೆ. ಲೇಖಕ ಸಂದೀಪರ ಪತ್ನಿ ಸುಧಾ ಅವರಿಂದ ಬೀಜ ಪಡೆದು ಡಾ.ಸ್ಮಿತಾ ರಜನೀಶ್ ದಕದಲ್ಲಿ ಗೆರೆ ಸೋರೆ ಬೆಳೆಸಿದ್ದಾರೆ.

ಈ ತರಕಾರಿಯನ್ನಿವರು ಬಿತ್ತಿದ್ದು ಸೆಪ್ಟೆಂಬರಿನಲ್ಲಿ. “ಬೆಳೆ ತುಂಬಾ ಜಾಸ್ತಿ. ಬಳ್ಳಿ ಉದ್ದ ಬೆಳೆಯುತ್ತದೆ. ಕೀಟ ಬಾಧೆ ತುಂಬಾ ಕಡಿಮೆ. ರುಚಿಯೂ ಚೆನ್ನಾಗಿದೆ. ಮಾಮೂಲಿ ಸೋರೆಕಾಯಿಗಿಂತ ಇದರ ತಿರುಳು ಚೆನ್ನಾಗಿದೆ. ನಾವು ತಿಂದು ಮಿಕ್ಕುಳಿದ ಸಾಕಷ್ಟು ಸೋರೆಕಾಯಿಗಳನ್ನು ನೆರೆಯವರಿಗೆ ಕೊಟ್ಟಿದ್ದೇವೆ” ಎನ್ನುತ್ತಾರೆ ಡಾ.ಸ್ಮಿತಾ.