ADD

Back To Free Articles

February-2024

ಗಟ್ಟಿಗೆ ಗಟ್ಟಿ, ಚಂದಕ್ಕೆ ಚಂದ: ಲಾಠಿ ಬಿದಿರು

ಕೇರಳದ ಪಾಲಕ್ಕಾಡಿನಲ್ಲಿ ಕೆ.ಸಿ ಜಾನ್ 25 ಸೆಂಟ್ಸ್ ಜಾಗದಲ್ಲಿ ಬೆಳೆದ ಟಿ. ಒಲಿವರಿ ಹಿಂಡುಗಳಿಂದ ವರ್ಷ  35,000 ರೂ. ಆದಾಯ ಪಡೆದಿದ್ದಾರೆ.

ಬೀಜಗಳಿಂದ, ಬೇರು ಸಹಿತ ಒಕ್ಕಿ ನೆಡುವುದು ಅಥವಾ ಟಿಶ್ಯೂ ಕಲ್ಚರ್ - ಮೂರೇ ವಂಶಾಭಿವೃದ್ಧಿಯ ದಾರಿಗಳು.

- ವಸಂತ ಕಜೆ

 
no image
 

ಕೇರಳದ ಮಂದಿ ‘ಲಾಠಿ ಬಿದಿರು' (ಟಿ. ಒಲಿವೆರಿ, Thyrsostachysoliveri) ಎಂದು ಕರೆಯುವ ಒಂದು ಜಾತಿ ಬಿದಿರು ಇದೆ. ಅದು ಸೊಕ್ಕಿದಾಗ ಲಾಠಿಗಿಂತಲೂ ಹೆಚ್ಚು ದಪ್ಪವಾಗುವುದು ಉಂಟು. ಸುಮಾರು ಎರಡು ಇಂಚು ಪಿವಿಸಿ ಪೈಪಿನಷ್ಟ್ಟು.

ಅದರ ವಿಶಿಷ್ಟ ಬಾಹ್ಯಲಕ್ಷಣಗಳು ಹೀಗಿವೆ: ಯಾವುದೇ ಸಪೋರ್ಟ್ ಇಲ್ಲದಿದ್ದರೂ ನೇರವಾಗಿ, ಅಡಿಕೋಲಿನಲ್ಲಿ ಗೆರೆ ಎಳೆದಂತೆ ಬೆಳೆಯುವ ಗಳಗಳು, ಅತ್ಯಂತ ಒತ್ತೊತ್ತಾಗಿ ಹುಟ್ಟುವ ಹೊಸ ಕಳಲೆಗಳು, ಸಣ್ಣದಾದ ಆಕರ್ಷಕ ಎಲೆಗಳು.

ಕೆಳಭಾಗದಲ್ಲಿ ಅಂದರೆ, ಕಾಂಡದ ಬುಡದ ಗಂಟುಗಳ ಮಧ್ಯೆ ಶಮೆ ಬಿದಿರಿನಂತೆ ಬಲು ಸಪೂರವಾದ ತೂತು ಅಷ್ಟೇ ಇರುತ್ತದೆ. ಆದ್ದರಿಂದ ಹೆಚ್ಚು ಗಟ್ಟಿ. ಪ್ರತಿ ಗಂಟಿನಲ್ಲಿರುವ ಚಿಗುರಿನ ಗೆಣ್ಣು ಅವಲಕ್ಕಿಯಷ್ಟೇ ತೆಳು, ಗಂಟು ಸಪಾಟು - ಆದ್ದರಿಂದ ಕೊಕ್ಕೆಯನ್ನು ಕೈಯಲ್ಲಿ ಹಿಡಿಯಲು ಹೆಚ್ಚು ಅನುಕೂಲ. ಗಳುವನ್ನು ಕತ್ತರಿಸಿ ಹೇಗೆ ನೆಟ್ಟರೂ ಕಬ್ಬಿನಂತೆ, ನೇಪಿಯರ್ ಹುಲ್ಲಿನಂತೆ ಚಿಗುರದು. ನಾನು ಹೀಗೆ ಮಾಡಲು ಪ್ರಯತ್ನಿಸಿ ಸೋತಿದ್ದೇನೆ.

ಬೀಜಗಳಿಂದ, ಬೇರು ಸಹಿತ ಒಕ್ಕಿ ನೆಡುವುದು ಅಥವಾ ಟಿಶ್ಯೂ ಕಲ್ಚರ್ - ಈ ಮೂರೇ ವಂಶಾಭಿವೃದ್ಧಿಯ ದಾರಿಗಳು.

ಇದರ ಪ್ರಮುಖ ಸಾಧ್ಯ ಬಳಕೆಗಳೆಂದರೆ ಕೊಕ್ಕೆ, ದೊಣ್ಣೆ, ಫಿಶಿಂಗ್ ರಾಡ್, ಫರ್ನಿಚರ್ ಇತ್ಯಾದಿ. ಒಲಿವೆರಿಯ ಕಿರೀಟದಲ್ಲಿರುವ ದೊಡ್ಡ ಗರಿಯೆಂದರೆ ಕಾಂಕ್ರೀಟ್ ಕಂಬ, ತೊಲೆಗಳಲ್ಲಿ ಕಬ್ಬಿಣದ ಬದಲಿಗೆ ಈ ಬಿದಿರಿನ ಗಳುಗಳ ಬಳಕೆ.

ಗೂಗಲ್ ಈಗಾಗಲೇ ಈ ರೀತಿ ಬಳಕೆ ಮಾಡಲ್ಪಟ್ಟಿರುವ ಹಲವು ಚಿತ್ರಗಳನ್ನು ತೋರಿಸುತ್ತದೆ. ಬಹುಶಃ ಒಂದಷ್ಟು ಟ್ರೀಟ್‍ಮೆಂಟ್ ಅವಶ್ಯಕ. ನಮ್ಮೂರಿನಲ್ಲಿ ಬಳಸಿದ ಅನುಭವಿಗಳು ನನಗೆ ತಿಳಿದಿಲ್ಲ. ಇನ್ನಷ್ಟ್ಟು ಸ್ಪಷ್ಟ್ಟವಾಗಿ ಪ್ರತಿಪಾದಿಸಲು ಇನ್ನಷ್ಟ್ಟು ಅಧ್ಯಯನ, ಕೇಸ್ ಸ್ಟಡಿ, ಅಗತ್ಯ ಅನಿಸುತ್ತದೆ. ಆದರೆ ಒಲಿವೆರಿ ಕಬ್ಬಿಣದಂತೆ ಗಟ್ಟಿ ಎನ್ನುವುದು ನಿಸ್ಸಂಶಯ. ಒತ್ತೊತ್ತಾದ ನಾರುಗಳ ರಚನೆ ಇದರ ವಿಶಿಷ್ಟ್ಟತೆ.

ನಮ್ಮಲ್ಲಿ ಎರಡು ವರ್ಷ ಮಳೆಬಿಸಿಲಿನಲ್ಲಿ ಬಿಸಾಡಿದ  ಒಂದು  ಗಳು  ಚೆನ್ನಾಗಿ ಗಟ್ಟಿಯಾಗಿ ಇದ್ದುದನ್ನು ನಾನು ಗಮನಿಸಿದ್ದೇನೆ. ಇದೇ ಆಧಾರದಲ್ಲಿ ಸೋಲಾರ್ ವಾಟರ್ ಹೀಟರಿನ ಪ್ರೆಶರ್ ರೆಲೀಸ್ ಪೈಪಿಗೆ ಸಪೋರ್ಟ್ ಆಗಿ ಈ ಬಿದಿರನ್ನು ಬಳಸಿದ್ದೇನೆ. ನಾಲ್ಕೈದು ವರ್ಷ ಬಾಳಿಕೆಯ ನಿರೀಕ್ಷೆ ಇದೆ.

ನೋಡಲು ಅಂತೂ ಈ ಬಿದಿರು ಚಿತ್ತಾಕರ್ಷಕ. ಹುಲ್ಲು ಹಾಸಿನ ಮಧ್ಯೆ, ದೊಡ್ಡ ಕಟ್ಟಡಗಳ ಏಕತಾನತೆ ಕಳೆಯಲು ಈಸ್ಥೆಟಿಕ್ ಆಗಿ ಸಂಯೋಜಿಸಲು ಅತ್ಯುತ್ತಮ ಜಾತಿ. ಒತ್ತಾಗಿ ಬೆಳೆಯುವುದರಿಂದ ಹರಡುವ ಭಯವಿಲ್ಲ. ಕಡಿಮೆ ಜಾಗದಲ್ಲಿ ನೆರೆಯವರಿಗೆ ತೊಂದರೆಯಾಗದಂತೆ ನೆಡಲು ಸಾಧ್ಯ. ಕೇರಳದ ಪಾಲಕ್ಕಾಡಿನಲ್ಲಿ ಕೆ.ಸಿ ಜಾನ್ 25 ಸೆಂಟ್ಸ್ ಜಾಗದಲ್ಲಿ ಬೆಳೆದ ಟಿ. ಒಲಿವರಿ ಹಿಂಡುಗಳಿಂದ ಈ ವರ್ಷ  35,000 ರೂ. ಆದಾಯ ಪಡೆದಿದ್ದಾರೆ.

ನನ್ನಲ್ಲಿ ಎರಡು ಮೆಳೆಗಳು ಕಳೆದ ಆರು ವರ್ಷಗಳಿಂದ ಬೆಳೆಯುತ್ತಿವೆ. ಕಟಾವು ಆರಂಭಿಸಿಲ್ಲ. ಮುಂದಿನ ಜೂನಿಗೆ  ಈ ಜಾತಿಯ 75 ರಷ್ಟ್ಟು ಗಿಡಗಳನ್ನು ನೆಡುತ್ತಿದ್ದೇನೆ. ಇದರ ಜೊತೆಗೆ ಬ್ರಾಂಡಿಸಿ, ಟುಲ್ಡಾ, ಸ್ಟೋಕ್ಸಿ ಜಾತಿಗಳು ಸೇರಿ ಒಟ್ಟು ಒಂದೂವರೆ ಎಕರೆಯಷ್ಟು ಪ್ಲಾಂಟೇಶನ್ ಮಾಡುವ ಯೋಚನೆಯಿದೆ.

ಮಾರ್ಕೆಟಿಂಗ್ ಬಗ್ಗೆ ಹೆಚ್ಚಿನ ಯೋಚನೆ ಮಾಡಿಲ್ಲ. ಈ ಎಲ್ಲ ಜಾತಿಗಳನ್ನು ನಮ್ಮ ಭೂಮಿಯಲ್ಲಿ ಕಳೆದ ಆರೇಳು ವರ್ಷಗಳಿಂದ ಪರೀಕ್ಷಿಸಿ ನೋಡಿದ್ದೇನೆ. ಬಿದಿರಿನ ಕೃಷಿ ಮುಂದಿನ ದಶಕದಲ್ಲಿ ಹೆಚ್ಚು ಮುಂಚೂಣಿಗೆ ಬರುವ ನಿರೀಕ್ಷೆ ಇದೆ. ಹಸುರು, ಕಾಡಿನ ಪ್ರೀತಿ ಇದ್ದೇ ಇರುವುದರಿಂದ, ನನ್ನದೇ ಬಿದಿರು ಮತ್ತು ವನ್ಯ ನರ್ಸರಿ ಕೂಡ ಇರುವುದರಿಂದ ಇದು ನನಗೆ ಒಂದು ಪೂರಕ ಚಟುವಟಿಕೆ ಆಗುತ್ತದೆ.