ADD

Back To Free Articles

October-2023

ಹಬೀ ಐಸ್ಕ್ರೀಮ್, ವೈ ನಾಟ್?

ಐಸ್ಕ್ರೀಮ್ ತಯಾರಕರು ಹಬೀ ಐಸ್ಕ್ರೀಮಿನ ಪ್ರಯೋಗ ನಡೆಸಿ ಸುತ್ತಲಿನ ಮಂದಿಗೆ ರುಚಿ ತೋರಿಸಿ ನಿಟ್ಟಿನಲ್ಲಿ ಹೆಜ್ಜೆ ಇಡಬಹುದು. ರುಚಿಯಲ್ಲಿ ಇದು ಎಲ್ಲೆಡೆ ಗೆಲ್ಲಬಹುದು.

- ಅಪ ಬಳಗ

 
no image
 

ದೆಷ್ಟೋ ಬಗೆಯ ಐಸ್‍ಕ್ರೀಮುಗಳ ಬಗ್ಗೆ ಕೇಳಿರುತ್ತೀರಿ. ಕೆಲವನ್ನು ಸವಿದೂ ಇರುತ್ತೀರಿ. ಈ ವರೆಗೆ ಹಲಸಿನ ಬೀಜದ (ಹಬೀ) ಐಸ್‍ಕ್ರೀಮ್ ಬಗ್ಗೆ ಕೇಳಿದ್ದೀರಾ?

ತಮಿಳುನಾಡಿನ ಉತ್ಸಾಹಿಯೊಬ್ಬರು ಈಚೆಗೆ ಹಬೀ ಐಸ್‍ಕ್ರೀಮ್  ತಯಾರಿಸುತ್ತಿದ್ದಾರೆ. ಡಿಂಡಿಗಲ್ಲಿನ ಭಾನುವಾರದ ಸಾವಯವ ಸಂತೆಯಲ್ಲ್ಲಿ ಮಾರುತ್ತಲೂ ಇದ್ದಾರೆ. ಇವರದ್ದು ದೊಡ್ಡ ಕಂಪೆನಿಯಲ್ಲ. ಚಿಕ್ಕ ರೀತಿಯ ಪ್ರಾಯೋಗಿಕ ಮಾರಾಟ.

ಎರಡು - ಮೂರು ಕಿಲೋ ಐಸ್‍ಕ್ರೀಮ್ ತಯಾರಿಸುತ್ತಾರೆ. ಕಪ್ಪಿನಲ್ಲಿ ನೂರು ಗ್ರಾಂ. ಬೆಲೆ ರೂ. 40. ಕೊಂಡೊಯ್ದ ಐಸ್‍ಕ್ರೀಮ್ ಖಾಲಿಯಾಗುತ್ತದೆ. ಈಗ ಇದರಲ್ಲಿ ಎರಡು ಪರಿಮಳದ್ದು ಇವೆ. ವೆನಿಲ್ಲಾ ಮತ್ತು ಬಟರ್‍ಸ್ಕಾಚ್. ಮುಂದೆ ಸ್ಟ್ರಾಬೆರಿ ಪರಿಮಳದ್ದೂ ತಯಾರಿಸಬೇಕೆಂದಿದೆ.

“ಐಸ್‍ಕ್ರೀಮ್ ಒಳ್ಳೆ ಸಾಫ್ಟ್ ಆಗಿ ಇದೆ. ಬಾಯಿಯಲ್ಲೇ ಕರಗುತ್ತದೆ. ಆರಂಭದಲ್ಲಿ ಕೊಕ್ಕೋ ಫ್ಲೇವರ್ ಬಳಸಿದಾಗ ಜನ ಅಷ್ಟು ಇಷ್ಟಪಡಲಿಲ್ಲ. ಈಗ ಕೇಳಿಕೇಳಿ ಸವಿಯುತ್ತಿದ್ದಾರೆ. ಇಂಥದ್ದೇ ವಯೋಮಾನದವರಿಗೆ ಇದು ಇಷ್ಟ ಎನ್ನುವಂತಿಲ್ಲ. ಏಳರಿಂದ ಎಪ್ಪತ್ತು ವಯಸ್ಸಿನ ವರೆಗಿನವರೂ ಮೆಚ್ಚಿಕೊಂಡಿದ್ದಾರೆ’’ ಎನ್ನುತ್ತಾರೆ ಇದರ ತಯಾರಕ 73 ವರ್ಷದ ಮುರುಗ ಪ್ರಸಾದ್. ಮಾರುಕಟ್ಟೆಗೆ ಇಳಿಸುವ ಮೊದಲು ನೆರೆಕರೆಯ ಮಂದಿಗೆ ಈ ಐಸ್‍ಕ್ರೀಮಿನ ರುಚಿ ತೋರಿಸಿ ಮುರುಗ ಪ್ರಸಾದ್ ಧೈರ್ಯ ಪಡೆದುಕೊಂಡಿದ್ದರು.

ಮುರುಗ ಪ್ರಸಾದ್ ಅವರು ಹುಟ್ಟಿ ಬೆಳೆದು ಜೀವನ ರೂಪಿಸಿದ್ದು ಚೆನ್ನೈಯಲ್ಲಿ. ಎಲೆಕ್ಟ್ರಿಕ್ ಎಂಜಿನಿಯರ್ ವೃತ್ತಿ. ನಿವೃತ್ತಿ ಜೀವನಕ್ಕಾಗಿ ಹಳ್ಳಿಗೆ. ಕೊಡೈಕನಾಲಿನಿಂದ 50 ಕಿಲೋಮೀಟರ್ ದೂರದ ಹೈ ರೇಂಜಿನಲ್ಲಿ ಎರಡೆಕ್ರೆ ಕಾಫಿ ತೋಟ ಖರೀದಿ.

“ನನಗೆ ಕೃಷಿಗಿಂತಲೂ ಮೌಲ್ಯವರ್ಧನೆಯ ಬಗ್ಗೆ ಹೆಚ್ಚು ತಿಳಿವಳಿಕೆ ಇದೆ’’ ಎನ್ನುವ ಈ ಉತ್ಸಾಹಿ ಮೊದಲು ಗಮನಿಸಿದ್ದು ಇಲ್ಲಿ ಹಾಳಾಗಿ ಹೋಗುವ ಹಲಸಿನ ಹಣ್ಣುಗಳನ್ನು. ಇವರ ಎಸ್ಟೇಟಿನಲ್ಲೇ 50 ಮರಗಳಿವೆ. ಎಲ್ಲವೂ ಮೆತ್ತಗಿನ ಸೊಳೆಯ ತುಳುವ (ಬಿಳುವ, ಅಂಬಲಿ) ಹಲಸುಗಳೇ. ಕಾಯಿಯಿದ್ದಾಗ ಸ್ವಲ್ಪ ತರಕಾರಿಯಾಗಿ ಬಳಸುವುದುಂಟು. ಅದೂ ಅತ್ಯಲ್ಪವೇ. ಹಣ್ಣಾದ ಮೇಲೆ ಇಲ್ಲಿ ಇದನ್ನು ಯಾರೂ ಬಳಸುವುದೇ ಇಲ್ಲ. ಬಿದ್ದು ಕೊಳೆತು ಹೋಗುವುದು ಸಾಮಾನ್ಯ.

ಇಬ್ಬರು ಆದಿವಾಸಿ ತರುಣರನ್ನು ಪ್ರೇರೇಪಿಸಿ ಮುರುಗ ಪ್ರಸಾದ್ ಒಂದಷ್ಟು ಮೌಲ್ಯವರ್ಧನೆ ಆರಂಭಿಸಿದ್ದಾರೆ. ಪೂಮಲೈ ಅಗ್ರೋ ಪ್ರಾಡಕ್ಟ್ಸ್. ಹಬೀ ಹುಡಿ ಮತ್ತು ಬಾಕಾಹು ಸೇರಿಸಿ ಕೊಕ್ಕೋ ಇಲ್ಲದೇನೇ ಮಾಡಿದ ಚಾಕೊಲೇಟ್, ಹಬೀ ಹುಡಿ, ಸಿರಿಧಾನ್ಯ, ಬೀಜಗಳು ಇತ್ಯಾದಿ 14 ಕಚ್ಚಾವಸ್ತು ಬಳಸಿ ತಯಾರಿಸುವ ಹೆಲ್ತ್ ಮಿಕ್ಸ್, ಇದೇ ಮಿಶ್ರಣ ಬಳಸಿ ತಯಾರಿಸುವ ಮಲ್ಟಿ ಗ್ರೈನ್ ಬಿಸ್ಕೆಟ್ ಇತ್ಯಾದಿ ತಯಾರಿಸುತ್ತಿದ್ದಾರೆ. ಹೆಚ್ಚಿನವುಗಳ ಮಾರಾಟವೂ ಮುಖ್ಯವಾಗಿ ಡಿಂಡಿಗಲ್ಲಿನ ಸಾಪ್ತಾಹಿಕ ಸಾವಯವ ಸಂತೆಯಲ್ಲೇ.

ಮುರುಗ ಅವರದು ಕಡಿಮೆ ವೆಚ್ಚದ ಉತ್ಪಾದನಾ ರೀತಿ. ತನ್ನ ಉತ್ಪನ್ನಗಳಿಗೆ ಈ ವರೆಗೆ ಸಿಕ್ಕ ಒಲವು ಅವರನ್ನು ಈ ಕಿರು ಉದ್ಯಮವನ್ನು ದೊಡ್ಡದಾಗಿಸಲು ಪ್ರೇರೇಪಿಸಿದೆ. ಅದರ ಅಂಗವಾಗಿ ತಿರುಚಿರಾಪಳ್ಳಿ - ಮಧುರೈ ಹೆದ್ದಾರಿಯಲ್ಲಿ ಈ ಉತ್ಪನ್ನಗಳ ಮಾರಾಟ ಮಳಿಗೆ ತೆರೆಯುವ ಸಿದ್ಧತೆ ನಡೆಯುತ್ತಿದೆ.    ಎರಡು ತಿಂಗಳಲ್ಲಿ ಇದು ಆರಂಭವಾಗಲಿದೆಯಂತೆ.

ಹಾಗಾದಾಗ, ದೇಶದ ಮೊದಲ ಹಬೀ ಐಸ್‍ಕ್ರೀಮ್ ಹೆದ್ದಾರಿಯ ಪಯಣಿಗರಿಗೂ ಸಿಗತೊಡಗಬಹುದು. ಅದರೊಂದಿಗೆ ಇದರ ಸುದ್ದಿಯೂ ನಾಲ್ದೆಸೆ ಹಬ್ಬಬಹುದು.

ಒಳ್ಳೆಯ ರೀತಿಯಲ್ಲಿ ತಯಾರಾದ ಹಬೀ ಹುಡಿಯನ್ನು ಇಂದು ಹಲವು ಉದ್ದಿಮೆಗಳು ಆನ್‍ಲೈನ್ ಮಾರಾಟ ಮಾಡುತ್ತಿವೆ. ಕರಾವಳಿ, ಕೇರಳಗಳ ಹಲಸಿನ ಅಲೆ ಜೋರಾಗಿರುವ ಪ್ರದೇಶದ ಐಸ್‍ಕ್ರೀಮ್ ತಯಾರಕರು ಹಬೀ ಐಸ್‍ಕ್ರೀಮಿನ ಪ್ರಯೋಗ ನಡೆಸಿ ಸುತ್ತಲಿನ ಮಂದಿಗೆ ರುಚಿ ತೋರಿಸಿ ಈ ನಿಟ್ಟಿನಲ್ಲಿ ಹೆಜ್ಜೆ ಇಡಬಹುದು. ರುಚಿಯಲ್ಲಿ ಇದು ಎಲ್ಲೆಡೆ ಗೆಲ್ಲಬಹುದು.

ಹಲಸಿನ ಬೀಜ ತುಂಬ ಪೋಷಕಾಂಶಭರಿತ, ಔಷಧೀಯ ಗುಣಗಳಿರುವ ಕಚ್ಚಾವಸ್ತು. ಹಲಸು ಬೆಳೆಸುವ ಯಾವ ದೇಶಕ್ಕೂ ಈ ವರೆಗೆ ಹಲಸಿನ ಬೀಜದ ಸದ್ಬಳಕೆಯ ವಿಚಾರದಲ್ಲಿ ನ್ಯಾಯ ಸಲ್ಲಿಸಲು ಆಗಿಲ್ಲ. ಗೋಧಿ ಹಲ್ವದಂತೆ ಬರೇ ಹಬೀ ಹಲ್ವ ಮಾಡಿದರೂ ತುಂಬ ರುಚಿಕರವಾಗುತ್ತದೆ.

ಬಹುಶಃ ‘ಹಲಸನ್ನು ಹಾಳು ಮಾಡಬೇಡಿ’ ಎಂಬ ಆಂದೋಳನದಂತೆಯೇ ‘ಹಲಸಿನ ಬೀಜ ಎಸೆಯದಿರಿ, ಬಳಸಿ ನೋಡಿ’ ಎಂಬ ಪ್ರತ್ಯೇಕ ಅಭಿಯಾನ ಬೇಕಾಗುತ್ತದೇನೋ! ಹಬೀ ಮಿಲ್ಕ್ ಶೇಕೂ ಅಷ್ಟೇ. ಹೊಸದನ್ನು ಮಾಡುವ ಆಹಾರೋದ್ಯಮಿಗಳು ಮತ್ತು ವಿಜ್ಞಾನಿಗಳ ಗಮನ ಈ ಕಡೆಗೆ ಹರಿಯಬೇಕು.

ಮುರುಗ ಪ್ರಸಾದ್ - 98405 98574