ADD

Back To Free Articles

April-2019

`ಕುದುರೇನ ತಂದೀವ್ನಿ, ತಲೆನೋವ ಬಿಟ್ಟೀವ್ನಿ’

ಉಳಿದೆಲ್ಲರ ಅಂತರ್ಸಾಗಾಟ ವಾಹನಗಳಂತೆ ಇವರದಕ್ಕೆ ಪೆಟ್ರೋಲ್ ಬೇಡ. ದುರಸ್ತಿಯ ತಲೆನೋವೂ ಇಲ್ಲ. ಬಿಡಿಭಾಗ ಹುಡುಕಬೇಕಿಲ್ಲ. ತೋಟದ ಹುಲ್ಲೇ ಅದಕ್ಕೆ ಪೆಟ್ರೋಲ್. ಪ್ರೀತಿಯಿಂದ ಮೈ ತಡವಿ ಎರಡಚ್ಚು ಬೆಲ್ಲ ಉಣಿಸಿ, ದೇಖರೇಕಿ ನೋಡುತ್ತಿದ್ದರೆ ಸಾಕು. ಅದು ಬಹು ಅಶ್ವಶಕ್ತಿಯ ಗಾಡಿ; ಅಲ್ಲಲ್ಲ ಅಶ್ವವೇ ಅವರ ಗಾಡಿ.

- ಗಜಾನನ ವಝೆ, ಮುಂಡಾಜೆ

 
no image
 

ಲೆ ಹೊರೆಯಲ್ಲಿ ತೋಟದಿಂದ ಮತ್ತು ತೋಟಕ್ಕೆ ಸರಕು ಸಾಗಾಟ ಇಂದು ದೊಡ್ಡ ತಲೆನೋವು. ಪರಿವರ್ತಿತ ಆಟೋರಿಕ್ಷಾ, ವ್ಯಾನ್, ಚೀನೀ ಮೂಲದ ಸ್ವಯಂಚಾಲಿತ ಕಾರ್ಟುಗಳು - ಹೀಗೆ ಒಬ್ಬೊಬ್ಬರು ಈ ಕೆಲಸಕ್ಕೆ ಅವರವರಿಗೆ ಅನುಕೂಲ ಅನಿಸಿದ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಧನಂಜಯ ರಾವ್ ಬೆಳ್ತಂಗಡಿಯ ಜನಪ್ರಿಯ ನ್ಯಾಯವಾದಿ. ಉತ್ತಮ ಕೃಷಿಕರೂ ಹೌದು. ಧನಂಜಯರ ಅಂತರ್ಸಾಗಾಟ ವ್ಯವಸ್ಥೆಯ ಆಯ್ಕೆ ಅನೂಹ್ಯ.

ಉಳಿದೆಲ್ಲರ ಅಂತರ್ಸಾಗಾಟ ವಾಹನಗಳಂತೆ ಇವರದಕ್ಕೆ ಪೆಟ್ರೋಲ್ ಬೇಡ. ದುರಸ್ತಿಯ ತಲೆನೋವೂ ಇಲ್ಲ. ಬಿಡಿಭಾಗ ಹುಡುಕಬೇಕಿಲ್ಲ. ತೋಟದ ಹುಲ್ಲೇ ಅದಕ್ಕೆ ಪೆಟ್ರೋಲ್. ಪ್ರೀತಿಯಿಂದ ಮೈ ತಡವಿ ಎರಡಚ್ಚು ಬೆಲ್ಲ ಉಣಿಸಿ, ದೇಖರೇಕಿ ನೋಡುತ್ತಿದ್ದರೆ ಸಾಕು. ಅದು ಬಹು ಅಶ್ವಶಕ್ತಿಯ ಗಾಡಿ; ಅಲ್ಲಲ್ಲ ಅಶ್ವವೇ ಅವರ ಗಾಡಿ.

ಎರಡು ದೋಣಿಯಲ್ಲಿ ಪಯಣಿಸುವವರು ಹೆಚ್ಚಾಗಿ ಸುಲಭದ, ತಲೆನೋವುಗಳಿಲ್ಲದ ಹತ್ಯಾರು, ಒಳಸುರಿ, ವ್ಯವಸ್ಥೆಗಳನ್ನೇ ಆಯುತ್ತಾರೆ. ಅಂಥದ್ದರಲ್ಲಿ ಈ ನ್ಯಾಯವಾದಿ ಕೃಷಿಕರಿಗೆ ಏಕಾಏಕಿಯಾಗಿ ‘ಕುದುರೆ ಹುಚ್ಚು’ ಹತ್ತಿಕೊಂಡದ್ದು ಹೇಗೆ? ಅದನ್ನು ತಿಳಿಯಬೇಕಾದರೆ ಆರು ವರ್ಷ ಹಿಂದಕ್ಕೆ ಪಯಣಿಸಬೇಕು.

ಆರು ವರ್ಷ ಹಿಂದೆ

 “ಯಾವುದೋ ಕೆಲಸಕ್ಕಾಗಿ ಚಿಕ್ಕಮಗಳೂರಿಗೆ ಹೋಗಿದ್ದೆ”, ಧನಂಜಯ ಆ ಕತೆ ಹೇಳತೊಡಗಿದರು, “ಅಲ್ಲಿ ಒಂದು ಕಡೆ ಸಾವಿರಾರು ಕುರಿಗಳ ಮಂದೆ ಕಂಡು ಬಂದಿತು. ಕುತೂಹಲಕ್ಕಾಗಿ ಅವುಗಳನ್ನು ನೋಡಿಕೊಳ್ಳುತ್ತಿದ್ದ  ಒಬ್ಬನ ಬಳಿ ಮಾತಾಡಲಾರಂಭಿಸಿದೆ.  ಈ  ಕುರಿಗಳನ್ನು  ನೀವು ಎಲ್ಲಿಂದ, ಹೇಗೆ ತರುತ್ತೀರಿ ಎಂದು ಆ ಕುದುರೆ ಪಾಲಕ ವ್ಯಕ್ತಿಯನ್ನು ಕೇಳಿದೆ. ಅದಕ್ಕವನು ಹೇಳಿದ ಕತೆ ನನ್ನ ಕುತೂಹಲವನ್ನು ಇನ್ನಷ್ಟು ಕೆರಳಿಸಿತು.”

ಆ ಕುರಿಗಳ ಧನಿ ಬೇರೊಬ್ಬರು. ಅವರು ವಿಜಯಪುರದವರು. ಅವರು ಪ್ರತಿವರ್ಷ ನಾಲ್ಕೈದು ಲಕ್ಷ ರೂಪಾಯಿ ವೆಚ್ಚ ಮಾಡಿ ನಾಲ್ಕರಿಂದ ಐದು ಸಾವಿರ ಕುರಿಗಳನ್ನು ಖರೀದಿಸಿ ಕೊಡುತ್ತಾರೆ. ಇವರು ನಾಲ್ಕೈದು ಮಂದಿ ಜನವರಿ ತಿಂಗಳಲ್ಲಿ ವಿಜಯಪುರದಿಂದ ಈ ಕುರಿಮಂದೆಯೊಂದಿಗೆ ಪ್ರಯಾಣ ಆರಂಭಿಸುತ್ತಾರೆ. ಚಿಕ್ಕಮಗಳೂರು ಅವರ ಕೊನೆಯ ಸ್ಟಾಪ್. ಅಲ್ಲಿಗೆ ನವಂಬರ - ದಶಂಬರದಲ್ಲಿ ಬಂದು ತಲುಪುತ್ತಾರೆ.

ಆಗ ಮೊಹರಂ ಕಾಲ. ಹಾಗಾಗಿ ಇಲ್ಲಿ ಈ ಎಲ್ಲಾ ಕುರಿಗಳು ಬಿಕರಿಯಾಗಿ ಹೋಗುತ್ತವೆ. ಧನಂಜಯ ರಾಯರ ಕುತೂಹಲ ಹೆಚ್ಚಿತು. “ಇಷ್ಟು ದೂರ ಪ್ರಯಾಣವನ್ನು ಹೇಗೆ ಮಾಡುತ್ತೀರಿ? ಕುರಿಗಳ ಹೊಟ್ಟೆಪಾಡು ಹೇಗೆ? ನಿಮ್ಮೊಟ್ಟಿಗೆ ಕೆಲವು ಕುದುರೆಗಳಿವೆಯಲ್ಲಾ, ಅವು ಯಾಕೆ?” ಎಂದೆಲ್ಲಾ ಪ್ರಶ್ನೆಯ ಮಳೆ ಸುರಿಸಿದರಂತೆ.

ಅದಕ್ಕವನು, “ನಾವು ಈ ಕುರಿಗಳನ್ನು ಇಲ್ಲಿಯ ವರೆಗೂ ನಡೆಸಿಕೊಂಡೇ ಬರುತ್ತೇವೆ. ದಾರಿಯಲ್ಲಿ ಸಿಗುವ ಗದ್ದೆಗಳ ಮಾಲಿಕರು ಕುರಿಗಳನ್ನು ತಮ್ಮ ಗದ್ದೆಗಳಲ್ಲಿ ಮೇಯಿಸಲು ಹೇಳುತ್ತಾರೆ. ಅದಕ್ಕವರು ಹಣವನ್ನೂ ಕೊಡುತ್ತಾರೆ. ಕುರಿ ಹಿಕ್ಕೆಯಿಂದ ಅವರ ಗದ್ದೆ ಫಲವತ್ತಾಗುತ್ತದೆ. ಹೊರಡುವಾಗ ಬಡಕಲಾಗಿದ್ದ ಈ ಕುರಿಗಳು ಇಲ್ಲಿಗೆ ತಲುಪುವಾಗ ದಷ್ಟಪುಷ್ಟವಾಗುತ್ತವೆ. ಮರಿಗಳನ್ನೂ ಇಡುತ್ತವೆ. ಅವುಗಳ ಸಂಖ್ಯೆ ಹೊರಡುವಾಗ ಇದ್ದದ್ದರ ಸುಮಾರು ಒಂದೂವರೆ ಪಟ್ಟು ಹೆಚ್ಚುತ್ತದೆ. ಅವುಗಳನ್ನು ಇಲ್ಲಿ ಮಾರಾಟ ಮಾಡಿದಾಗ ಅಂದಾಜು ಒಂದೂವರೆಯಿಂದ ಎರಡು ಕೋಟಿ ರೂ. ವರಮಾನ ಸಿಗುತ್ತದೆ. ಸಾಗಿಸಿಕೊಂಡು ಬಂದ ನಮಗೆ ಎರಡರಿಂದ ಮೂರು ಲಕ್ಷ ರೂಪಾಯಿ ಕೊಡುತ್ತಾರೆ” ಎಂದ.

ಪೋರ್ಟರ್ ಕುದುರೆಗಳು

“ನಮ್ಮ ಸಾಮಾನುಗಳನ್ನು ಈ ಕುದುರೆಗಳ ಬೆನ್ನ ಮೇಲೆ ಸಾಗಿಸುತ್ತೇವೆ”, ಆತ ಮುಂದುವರಿಸಿದ, “ಪ್ರತಿಯೊಂದು ಕುದುರೆಯೂ ಸುಮಾರು ಒಂದೂವರೆ ಕ್ವಿಂಟಾಲಿನಷ್ಟು ಭಾರ ಹೊರಬಲ್ಲುದು. ಅವುಗಳನ್ನೂ ಕುರಿಗಳೊಟ್ಟಿಗೆ ಗದ್ದೆಯಲ್ಲೇ ಮೇಯಲು ಬಿಡುತ್ತೇವೆ. ಕುದುರೆಗಳಿಗೆ ವಿಶೇಷ ಆಹಾರವೇನೂ ಕೊಡುವುದಿಲ್ಲ.”

“ಕುರಿಗಳೆಲ್ಲಾ ಮಾರಾಟವಾದ ನಂತರ ಈ ಕುದುರೆಗಳನ್ನೂ ಮಾರುತ್ತೀರಾ”, ನಮ್ಮ ನ್ಯಾಯವಾದಿ ಕೇಳಿದರಂತೆ. ಅವರಿಗೆ ಅಚ್ಚರಿ ಕಾದಿತ್ತು! ಈ ಕುದುರೆಗಳನ್ನು ಅವರು ಮಾರುತ್ತಿರಲಿಲ್ಲ. ಅಲ್ಲೇ ಬಿಟ್ಟು ಹೋಗುವುದು ಅವರ ರೂಢಿ! “ಬಹುಶಃ ಇದೇ ಕಾರಣದಿಂದ ಚಿಕ್ಕಮಗಳೂರಿನ ರಸ್ತೆ ಬದಿಯಲ್ಲಿ ಕುದುರೆಗಳು ಕಾಣಸಿಗುವುದು” ಎನ್ನುತ್ತಾ ಲಾಯರರು ಒಂದು ಅಧ್ಯಾಯ ಮುಗಿಸಿದರು.

ಕುದುರೆ ಒಂದೂವರೆ ಕ್ವಿಂಟಾಲ್ ಭಾರ ಹೊರಬಲ್ಲುದು ಎಂಬ ಎಂಬ ಕುದುರೆ ಪಾಲಕನ ಮಾತು ಧನಂಜಯ ರಾಯರನ್ನು ಗಾಢ ಚಿಂತನೆಗೆ ಹಚ್ಚಿತು. ಸ್ವಲ್ಪ ಹೊತ್ತು ಒಂದೆಡೆ ಕುಳಿತು ಗಂಭೀರವಾಗಿ ಯೋಚಿಸಿದರು. ನಂತರ ಅವನಲ್ಲಿ, ‘ನನಗೊಂದು ಕುದುರೆ ಕೊಡಬಹುದೇ?’ ಎಂದು ಕೇಳಿದರು. ಆತ ರಾಯರನ್ನು ತಮ್ಮ ತಂಡದ ನಾಯಕನ ಬಳಿ ಕರೆದೊಯ್ದು ಪರಿಚಯಿಸಿದ. ನಾಯಕ ಇವರ ಕೋರಿಕೆ ಕೇಳಿ ಖುಶಿ ಆಯಿತು.

ಕುದುರೆಗೆ ಕಾಸು, ಕ್ಲಾಸು ಉಚಿತ

‘ಆಗಲಿ, ಕೊಡೋಣ ಅದಕ್ಕೇನಂತೆ” ಎನ್ನುತ್ತಾ ಆ ಚಾಣಾಕ್ಷ ಇವರಿಗೆ ಒಂದು ಚಿಕ್ಕ ಕ್ಲಾಸನ್ನೂ ತೆಗೆದುಕೊಂಡ.  “ನಾವು ಈ ಕುದುರೆಗಳನ್ನು ಇಲ್ಲಿಯೇ ಬಿಟ್ಟುಹೋಗುವುದೇನೋ ನಿಜ. ಆದರೆ ನಿಮಗೆ ಧರ್ಮಾರ್ಥವಾಗಿ ಕೊಡುವುದಿಲ್ಲ. ಯಾಕೆಂದರೆ ಅದು ವ್ಯಾಪಾರ ಧರ್ಮವಲ್ಲ. ನಿಮಗೆ ಎರಡು ಕುದುರೆ ಕೊಡುತ್ತೇನೆ. ಆರು ಸಾವಿರ ರೂಪಾಯಿ ಕೊಡಿ, ಸಾಕು. ಒಂದೇ ಕುದುರೆಯಿದ್ದರೆ ಅದು ಜಡವಾಗಿರುತ್ತದೆ. ಜೊತೆಗೆ ಇನ್ನೊಂದು ಇದ್ದರೆ ಅವು ಚುರುಕಾಗಿರುತ್ತವೆ. ನಿಮಗೆ ತಾಯಿ, ಮಗಳು ಎರಡು ಹೆಣ್ಣು ಕುದುರೆಗಳನ್ನು ಕೊಡುತ್ತೇನೆ. ಗಂಡು ಕುದುರೆ ಬೇಡ. ಅದು ಪ್ರಾಯಕ್ಕೆ ಬಂದಾಗ ಆನೆಯ ಹಾಗೆ ಮದ ಬರುತ್ತದೆ. ಆಗ ಆದನ್ನು ಸಂಭಾಳಿಸುವುದು ಕಷ್ಟ. ಮಾತ್ರವಲ್ಲದೆ ಅದು ದಿಕ್ಕಾಪಾಲಾಗಿ ತಪ್ಪಿಸಿಕೊಂಡು ಓಡಿಹೋಗುವುದೇ ಜಾಸ್ತಿ” ಎಂದು ವಿವರಿಸಿದನಂತೆ.

ಆತ ಕೇಳದೆಯೇ ಉಪಯುಕ್ತ ಅನುಭವಾಮೃತ ಧಾರೆ ಎರೆದಾಗ ಲಾಯರಿಗೆ ಚರ್ಚೆ ಮಾಡುವ ಮನಸ್ಸು ಬರಲಿಲ್ಲ. ಕೈ ಜೇಬಿಗೆ ಹೋಯಿತು. ಕುದುರೆಯನ್ನಿವರು ಕೊಂಡುಕೊಂಡರು. ಅಲ್ಲೇ ಒಂದು ವಾಹನ ಗೊತ್ತು ಮಾಡಿ ಅದರಲ್ಲಿ ತಾಯಿ ಹಾಗೂ ಮರಿ ಕುದುರೆಗಳನ್ನು ತಂದೇ ಬಿಟ್ಟರು.

ಅದು ಅಕ್ಟೋಬರ್ ತಿಂಗಳು. ಮಳೆಗಾಲದ ಅಂತಿಮ ದಿನಗಳವು. ಚಿಕ್ಕಮಗಳೂರಿನಲ್ಲಿ ಅನಾಮಧೇಯನಾಗಹೊರಟಿದ್ದ ಕುದುರೆಗಳಿಗೆ ಬೆಳ್ತಂಗಡಿಯ ಲಾಯರ ಮನೆಯ ವಿಳಾಸ ಸಿಕ್ಕಿತು. ತಾಯಿ - ಮಗಳಿಗೆ ಇವರು ಹೆಸರನ್ನೂ ಇಟ್ಟರು. ಅಮ್ಮ ಕುದುರೆ ಗೌರಿ; ಮಗಳು ಕೇಟ್ಸ್. ಮಗಳ ಹೆಸರು ಕರೆಯಲು ಕೆಲಸದವರಿಗೆ ಕಷ್ಟವಾಗುತ್ತಿತ್ತು. ಇದನ್ನು ಮನಗಂಡ ಧನಂಜಯ ‘ಚಿಂತೆ ಬಿಡಿ, ಕೇಟ್ಸನ್ನು ‘ಕುಸುಮಾ’ ಎಂದು ಕರೆಯಿರಿ ಎಂಬ ಸಲಹೆ ಕೊಟ್ಟರು.

ಹಾಸನದ ಮೇಷ್ಟ್ರು

ಕುದುರೆಯನ್ನೇನೋ ತಂದಾಯಿತು. ಅದಕ್ಕೆ ಪಾಠ ಕಲಿಸೋದು ಯಾರು? ಇಷ್ಟು ಶ್ರಮ ವಹಿಸಿದವರಿಗೆ ಅದಕ್ಕೇನು ಕಷ್ಟ? ಹುಡುಕಿ ಹುಡುಕಿ ಹಾಸನದಿಂದ ಒಬ್ಬರು ಕುದುರೆಗಳ ಮೇಷ್ಟ್ರನ್ನು ಕರೆಸಿದರು. ಅವರ ಹೆಸರು ಶೌಕತ್ ಆಲಿ.

ಶೌಕತ್ ಗೌರಿಯನ್ನು ತೋಟದಲ್ಲಿ ಹಾಗೂ ವಕೀಲರ ಮನೆಯ ಆಸುಪಾಸಿನಲ್ಲಿ ಸುತ್ತಾಡಿಸಿದರು. ಇದರಿಂದ ಗೌರಿ ತನ್ನ ಬದುಕಿನ ಮುಂದಿನ ಕ್ಯಾಂಪಸ್ಸನ್ನು ಗುರುತಿಸಲು ಮತ್ತು ಅದರ ಗಡಿ ತಿಳಿದುಕೊಳ್ಳಲು ಅನುಕೂಲವಾಯಿತು. ನಂತರ ಅದನ್ನು ಗಾಡಿಗೆ ಕಟ್ಟಿದರು. ಪೇಟೆಯಲ್ಲಿ ತಿರುಗಾಡಲು ಅಭ್ಯಾಸ ಮಾಡಿಸಿದರು. ವಾಹನಗಳಿಗೆ, ಜನರಿಗೆ ಬೆದರದಂತೆಯೂ ತರಬೇತಿ ಕೊಟ್ಟರು.  “ಇಷ್ಟು ಕೆಲಸ ಸಲೀಸಾಗಿ ಆಗಲು ಸುಮಾರು ಒಂದು ತಿಂಗಳು ಬೇಕಾಯಿತು. ಈ ಕೆಲಸ ಕಲಿಸಲು ಅನುಭವಿ ಮೇಷ್ಟರೇ ಬೇಕು” ಎನ್ನುವುದು  ಧನಂಜಯರ ಅಭಿಪ್ರಾಯ.

ಮೇಷ್ಟ್ರು ಹೋದ ಮೇಲೆ ಗೌರಿಯನ್ನು ಸಂಭಾಳಿಸಬೇಕಲ್ಲಾ? ನ್ಯಾಯವಾದಿ ತಲೆ ಓಡಿಸಿದರು. ಶೌಕತ್ ಆಲಿ ಹಾಸನಕ್ಕೆ ಮರಳುವ ಮೊದಲೇ, ತಮ್ಮ ಆಳು ನಾಗೇಶನಿಗೆ ಕುದುರೆ ನಿರ್ವಹಣೆಯ ಎಲ್ಲಾ ಪಾಠ  ಹೇಳಿಸಿದರು.  ಈಗ ವಕೀಲರಿಗೇ ಮನದಟ್ಟಾಗಿದೆ, “ಕುದುರೆಯ ಆರೈಕೆಯು ಕಷ್ಟದ ಕೆಲಸವೇನೂ ಅಲ್ಲ. ನಾಗೇಶ್ ಮಾತ್ರವಲ್ಲದೆ ಮನೆಯ ಇತರ ಕಾರ್ಮಿಕರೂ ಅದನ್ನು ಸುಲಭವಾಗಿ ನಿಭಾಯಿಸುತ್ತಾರೆ. ನಾಗೇಶ್ ರಜೆಯಲ್ಲಿದ್ದಾಗ ಇತರ ಕಾರ್ಮಿಕರಲ್ಲಿ ಯಾರಾದರೊಬ್ಬರು ಗೌರಿಯ ಮೇಲ್ವಿಚಾರಕ ರಾಗುತ್ತಾರೆ. ಮನಸ್ಸಿದ್ದರೆ ಇದನ್ನು ಯಾರು ಬೇಕಾದರೂ ಕಲಿಯಬಹುದು. ಅದು ತನ್ನನ್ನು ತಾನೇ ನಿಭಾಯಿಸಿಕೊಳ್ಳುವುದರಿಂದ ಅದೊಂದು ದೊಡ್ಡಹೊರೆ ಅನಿಸುವುದೇ ಇಲ್ಲ.” ಸಂಭಾಳಿಸಲು ಸುಲಭ.

ಆರಂಭದಲ್ಲಿ ಸ್ವತಃ ಧನಂಜಯ ರಾವ್ ಕುದುರೆ ಗಾಡಿಯನ್ನು ಓಡಿಸಿದ್ದರು. “ತರಬೇತಿ ಹೊಂದಿದ ಕುದುರೆಯನ್ನು ಸಂಭಾಳಿಸುವುದು ಕಷ್ಟವೇ ಅಲ್ಲ” ಎನ್ನುತ್ತಾರೆ ಅವರು. ಪೇಟೆಯಲ್ಲೂ ಅವರು ಕುದುರೆ ಗಾಡಿ ‘ಡ್ರೈವ್’ ಮಾಡಿದ್ದಿದೆ. ಆಗ ಅದು ಹಲವರ ಕುತೂಹಲದ ಕೇಂದ್ರಬಿಂದುವಾಗುತ್ತದೆ. ಹಲವರು ಸೆಲ್ಫೀ ತೆಗೆದುಕೊಳ್ಳುತ್ತಾರೆ.

ಗೌರಿ, ಕುಸುಮಾ ತೋಟದ ಹುಲ್ಲನ್ನು ಮೇಯುತ್ತವೆ. ಬೆಳಿಗ್ಗೆ ಬಿಟ್ಟರೆ ಮಧ್ಯಾಹ್ನದ ವರೆಗೆ ಮೇದು ಆಮೇಲೆ ನೀರು ಕುಡಿಯಲು ಬರುತ್ತವೆ. ಪುನಃ ತೋಟಕ್ಕೆ ಓಡಿದರೆ ಸೂರ್ಯ ಮುಳುಗುವ ತನಕ ಹುಲ್ಲು ಮೇಯುವುದು ಅವುಗಳ ದಿನಚರಿ.

“ನೆಟ್ಟ ಗಿಡಗಳನ್ನು ತಿನ್ನುವುದಿಲ್ಲ, ಹುಲ್ಲು ಬಿಟ್ಟರೆ ಬೇರೇನೂ ಅವುಗಳಿಗೆ ಕೊಡುವ ಅವಶ್ಯಕತೆಯಿಲ್ಲ “ಧನಂಜಯ ತಮ್ಮ ಕುದುರೆಗಳ ಬಗ್ಗೆ ಹೇಳುತ್ತಾ ಹೇಳುತ್ತಾ ಚುರುಕಾದರು.” ತೋಟದಲ್ಲಿ ಬಿದ್ದಿರುವ ಹಸಿ ಹಾಳೆಯನ್ನೂ, ಹಿಂಗಾರದ ಹಾಳೆಯನ್ನೂ ಅವು ಖುಷಿಯಿಂದ ತಿನ್ನುತ್ತವೆ. ದಿನವಿಡೀ ಓಡುತ್ತಾ ಓಡುತ್ತಾ ತಮ್ಮ ಎಲ್ಲಾ ಕೆಲಸ ಮಾಡುತ್ತವೆ. ಹಲಸಂತೂ ಕುದುರೆಗೆ ಬಲು ಇಷ್ಟ. ಕುದುರೆಯ ಕಣ್ಣುಗಳಿಗೆ ಪಟ್ಟಿಗಳನ್ನು ಕಟ್ಟಿರುತ್ತೇವೆ. ಈ ಪಟ್ಟಿಗಳು ಮುಖವಾಡದಲ್ಲೇ ಬ್ಯುಲ್ಟ್ ಇನ್. ಅಂದರೆ ಅದರೊಂದಿಗೇನೇ ಬಂದಿರುತ್ತದೆ. ಮೇಯಲು ಬಿಡುವಾದಾಗ ಮಾತ್ರ ಮುಖವಾಡ ತೆಗೆಯುತ್ತೇವೆ. ಅವುಗಳಿಗೆ ಆಚೀಚೆ ಇರುವ ಆಹಾರವೂ ಕಾಣಬೇಕಲ್ಲಾ?.”

ಮಲಗಲು ಕಲಿತ ಕುದುರೆಗಳು

 ‘ಗೌರಿ, ಕುಸುಮಾ’ ಅಂತ ಪ್ರೀತಿಯಿಂದ ಯಾರಾದರೂ ಕೂಗಿದರೆ ಸಾಕು ಅವು ಓಡೋಡಿ ಬರುತ್ತವೆ. ಬೆಳಗ್ಗೆ ಮೇಯಲು ಬಿಡುವ ಮೊದಲು ಮನೆಯವರು ಅವಕ್ಕೆ ಬೆಲ್ಲ ತಿನ್ನಿಸುತ್ತಾರೆ. ಎರಡೂ ಕುದುರೆಗಳಿಗೆ ಬೆಲ್ಲ ಬಹಳ ಇಷ್ಟ. ತಿಂದ ನಂತರ ಸ್ವಚ್ಛಂದವಾಗಿ ಮೇಯಲು ಹೋಗುತ್ತವೆ.

ಸಂಜೆ ಮನೆಗೆ ಬಂದಾಗ ಅವನ್ನು ದನಗಳ ಹಟ್ಟಿಯಲ್ಲೇ ಕಟ್ಟುತ್ತಾರೆ. “ಕುದುರೆ ಬಹಳ ಶಿಸ್ತುಬದ್ಧ ಪ್ರಾಣಿ” ಎನ್ನುತ್ತಾರೆ ರಾಯರು. ಪ್ರತಿದಿನ ಕ್ಲುಪ್ತ ಸಮಯಕ್ಕೆ ಮರಳಿ ತನ್ನನ್ನು ಕಟ್ಟುವ ಜಾಗದಲ್ಲಿ ನಿಲ್ಲುತ್ತದೆ. ಕುದುರೆಗಳು ಮಲಗುವುದಿಲ್ಲ. ನಿಂತೇ ಇರುತ್ತವೆ. ಒಮ್ಮೊಮ್ಮೆ ಬಿದ್ದು ಹೊರಳಾಡಿ ಮತ್ತೆ ಎದ್ದು ನಿಂತು ಬಿಡುತ್ತವೆ. ದನಗಳ ಹಟ್ಟಿಯಲ್ಲಿ ಕಟ್ಟುತ್ತಿದ್ದ ಕುದುರೆಗಳು ವರ್ಷದ ಕಾಲ ನಿಂತೇ ಇರುತ್ತಿದ್ದವು. ಆಮೇಲೆ ಸಹವಾಸ ದೋಷದಿಂದಲೋ  ದನಗಳಂತೆಯೇ ಮಲಗಲಾರಂಭಿಸಿದವು. ಈಗ ಅವು ಇಲ್ಲಿಯ ವಾತಾವರಣಕ್ಕೆ ಚೆನ್ನಾಗಿ ಹೊಂದಿಕೊಂಡಿವೆ. ಮಳೆಗಾಲ, ಚಳಿಗಾಲ, ಬೇಸಿಗೆಯೇ ಇರಲಿ ಇವುಗಳಿಗೆ ಯಾವುದೇ ಕಾಯಿಲೆ ಬಂದಿಲ್ಲ.”

ಕುದುರೆಗಳನ್ನೇನೋ ಚಿಕ್ಕಮಗಳೂರಿನಿಂದ ತಂದರು. ಅದರ ಸುಂದರ ಗಾಡಿ ಎಲ್ಲಿಂದ? “ನೋಡಿ, ನಾವು ಇಲ್ಲಿ ಗಾಡಿ ಮಾಡಿಸಬಾರದು. ಇಲ್ಲಿನವರಿಗೆ ಅದು ಸರಿಯಾಗಿ ತಿಳಿದಿಲ್ಲ. ನಾನು ಹಾಸನದಿಂದ ಕೊಂಡು ತಂದೆ. ಗಾಡಿಯನ್ನು ಹಾಸನ ಅಥವಾ ಮೈಸೂರಿನಿಂದ ಖರೀದಿಸುವುದು ಉತ್ತಮ. ಅಲ್ಲಿ ಸುಮಾರು ಇಪ್ಪತ್ತೈದರಿಂದ ಮೂವತ್ತು ಸಾವಿರ ರೂಪಾಯಿಗೆ ಒಳ್ಳೆಯ ಗಾಡಿ ಸಿಗುತ್ತದೆ.”

ಮೂರು ಊರಿನ ಕೊಡುಗೆ

 ಕುದುರೆ ಗಾಡಿಗಳ ಬಿಡಿಭಾಗಗಳು ತಮಿಳುನಾಡಿನಲ್ಲಿ ತಯಾರಾಗುತ್ತವಂತೆ. ಇವನ್ನು ಜೋಡಿಸುವ ಕೆಲಸ ಮಾತ್ರ ಹಾಸನ ಮತ್ತು ಮೈಸೂರಿನಲ್ಲಿ ನಡೆಯುತ್ತದಂತೆ. ಇವರ ಗಾಡಿಗಳ ಚಕ್ರ ಮರದ್ದು. “ಯಾವ ವಿನ್ಯಾಸದ ಚಕ್ರಗಳು ಬೇಕೆಂಬುದು ಅವರವರ ವೈಯುಕ್ತಿಕ ಆಯ್ಕೆ” ಎನ್ನುವುದು ರಾಯರ ನಿಲುವು. ಹೇಗಿದೆ ನೋಡಿ. ತಮಿಳುನಾಡಿನ ಬಿಡಿಭಾಗ, ಹಾಸನ - ಮೈಸೂರಲ್ಲಿ ಅಸೆಂಬ್ಲಿಯಾದ ಗಾಡಿ, ಚಿಕ್ಕಮಗಳೂರಿನ ಕುದುರೆ - ಈಗ ಬೆಳ್ತಂಗಡಿಯಲ್ಲಿ ಡ್ಯೂಟಿ!

ಡ್ಯೂಟಿ ಮಾಡುತ್ತಾ ಮಾಡುತ್ತಾ ಈಚೆಗೆ ಗೌರಿ ಸತ್ತು ಹೋಯಿತು. ಈಗ ಕುಸುಮಾ ದೊಡ್ಡದಾಗಿದೆ. ಸಾಗಾಟದ ಕೆಲಸ ಚೆನ್ನಾಗಿ ನಿರ್ವಹಿಸುತ್ತಿದೆ. ತೋಟದಲ್ಲಿ ಆರು ಅಡಿ ಅಗಲದ ದಾರಿ ಬೇಕು. ಮನೆಯ ವರೆಗೂ ರಸ್ತೆ ಬೇಕು. ಹಾಗಿದ್ದಾಗ ಕುದುರೆ ಗಾಡಿಯಲ್ಲಿ ಸಾಗಾಟ ಸುಲಭ. “ನಾಲ್ಕಾರು ಬಾರಿ ಈ ದಾರಿಯ ಪರಿಚಯವನ್ನು ಮಾಡಿಸಿದರೆ ಅನಂತರ ಅದು ಕರಾರುವಾಕ್ಕಾಗಿ ಅದೇ ದಾರಿಯಲ್ಲಿ ಸಾಗಾಟ ಮಾಡುತ್ತದೆ, ಪ್ರತಿ ಬಾರಿ ಅದರೊಟ್ಟಿಗೆ ‘ಓವರ್ಸೀರ್’ ಒಬ್ಬರ ಅವಶ್ಯಕತೆಯಿಲ್ಲ.”

ಯಾವ ಸಾಗಾಟಕ್ಕೂ ಸೈ

ಗಾಡಿಯಲ್ಲಿ ಏಳುನೂರು ಕಿಲೋ ಭಾರ ಹಾಕಿದರೂ ಅದು ‘ಆರಾಮ್ ಸೆ’ ಎಳೆದುಕೊಂಡು ಹೋಗುತ್ತದಂತೆ. “ನನ್ನ ತೋಟದ ಎಲ್ಲಾ ಸಾಗಾಟದ ಕೆಲಸವನ್ನು ಈ ಕುದುರೆಯೇ ನಿರ್ವಹಿಸಿಕೊಡುತ್ತದೆ. ಗೊಬ್ಬರ, ಕಟ್ಟಿಗೆ, ಅಡಿಕೆ ಏನೇ ಇದ್ದರೂ ಸಾಗಾಟದ ಕೆಲಸವನ್ನು ಕುದುರೆಯೇ ಪೂರೈಸಿಕೊಡುತ್ತದೆ”.

“ಇಸ್ರೇಲಿನ ಖರ್ಜೂರ ತೋಟದಲ್ಲಿ ಕಳೆನಿಯಂತ್ರಣಕ್ಕೆ ಕತ್ತೆ ಬಳಸಿದಂತೆ ಇಲ್ಲಿ ನಾನು ಕುದುರೆ ಬಳಸುತ್ತೇನೆ. ಕುದುರೆಯ ಸೆಗಣಿ ಉತ್ತಮ ಗೊಬ್ಬರ. ಅದೂ ಲಾಭವೇ. ಸ್ವಲ್ಪ ಶ್ರಮ ವಹಿಸಿ ಒಗ್ಗಿಸಿಕೊಂಡರೆ ಕೃಷಿಕನಿಗೆ ಕುದುರೆ ಸಾಗಾಟಕ್ಕೆ ಒಳ್ಳೆಯ ಆಯ್ಕೆ” ಎಂದು ನ್ಯಾಯವಾದಿ ತೀರ್ಮಾನ ಕೊಟ್ಟು ಮಾತು ಮುಗಿಸಿದರು.

ಕಾಯಿಲೆ ಬಿದ್ದರೆ ಹೇಗೆ? ಇಲ್ಲಿನ ಪಶುವೈದ್ಯರಿಗೆ ಕುದುರೆಗಳ ಚಿಕಿತ್ಸೆ ಗೊತ್ತೇ? “ಈ ವರೆಗೆ ನಮ್ಮ ಕುದುರೆಗಳಿಗೆ ಅಸೌಖ್ಯ ಆಗಲೇ ಇಲ್ಲ. ಒಂದು ಬಾರಿಯೂ ಪಶುವೈದ್ಯರನ್ನು ಕರೆಸುವ ಪ್ರಮೇಯವೇ ಬರಲಿಲ್ಲ” ವಕೀಲರು ನಗುನಗುತ್ತಾ ತಿಳಿಸುತ್ತಾರೆ.

ತೋಟದಲ್ಲಿ ಮಾತ್ರ ಕುದುರೆಯನ್ನು ಉಪಯೋಗಿಸುವುದಾದರೆ, ಅಂದರೆ ಮಣ್ಣು ರಸ್ತೆಯಲ್ಲೇ ಓಡಾಡುವುದಾದರೆ ಅದರ ಗೊರಸಿಗೆ ಲಾಳ ಹೊಡೆಯಬೇಕೆಂದಿಲ್ಲ.  ಹೆಚ್ಚಿನ ಓಡಾಟ ಡಾಮರು ರಸ್ತೆಯಲ್ಲಿದ್ದರೆ ಲಾಳ ಹೊಡೆಸುವುದು ಅನಿವಾರ್ಯ. ಎತ್ತಿನ ಗೊರಸಿಗೆ ಲಾಳ ಹೊಡೆಯುವವರಿಂದ ಈ ಕೆಲಸ ಅಸಾಧ್ಯ. ಅದಕ್ಕೆ ಅದರದೇ ಆದ ಪರಿಣಿತರು ಬೇಕಾಗುತ್ತದೆ. ಅಂತಹ ಪರಿಣಿತರನ್ನು ರಾಯರು ಹುಡುಕಿ ಇಟ್ಟುಕೊಂಡಿದ್ದಾರೆ. ಯಾರಾದರೂ  ಕುದುರೆ ಸಾಕುವ ಆಸಕ್ತರಿಗೆ ಬೇಕಾದರೆ ಇಂಥವರ ಸಂಪರ್ಕ ವಿವರ ಕೊಡಬಲ್ಲರು.

ಖರೀದಿಯ ಅಸಲು ಮಾತ್ರ. ಮೇವಿಗೆ ಹಣ ಕೊಡಬೇಡ - ಅಡಿಕೆ ತೋಟದ್ದೇ ಸಾಕು. ಕ್ಯಾಲ್ಸಿಯಂ ಮಾತ್ರೆ, ಟಾನಿಕ್ ಬಿಡಿ, ಪಶುವೈದ್ಯರೇ ಬೇಡ. ನಿರ್ವಹಣೆಗೆ ಭಾರೀ ಪರಿಣತಿ ಬೇಡ. ಪೆಟ್ರೋಲು - ಕರೆಂಟು ಹೇಗೂ ಬೇಡ. ಅಂತರ್ಸಾಗಾಟ, ಒಮ್ಮೊಮ್ಮೆ ವಿಹಾರ, ಬಂಧು ಬಳಗಕ್ಕೆ ಹೊಸ ಅನುಭವ, ತೀರಾ ಅಗತ್ಯ ಇದ್ದರೆ ಸೊಸೈಟಿಗೆ ಅಡಿಕೆ ಸಾಗಿಸಲೂ ಸೈ.

ಊರಿನ, ಸನಿಹದ ಹಲವು ದೇವಸ್ಥಾನಗಳ ಉತ್ಸವ ಅಥವಾ ಮೆರವಣಿಗೆಗಳಲ್ಲಿ ಗೌರಿ - ಕುಸುಮ ಭಾಗವಹಿಸಿದ್ದಿದೆ. ಅಂಥ ಸಂದರ್ಭಗಳಲ್ಲಿ ಸಂಘಟಕರು ಗೌರಿ - ಕುಸುಮಾ ಮತ್ತು ಗಾಡಿಯನ್ನು ಯಾವುದಾದರೂ ವಾಹನದಲ್ಲಿ ಹಾಕಿಕೊಂಡು ಹೋಗುತ್ತಾರೆ. ಕಳೆದ ವರ್ಷ ಬಂಗಾಡಿಯ ಬಳಿ ಒಂದು ಜಾತ್ರೆಗೆ ಒಯ್ಯಲು ರಾವ್ ಅನುಮತಿ ಕೊಟ್ಟಿದ್ದರು.

ಬೆಳ್ತಂಗಡಿಯಿಂದ ಬಂಗಾಡಿಗೆ ಸುಮಾರು ಇಪ್ಪತ್ತು  ಕಿಲೋಮೀಟರ್ ಅಂತರ. ಗಾಡಿ ಮತ್ತು ಕುದುರೆಗಳನ್ನು ಒಯ್ಯಲು ಅವರಿಗೆ ಯಾವುದೇ ವಾಹನ ಸಿಗಲಿಲ್ಲ. ಪಾಪ, ಅವರು ವಾಹನಕ್ಕೆ ಪ್ರಯತ್ನಿಸಿ ವಿಫಲರಾಗಿ ಸಪ್ಪೆ ಮೋರೆ ಹಾಕಿಕೊಂಡಿದ್ದು ಧನಂಜಯರಿಗೆ ಗೊತ್ತಾಯಿತು. ಆಗ ಅವರು ತನ್ನ ಕುದುರೆ ಪಾಲಕನೊಡನೆ ಕುದುರೆಯನ್ನು ಗಾಡಿಗೆ ಕಟ್ಟಿ ಓಡಿಸಿಯೇ ಅಲ್ಲಿಗೆ ಒಯ್ಯಲು ಹೇಳಿದರು.

ಸುಮಾರು ಒಂದೂವರೆ ಗಂಟೆಯಲ್ಲಿ ಕುದುರೆ ಈ ಇಪ್ಪತ್ತು ಕಿಲೋಮೀಟರ್ ದೂರವನ್ನು ಕ್ರಮಿಸಿತು. ಜಾತ್ರೆಯಲ್ಲಿ ನಿರಾಯಾಸವಾಗಿ ಪಾಲ್ಗೊಂಡು ಮತ್ತು ಅಷ್ಟೇ ದೂರ ಗಾಡಿ ಎಳೆಯುತ್ತಾ ಮರಳಿತು. ಇಷ್ಟಾದರೂ ಅದಕ್ಕೆ ಇನಿತೂ ಆಯಾಸವಾಗಿರಲಿಲ್ಲ.

ಕರಾವಳಿ ಕರ್ನಾಟಕಕ್ಕೆ ವಿಶೇಷವಾದ ಕುದುರೆಗಳ ಕಾರ್ಯಕುಶಲತೆ ಹಲವು ಸಂದರ್ಶಕರು ಬರುತ್ತಿರುತ್ತಾರೆ. ಅವರಲ್ಲಿ ಕೆಲವರು ಪ್ರಭಾವಿತರಾಗಿಯೂ ಇದ್ದಾರಂತೆ. “ಪರಿಸರಸ್ನೇಹಿ ಕುದುರೆ ನಿಜಕ್ಕೂ ಕೃಷಿಕನಿಗೊಂದು ವರದಾನ. ಆದರೆ ಯಾರಾದರೂ ಕುದುರೆ ಕೊಂಡರೆ, ಅನುಭವ ಹೇಗಿದೆ ಎನ್ನುವ ಹಿಮ್ಮಾಹಿತಿ ಗೊತ್ತಿಲ್ಲ” ಎಂದು ಕೈ ಚೆಲ್ಲುತ್ತಾರೆ ಈ ನ್ಯಾಯವಾದಿ.

ಧನಂಜಯ ರಾವ್   |  91 94800 55581  |   (ಅನುಕೂಲ ಸಮಯ 8 - 9 PM)

---------------------------------------------------------------------------------------

ಹಗ್ಗದಲ್ಲೇ ಆಕ್ಸಿಲರೇಟರ್ : ಕುದುರೆಯ ಮುಖದ ಎರಡು ಬದಿಯಿಂದಲೂ ಹಗ್ಗ ಕಟ್ಟಬೇಕು. ಎರಡೂ ಹಗ್ಗಗಳನ್ನು ಎಳೆದರೆ ಅದು ನಿಲ್ಲುತ್ತದೆ. ಬಲದ ಹಗ್ಗ ಮಾತ್ರ ಎಳೆದರೆ, ಬಲಕ್ಕೆ ತಿರುಗುತ್ತದೆ. ಹಾಗೆಯೇ, ಎಡದ ಹಗ್ಗವನ್ನು ಎಳೆದರೆ ಎಡಕ್ಕೆ ತಿರುಗುತ್ತದೆ. ಎರಡೂ ಹಗ್ಗಗಳನ್ನು ಅಲ್ಲಾಡಿಸಿದರೆ, ಅದು ಆಕ್ಸಿಲರೇಟರ್ ಕೊಟ್ಟಂತೆಯೇ! ಕುದುರೆ ಓಡತೊಡಗುತ್ತದೆ. ಸರಿ. ಹಾಗಾದರೆ ಬ್ರೇಕ್ ಯಾವುದು? ಎರಡೂ ಹಗ್ಗಗಳನ್ನು ಒಟ್ಟಿಗೇ ಜಗ್ಗುವುದೇ ಬ್ರೇಕು!

ಗಾಡಿಗೆ ಕಟ್ಟಿದಾಗ ಕುದುರೆಯನ್ನು ಚಲಾಯಿಸಲು ಚಾಲಕ ಇವಿಷ್ಟು ಅಂಶ ತಿಳಿದುಕೊಂಡಿದ್ದರೆ ಸಾಕು. ತರಬೇತಿದಾರ, ಪೇಟೆಯಲ್ಲಿ ವಾಹನಗಳ ಶಬ್ದದ ಭಯ ಹೋಗಲಾಡಿಸಲೂ ಕುದುರೆಯನ್ನು ತಯಾರು ಮಾಡಿರುತ್ತಾನೆ. ಹಾಗಾಗಿ ವಾಹನಗಳು ಬಂದಾಗ ಅದು ಬದಿಗೆ ಸರಿದು ಮುಂದಕ್ಕೆ ಹೋಗುತ್ತದೆ.

-----------------------------------------------------------------------------

ತ್ರಿಭಾಷಾ ಜ್ಞಾನಿ : ಕುದುರೆಯು ಬಹಳ ಬುದ್ಧಿಶಾಲಿ ಪ್ರಾಣಿ ಎಂಬುದು ನನ್ನ ಅನುಭವ ಎನ್ನುತ್ತಾರೆ ಧನಂಜಯ ರಾವ್. ಅವರು ಹೇಳುವಂತೆ, “ಕುದುರೆಯು ಬಹಳ ಬುದ್ಧಿವಂತ ಪ್ರಾಣಿ. ಚಿಕ್ಕಮಗಳೂರಿನಲ್ಲಿ ಇವರು ಕೊಳ್ಳುವಾಗ ಗೌರಿ - ಕುಸುಮಾರಿಗೆ ಯಾವ್ಯಾವ ಭಾಷೆ ತಿಳಿದಿತ್ತೋ ಗೊತ್ತಿಲ್ಲ. ಬೆಳ್ತಂಗಡಿಯ ನೀರು ಕುಡಿಯತೊಡಗಿದ ಮೇಲೆ ಕಲಿತ ಮೊತ್ತಮೊದಲ ಭಾಷೆ ಹಿಂದಿ. ಅದು ಗೌರಿಯ ಮೇಷ್ಟ್ರು ಶೌಕತ್ ಆಲಿಯವರ ಭಾಷೆ. ರಾವ್ ಅವರ ಕೆಲಸಗಾರರೆಲ್ಲಾ ಗೌರಿಯೊಡನೆ ಸಂವಹಿಸುವುದು ತುಳುವಿನಲ್ಲಿ. ಮಾಲಿಕರ ಮನೆಯವರು - ಧನಂಜಯ, ಪತ್ನಿ ಹಾಗೂ ಮಗ ಕನ್ನಡದಲ್ಲೇ  ಮಾತಾಡುತ್ತಾರೆ.  ತಾಯಿ ಮತ್ತು ಮಗಳು ಕುದುರೆ ಇವು ಮೂರೂ ಭಾಷೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತದಂತೆ.

(ಅಡಿಕೆ ಪತ್ರಿಕೆ / ದಶಂಬರ / 2019)