ADD

Back To Free Articles

April-2019

ಬ್ಯೂಟಿ ಬೆರ್ರಿ

 ಅಲಂಕಾರಿಕವಾಗಿ ಬೇಡಿಕೆಯಲ್ಲಿರುವ ಈ ಸುಂದರಿ ಹಣ್ಣಿನ ಸಸ್ಯದ ಬಗ್ಗೆ ಅಮೇರಿಕಾ ನಡೆಸಿದ ಸಂಶೋಧನೆಯಲ್ಲಿ ಇದು ‘ಸೊಳ್ಳೆ ನಾಶಕ' ಎಂಬ ಮಹತ್ವದ ವಿಚಾರವನ್ನು ಹೊರತಂದಿದೆ!

 

- ಅನಿಲ್ ಬಳಂಜ

anilbalanja@gmail.com

 
no image
 

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಚೆರ್ರಿ ಮತ್ತು ಬೆರ್ರಿ ಹಣ್ಣುಗಳು ಗಾತ್ರದಲ್ಲಿ ತೀರಾ ಚಿಕ್ಕದಾಗಿದ್ದರೂ, ಹಣ್ಣಿನ ತಾಳಿಕೆ (Keeping quality) ಕಡಿಮೆ. ನಮ್ಮ ಶರೀರಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಪ್ರಕೃತಿಯಲ್ಲಿ ಇರುವ ನೂರಾರು ಪುಟ್ಟ ಜೀವಿಗಳು ಇಂತಹ ಹಣ್ಣುಗಳನ್ನು ಅವಲಂಬಿಸಿರುತ್ತದೆ. ಕಾಣಲು ಅತಿ ಸುಂದರವಾಗಿರುವ ಹಣ್ಣುಗಳು ಬಾಲ್ಯದ ಮೆಚ್ಚಿನ ತಿನಿಸುಗಳು. ಬೆನ್ನಿಗೇರಿಸಿದ ಚೀಲದೊಂದಿಗೆ ರಸ್ತೆ ಪಕ್ಕದ ಪುಟ್ಟ ಹಣ್ಣುಗಳು ಮುಷ್ಟಿಯೊಳಗಿದ್ದರೆ ಕಿಲೋಮೀಟರ್ ದೂರದ ಶಾಲೆ ತಲುಪಿದ್ದೇ ಗೊತ್ತಾಗುವುದಿಲ್ಲ!

 ಬೆರ್ರಿ ಹಣ್ಣುಗಳ ಸಾಲಿನಲ್ಲಿ ಅಮೇರಿಕಾ ಮೂಲದ ಹಣ್ಣುಗಳಲ್ಲೊಂದು ಬ್ಯೂಟಿ ಬೆರ್ರಿ. ಹೆಸರೇ ಹೇಳುವಂತೆ ನಯನ ಮನೋಹರ ನೇರಳೆ ಬಣ್ಣದ ಸುಂದರಿ ಹಣ್ಣು ಪೊದರು ಬಳ್ಳಿಯಾಗಿ ಬೆಳೆಯುತ್ತದೆ. ಅಂದರೆ ಆಧಾರ ಸಿಕ್ಕಲ್ಲಿ ಮೇಲೇರಬಲ್ಲ, ಬಯಲಿನಲ್ಲಿ ಪೊದರಾಗಿ ಬೆಳೆಯುವ  ಸಸ್ಯ  ಪ್ರಭೇದ.   Lamiaceae ಕುಟುಂಬದ ಈ ಸಸ್ಯದ ಸಸ್ಯ ಶಾಸ್ತ್ರೀಯ ಹೆಸರು Callicarpa amaricana. ಇದು ಉತ್ತರ - ದಕ್ಷಿಣ ಅಮೇರಿಕಾ, ಮಾತ್ರವಲ್ಲದೆ ಆಸ್ಟ್ರೇಲಿಯಾ, ಮಡಗಾಸ್ಕರ್,  ಥಾಯ್ಲೆಂಡ್‍ನಲ್ಲೂ   ಹೆಚ್ಚಾಗಿ ಕಂಡುಬರುತ್ತದೆ.

ಕಾಳುಮೆಣಸಿನ ಗಾತ್ರದ ನೇರಳೆ ಬಣ್ಣದ ಚಿಕ್ಕ ಹಣ್ಣುಗಳು  ಎಲೆ ತೊಟ್ಟಿನ ಬುಡದಲ್ಲಿ ಗೊಂಚಲುಗಳಾಗಿ ಬಿರಿಯುತ್ತವೆ. ಆರಂಭದಲ್ಲಿ ಈ ಹಣ್ಣುಗಳು ತಿನ್ನಲು ಅಯೋಗ್ಯ ಎಂದು ತಿಳಿದಿದ್ದ ಸ್ಥಳೀಯ ಅಮೆರಿಕನ್ನರು ಮುಂದೆ ಇದರ ಮಹತ್ವವನ್ನು ಅರಿತರು. ಅಲಂಕಾರಿಕವಾಗಿ ಬೇಡಿಕೆಯಲ್ಲಿರುವ ಈ ಸುಂದರಿ ಹಣ್ಣಿನ ಸಸ್ಯದ ಬಗ್ಗೆ ಅಮೇರಿಕಾ ನಡೆಸಿದ ಸಂಶೋಧನೆಯಲ್ಲಿ ಇದು ‘ಸೊಳ್ಳೆ ನಾಶಕ' ಎಂಬ ಮಹತ್ವದ ವಿಚಾರವನ್ನು ಹೊರತಂದಿದೆ! ಇದರಿಂದ ಔಷಧೀಯ ಉತ್ಪನ್ನಗಳು ಮಾಡಲ್ಪಟ್ಟರೆ ಮುಂದಿನ ದಿನಗಳಲ್ಲಿ ವ್ಯಾವಹಾರಿಕ ಬೆಳೆಯಾಗಿ ಗುರುತಿಸಲ್ಪಡಬಹುದು.

(ಅನಿಲ್ ದೇಶವಿದೇಶಗಳ ಹೊಸಹೊಸ ಹಣ್ಣಿನ ಗಿಡ ಸಂಗ್ರಹಿಸಿ ಬೆಳೆಸುವ ಆಸಕ್ತಿ ಇರುವ ಅಡಿಕೆ ಕೃಷಿಕ. ಈಚೆಗಷ್ಟೇ ಈ ಗಿಡಗಳನ್ನು ಬೆಳೆಸತೊಡಗಿದ ಕಾರಣ ಓದುಗರ ಬೀಜ, ಗಿಡಗಳ ಕೋರಿಕೆ ಪೂರೈಸಲು ಸಾಧ್ಯವಾಗಲಾರದು ಎಂದು ತಿಳಿಸಿದ್ದಾರೆ.)