ADD

Back To Free Articles

April-2019

ಮೊಬೈಲ್ ಗೊಬ್ಬರ ಕಾರ್ಖಾನೆಗಳು

ಗೊಬ್ಬರ ಕೊಂಡು ತರಬೇಕಿಲ್ಲ, ಹೊತ್ತು ತೋಟಕ್ಕೆಹಾಕಬೇಕಿಲ್ಲ. ಕತ್ತೆ - ಕುರಿಗಳನ್ನು ತೋಟದಲ್ಲೇ ಕಟ್ಟಿ ಹಾಕಿದರೆ ಸೈ.

ಲೇ: ಕಾರನ್ತ

 
no image
 

ವಿರತ ಕೆಲಸ ಮಾಡುತ್ತಲೇ ಇರುವುದಕ್ಕೆ ‘ಕತ್ತೆ ಕೆಲಸ’ ಅಂತ ಅಡ್ಡ ಮಾತೊಂದಿದೆ. ಕತ್ತೆಗಳು ಬೇಕೆಂದಲ್ಲಿಗೆ ಹೋಗಿ ಅಲ್ಲೇ ಗೊಬ್ಬರ ತಯಾರಿಸಿಕೊಡುವ  ‘ಕತ್ತೆ ಕೆಲಸ’ವನ್ನೇ ಮಾಡುವುದಿದೆ ಎಂದರೆ ನಂಬುತ್ತೀರಾ?

ತುಮಕೂರು ಜಿಲ್ಲೆಯ ಬಹುತೇಕ ತೆಂಗಿನ ತೋಟಗಳಲ್ಲಿ ಗೊಬ್ಬರಕ್ಕಾಗಿ  ‘ಕತ್ತೆ ಕಟ್ಟುವುದು’ ರೂಢಿ. ಹಾಗೆಂದರೆ ಕತ್ತೆಗಳ ಹಿಂಡನ್ನು ಒಂದೇ ಕಡೆ ಕಟ್ಟಿಹಾಕುವುದು ಎಂದರ್ಥ. ನೂರು ಕತ್ತೆಗಳ ಒಂದು ಗುಂಪನ್ನು ಇಂದು ಒಂದೆಡೆ ಕಟ್ಟಿದರೆ, ನಾಳೆ ಅದರ ಪಕ್ಕ. ಹೀಗೆ ಹಂತಹಂತವಾಗಿ ತೋಟದಲ್ಲಿ ಅವುಗಳ ವಾಸಸ್ಥಳ ಬದಲಾವಣೆ. ಅವುಗಳ ಮಲಮೂತ್ರ ಮಣ್ಣಿಗೆ ಸೇರಿ ತೆಂಗಿನ ತೋಟಕ್ಕೆ ಗೊಬ್ಬರ.

ತೋಟದ ವಿಸ್ತೀರ್ಣ ಹೆಚ್ಚಿದಷ್ಟೂ ‘ಕತ್ತೆ ಕಟ್ಟುವ’ ದಿವಸಗಳು ಹೆಚ್ಚಾಗುತ್ತದೆ. ಇಂತಿಷ್ಟು ದಿವಸ ಅಂತ ಮೊದಲೇ ನಿರ್ಧಾರವಾಗುತ್ತದೆ. ಆರು ತಿಂಗಳು ಒಂದೇ ತೋಟದಲ್ಲಿ ಝಂಡಾ ಊರುವುದೂ ಇದೆ.

ಕತ್ತೆಯೊಂದಕ್ಕೆ ದಿವಸಕ್ಕೆ ಮೂರು ರೂಪಾಯಿ ಶುಲ್ಕ. ತೋಟದ ಮಾಲಿಕನಿಗೆ ಬೇರೆ ಯಾವ ವೆಚ್ಚವೂ ಇಲ್ಲ. ಕತ್ತೆಯ ರಕ್ಷಣೆ, ಆರೈಕೆ ಕತ್ತೆಯ ಯಜಮಾನನದ್ದು. ‘ಕತ್ತೆಕಿರುಬ’ದಂತಹ ಕಾಡುಪ್ರಾಣಿಗಳು ಕೆಲವೊಮ್ಮೆ ಹಿಂಡಿಗೆ ತೊಂದರೆ ಕೊಡುತ್ತವೆ. ಬೇರೆ ಯಾವ  ಬಾಧೆಯೂ ಇಲ್ಲ.

ಬೆಳಿಗ್ಗೆ ಒಂಭತ್ತರಿಂದ ಸಂಜೆ ತನಕ ಕೆರೆಯ ದಂಡೆ, ರಸ್ತೆ ಬದಿಗಳಲ್ಲಿ ಕತ್ತೆಗಳನ್ನು ಮೇಯಿಸಿ, ಸಂಜೆ ನಿಗದಿತ ತೋಟದಲ್ಲಿ ಕಟ್ಟುತ್ತಾರೆ. ಒಂದು ವೇಳೆ ರಾತ್ರಿ ಕತ್ತೆ ತಪ್ಪಿಸಿ ಪಕ್ಕದ ತೋಟಕ್ಕೆ ನುಗ್ಗಿ ಬೆಳೆನಾಶ ಮಾಡಿದರೆ, ಐನೂರು ರೂಪಾಯಿ ಜುಲ್ಮಾನೆಯನ್ನು ಕತ್ತೆಯೊಡೆಯನೇ ಭರಿಸಬೇಕು! ಒಂದು ರೀತಿಯ ಅಲಿಖಿತ ಶಾಸನ!

ಆಚೀಚೆ ಗೂಟಗಳನ್ನು ಊರಿ ನೆಲಮಟ್ಟದಲ್ಲಿ ಹಗ್ಗವನ್ನು ಬಿಗಿಯುತ್ತಾರೆ. ಹಗ್ಗಕ್ಕೆ ಎದುರುಬದುರಾಗಿ ಕತ್ತೆಗಳನ್ನು ನಿಲ್ಲಿಸಿ, ಅವುಗಳ ಕಾಲನ್ನು ಹಗ್ಗಕ್ಕೆ ಸೇರಿಸಿ ಕಟ್ಟುತ್ತಾರೆ. ಇದರಿಂದಾಗಿ ಅವುಗಳು ಓಡಿಹೋಗುವುದಿಲ್ಲ.

ಮಳೆಗಾಲದಲ್ಲಿ ತೋಟದ ಯಜಮಾನ ಶೆಡ್ ನಿರ್ಮಿಸಿಕೊಡುತ್ತಾರೆ. ಮೊದಲು ಅರ್ಧ ಅಡಿ ಮಣ್ಣು ಹಾಕಿ ಸಮತಟ್ಟು ಗೊಳಿಸುತ್ತಾರೆ. ಇದರ ಮೇಲೆ ಎಂಟು ದಿವಸ ಕತ್ತೆಗಳ ವಸತಿ. ಪುನಃ ಇನ್ನರ್ಧ ಅಡಿ ಮಣ್ಣಿನ ಪಾಯ. ಪುನಃ ಕತ್ತೆ ಕಟ್ಟುವುದು. ಒಂದು ತಿಂಗಳಾಗುವಾಗ ‘ಕತ್ತೆ ಗೊಬ್ಬರ’ ಸಿದ್ಧ! ಹೀಗೆ ‘ಕತ್ತೆ ಕಟ್ಟಿದರೆ’ ತಲೆಗೆ ಐವತ್ತು ಪೈಸೆ ಕಡಿಮೆ!

ಕತ್ತೆಯ ಬದಲಿಗೆ ಕುರಿಗಳನ್ನು ಕಟ್ಟುವುದಿದೆ. ಹೆಸರೇ ಹೇಳುವಂತೆ `ಕುರಿ’ ರಗಳೆ ಪ್ರಾಣಿ! ಅತ್ತಿತ್ತ ನುಸುಳುವ ಸ್ವಭಾವ. ಹಾಗಾಗಿ ಇವುಗಳನ್ನು ಕೂಡಿಹಾಕಲು ಅತ್ತಿತ್ತ ಒಯ್ಯುಬಹುದಾದ ಸಿದ್ಧ ಬೇಲಿ ಬಳಕೆ. ಐನೂರು ಕುರಿಗಳ ಒಂದು ಮಂದೆ. ಒಂದು ರಾತ್ರಿ ಒಂದೆಡೆ, ನಾಳೆ ಅದರ ಪಕ್ಕ. ನಾಡಿದ್ದು ಇನ್ನೂ ಆಚೆ.  ಕುರಿಯೊಂದಕ್ಕೆ ಒಂದು ರಾತ್ರಿಗೆ ಒಂದು ರೂಪಾಯಿ! ಕತ್ತೆಗಳಿಗಾದರೆ ರಾತ್ರೆ ಹೇಳುವಂತಹ ರಕ್ಷಣೆ ಬೇಕಿಲ್ಲ. ಕುರಿಗೆ ಬೇಕು. ಹಾಗಾಗಿ ಕುರಿಗಳೊಂದಿಗೆ ಕುರಿ ಕಾಯುವವ ರಾತ್ರಿ ಕಳೆಯಬೇಕು.

‘ಕಳೆದ ಇಪ್ಪತ್ತು ವರುಷಗಳಿಂದ ನಮ್ಮ ತೋಟಕ್ಕೆ ಕುರಿ ಕಟ್ತೀವಿ. ಇದಕ್ಕಾಗಿಯೇ ವರುಷಕ್ಕೆ ಒಂದು ಲಕ್ಷ ರೂಪಾಯಿ ವೆಚ್ಚವಾಗುತ್ತದೆ’ ಎನ್ನುತ್ತಾರೆ ಬಿಳಿಗೆರೆಯ ಕೃಷಿಕ ವೆಂಕಟರಾಮ್.

ಬಿಳಿಗೆರೆ ಸುತ್ತಮುತ್ತ ‘ಕುರಿ ಕಟ್ಟುವ’ ಆರು ಮಂದಿಯಿದ್ದಾರೆ. ಇವರು ದೂರದ ಶಿರಾ, ಮಧುಗಿರಿಯಿಂದ ಬಂದವರು. ಅಲ್ಲಿ ಬೇಸಿಗೆಯಲ್ಲಿ ನೀರಿಗೆ ತತ್ವಾರವಾದಾಗ ಅವುಗಳನ್ನು ಮೇಯಿಸಿಕೊಂಡು ಬರುತ್ತಾರೆ. ಇವರನ್ನು ಮೊದಲೇ ಬುಕ್ ಮಾಡಿಟ್ಟುಕೊಂಡು ‘ಕುರಿ ಕಟ್ಟುತ್ತಾರೆ’. ಮಳೆಗಾಲದಲ್ಲಿ ಇವರು ತಮ್ಮೂರಿಗೆ ಹೊರಟುಹೋಗುತ್ತಾರೆ.

ಕತ್ತೆಗಿಂತ ಕುರಿಯಲ್ಲಿ ಲಾಭ ಹೆಚ್ಚು. ಕತ್ತೆ ಒಂದು ವರುಷಕ್ಕೆ ಒಂದೇ ಮರಿ. ಕುರಿಯಾದರೆ ಮೂರ್ನಾಲ್ಕು. ಅದರ ಮಾರಾಟದಿಂದ ಹೆಚ್ಚುವರಿ ಆದಾಯ. ‘ಇವರೆಲ್ಲಾ ಚಿಕ್ಕಪುಟ್ಟ ಜಮೀನು ಹೊಂದಿದವರು. ಬೇಸಿಗೆಯಲ್ಲಿ ಈ ಕೆಲಸ ಅವರಿಗೆ ಹೆಚ್ವುವರಿಯಾಗಿ ಆದಾಯ ತರುತ್ತದೆ’ ಎನ್ನುತ್ತಾರೆ ಬಿಳಿಗೆರೆಯ ಕೃಷಿಕ ಮಹಾಲಿಂಗಯ್ಯನವರು.

ಸೂಕ್ಷ್ಮವಾಗಿ ಅವರಿಗೆ ಸಿಕ್ಕುವ ಪಗಾರವನ್ನು ಹೀಗೆ ಲೆಕ್ಕ ಹಾಕಬಹುದು. ತಲೆಗೆ ಮೂರು ರೂಪಾಯಿಯಂತೆ ನೂರು ಕತ್ತೆಯ ಮಂದೆಗೆ ದಿನಕ್ಕೆ ಮುನ್ನೂರು ರೂಪಾಯಿ. ತಿಂಗಳಿಗೆ ಒಂಭತ್ತು ಸಾವಿರ.  ಐನೂರು  ಕುರಿಯ  ಮಂದೆಗೆ ದಿನಕ್ಕೆ ಐನೂರು ರೂಪಾಯಿ. ತಿಂಗಳಿಗೆ ಹದಿನೈದು ಸಾವಿರ. ನಿರ್ವಹಣೆ ಮಾಡುವವನ ಖರ್ಚು-ವೆಚ್ಚಗಳೇನೂ ದುಬಾರಿಯಲ್ಲ. 

“ಬಿಳಿಗೆರೆಯಲ್ಲಿ ಎರಡು ‘ಕತ್ತೆ ಬ್ಯಾಚ್’ ಇದೆ. ಎಲ್ಲವೂ ಮುಂಗಡ ಬುಕ್ಕಿಂಗ್. ಹಾಗಾಗಿ ಎಲ್ಲರಿಗೂ ಪೂರೈಸಲು ತ್ರಾಸ” ಎನ್ನುತ್ತಾರೆ ಕತ್ತೆ ಮಂದೆಯೊಂದರ ಮಾಲಿಕ ಮಂಜಣ್ಣ. ಇವರಜ್ಜ ಹೊನ್ನಪ್ಪರ ಬಳುವಳಿಯಿದು. ಮೆಟ್ರಿಕ್ ಓದಿದ ಮಗ ರಂಗಸ್ವಾಮಿಗೂ ‘ಕತ್ತೆ ಕಾಯುವ’ ಹುಮ್ಮನಸ್ಸು.

ಹೊಸದಾಗಿ ಮಂದೆ ಹೊಂದಲು ಬಂಡವಾಳ ಬೇಕು. ಒಂದು ಕತ್ತೆಗೆ 1000-1500 ರೂಪಾಯಿ ಬೆಲೆ. ಮಧುಗಿರಿ ಸುತ್ತಮುತ್ತ ಲಭ್ಯ. ‘ವಯಸ್ಸಾದಾಗ ದುಡಿಯಲು ಕಷ್ಟಪಡುತ್ತವೆ. ಆಗ ಅದನ್ನು ಬದಲಿಸುತ್ತಿರಬೇಕು. ಒಮ್ಮೆ ಬಂಡವಾಳ ಹಾಕಿದರೆ ಸಾಕು, ಮತ್ತೆ ಐದು ವರುಷಕ್ಕೆ ಚಿಂತೆಯಿಲ್ಲ’ ಮಂಜಣ್ಣ ಹೇಳುತ್ತಾರೆ.

ಹೇಳುವಂತಹ ರೋಗವಿಲ್ಲ. ಅಪರೂಪಕ್ಕೆ ಸಾಯುವುದಿದೆ. ಈ ಸಂಖ್ಯೆ ಹತ್ತು ತಲುಪಿದಾಗ ಮತ್ತೆ ಖರೀದಿ.  ಹೊಸಬರು ಈ ಕೆಲಸಕ್ಕೆ ಮುಂದೆ ಬರುವುದಿಲ್ಲ. ಮೊದಲು ಕತ್ತೆ ಕಟ್ಟುತ್ತಿರುವವರು ಸಣ್ಣಪುಟ್ಟ ಜಮೀನು ಹೊಂದಿದ್ದಾರೆ. ಕೆಲವರು ವಿದ್ಯಾಭ್ಯಾಸಕ್ಕಾಗಿ ನಗರ ಸೇರಿದ್ದಾರೆ.

ಕತ್ತೆಯ ಹೆಗಲ ಮೇಲೆ ಮಣ್ಣಿನ ಚೀಲ, ನೀರಿನ ಚೀಲಗಳನ್ನು ಸಾಗಿಸುತ್ತಾರೆ. ದೈತ್ಯ ಯಂತ್ರಗಳಿಂದಾಗಿ ಕತ್ತೆಕೆಲಸಕ್ಕೆ ವಿಶ್ರಾಂತಿ. ಮಣ್ಣು ಸಾಗಿಸುವುದು ಶ್ರಮದ ಕೆಲಸ. ಕತ್ತೆಗಲ್ಲ, ಕತ್ತೆ ಕಾಯುವವನಿಗೆ! ಪ್ರತಿ ಸಲವೂ ಮಣ್ಣಿನ ಚೀಲವನ್ನು ಕತ್ತೆಗಳ ಮೇಲೇರಿಸಿ, ಅವುಗಳನ್ನು ಇಳಿಸುವ ವರೆಗೂ ಜತೆಗಿರಬೇಕು. ತನುಶ್ರಮದ ಕೆಲಸ.

ತೋಟದ ಒಡೆಯನೇ ಕತ್ತೆಯನ್ನು ಯಾಕೆ ಹೊಂದಬಾರದು? ಜತೆಗಿದ್ದ ಡಾ.ಡಿ.ಸಿ.ಚೌಟರಿಂದ ಕೀಟಲೆ ಪ್ರಶ್ನೆ. ಮಹಾಲಿಂಗಯ್ಯನವರು ಹೇಳುತ್ತಾರೆ - ‘ನಿರ್ವಹಣೆ, ಸಹವಾಸ ಕಷ್ಟ. ಅವರಿಗದು ಹುಟ್ಟು ವೃತ್ತಿ. ಉಳಿದವರು ಕಲಿಯಬೇಕಷ್ಟೇ. ಕಟ್ಟಿಹಾಕಿ ಸಾಕುವುದು, ರಾತ್ರಿ ಕಾಯುವುದು, ರಕ್ಷಣೆ ಎಲ್ಲವೂ ಎಡವಟ್ಟಿನದ್ದೇ’. 

(ಅಡಿಕೆ ಪತ್ರಿಕೆ, ಜುಲೈ 2009)