ADD

Back To Free Articles

April-2019

ಒಣ ಅಡಿಕೆ ಬಾಚು ಸಹಾಯಿ

ಅನಿವಾರ್ಯವಾದರೆ ಉಪಕರಣ ಬಳಸಿ ಒಬ್ಬರೇ ಅಂಗಳದ ಅಡಿಕೆ ಬಾಚಿ ಗೋಣಿಗೆ ತುಂಬಿ ಶೆಡ್ಡಿನೊಳಗೆ ಸೇರಿಸಿಬಿಡಬಹುದು.

- ಅಪ ಬಳಗ

 
no image
 

ಣ ಅಡಿಕೆ ಅಂಗಳದಲ್ಲಿದೆ. ಮಳೆ ಬರುವ ಆತಂಕ ಇದೆ. ಒಬ್ಬರೇ ಇದ್ದೀರಾ. ಆಳುಗಳು ಇಲ್ಲ. ಏನು ಮಾಡಬೇಕು? ಕೈಕೈ ಹಿಚುಕುವ ಪರಿಸ್ಥಿತಿ.

ಕಡಬದ ಬಳಿಯ ಯುವ  ಕೃಷಿಕ ಬರೆಮೇಲು ರಾಜೇಶ್(35)ರಿಗೆ ಇಂಥ ಸ್ಥಿತಿಯಲ್ಲಿ ಟೆನ್ಶನೇ ಇಲ್ಲ. ಅವರ ಬಳಿ ಟ್ರಾಲಿಯ ಮೇಲೆ ಪೀಪಾಯಿ ಕೂರಿಸಿದಂತಹ ಉಪಕರಣವೊಂದಿದೆ. ಅದನ್ನು ತಳ್ಳಿಕೊಂಡು ಅವರೇ ಅಂಗಳಕ್ಕಿಳಿಯುತ್ತಾರೆ. ಅರ್ಧ ಗಂಟೆಯಲ್ಲಿ ಅಡಿಕೆ ಬಾಚಿ ಒಳಗಿಟ್ಟು ಬೆವರಿಳಿಸುತ್ತಾ ಒಳ ಬರುತ್ತಾರೆ.

ಉಪಕರಣದ ಬಾಯಿ ಅಡಿಕೆ ತುಂಬಿಕೊಳ್ಳುವಂತೆ ಮಾಡಿ ತಳ್ಳುತ್ತಾ ಹೋದರೆ ಸಾಕು. ಸ್ವಲ್ಪ ದೂರ ತಳ್ಳಿದ ಮೇಲೆ, ಹ್ಯಾಂಡಲ್ ಹಿಡಿದು ಹಿಂಬದಿಗೆ ಬೋರಲಾಗಿಸಿದರೆ ಒಟ್ಟಾದ ಅಡಿಕೆ ಬೀಳತೊಡಗುತ್ತದೆ.  ಅಲ್ಲೇ ಗೋಣಿ ಜೋಡಿಸಿ ಅದರ ಬಾಯಿ ತೆರೆದಿಟ್ಟುಕೊಳ್ಳುವ ವ್ಯವಸ್ಥೆಯಿದೆ. ಹೀಗಾಗಿ ಅಡಿಕೆ ನಮ್ಮನ್ನು ಕಾಯದೇನೇ ಗೋಣಿಯಲ್ಲಿ ತುಂಬಿಕೊಳ್ಳುತ್ತದೆ. ಕೈಯಲ್ಲಿ ಸ್ಪರ್ಶಿಸಬೇಕಿಲ್ಲ! ಎರಡು ಬಾರಿ ಹೀಗೆ ತುಂಬಿ ಗೋಣಿ ಫುಲ್ ಆಯಿತೆಂದರೆ ಮತ್ತೆ ತಲೆಯ ಮೇಲೆ ಎತ್ತಿ ಇಡುವ ಚಿಂತೆ ಬೇಡ. ಟ್ರಾಲಿಯನ್ನು ತಳ್ಳಿಕೊಂಡು ಒಳಗೆ ಒಯ್ದರೆ ಸೈ!

ಹೀಗೆ ರಾಜೇಶರ ಒಣ ಅಡಿಕೆ ಬಾಚು ಸಹಾಯಿ `ತ್ರೀ ಇನ್ ವನ್' ಕೆಲಸ ಮಾಡುತ್ತದೆ. ಅಡಿಕೆ ಬಾಚುವುದು, ಅದನ್ನು ಗೋಣಿಗೆ ಸುರಿಯುವುದು, ಒಳಕ್ಕೆ ಒಯ್ಯುವುದು. ಈ ಎಲ್ಲಾ ಕೆಲಸ ಮಾಡಿಸಿಕೊಳ್ಳಲು ಒಟ್ಟಿಗೆ ನೀವು, ಆಪರೇಟರ್ ಇದ್ದರೆ ಸಾಕು - ಹಗುರದ ಕೆಲಸ!

ರಾಜೇಶರದು ಕೃಷಿಕುಟುಂಬ ಮೂಲ. ತಂದೆ ಕುಶಾಲಪ್ಪ ಗೌಡ ನಿವೃತ್ತ ಉಪ ತಹಶೀಲ್ದಾರರು; ಅಡಿಕೆ ಕೃಷಿಕರು. ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ಕಿನ ಹಳೆ ವಿದ್ಯಾರ್ಥಿ. ಕಲಿತದ್ದು ಮೆಕ್ಯಾನಿಕಲ್ ಎಂಜಿನಿಯರಿಂಗಿನಲ್ಲಿ ಡಿಪ್ಲೋಮಾ. ಬೆಂಗಳೂರಿನಲ್ಲಿ ಎಂಟು ವರ್ಷ, ಇಂಡೋನೇಶ್ಯಾ, ವಿಯೆಟ್ನಾಮುಗಳಲ್ಲಿ ತಲಾ ಒಂದೊಂದು ವರ್ಷ ನೌಕರಿ. ಈ ನಡುವೆ ಅಪ್ಪನ ಅನಾರೋಗ್ಯ ಊರಿಗೆ ಸೆಳೆಯಿತು.

ಬೆಂಗಳೂರು ಬಿಡಬೇಕಾದರೆ ರಾಜೇಶ್ ಪುಟ್ಟ ಮೆಕ್ಯಾನಿಕಲ್ ವರ್ಕ್‍ಶಾಪಿಗೆ ಬೇಕಾದ ಉಪಕರಣಗಳನ್ನು ಖರೀದಿಸಿದರು. ಇದಕ್ಕಾಗಿಯೇ 25,000 ರೂಪಾಯಿ ವ್ಯಯಿಸಿದರು. ``ಮೊದಲಿನಿಂದಲೂ ಕೃಷಿಯಲ್ಲಿ ಆಸಕ್ತಿ ಇದ್ದುದರಿಂದ ಕೃಷಿಯ ಚಟುವಟಿಕೆಗಳು ಅಷ್ಟೇನೂ ಕಷ್ಟ ಅನಿಸಲಿಲ್ಲ'' ಎನ್ನುತ್ತಾರೆ.

 ಆದರೂ ಎಲ್ಲಾ ಕೆಲಸಗಳಿಗೆ ಆಳುಗಳ ಅಗತ್ಯ ಕಂಡುಬಂತು.  ಕಾರ್ಮಿಕ ಕೊರತೆ ನೀಗಿಸಲು ಉಪಾಯ ಹುಡುಕತೊಡಗಿದರು.  ತಾವೇ ಶ್ರಮ ಉಳಿಸುವ ಉಪಕರಣ, ಕೈಗಾಡಿ ಮಾಡಿಕೊಂಡರು. ಈ ನಡುವೆ ಬೇರೆಯವರ ಸಹಾಯವಿಲ್ಲದೆ ಚೀಲಕ್ಕೆ ಅಡಿಕೆ ತುಂಬಿಸಿ ಸಾಗಿಸಲು ಸರಳ ಉಪಕರಣ ತಯಾರಿಸಬಹುದಾ ಎಂಬ ಚಿಂತನೆ ಹೆಚ್ಚಿತು. ಅದರ ಫಲವೇ ಈ `ಒಣ ಅಡಿಕೆ ಬಾಚು ಸಹಾಯಿ.'

ಈ ಉಪಕರಣ ತಯಾರಿಯ ಬಗ್ಗೆ ರಾಜೇಶ್ ಅವರದೇ ವಿವರಣೆ ಕೇಳಿ : ``ಮೊದಲಿಗೆ ಯಾರದೇ ಸಹಾಯವಿಲ್ಲದೆ ಚೀಲ ಹಿಡಿಯಲು ಕ್ಲಾಂಪ್ ಜೋಡಿಸಿದ ಸ್ಟಾಂಡ್  ತಯಾರಿಸಿದೆ. ಅದಕ್ಕೆ ಚಕ್ರ ಜೋಡಿಸಿ ಸಾಗಿಸಲು ಯತ್ನಿಸಿದಾಗ ಯಶಸ್ವಿಯಾಯಿತು. ಅಂಗಳದಲ್ಲಿದ್ದ ಅಡಿಕೆ ತುಂಬಿಸಲು ಕಬ್ಬಿಣದ ಪೈಪ್, ಆಂಗ್ಲರ್ ಮತ್ತು ಶೀಟು ಉಪಯೋಗಿಸಿ ಇನ್ನೊಂದು ಉಪಕರಣವನ್ನು ತಯಾರಿಸಿ ಅದನ್ನು ಮೊದಲು ತಯಾರಿಸಿದ ಉಪಕರಣದೊಂದಿಗೆ ಜೋಡಿಸಿದೆ.''

ಮೊದಲ  ಉಪಕರಣ ತಯಾರಿಸಲು ರಾಜೇಶ್ ಮನೆಯಲ್ಲಿದ್ದ ಸಾಮಗ್ರಿಗಳನ್ನೇ ಬಳಸಿದ್ದಾರೆ. ಫ್ಯಾಬ್ರಿಕೇಶನ್ ಕೆಲಸವೂ ಅವರದೇ. ಉಪಕರಣವನ್ನು ಸಿಮೆಂಟ್ ನೆಲ ಹಾಗೂ ಸಮತಟ್ಟಾದ ಮಣ್ಣಿನ ನೆಲದಲ್ಲಿಯೂ ಬಳಸಬಹುದು. ಬೇರೆಯರ ಬಳಿ ಮಾಡಿಸಿಕೊಂಡರೆ ಅಂದಾಜು 6,000 ರೂ. ವೆಚ್ಚ ಬರಬಹುದು. ``ಒಂದು ಮಿಲ್ಲಿಮೀಟರಿನ ಶೀಟ್ ಮೆಟಲ್ ಬಳಸಿ ಮಾಡಿದರೆ ಉತ್ತಮ ಗುಣಮಟ್ಟದ್ದಾಯಿತು'' ಎನ್ನುತ್ತಾರೆ. ಪುತ್ತೂರಿನ ಕೃಷಿ  ಯಂತ್ರಮೇಳದಿಂದ ಕರೆ ಬಂದ ಮೇಲೆ ಇಂಥ ಹೊಸ ಉಪಕರಣ ಮಾಡಿ ಒಯ್ದು ಪ್ರದರ್ಶಿಸಿದ್ದಾರೆ. ``ಬಹಳ ಒಳ್ಳೆ ಪ್ರತಿಕ್ರಿಯೆ ಬಂದಿದೆ. ಹಲವರು ತಯಾರಿಸಿಕೊಡಲೂ ಕೇಳಿದ್ದಾರೆ. ಈ ಬಗ್ಗೆ ನಿರ್ಧರಿಸಿ ಅವರಿಗೆ ಬೇಗನೆ ಉತ್ತರಿಸುತ್ತೇನೆ'' ಎನ್ನುತ್ತಾರೆ.

ಬೆಂಗಳೂರಿನಿಂದ ವರ್ಕ್‍ಶಾಪಿಗೆ ಬೇಕಾದ ಟೂಲು, ಮೆಶಿನುಗಳನ್ನು ತಂದದ್ದು ಬಹಳ ಒಳ್ಳೆಯ ನಿರ್ಣಯ ಎನಿಸುತ್ತಿದೆ ರಾಜೇಶರಿಗೆ.  ಮನೆಯಲ್ಲೇ ಒಂದು ಚಕ್ರದ ಗಾಡಿ, ಅಡಿಕೆ ಮಗುಚುವ ಸಾಧನ, ನಾಯಿಮನೆ ಇತ್ಯಾದಿ ಮಾಡಿಕೊಂಡಿದ್ದಾರೆ. ಇನ್ನೂ ಹಲವು ಐಡಿಯಾಗಳು ಮನದೊಳಗೇನೇ ಕಾಯುತ್ತಿವೆಯಂತೆ.

ರಾಜೇಶ್ ಎ.ಕೆ. - 81054 00493 (ಸಂಜೆ 5 - 7)

Yuvarak82@gmail.com