ADD

Back To Free Articles

April-2019

‘ಚಿಕ್ಕು ಗ್ರಾಮ’ಗಳ ಸಿಹಿ ಬೆಳವಣಿಗೆಗಳು

ಇಪ್ಪತ್ತೈದು ವರ್ಷ ಹಿಂದೆ ಚಿಕ್ಕು ಹಣ್ಣಿನ ಯಾವುದೇ ಉತ್ಪನ್ನ ಮಾಡದಿದ್ದ ಹಳ್ಳಿಯ ನೂರು ಕುಟುಂಬಗಳು ಈಗ ನಾಲ್ಕೈದು ಉತ್ಪನ್ನ ತಯಾರಿಸಿ ನೇರ ಗ್ರಾಹಕರಿಗೆ ಮಾರುತ್ತಿವೆ. ಏಳು ವರ್ಷದಿಂದ ನಡೆಯುತ್ತಿರುವ ಚಿಕ್ಕು ಉತ್ಸವ ಇವರಿಗೆ ಉತ್ಸಾಹ ತುಂಬುವ ವಾರ್ಷಿಕ ಹಬ್ಬ. ಚಿಕ್ಕಿನ ವೈನ್ ತಯಾರಿಯಲ್ಲಿ ಇವರು ಮಾಡಿದ ಸಾಧನೆ ಅಬ್ಬಬ್ಬಾ ಎನ್ನುವಂಥದ್ದು.

- ಅಪ ಬಳಗ

 
no image
 

ಳು ವರ್ಷ ಹಿಂದೆ ಮಹಾರಾಷ್ಟ್ರ್ರದ ಬೋರ್ಡಿಯ ಚಿಕ್ಕು ಉತ್ಸವ ಆರಂಭವಾಯಿತು. ಆಗ ಜನ ತೋರಿಸಿದ ಉತ್ಸಾಹ ನಿರುತ್ತೇಜಕ.

ಸಿದ್ಧಪಡಿಸಿದ 25 ಸ್ಟಾಲುಗಳಿಗೆ ಬೇಡಿಕೆ ಇರಲಿಲ್ಲ. ಕೊನೆಗೆ ಕೆಲವನ್ನು ಉಚಿತವಾಗಿ ಕೊಟ್ಟರು. ಎರಡು ದಿನಗಳ ಉತ್ಸವದಲ್ಲಿ ಭಾಗವಹಿಸಿದವರು 15 ರಿಂದ 25,000.

ಈ ಫೆಬ್ರವರಿಯಲ್ಲಿ ಏಳನೆಯ ಚಿಕ್ಕು ಉತ್ಸವ. 250 ಸ್ಟಾಲುಗಳಿದ್ದುವು. ಪ್ರತಿ  ಸ್ಟಾಲಿಗೆ 10 ರಿಂದ 14,000 ರೂ. ಶುಲ್ಕ. “ಬುಕಿಂಗ್ ಆರಂಭಿಸಿ ಕೆಲವೇ ಗಂಟೆಗಳಲ್ಲಿ ಎಲ್ಲಾ ಸ್ಟಾಲುಗಳೂ ಖಾಲಿ ಆದುವು”, 70 ವರ್ಷದ ಪ್ರಭಾಕರ ಸಾವೆ ನೆನೆಯುತ್ತಾರೆ. ಇವರು ಕೊಂಕಣ್ ಭೂಮಿ ಅಗ್ರಿ ಟೂರಿಸಮ್ ಸಹಕಾರಿ ಸಂಸ್ಥೆಯ ಸ್ಥಾಪಕರು ಮತ್ತು ಮಾಜಿ ಅಧ್ಯಕ್ಷರು. ಚಿಕ್ಕು ಉತ್ಸವ ಸಂಘಟನೆಯಲ್ಲಿ ಈ ಸಂಸ್ಥೆಯದೇ ಮುಖ್ಯ ಪಾತ್ರ. ಈ ಬಾರಿಯ ಉತ್ಸವದ ಒಟ್ಟು ಆದಾಯ 1.7 ಕೋಟಿ ರೂ.

ಈಗ ಚಿಕ್ಕು ಉತ್ಸವ ಮುಂಬಯಿ, ಪುಣೆ, ನಾಸಿಕ್ ಮತ್ತು ಗುಜರಾತ್ ಗಡಿಯಿಂದಾಚೆಯ ಜನರನ್ನೂ ಆಕರ್ಷಿಸುತ್ತದೆ. ಆದರೆ ದೇಶದ ಮತ್ತು ನೆರೆ ರಾಜ್ಯಗಳ ಜನರಿಗೆ ಈ ಉತ್ಸವದ ಬಗ್ಗೆ ಇನ್ನೂ ಗೊತ್ತಿಲ್ಲ.

“ಚಿಕ್ಕು ಉತ್ಸವದ ಮೂಲ ಉದ್ದೇಶ ಇಷ್ಟೊಂದು ಪೋಷಕಾಂಶಭರಿತ ಹಣ್ಣಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಕೃಷಿಕರಲ್ಲಿ ಮೌಲ್ಯವರ್ಧನೆಯ ಪ್ರಜ್ಞೆ ಮೂಡಿಸುವುದು” ಎನ್ನುತ್ತಾರೆ ಪ್ರಭಾಕರ್. ಅವರು ಸ್ವತಃ ಚಿಕ್ಕು ಕೃಷಿಕರು. ಮೂವತ್ತು ಎಕ್ರೆ ತೋಟವಿದೆ. ಎರಡು ದಶಕದ ಹಿಂದೆ ಈ ಭಾಗದಲ್ಲಿ ಫಾರ್ಮ್ ಟೂರಿಸಮ್ ಆರಂಭಿಸಿದ್ದು ಇವರೇ.

ಪ್ರವಾಸೋದ್ಯಮ ಇಲಾಖೆಯೂ ಆರಂಭದಿಂದ ಚಿಕ್ಕು ಉತ್ಸವಕ್ಕೆ ಸಹಕರಿಸುತ್ತಾ ಬಂದಿದೆ. ಉತ್ಸವದಲ್ಲಿ ಚಿಕ್ಕು, ಚಿಕ್ಕಿನ ಉತ್ಪನ್ನ ಅಲ್ಲದೆ ಮನೆ ಆಹಾರ, ಕಲೆ, ಕಲಾಕೃತಿಗಳು, ಸಂಗೀತ, ಆದಿವಾಸಿ ನೃತ್ಯ ಇತ್ಯಾದಿಗಳೂ ಇರುತ್ತವೆ.        

ಮನೆಯಿಂದಲೇ ಮಾರಾಟ

 ಚಿಕ್ಕಿನ ಮೌಲ್ಯವರ್ಧನೆ ಮಾಡುವ ಕುಟುಂಬಗಳಿಗೆ ಬಹು ದೊಡ್ಡ ಮಾರುಕಟ್ಟೆ ಅನುಕೂಲತೆಯಿದೆ. ಬೋರ್ಡಿಯಲ್ಲಿ 17 ಕಿ.ಮೀ ಉದ್ದದ ಬೀಚ್ ಇದ್ದು, ವರ್ಷವಿಡೀ ಇಲ್ಲಿಗೆ ಪ್ರವಾಸಿಗಳು ಬರುತ್ತಿರುತ್ತಾರೆ. ಇವರು ಹಳ್ಳಿಯ ಉತ್ಪನ್ನಗಳ ದೊಡ್ಡ ಗ್ರಾಹಕರು.

ಚಿಕ್ಕು ಚಿಪ್ಸ್ (ನಿರ್ಜಲೀಕೃತ ಸ್ಲೈಸುಗಳು) ಚಿಕ್ಕು ಉಪ್ಪಿನಕಾಯಿ ಇಲ್ಲಿನ ಮುಖ್ಯ ಉತ್ಪನ್ನ. “ಚಿಕ್ಕು ಹಣ್ಣಿಗೆ ನಮಗೆ ಸರಾಸರಿ ಸಿಗುವ ಬೆಲೆ ಕಿಲೋಗೆ ಹದಿನೈದು ರೂಪಾಯಿ. ಮೌಲ್ಯವರ್ಧಿತ ಉತ್ಪನ್ನ ಮಾಡಿದಾಗ 50 ರಿಂದ 60 ರೂ. ಸಿಕ್ಕಿದಂತಾಗುತ್ತದೆ” ಎನ್ನುತ್ತಾರೆ ಸಾವೆ. ಬೋರ್ಡಿ ಮತ್ತು ನೆರೆಯ ಘೋಲ್ವಾಡ್ ಗ್ರಾಮಗಳ ಸುಮಾರು ಎಪ್ಪತ್ತು ಕೃಷಿಕ ಕುಟುಂಬಗಳು ಚಿಕ್ಕಿನ ಉತ್ಪನ್ನ ಮಾಡುತ್ತಿವೆ. ಪ್ರತಿ ಕುಟುಂಬ 2 - 3 ಟನ್ ಉತ್ಪಾದಿಸುತ್ತಿದೆ. ಎರಡು ಗ್ರಾಮಗಳ ಒಟ್ಟು ಉತ್ಪಾದನೆ ವರ್ಷಕ್ಕೆ ಸುಮಾರು 150 ರಿಂದ 200 ಟನ್.

ಚಿಕ್ಕು ವರ್ಷಕ್ಕೆ ಮೂರು ಬೆಳೆ ಕೊಡುತ್ತದೆ. ಬೆಳೆಯ ಸೀಸನ್ ಹವಾಮಾನದೊಂದಿಗೆ ಬದಲಾವಣೆ ಆಗುತ್ತಿರುತ್ತದೆ. ಸಾಮಾನ್ಯವಾಗಿ ಜನವರಿಯಿಂದ ಮಾರ್ಚ್, ಮೇಯಿಂದ ಜುಲೈ ಮತ್ತು ಸೆಪ್ಟೆಂಬರ್ - ಅಕ್ಟೋಬರ್ ಏರು ಋತುಗಳು. ಎಕ್ರೆಗೆ ಸರಾಸರಿ ಆರು ಟನ್ ಫಸಲು.    ಕಾಲು ಶತಮಾನ ಮೊದಲು ಇಲ್ಲಿ ಚಿಕ್ಕಿನ ಮೌಲ್ಯವರ್ಧನೆ ಏನೆಂದೇ ಗೊತ್ತಿರಲಿಲ್ಲ. ಸುತ್ತಲಿನ ಹೆಣ್ಮಕ್ಕಳನ್ನು ಒಗ್ಗೂಡಿಸಿ ಮೌಲ್ಯವರ್ಧನೆ ಮಾಡಿ ಊರಿಗೇ ದಾರಿ ತೋರಿಸಿದವರು ಶಾರದಾ ಗಜಾನನ್ ಪಾಟೀಲ್. ಇವರಿಗೀಗ ವಯಸ್ಸು ಎಪ್ಪತ್ತು ಮೀರಿದೆ. ಆದರೆ ಇನ್ನೂ ಚಟುವಟಿಕೆಯಿಂದಿದ್ದಾರೆ.

ಇಲ್ಲಿನ ಉತ್ಪನ್ನಗಳ ಮಿತಿ ಎಂದರೆ ಇವು ಮುಖ್ಯವಾಹಿನಿ ಮಾರುಕಟ್ಟೆ ತಲಪುವುದೇ ಇಲ್ಲ. ಪ್ಯಾಕಿಂಗ್ ಮತ್ತು ಉತ್ಪನ್ನಗಳ ತಯಾರಿ ವಿಧಾನ ತೀರಾ ಪ್ರಾಥಮಿಕ. ಅಂಜಲಿ ಸಚಿನ್ ಪಾಟೀಲ್(45) ದಶಕದಿಂದ ಚಿಕ್ಕು ಚಿಪ್ಸ್, ಚಾಕೊಲೇಟ್, ಬರ್ಫಿ, ವಡಿ, ಚಿಕ್ಕು ಹುಡಿ ಇತ್ಯಾದಿ ಮಾಡುತ್ತಿದ್ದಾರೆ. ‘ರುಚಿರಾ’ ಹೆಸರಿನ ಉತ್ಪನ್ನಗಳಿಂದ ಈ ವರ್ಷ ಇವರಿಗೆ 90,000 ರೂ. ಆದಾಯ ಬಂದಿದೆಯಂತೆ. ಈ ಪೈಕಿ 60,000 ಉತ್ಸವದಲ್ಲೇ ಸಿಕ್ಕಿದೆ.

ಶಾರದಾ ಗಜಾನನ ಪಾಟೀಲರ ಸೊಸೆ ಜ್ಯೋತಿ ಅಮೋಲ್ ಪಾಟೀಲ್ (51) ಕಾಲು ಶತಮಾನದಿಂದ ಅತ್ತೆಯ ಜತೆ ಮೌಲ್ಯವರ್ಧನೆಯಲ್ಲಿ ತೊಡಗಿದ್ದಾರೆ. ಈ ವರೆಗೆ ಇವರು ಈ ಎರಡು ಗ್ರಾಮಗಳ ಸಾವಿರಾರು ಮಂದಿಗೆ ತರಬೇತಿಯನ್ನೂ ಕೊಟ್ಟಿದ್ದಾರೆ. ಈಗ ತಾವೇ ತರಬೇತಿ ಕೊಟ್ಟ ಐದಾರು ಕುಟುಂಬಗಳಿಂದ   ಉತ್ಪನ್ನ  ಕೊಂಡುಕೊಂಡು ‘ಅಮೃತ್ ಮಾಧುರಿ’ ಹೆಸರಲ್ಲಿ ಮಾರಾಟ ಮಾಡುತ್ತಿದ್ದಾರೆ.

ಈ ವರ್ಷ ತಲಾ ಒಂದು ಟನ್ ಚಿಕ್ಕು ಚಿಪ್ಸ್ ಮತ್ತು ಹುಡಿ, ಅರ್ಧ ಟನ್ ಉಪ್ಪಿನಕಾಯಿ ಮಾರಿದ್ದಾರೆ. “ಎರಡೂ ಗ್ರಾಮಗಳಲ್ಲಿ ಕನಿಷ್ಠ ನೂರರಷ್ಟು ಕುಟುಂಬಗಳು ಈಗ ಚಿಕ್ಕಿನ ಮೌಲ್ಯವರ್ಧನೆ ಮಾಡುತ್ತಿವೆ” ಎನ್ನುತ್ತಾರೆ ಜ್ಯೋತಿ.

“ಎಲ್ಲಾ ಉತ್ಪಾದಕರೂ FSSAI  ಲೈಸೆನ್ಸ್ ಪಡೆದು ತಮ್ಮ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸಿ ಬ್ರಾಂಡ್ ಮಾಡಿಕೊಳ್ಳಲು ಸಲಹೆ ಮಾಡುತ್ತೇವೆ. ಇಲ್ಲಿ ಮೇ 15ರ ನಂತರ ಮಳೆಯಾಗುವ ಕಾರಣ ಎರಡನೆಯ ಬೆಳೆಯಲ್ಲಿ ವೇಸ್ಟೇಜ್ ಜಾಸ್ತಿ. ನಮಗೆ ಮಿತಬೆಲೆಯ ಡ್ರೈಯರ್ ಬೇಕಾಗಿದೆ” ಎನ್ನುತ್ತಾರೆ ಪ್ರಭಾಕರ ಸಾವೆ.

ಬೋರ್ಡಿ ಮತ್ತು ಘೋಲ್ವಾಡ್ ಮುಂಬಯಿ - ಅಹಮದಾಬಾದ್ ಹೆದ್ದಾರಿ ನಂ. 8ರ ಸನಿಹದಲ್ಲೇ ಇವೆ. ಈ ಆರು ಲೇನಿನ ಹೆದ್ದಾರಿಯಲ್ಲಿ ಯಾವಾಗಲೂ ವಾಹನ ದಟ್ಟಣೆ ಇರುತ್ತದೆ. ಈ ಗ್ರಾಮಗಳ ಮುಖ್ಯ ಬೆಳೆ ಚಿಕ್ಕು ಆದರೂ, ಇಲ್ಲಿ ತೆಂಗು, ಮಾವು ಮತ್ತು ಲಿಚ್ಚಿ ಬೆಳೆಯುತ್ತದೆ. ಸುತ್ತಲಿನ ಪ್ರದೇಶದಲ್ಲಿ ಲಿಚ್ಚಿ ಬೆಳೆಯುವ ಊರು ಇದು ಮಾತ್ರ. “ನಮ್ಮ ಸದಾ ಹಸಿರಿನ ಮಾನವ ನಿರ್ಮಿತ ಪ್ರದೇಶ ಫಾರ್ಮ್ ಟೂರಿಸಂ ನಡೆಸಲು ಹೇಳಿ ಮಾಡಿಸಿದ ಜಾಗ” ಎನ್ನುವುದು ಸಾವೆ ಅವರ ಅಭಿಪ್ರಾಯ.

ಈಗ ಇಲ್ಲಿನ ಹಲವು ಕುಟುಂಬಗಳಿಗೆ ಫಾರ್ಮ್ ಟೂರಿಸಮಿನ ರುಚಿ ಹಿಡಿದಿದೆ. ಸುಮಾರು ಐವತ್ತರಷ್ಟು ಕುಟುಂಬಗಳು ಅಂದದ ಕಾಟೇಜು ಕಟ್ಟಿ ಪ್ರವಾಸಿಗಳಿಗೆ ತಮ್ಮ ಫಾರ್ಮ್ ತೆರೆದಿಟ್ಟಿವೆ. ಭೇಟಿ ನೀಡಿದವರು ಕೊಂಡು ಒಯ್ಯಲು ಅನುಕೂಲವಾಗುವಂತೆ ಒಂದು ಕಿಲೋದ ಚಿಕ್ಕಿನ ಪ್ಯಾಕೆಟುಗಳನ್ನು ಸಿದ್ಧವಾಗಿ ಇಟ್ಟುಕೊಳ್ಳುತ್ತವೆ.

ಶಾರದಾ ಪಾಟೀಲ್ ಆರಂಭಿಸಿದ ಮೌಲ್ಯವರ್ಧನೆಯ ರಂಗಕ್ಕೆ ಎರಡನೆಯ ಪೀಳಿಗೆಯವರು ಬಂದು ಇನ್ನೂ ಅಭಿವೃದ್ಧಿ ಮಾಡತೊಡಗಿದ್ದಾರೆ. ಸಿದ್ಧಾರ್ಥ ಪಾಟೀಲ್ (32) ಅವರ ಆರ್ಯಾಸ್ ಫುಡ್ ‘ಚಿಪ್ಝೀ’ ಹೆಸರಿನಲ್ಲಿ ಚಿಕ್ಕಿನ ಉತ್ಪನ್ನಗಳನ್ನು ಮಾಡಿ ಮಾರತೊಡಗಿದೆ. ಲತೀಕಾ ಪಾಟೀಲ್ ಮತ್ತು ಅಚ್ಯುತ ಪಾಟೀಲ್ ಅವರ ‘ಫ್ರುಟ್ ಮ್ಯಾಜಿಕ್’ ಉತ್ಪನ್ನಗಳೂ ಸೀಮಿತ ಪ್ರದೇಶದಿಂದ ಹೊರಗೆ ಹೋಗುವಷ್ಟು ಚೆನ್ನಾಗಿವೆ. ಪ್ಯಾಕಿಂಗ್, ಗುಣಮಟ್ಟದಲ್ಲಿ ವೃತ್ತಿಪರತೆಯಿದೆ.

ಹೊರ ಮಾರುಕಟ್ಟೆಯ ಮೇಲೆ ದೃಷ್ಟಿ

ಸಿದ್ದಾರ್ಥ ಪಾಟೀಲ್ ಅವರಿಗೆ 23 ಎಕ್ರೆ ಚಿಕ್ಕಿನ ತೋಟ ಮತ್ತು ಏಳೆಕ್ರೆ ಮಾವಿನ ತೋಟವಿದೆ. ಮೂರು  ವರ್ಷ  ಗುಜರಾತಿನಲ್ಲಿ   ಉದ್ಯೋಗ ದಲ್ಲಿದ್ದಾಗ ಅವರಿಗೆ ಮಾರ್ಕೆಟಿಂಗ್ಸ್ ಬಗ್ಗೆ ಅನುಭವ ಸಿಕ್ಕಿದೆ. ಈಗ ಇವರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ನಿರ್ಜಲೀಕರಿಸುವ ಉದ್ದಿಮೆ ಆರಂಭಿಸಿದ್ದಾರೆ. ಸೌರ ಶಕ್ತಿಯಿಂದ ನಡೆಯುವ ಉದ್ದಿಮೆ ಒಂದು ಸಲಕ್ಕೆ ಅರ್ಧ ಟನ್ ತಾಜಾ ವಸ್ತು ಒಣಗಿಸುವ ಸಾಮಥ್ರ್ಯ ಹೊಂದಿದೆ.

ಸಿದ್ದಾರ್ಥ ಚಿಕ್ಕಿನ ಉತ್ಪನ್ನಕ್ಕೆ ಆದ್ಯತೆ ಕೊಡುತ್ತಾರೆ. ಅದಲ್ಲದೆ ಮಾವು, ದಾರೆಹುಳಿ (ಕರಂಬೋಲ), ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ ಹುಡಿ ಮೊದಲಾದ ಉತ್ಪನ್ನ ತಯಾರಿಸುವವರಿದ್ದಾರೆ. ಪ್ರಾಯೋಗಿಕ ಉತ್ಪಾದನೆ ಆರಂಭವಾಗಿದ್ದು, ಈ ಬಾರಿಯ ಚಿಕ್ಕು ಉತ್ಸವದಲ್ಲಿ ಮಾರಾಟ ಮಾಡಿದ್ದರು.

“ನಮ್ಮಲ್ಲಿನ ಉತ್ಪನ್ನಗಳಿಗೆ ದೊಡ್ಡ ಸುಪ್ತ ಮಾರುಕಟ್ಟೆಯಿದೆ. ಮಾತ್ರವಲ್ಲ, ಪ್ರತಿಸ್ಪರ್ಧಿಗಳೂ ಇಲ್ಲ. ಆದರೆ ಈ ಹಳ್ಳಿಗಳ ಮಿತಿ ದಾಟಿ ಮಾರ್ಕೆಟ್ ಮಾಡಬೇಕಾದರೆ ಉತ್ಪನ್ನಗಳು ವೃತ್ತಿಪರ ಮಟ್ಟದ್ದಾಗಿರಬೇಕು” ಎನ್ನುತ್ತಾರೆ ಸಿದ್ಧಾರ್ಥ. ಇವರ ಚಿಕ್ಕಿನ ಉತ್ಪನ್ನಗಳನ್ನು ಅಲ್ಯುಮಿನಿಯಂ ಫಾಯಿಲ್ ಬಳಸಿ ನೈಟ್ರೋಜನ್ ತುಂಬಿ ಪ್ಯಾಕ್ ಮಾಡಿದ್ದಾರೆ. ಈ ಥರದ ಪ್ಯಾಕಿಂಗ್ ಚಿಕ್ಕಿನ ಉತ್ಪನ್ನಗಳಿಗೆ ಇದೇ ಮೊದಲು.

ಮಹಾರಾಷ್ಟ್ರ್ರದಾದ್ಯಂತ ‘ಗ್ರಾಹಕ ಪಂಚಾಯತ್’ ಎಂಬ ಮಾರಾಟ ಮಳಿಗೆಗಳ ಸರಣಿಯೇ ಇದೆ. ಇವರು ನೇರವಾಗಿ ಕೃಷಿಕರಿಂದ ಉತ್ಪನ್ನ ಕೊಂಡುಕೊಂಡು ಗುಣಮಟ್ಟ ಕಾಯ್ದು ಮಿತ ಬೆಲೆಗೆ ಗ್ರಾಹಕರಿಗೆ ಪೂರೈಸುತ್ತಾರೆ. ಈ ಜಾಲಕ್ಕೆ ತಮ್ಮ ಉತ್ಪನ್ನವನ್ನು ಪೂರೈಸುವ ಇರಾದೆ ಸಿದ್ಧಾರ್ಥರದು.

ಜತೆಜತೆಗೇ ಊರ ಗೃಹಿಣಿಯರ ಉದ್ದಿಮೆಯ ಅಭಿವೃದ್ಧಿಗೂ ಸಾಮುದಾಯಿಕ ಯತ್ನ ಆರಂಭವಾಗಿದೆ. ಇಪ್ಪತ್ತು ಸದಸ್ಯರ ಸಮಿತಿ ಮಾಡಿ ಇವರು ಐದು ಕೋಟಿ ರೂಪಾಯಿ ವೆಚ್ಚದ ಕೇಂದ್ರ ಸರಕಾರದ ಅನುದಾನದ ‘ಕಾಮನ್ ಪ್ರಾಸೆಸಿಂಗ್ ಸೆಂಟರ್’ ಪಡೆಯುವ ಯತ್ನದಲ್ಲಿ ಮುಂದಡಿ ಇಡುತ್ತಿದ್ದಾರೆ. ಈ ಸಮಿತಿಯಲ್ಲಿ ಸಿದ್ಧಾರ್ಥ ಪಾಟೀಲರೂ ಒಬ್ಬ ಸದಸ್ಯರು. ಈ ಕೇಂದ್ರ ಆರಂಭವಾದ ಮೇಲೆ ದಹನು ಕೃಷಿಕರ ಮೌಲ್ಯವರ್ಧನೆಯ ಯತ್ನಗಳಿಗೆ ಬಹು ದೊಡ್ಡ ಕೊಡುಗೆ ಕೊಡಬಲ್ಲುದು.

ಚಿಕ್ಕು ವೈನ್

ಜಾಗತಿಕ ಮಟ್ಟದಲ್ಲಿ ಜನಶ್ರದ್ಧೆಯನ್ನು ಈ ಚಿಕ್ಕು ಗ್ರಾಮಗಳತ್ತ ಸೆಳೆಯುವ ದೊಡ್ಡ ಸಾಧನೆ ಇಲ್ಲಿನ ಶ್ರೀಕಾಂತ್ ಪಾಟೀಲ್ ಕುಟುಂಬದಿಂದ ಆಗಿದೆ. ಇವರು ಚಿಕ್ಕು ಮತ್ತಿತರ ಸ್ಥಳೀಯ ಹಣ್ಣುಗಳಿಂದ ವೈನ್ ತಯಾರಿಸಿ ಮಾರುತ್ತಿದ್ದಾರೆ. ಇವರ ಹಿಲ್‍ಝಿಲ್ ಕಂಪೆನಿ ‘ಫ್ರುಝಾಂಟೆ’ ಹೆಸರಿನ ಚಿಕ್ಕು, ಮಾವು, ದಾರೆಹುಳಿ, ಅನಾನಸು, ಜೇನು ಮತ್ತು ಮಸಾಲೆವಸ್ತುಗಳ ವೈನ್ ಉತ್ಪಾದಿಸುತ್ತಿದ್ದಾರೆ.

ಶ್ರೀಕಾಂತ್ ಸಾವೆ (66) ಈ ದ್ವಿಗ್ರಾಮಗಳಲ್ಲಿ ಮೂರು ದಶಕ ಹಿಂದೆಯೇ ರೆಸಾರ್ಟ್ ಆರಂಭಿಸಿದ ಮೊದಲಿಗರು. ಮಗಳು ಪ್ರಿಯಾಂಕಾ ಸಾವೆ ಮತ್ತು ಇವರು ಜತೆ ಸೇರಿ ಬಹು ಪ್ರಯತ್ನಪಟ್ಟು ಈ ವೈನುಗಳನ್ನು ಅಭಿವೃದ್ಧಿಪಡಿಸಿ ಮೂರು ವರ್ಷಗಳಾಗಿವೆ. “ಜಗತ್ತಿನಲ್ಲೇ ಚಿಕ್ಕು ವೈನ್ ತಯಾರಿಸುವುದು ನಾವು ಮಾತ್ರ” ಎಂದು ಹೇಳಿಕೊಳ್ಳುತ್ತಾರೆ ಅಳಿಯ, ಕಂಪೆನಿಯ ನಿರ್ದೇಶಕ ನಾಗೇಶ್ ಆರ್. ಪೈ.

ಚಿಕ್ಕು ವೈನಿನ 330 ಮಿ.ಲೀಟರಿನ ಬಾಟ್ಲಿಯ ಬೆಲೆ 255 ರೂ. “ಇದು ನಮ್ಮ ಅತಿ ಜನಪ್ರಿಯ ಉತ್ಪನ್ನ. ಮುಂಬಯಿ, ನಾಗಪುರ ಮತ್ತು ಪುಣೆಯ ನೂರ ಇಪ್ಪತ್ತು ಔಟ್‍ಲೆಟ್ಟುಗಳಲ್ಲಿ ನಾವು ವೈನ್ ಮಾರುತ್ತಿದ್ದೇವೆ. ಮೂರು ವರ್ಷಗಳಲ್ಲಿ 45,000 ಬಾಟ್ಲಿ ವೈನ್ ಮಾರಿದ್ದೇವೆ” ಎನ್ನುತ್ತಾರೆ ನಾಗೇಶ್.

ಆದರೆ ಮೊದಮೊದಲು ವೈನ್ ಮಾರಾಟ ಅತಿ ಕಷ್ಟ ಆಯಿತಂತೆ. ಚಿಕ್ಕಿನ ವೈನ್ ಎಲ್ಲರಿಗೂ ಹೊಸತು. “ಎಲ್ಲರೂ ಬೇಡ ಎನ್ನುವವರೇ. ರುಚಿ ನೋಡಿದ ಮೇಲಷ್ಟೇ ಆಸಕ್ತಿ ಕುದುರುತ್ತದೆ. ಹೀಗೆ ರುಚಿ ತೋರಿಸಲೆಂದೇ ನಾವು ಟೇಸ್ಟಿಂಗ್ ಸೆಶನ್, ವೈನರಿ ಟೂರುಗಳನ್ನು ಮಾಡುತ್ತಲೇ ವ್ಯವಹಾರ ಕುದುರಿಸಿದ್ದೇವೆ. ಆದರೆ ಸರಕಾರದ ತೆರಿಗೆ ಅತಿ ಜಾಸ್ತಿಯಿದೆ. ಚಿಕ್ಕು ವೈನಿನ 255 ರೂಪಾಯಿಯಲ್ಲಿ ತೆರಿಗೆಯಾಗಿ ಹೋಗುವ ಮೊತ್ತವೇ 87 ರೂ.” ಎಂದು ನಾಗೇಶ್ ಬೇಸರಿಸುತ್ತಾರೆ. ಇವರ ಮಾವಿನ ವೈನಿಗೆ ಸ್ವಂತ ಫಾರ್ಮಿನ ಹಣ್ಣೇ ಪೂರ್ತಿಯಾಗಿ ಬಳಕೆ ಆಗುತ್ತದೆ. ಚಿಕ್ಕು ಇವರದಲ್ಲದೆ ಹೊರಗಿನಿಂದ ಖರೀದಿಸಬೇಕಾಗುತ್ತದೆ. ಹಿಲ್‍ಝಿಲ್ ಕಂಪೆನಿ ನಿಕಟ ಭವಿಷ್ಯದಲ್ಲೇ ಸ್ಟ್ರಾಬೆರಿ ಮತ್ತು ಸೇಬಿನ ವೈನ್ ಹೊರತರಲಿದೆ.

ಚಿಕ್ಕು ಉತ್ಸವದ ಬಗ್ಗೆ ಹೆಚ್ಚಿನ ವಿವರಗಳಿಗೆ :             

prabhakar@savefarm.in | https://www.chikoofestival.com

 ಸಿದ್ಧಾರ್ಥ ಪಾಟೀಲ್ : 090964 45234 |  siddharth@aryasfood.com

ನಾಗೇಶ್ ಆರ್.ಪೈ - 98192 43345 | nagesh@hillzillwines.com