ADD

Back To Free Articles

April-2019

ಆಮಿರ್ ಖಾನರ `ಪಾಣಿ ಕಿ ಪಾಠಶಾಲಾ'

ಸಂವಹನಾ ಚತುರರು ಸೇರಿ ಕಾಲು ಗಂಟೆಯಲ್ಲಿ ಜಲಾನಯನ ಅಭಿವೃದ್ಧಿಯ ದೊಡ್ಡ ವಿಷಯವನ್ನು ಶ್ರೀಸಾಮಾನ್ಯರಿಗೂ ಸುಲಭವಾಗಿ ಅರ್ಥ ಮಾಡಿಸಿಬಿಟ್ಟಿದ್ದಾರೆ.

 

ಲೇ: ಶ್ರೀ ಪಡ್ರೆ

 
no image
 

`ರವಿಮುಕ್ತ ಮಹಾರಾಷ್ಟ್ರ' ಹಿಂದಿ ಚಿತ್ರ ನಟ ಆಮಿರ್ ಖಾನ್ ಅವರ ಕನಸು. ಈ ಕನಸಿಗೆ ಅವರು ರೂಪ ಕೊಟ್ಟದ್ದು ಅವರೇ ಹುಟ್ಟುಹಾಕಿದ  `ಪಾನಿ ಫೌಂಡೇಶನ್' ಸಂಸ್ಥೆಯ ಮೂಲಕ.  ಇದು ಕೇವಲ ಪ್ರಚಾರದ ಘೋಷಣೆಯಲ್ಲ. ಕಳೆದೆರಡು ವರ್ಷಗಳಿಂದ ಈ ಸಂಸ್ಥೆ ಗ್ರಾಮಮಟ್ಟದ `ವಾಟರ್ ಕಪ್' ಎಂಬ ಜಲಾನಯನ ಅಭಿವೃದ್ಧಿಯ ಸ್ಪರ್ಧೆ ನಡೆಸುತ್ತಿದೆ. ಅಥವಾ ಆ ನೆಪದಲ್ಲಿ ಸಾವಿರಾರು ಹಳ್ಳಿಗಳನ್ನು ಜಾಣತನದಿಂದ ನೀರ ಕಾಯಕಕ್ಕೆ ಏರಿಸಿಬಿಟ್ಟಿದೆ.

ಈ ವರ್ಷ ಮಹಾರಾಷ್ಟ್ರದ 1,314 ಬರಪೀಡಿತ ಗ್ರಾಮಗಳ ಒಂದು ಲಕ್ಷ ಮಂದಿ ತಮ್ಮೂರ ಜಲವೃದ್ಧಿಗಾಗಿ ಶ್ರಮದಾನ ಮಾಡಿದ್ದಾರೆ. ಬಹುಶಃ ಇದು ಸ್ವಾತಂತ್ರ್ಯಾನಂತರದ ಭಾರತದ ದೊಡ್ಡ ಜನಾಂದೋಳನ. ಶ್ರಮದಾನ ಈ ಮಹತ್ಕಾರ್ಯದ ಮುಖ್ಯ ಅಂಗ ಮಾತ್ರ. ನಮ್ಮ ಮಾರುಕಟ್ಟೆ ಕೇಂದ್ರಿತ ಮಾಧ್ಯಮಗಳ ತಪ್ಪು ಆದ್ಯತೆಯಿಂದಾಗಿ ಈ ಬದುಕು ಕಟ್ಟುವ, ದೇಶ ಕಟ್ಟುವ ಸಾಧನೆಯ ಸಂದೇಶ, ಸುದ್ದಿ ನೆರೆರಾಜ್ಯಗಳಿಗೇ ಹಬ್ಬಲಿಲ್ಲ! ಇದು ನಮ್ಮಲ್ಲಿನ ದುರಂತ.

``ಹಮ್ ಆಪ್ಕೋ ಪೈಸಾ ನಹೀಂ ದೇತೆ, ಗ್ಯಾನ್ ದೇತೇ ಹೈಂ'' ಎನ್ನುತ್ತಾ ಪಾನಿ ಫೌಂಡೇಶನ್ ಈ ಹಳ್ಳಿಗಳ ಪ್ರತಿನಿಧಿಗಳಿಗೆ ಜಲಾನಯನ ಅಭಿವೃದ್ಧಿಯ, ನೀರುಳಿತಾಯದ ವಿಜ್ಞಾನವನ್ನು ಅರೆದು ಕುಡಿಸುತ್ತಿದೆ. ಭಾಷೆ ಬೇರೆ (ಹಿಂದಿ - ಮರಾಠಿ) ಆದರೂ ನಮಗೆ ಸಾರ ಅರ್ಥವಾಗುವ, ಪ್ರೇರಣೆಯ ಬುತ್ತಿ ಕಟ್ಟಿಕೊಡುವ ನೂರಕ್ಕೂ ಹೆಚ್ಚು ವಿಡಿಯೋ ತಯಾರಿಸಿದೆ. ಇವನ್ನು ಯಾರೂ  ಇವರ ಜಾಲತಾಣದಲ್ಲಿ (http://www.paanifoundation.in/en/videos) ನೋಡಬಹುದು.

ಯಾವ ರಾಜಕಾರಣಿ, ನಾಯಕರೂ ಈ ವರೆಗೆ ಸೊಲ್ಲೆತ್ತದ `ಮಹಾರಾಷ್ಟ್ರವನ್ನು ಬರವಿಮುಕ್ತ ವಾಗಿಸುವ' ಕನಸು ಕಟ್ಟಿಕೊಟ್ಟ ಆಮಿರ್ ಅವರನ್ನು ಅಭಿನಂದಿಸಲೇಬೇಕು. ಅವರು ಸಂಸ್ಥೆ ಕಟ್ಟಿ, ಭಾಷಣ ಮಾಡಿ ಕೈತೊಳೆದಿಲ್ಲ. ಬದಲಾಗಿ ಮಳೆಕೊಯ್ಲು, ಜಲಾನಯನ ಅಭಿವೃದ್ಧಿಯ ಒಳಮರ್ಮವನ್ನು ಪೂರ್ತಿ ಅರಗಿಸಿ ಹಂಚಹೊರಟಿದ್ದಾರೆ.

ಇದಕ್ಕೆ ಒಂದು ಪುಟ್ಟ ದೃಷ್ಟಾಂತ ಸ್ಥಳೀಯ ಟೀವಿಯಲ್ಲಿ ಆಮಿರ್ ನಡೆಸಿಕೊಟ್ಟ ಕಾಲು ಗಂಟೆಯ `ಪಾಣಿ ಕಿ ಪಾಠಶಾಲಾ' ಕಾರ್ಯಕ್ರಮ. ಇಳಿಮೇಡು ಅಥವಾ ವಾಟರ್ ಶೆಡ್ಡಿನ ಎರಡು ಪುಟ್ಟ ಮಾದರಿಗಳನ್ನು ಎದುರಿಟ್ಟು ಆಮಿರ್ ಮತ್ತು ಪಾನಿ ಫೌಂಡೇಶನ್ ಕಾರ್ಯನಿರ್ವಹಣಾಧಿಕಾರಿ ಸತ್ಯಜಿತ್ ಭಟ್ಕಳ್ ಮಳೆಯನ್ನು ತಡೆದು ಇಂಗಿಸುವ ಶಾಸ್ತ್ರೀಯ ಕ್ರಮವನ್ನು ಭಲೇ ಎನ್ನುವಂತೆ ನಿರೂಪಿಸಿ ತೋರಿಸುತ್ತಾರೆ.

ಈ ಎರಡು ಇಳಿಮೇಡಿನ ಮಾದರಿಗಳಲ್ಲಿ ಒಂದು ಬೋಳುಬೋಳು. ಮೇಲೆ ಹುಲ್ಲಿನ ಹಾಸು, ಮರಗಳು ಆಗಲಿ ಅಲ್ಲಲ್ಲಿ ಮಳೆನೀರು ತಡೆಯುವ ರಚನೆಗಳಾಗಲೀ ಇಲ್ಲ. ಮಳೆಯ ರೀತಿಯಲ್ಲಿ ನೀರು ಸುರಿದಾಗ, ಈ ಬೋಳಾದ ಇಳಿಮೇಡಿನಲ್ಲಿ ಏಳೇ ಸೆಕೆಂಡಿಗೆ ಅದು ಕೆಳಮೂಲೆ ತಲಪುತ್ತದೆ. ಹಸಿರು, ನೀರಿಂಗಿಸುವ ರಚನೆಗಳಿರುವ ಎರಡನೆಯ ಮಾದರಿಯಲ್ಲಿ ನೀರು ಕೆಳಗೆ ತಲುಪಲು 25 ಸೆಕೆಂಡು ತೆಗೆದುಕೊಳ್ಳುತ್ತದೆ.

ಒಂದನೆ ಮಾದರಿಯಲ್ಲಿ ಇಂಗಿದ ನೀರಿನ ನಾಲ್ಕೈದು ಪಟ್ಟು ಹೆಚ್ಚು ನೀರು ಎರಡನೆಯದರಲ್ಲಿ ಇಂಗುತ್ತದೆ. ಒಂದನೆಯದರಲ್ಲಿ ಧಾರಾಳ ಮೇಲ್ಮಣ್ಣು ಕೊಚ್ಚಿಕೊಂಡು ನೀರಿನ ಜತೆ ಹರಿದುಹೋದರೆ ಎರಡನೆಯದರ ಹೊರಹೋಗುವ ನೀರಲ್ಲಿ ಮಣ್ಣು ನಗಣ್ಯ.

``ಯಾವುದೇ ಭೂಭಾಗದಲ್ಲಿ ಬಿದ್ದ ಎಲ್ಲ ಮಳೆನೀರು ಒಂದೇ ಹೊರದ್ವಾರದ ಮೂಲಕ ಹರಿಯುತ್ತದೋ ಅದನ್ನು ಒಂದು ಕಿರು ಇಳಿಮೇಡು ಎಂದು ಕರೆಯುತ್ತೇವೆ. ಇದರ ಪರಿಧಿಯಿಂದಾಚೆಗೆ ಸುರಿವ ಮಳೆನೀರು ನೆರೆಯ ಕಿರು ಇಳಿಮೇಡಿಗೆ ಸಂಬಂಧಪಡುತ್ತದೆ'' ಆಮಿರ್ ಸೊಗಸಾಗಿ ಬಣ್ಣಿಸುತ್ತಾರೆ, ``ಇಳಿಮೇಡಿನ ಮೇಲ್ತುದಿಯಿಂದ ನೆಲಜಲ ಸಂರಕ್ಷಣೆಯ ರಚನೆ ಮಾಡಮಾಡುತ್ತಾ ಕೆಳಕ್ಕೆ ಬರಬೇಕು.''

ಸಾಮಾನ್ಯವಾಗಿ ಜಲಾನಯನ ಅಭಿವೃದ್ಧಿಗಾಗಿ ರಚಿಸುವ ಡೀಪ್ ಸೀಸೀಟಿ (ಆಳವಾದ ಕಂಟೂರ್ ಕಣಿ), ಸೀಸೀಟಿ (ಉದ್ದನೆಯ ಕಂಟೂರ್ ಕಣಿ), ಮಣ್ಣಿನ ಕಟ್ಟ (ಮಾಟಿ ಬಾಂದ್), ಲೂಸ್ ಬೋಲ್ಡರ್ ಸ್ಟ್ರಕ್ಚರ್ (ಕಲ್ಲಿನ ತಡೆಗಟ್ಟ) - ಮುಂತಾದುವುಗಳ ಬಗ್ಗೆಯೂ ಆಮಿರ್ ವಿವರಿಸುತ್ತಾರೆ. ಸತ್ಯಜಿತ್ ದನಿಗೂಡಿಸಿ ಈ ಕೆಲಸವನ್ನು ಜನರಿಗೆ ಇನ್ನಷ್ಟು ಮನದಟ್ಟು ಮಾಡಲು ಬೇಕಾದ ಅಂಶ ತಿಳಿಸುತ್ತಾರೆ.

ಮುಂದಿನ ಕೊಂಡಿಯನ್ನು ಬಳಸಿ ಈ ಟೀವಿ ಕಾರ್ಯಕ್ರಮ ನೋಡಿ. https://www.youtube.comwatch?v=4ZIwySqy1H8

ಸಂವಹನಾ ಚತುರರು ಸೇರಿ ಕಾಲು ಗಂಟೆಯಲ್ಲಿ ಜಲಾನಯನ ಅಭಿವೃದ್ಧಿಯ ದೊಡ್ಡ ವಿಷಯವನ್ನು ಶ್ರೀಸಾಮಾನ್ಯರಿಗೂ ಸುಲಭವಾಗಿ ಅರ್ಥ ಮಾಡಿಸಿಬಿಟ್ಟಿದ್ದಾರೆ. ಈ ಕಾರ್ಯಕ್ರಮ ದೇಶವಿಡೀ ನೋಡಬೇಕು ಎನ್ನುವಷ್ಟು ಮಹತ್ವದ್ದು. ಶಾಲಾ ಕಾಲೇಜುಗಳಲ್ಲಿ ಇದನ್ನು ಪ್ರದರ್ಶಿಸಬೇಕು. ಇನ್ನೂ ಮುಖ್ಯವಾಗಿ, ಮೋಡ ಬಿತ್ತನೆ, ಪಾತಾಳಗಂಗೆ, ಸಮುದ್ರ ನೀರು ಶುದ್ಧೀಕರಣ, ನದಿ ಜೋಡಣೆಯಂತಹ ಫಲಕ್ಕಿಂತ ಹೆಚ್ಚು ದುಷ್ಫಲ ಕೊಡಬಲ್ಲ ಗಜಗರ್ಭ ಪ್ರತಿಪಾದಕ ರಾಜಕಾರಿಣಿಗಳಿಗಿದನ್ನು ತೋರಿಸಬೇಕು. ಇದನ್ನು ದೇಶದ ಎಲ್ಲಾ ಭಾಷೆಗಳಿಗೆ ಭಾಷಾಂತರ ಮಾಡಿದರೆ ಒಳ್ಳೆಯದು.

ಮನದಲ್ಲಿ ಬೇರೂರಿದ ನಂಬಿಕೆ, ಸಂಶಯಗಳನ್ನು ಕಾಲು ಗಂಟೆಯಲ್ಲಿ ದೂರ ಮಾಡಲು ಆಗದಿರಬಹುದು. ಮಳೆನೀರು ತಡೆಯುವ ಸಮರ್ಪಕ ಕೆಲಸ ಮಾಡಿದರೆ ಈ ದೇಶದ ಬರಸಂಭಾವ್ಯ ಪ್ರದೇಶಗಳಲ್ಲೂ ಮಳೆಯ ಮೇಲೆ ವಿಶ್ವಾಸ ಇಟ್ಟು ಸುಗಮ ಬದುಕು ನಡೆಸಬಹುದು. ಅತಿರೇಕದ, ದುಡುಕಿನ, ದೇಶವನ್ನು ಸಾಲದ ಕೂಪಕ್ಕೂ, ಪ್ರಕೃತಿಯನ್ನು ವಿನಾಶದಂಚಿಗೂ ತಳ್ಳುವ ಭೀಮಯೋಜನೆ ಬೇಕಿಲ್ಲ.

ಈ ಮಾತಿನಲ್ಲಿ ನಂಬಿಕೆ ಇಲ್ಲದವರಿದ್ದರೆ ಪಾನಿ ಫೌಂಡೇಶನ್ ಪ್ರೇರಿತ ಜಲಾನಯನ ಕಾಮಗಾರಿ ನಡೆದ ನೂರಾರು, ಸಾವಿರಾರು ಹಳ್ಳಿಗೆ ಎರಡು ದಿನದ ಭೇಟಿ ನೀಡಲಿ. ದಶಕಗಳಿಂದ ಟ್ಯಾಂಕರ್ ನೀರು ನಂಬಿ ಬದುಕುತ್ತಿದ್ದ ಹಳ್ಳಿಗಳು ಈಗ ಹೇಗೆ ಟ್ಯಾಂಕರಿಗೆ, ನೀರಿನ ದಾಸ್ಯಕ್ಕೆ ವಿದಾಯ ಹೇಳಿವೆ ಎಂದು ಅವರ ಬಾಯಿಯಿಂದಲೇ ಕೇಳಲಿ. ನಾನೂರು ಮಿಲ್ಲಿಮೀಟರಿನಲ್ಲೂ ಸಂತೃಪ್ತ ಬದುಕು ಬಾಳಲು ಬೇಕಾದ `ಮಾಡಿ ಮತ್ತು ಬೇಡಿ'ಗಳ ಪಟ್ಟಿ ಮಾಡಿ ತರಲಿ.

`ನೋಡಿದರೂ ನಂಬೆ' ಎಂಬಂಥಹ ಕೆಟ್ಟ ಜಿಗುಟು ಮನಸ್ಸನ್ನು ತೆರೆಸುವ ಕೆಲಸ ಮೊದಲಿಗೆ ಆಗಲಿ. ಈ ಪುಣ್ಯಕಾರ್ಯಕ್ಕೆ `ಪಾಣಿ ಕಿ ಪಾಠಶಾಲಾ' ಒಂದು ಓಂ ಮಂತ್ರವಾಗಲೂಬಹುದು. ಸನ್ಮನಸ್ಸುಳ್ಳವರು ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಯತ್ನಿಸಿ ನೋಡಿ.