ADD

Back To Free Articles

March-2019

‘ಅತಿ ಸಾಂದ್ರ ಕೃಷಿ ಬೇಡ’

ತಳಿಗೆ ಪ್ರತ್ಯೇಕ ವಂಶವಾಹಿ ಗುಣ ಇರುವುದು ಸತ್ಯ. ಇದು ಬಾಗಲಕೋಟೆ, ಬೆಂಗಳೂರು, ಕರಾವಳಿ, ಕೇರಳ - ಎಲ್ಲಾ ಕಡೆಯೂ ಬೇಗನೆ, ಹೆಚ್ಚು ಮತ್ತು ಅಕಾಲ ಇಳುವರಿ ಕೊಡುವುದನ್ನು ಸಿದ್ಧಪಡಿಸಿದೆ. ಸ್ಥಳೀಯ ತಳಿಗಳು ಹೂ ಬಿಡುವಾಗ ಇದು ಹಣ್ಣು ಸಿದ್ಧವಾಗಿಸಿ ಕೊಡುತ್ತದೆ.''

 

ಲೇಖನ  : ಶ್ರೀ ಪಡ್ರೆ 

 
no image
 

``ಮ್ಮ ಹಿರೇಹಳ್ಳಿ ಐಐಹೆಚ್‍ಆರ್ ಉಪಕೇಂದ್ರದಲ್ಲಿ ಥಾಯ್‍ಲ್ಯಾಂಡ್ ಪಿಂಕ್ ಗಿಡ ನೆಟ್ಟಿದ್ದೇವೆ. ಒಳ್ಳೆ ಫಲಿತಾಂಶವಿದೆ. ಈ ತಳಿಗೆ ಪ್ರತ್ಯೇಕ ವಂಶವಾಹಿ ಗುಣ ಇರುವುದು ಸತ್ಯ. ಇದು ಬಾಗಲಕೋಟೆ, ಬೆಂಗಳೂರು, ಕರಾವಳಿ, ಕೇರಳ - ಎಲ್ಲಾ ಕಡೆಯೂ ಬೇಗನೆ, ಹೆಚ್ಚು ಮತ್ತು ಅಕಾಲ ಇಳುವರಿ ಕೊಡುವುದನ್ನು ಸಿದ್ಧಪಡಿಸಿದೆ'' ಎನ್ನುತ್ತಾರೆ ಹಿರೆಹಳ್ಳಿ ಐಐಹೆಚ್‍ಆರ್ ಉಪಕೇಂದ್ರದ ಮುಖ್ಯಸ್ಥ, ಹಲಸು ವಿಜ್ಞಾನಿ ಡಾ.ಗಣೇಶನ್ ಕರುಣಾಕರನ್.

``ಎರಡನೆ ವರ್ಷ ಹೂ ಬಿಟ್ಟು ಹಣ್ಣು ಕೊಡುವ ಇದರ ಗುಣ ಯಾವುದೇ ಸ್ಥಳಿಯ ತಳಿಯನ್ನು ಹಿಂದೆ ಹಾಕಿದೆ. ಸೊಳೆ ಒಂದು ರೀತಿಯ ಚೌಕಾಕಾರ ಹೊಂದಿರುತ್ತದೆ. ಅತಿ ಎನ್ನಿಸುವಷ್ಟು ಸಿಹಿ ಇಲ್ಲ. ನಾನದನ್ನು ಇಷ್ಟಪಡುತ್ತೇನೆ'' ಎನ್ನುತ್ತಾರೆ ಈ ವಿಜ್ಞಾನಿ. ಹಿರೆಹಳ್ಳಿಯಲ್ಲಿ ಇವರು ಥಾಯ್‍ಲ್ಯಾಂಡ್ ಪಿಂಕ್, ಮಂಕಾಳೆ ರೆಡ್, ಲಾಲ್‍ಬಾಗ್ ಮಧುರ, ಸ್ವರ್ಣ ತಳಿಗಳ ಗಿಡಗಳನ್ನು 2015ರಲ್ಲಿ ನೆಟ್ಟಿದ್ದು ಥಾಯ್ ಪಿಂಕ್  ಮಾತ್ರ. ಎರಡನೆ ವರ್ಷದಲ್ಲೆ ಹಣ್ಣು ಕೊಟ್ಟಿದೆ. ಈಗ ಥಿನ್ನಿಂಗ್ ಮಾಡಿದ ನಂತರ ಹದಿನೈದು ಕಾಯಿಗಳಿವೆ.

ಜನವರಿಯಲ್ಲಿ ಬೆಂಗಳೂರಿನ ಐಐಹೆಚ್‍ಆರ್ ಮುಖ್ಯ ಸಂಸ್ಥೆಯಲ್ಲಿ ತೋಟಗಾರಿಕಾ ಮೇಳದಲ್ಲಿ ಡಾ.ಕರುಣಾಕರನ್ ಹಲಸಿನ ಕೆಂಪು ಮತ್ತು ಹಳದಿ ಸೊಳೆ ಬಳಸಿ ಒಂದು ಮೀನಿನ ಪ್ರತಿಕೃತಿ ಮಾಡಿಸಿ ಪ್ರದರ್ಶನಕ್ಕೆ ಇಟ್ಟಿದ್ದರು. ಅದಕ್ಕೆ  ಬಳಸಿದ  ಹಳದಿ ಸೊಳೆ ಹಿರೇಹಳ್ಳಿಯಲ್ಲಿ ಬೆಳೆದ ಥಾಯ್ ಪಿಂಕ್ ತಳಿಯದು.'' ಆಗ ಸುಲಭದಲ್ಲಿ ಬೇರೆ ಹಣ್ಣು ಸಿಗುತ್ತಿರಲಿಲ್ಲ. ಸ್ಥಳೀಯ ತಳಿಗಳು ಹೂ ಬಿಡುವಾಗ ಇದು ಹಣ್ಣು ಸಿದ್ಧವಾಗಿಸಿ ಕೊಡುತ್ತದೆ.''

``ಈ ತಳಿಯನ್ನು ಬಳಸಿ ಸಾಂದ್ರ ಕೃಷಿ ಮಾಡಬಹುದು. ಆದರೆ ಹಾಗೆ ಮಾಡುವಾಗ ಪ್ರತಿ ವರ್ಷವೂ ಚೆನ್ನಾಗಿ ಪ್ರೂನಿಂಗ್ ಮತ್ತು ಥಿನ್ನಿಂಗ್ ಮಾಡಲೇಬೇಕು.    ಥಿನ್ನಿಂಗ್  ಮಾಡದಿದ್ದರೆ ಅನಾಕರ್ಷಕ ಆಕಾರದ ಹಣ್ಣು ಬಿಡುತ್ತದೆ. ಥಿನ್ನಿಂಗ್ ಮಾಡಿ ತೆಗೆದ ಎಳೆ ಹಲಸನ್ನು ತರಕಾರಿ ಆಗಿ ಬಳಸಬಹುದು. ಪ್ರೂನಿಂಗ್ ಮಾಡಿ ಕಾಂಡಕ್ಕೆ, ಕೆಳಗಿನ ನೆಲಕ್ಕೆ ಸೂರ್ಯರಶ್ಮಿ ಬೀಳುವಂತಿರಬೇಕು. ನೆಲಕ್ಕೆ ಬಿಸಿಲು ಬೀಳದಿದ್ದರೆ ಸೂಕ್ಷ್ಮಾಣುಜೀವಿಗಳ ಚಟುವಟಿಕೆ ಸರಿಯಾಗಿ ನಡೆಯುವುದಿಲ್ಲ. ಸರಿಯಾಗಿ ಬೇರು ಬೆಳೆಯದಿದ್ದರೆ ಮುಂದಿನ ವರ್ಷಗಳ ಉತ್ಪಾದನೆ ಇಳಿಯಬಹುದು.  ಒಂದು ಗಿಡದ ಗೆಲ್ಲು ಮತ್ತೊಂದರದ್ದನ್ನು ಸ್ಪರ್ಶಿಸುವಂತೆ ಇರಲೇಬಾರದು.'', ಇವರು ವಿವರಿಸುತ್ತಾರೆ.

ಕರುಣಾಕರನ್ ಅವರ ಪ್ರಕಾರ, “ಈ ತಳಿಗೆ ವರ್ಷವಿಡೀ ಬೆಳೆ ಕೊಡುವ ಸಾಮಥ್ರ್ಯ ಇದೆ. ಆದರೆ ಹಾಗೆ ಫಸಲು ಕೊಡಲು ಬಿಡಬಾರದು. ಪ್ರೂನಿಂಗ್ ಕಾಂಡ ಗೆಲ್ಲುಗಳ ಬೆಳವಣಿಗೆ, ಗಾಳಿ, ಬೆಳಕು ಅಡ್ಡಾಡಲು ಸಹಾಯವಾಗುವುದು ಮಾತ್ರವಲ್ಲ, ಬೆಳೆಗಳ ನಡುವೆ ವಿಶ್ರಾಂತಿ ಕೊಡುತ್ತದೆ. ಈ ವಿಶ್ರಾಂತಿ ಇಂಥ ಅತ್ಯುತ್ಪಾದನಾ ತಳಿಗಳಿಗೆ ಅತ್ಯಗತ್ಯ. ಇಲ್ಲದೆ ಹೋದರೆ ಮರ ಬೆಳೆದ ಮೇಲೆ ಉತ್ಪಾದಕತೆ ಕಡಿಮೆ ಆಗಬಹುದು. ಪ್ರತಿ ವರ್ಷ ಒಂದು ಸಾಲು ಎಡೆ ಬಿಟ್ಟು ಇನ್ನೊಂದು ಸಾಲಿನ ಮರ ಪ್ರೂನ್ ಮಾಡುವ ಕ್ರಮವನ್ನೂ ಅನುಸರಿಸಿ ನೋಡಬಹುದು. ಆಗ ಸತತ ಬೆಳೆ ಸಿಗುವುದಕ್ಕೆ ಅಡ್ಡಿಯಿಲ್ಲ.”

``ಸಾಂದ್ರ ಬೆಳೆ ಅಂದರೂ 15 ಅಡಿ ಗುಣಿಸು 15 ಅಡಿಯ ವರೆಗೆ ಅಂತರ ಇಳಿಸಬಹುದು. ಈ ಅಂತರದಲ್ಲಿ ಎಕ್ರೆಗೆ ಸುಮಾರು ನೂರ ಮೂವತ್ತು ಗಿಡ ನಿಲ್ಲಬಹುದು. 20 ಅಡಿ ಗುಣಿಸು 20 ಅಡಿ ಅಂತರದಲ್ಲಿ ಸುಮಾರು ನೂರು ಗಿಡ ನಿಲ್ಲಬಹುದು. ನಿಜವಾಗಿ ಈ ಅಂತರವೇ (20 ಗುಣಿಸು 20 ಅಡಿ) ನನ್ನ ಆಯ್ಕೆ'' ಎನ್ನುತ್ತಾರೆ.

``ಗಿಡದ ಹಸಿರುಗೊಡೆ (ಕ್ಯಾನೊಪಿ) ಬೆಳವಣಿಗೆಗೆ ಅಡ್ಡಿ ಆಗಬಾರದು. ಒತ್ತೊತ್ತಾಗಿ ಗಿಡ ನೆಟ್ಟು ಒಂದು ರೀತಿಯ ಮೋಡ ಕವಿದ ವಾತಾವರಣದಂತೆ ಆದರೆ, ಹಣ್ಣು ಕೊರಕ (ಫ್ರುಟ್ ಬೋರರ್) ಮತ್ತು ಹಣ್ಣು ಹಾತೆ(ಫ್ರುಟ್ ಮೋತ್) ಗಳ ಹಾವಳಿ ಹೆಚ್ಚಾಗುತ್ತದೆ. ಹಲಸು, ಮಾವು, ಅವಕಾಡೋ (ಬೆಣ್ಣೆ ಹಣ್ಣು) ಗಳಂತೆ ಗೆಲ್ಲುಗಳಲ್ಲಿ ಬೆಳೆ ಕೊಡುವ `ಟರ್ಮಿನಲ್ ಬೇರರ್' ಹಣ್ಣಲ್ಲ. ಇದು  ಸ್ಟೆಮ್ ಬೋರರ್ - ಅಂದರೆ ಕಾಂಡದಲ್ಲಿ ಹೆಚ್ಚು ಬೆಳೆ ಕೊಡುವಂಥದ್ದು. ಹೀಗಾಗಿ ಅತಿ ಸಾಂದ್ರ ಕೃಷಿ ಬೇಡ.''

ಎಳೆಯದಿರುವಾಗಲೇ ಹಲಸಿನ ಗಿಡವನ್ನು ಪಳಗಿಸುವ ಒಂದು ಮಹತ್ವದ ಕ್ರಮವನ್ನೂ ಡಾ. ಕರುಣಾಕರನ್ ತಿಳಿಸುತ್ತಾರೆ. ಕೆಳಗಿನ ಗೆಲ್ಲುಗಳು ನೆಲದಿಂದ ಕನಿಷ್ಠ ಎರಡು ಅಡಿ ಎತ್ತರದಲ್ಲಿರಬೇಕು. ಇದು ಗೊಬ್ಬರ ನೀಡಿಕೆ, ಕಳೆ ಕೀಳುವುದು ಇತ್ಯಾದಿಗಳ ಅನುಕೂಲಕ್ಕೆ. ಮಾತ್ರವಲ್ಲ, ಹಲಸು ಕೆಳಗೆ ಬೆಳೆ ಬಿಟ್ಟು ನೆಲ ಸ್ಪರ್ಶಿಸಿ ನಿಂತಲ್ಲಿ ಹಾಳಾಗುವ ಸಾಧ್ಯತೆಯೂ ಇದೆ. ಗೆಲ್ಲುಗಳು ಮೂರೂ ದಿಕ್ಕಿಗೆ ಬೆಳೆಯುವಂತೆ ಎಳೆದು ಕಟ್ಟಬೇಕು. ಒಂದು ಅಂತರದ ಈ ಮೂರು ಗೆಲ್ಲುಗಳ ನಂತರ ಇನ್ನೊಂದು ಸೆಟ್ ಗೆಲ್ಲುಗಳಿಗೆ ಕನಿಷ್ಠ ಒಂದೂವರೆ ಅಡಿ ಲಂಬ ಎತ್ತರ ಕಾಯಬೇಕು.''

ಹಿರೇಹಳ್ಳಿಯಲ್ಲಿನ ಮೂರು ವರ್ಷದ ಕಸಿಗಿಡಗಳ ಎತ್ತರವನ್ನು ಇವರು ಕೇವಲ ಆರು ಅಡಿಗೆ ಸೀಮಿತಗೊಳಿಸಿದ್ದಾರೆ. ``ನನ್ನ ಎತ್ತರಕ್ಕಿಂತ ಮೇಲೆ ಬೆಳೆಯಲು ಬಿಟ್ಟಿಲ್ಲ; ಹಾಗಾಗಿ ಕೊಯ್ಲು ಸುಲಭ'' ಎನ್ನುತ್ತಾರೆ.