ADD

Back To Free Articles

March-2019

ವಾಡಾವೋ, ಥಾಯ್ ಪಿಂಕೋ?

ಈಯೆರಡು ತಳಿಗಳಲ್ಲಿ ಯಾವುದು ಉತ್ತಮ? ``ಉತ್ತರ ಕಷ್ಟ. ಎರಡೂ ಬಹು ವಿಶೇಷ ತಳಿಗಳೇ. ಬಹಳಷ್ಟು ಸಾಮ್ಯತೆಗಳಿವೆ; ಸಣ್ಣಪುಟ್ಟ ವ್ಯತ್ಯಾಸಗಳೂ ಇವೆ'', ವಿಶ್ಲೇಷಿಸುತ್ತಾರೆ ಕಸಿತಜ್ಞ ಗುರುರಾಜ್ ಬಾಳ್ತಿಲ್ಲಾಯ.

 

ಲೇಖನ  : ಶ್ರೀ ಪಡ್ರೆ 

 
no image
 

ನ್ನಾಡ ಹಲಸು `ಹುಚ್ಚ'ರ ಗಮನಕ್ಕೆ ಬಂದ ಅತಿ ಶೀಘ್ರ ಫಸಲು ಕೊಡುವ ತಳಿಗಳು ಎರಡು. ಒಂದು ಥಾಯ್‍ಲ್ಯಾಂಡ್ ಪಿಂಕ್. ಇನ್ನೊಂದು ಮಹಾರಾಷ್ಟ್ರದ ವಾಡಾದಿಂದ ಹುಡುಕಿ ತಂದ ಇಲ್ಲಿ `ವಾಡಾ' ಎಂದೇ ಹೆಸರು ಪಡೆದ ತಳಿ.

ಎರಡಕ್ಕೂ ನರ್ಸರಿ ಬ್ಯಾಗಿನಿಂದ ಭಡ್ತಿ ಪಡೆಯುವ ಮೊದಲೇ ಬೆಳೆ ಕೊಡುವ ಆತುರ. ಒಳ್ಳೆ ಜಮೀನು, ಚೆನ್ನಾಗಿ ಬಿಸಿಲು, ನೀರು ಇರುವಲ್ಲಿ ಆರೈಕೆಯೂ ಚೆನ್ನಾಗಿದ್ದರೆ ಎರಡೇ ವರ್ಷದಲ್ಲಿ ಹಣ್ಣಿನ ರುಚಿ ಸವಿಯಬಹುದು. ವಾಡಾ ತಳಿ ಬಂದಿರುವುದು ಪ್ರಕಾಶ್ ಸಾವಂತ್ ಎಂಬ ಕೃಷಿಕರ ಜಮೀನಿನಿಂದ. ಈ ತಳಿ ಒಂದಕ್ಕಿಂತ ಹೆಚ್ಚು ಸಲ, ಅಂದರೆ ಅಕಾಲ ಬೆಳೆಯೂ ಕೊಡುತ್ತದೆ, ಸಮೃದ್ಧ ಫಸಲಿಗೂ ಹೆಸರುವಾಸಿ.

ವಾಡಾ ತಳಿಯನ್ನು ಈಗ ಆಂಟು ಪಳ್ಳಿಪ್ಪಾಡನ್ ಥಾಯ್ ಪಿಂಕ್ ತಳಿಯ ಅತಿ ಸಾಂದ್ರ ತೋಟ ಎಬ್ಬಿಸಿದ ಹಾಗೆ ಪ್ರಯೋಗ ನಡೆಸಿರುವವರು ಬಿಡಿ, ಒಂದಷ್ಟು ಹೆಚ್ಚಿನ ಪ್ರಮಾಣದಲ್ಲಿ ಏಕಬೆಳೆ ತೋಟ ಮಾಡಿದವರು ಅಡಿಕೆ ಪತ್ರಿಕೆಯ ಗಮನಕ್ಕೆ ಬಂದಿಲ್ಲ. ವಾಡಾ ತಳಿ ಕೇರಳಿಗರಿಗೆ ಅಷ್ಟಾಗಿ ಪರಿಚಿತವಲ್ಲ.

``ತೋಟ ನಿರ್ಮಾಣಕ್ಕೆ ಯಾವ ತಳಿ ಹೆಚ್ಚು ಸೂಕ್ತ? ವಾಡಾವೋ, ಥಾಯ್ ಪಿಂಕೋ''? ಅಡಿಕೆ ಪತ್ರಿಕೆ ಈ ಪ್ರಶ್ನೆಯನ್ನು ಮಣಿಪಾಲದ ಬಳಿಯ ಆತ್ರಾಡಿಯ ಕಸಿತಜ್ಞ ಗುರುರಾಜ್ ಬಾಳ್ತಿಲ್ಲಾಯ ಅವರ ಬಳಿ ಕೇಳಿತು.

``ಹೀಗೆಯೇ ಅಂತ ಒಂದನ್ನು ಆಯ್ದು ಹೇಳುವುದು ಕಷ್ಟ. ಎರಡೂ ಬಹು ವಿಶೇಷ ತಳಿಗಳೇ. ಬಹಳಷ್ಟು ಸಾಮ್ಯತೆಗಳಿವೆ; ಸಣ್ಣಪುಟ್ಟ ವ್ಯತ್ಯಾಸಗಳೂ ಇವೆ'', ಗುರುರಾಜ್ ಮಾತು ಆರಂಭಿಸಿದರು, ``ಎರಡೂ ಬಹುಬೇಗ ಬೆಳೆಯುವ ತಳಿಗಳು. ನಾಲ್ಕನೇ ವರ್ಷಕ್ಕೇ ಎರಡು ತಳಿಗಳೂ ವಾಣಿಜ್ಯಮಟ್ಟದ ಆದಾಯ ಕೊಡಬಲ್ಲವು.''

ಮುಂದುವರಿಸಿ, ``ಹೆಚ್ಚು ಮಳೆ ಬೀಳುವ ಕರಾವಳಿಯಂತಹ ಪ್ರದೇಶದಲ್ಲಿ ಎರಡಕ್ಕೂ ಮಳೆಗಾಲದಲ್ಲಿ ಶಿಲೀಂಧ್ರ ರೋಗದ ಹಾವಳಿ ಇದೆ. ಮಳೆಗಾಲಕ್ಕೆ ಮುನ್ನ ಮತ್ತು ಕೊನೆಗೆ - ಹೀಗೆ ಎರಡು ಬಾರಿ ಒಂದು ಪರ್ಸೆಂಟ್ ಬೋರ್ಡೋ ದ್ರಾವಣ ಸಿಂಪಡಿಸಿದರೆ ಎರಡೂ ತಳಿಯಲ್ಲಿ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ, ಹೆಚ್ಚಿನ ಹಾನಿ ಆಗುವುದಿಲ್ಲ. ಆದರೆ ಹಲಸಿಗೆ  ಮದ್ದು  ಸಿಂಪಡಣೆ ಮಾಡುವ ಮನಸ್ಥಿತಿಗೆ ನಮ್ಮ ಕೃಷಿಕರು ಈ ವರೆಗೆ ಬಂದಂತಿಲ್ಲ. ಮುಂದೆ ಬರಬಹುದು'' ಎನ್ನುತ್ತಾರೆ.

``ಎರಡು ತಳಿಗಳೂ ಬಹುತೇಕ ವರ್ಷಪೂರ್ತಿ ಫಲ ಕೊಡುತ್ತವೆ. ಥಾಯ್‍ಲ್ಯಾಂಡ್ ಪಿಂಕಿನ ಗುಜ್ಜೆ (ಎಳೆ ಹಲಸು) ತರಕಾರಿಯಾಗಿ ಸ್ವಲ್ಪ ಹೆಚ್ಚು ಮಾರ್ಕು ಪಡೆಯಬಹುದು. ಅದು ಕತ್ತರಿಸಿ ಬಹುಕಾಲ ಬಿಳಿ ಬಣ್ಣ ಉಳಿಸಿಕೊಳ್ಳುತ್ತದೆ. ವಾಡಾ ಬೇಗನೆ ಕಂದುಬಣ್ಣಕ್ಕೆ ತಿರುಗುತ್ತದೆ.''

``ಆದರೆ ಹಣ್ಣಿನ ರುಚಿಯಲ್ಲಿ ವಾಡಾಕ್ಕೆ ಸ್ವಲ್ಪ ಮೇಲುಗೈ ಇದೆ. ಇದು ಹಳದಿಯಿಂದ ನಸುಕೇಸರಿ ವರೆಗೆ ಬಣ್ಣ ಹೊಂದುತ್ತದೆ. ಮಳೆಗಾಲದಲ್ಲಿ ಕೇಸರಿ ಬಣ್ಣ ಇನ್ನೂ ಗಾಢವಾಗುತ್ತದೆ. ವಾಡಾ ಹಣ್ಣು ಸಿಹಿ ಜಾಸ್ತಿ. ಅದರೆ ಟೀಯೆಸ್ಸೆಸ್ (TSS – Total Soluble Sugars) 26ರಿಂದ 28 ಇರುತ್ತದೆ. ಥಾಯ್ ಪಿಂಕಿನದು 20ರಿಂದ 22 ಮಾತ್ರ. ಸರಿಯಾಗಿ ಹಣ್ಣಾದಾಗ ಮೇಣ ಎರಡಕ್ಕೂ ಇಲ್ಲ. ಸೊಳೆಗಳ ಫಿಲ್ಲಿಂಗಿನಲ್ಲಿ ವಾಡಾ ಸ್ವಲ್ಪ ಹಿಂದೆ.''